ADVERTISEMENT

ಹಣ್ಣುಗಳಿಗೆ ಹೆಚ್ಚಿದ ಬೇಡಿಕೆ; ಬೆಲೆ ಏರಿಕೆ

ಮದುವೆ, ಇನ್ನಿತರ ಶುಭ ಕಾರ್ಯಕ್ರಮಗಳು ಹೆಚ್ಚುತ್ತಿರುವ ಹಿನ್ನೆಲೆ

​ಪ್ರಜಾವಾಣಿ ವಾರ್ತೆ
Published 21 ಮೇ 2018, 12:45 IST
Last Updated 21 ಮೇ 2018, 12:45 IST
ಹಾಸನ ನಗರದ ಕಟ್ಟಿನಕೆರೆ ಮಾರುಕಟ್ಟೆಯಲ್ಲಿ ಹಣ್ಣು ಮಾರಾಟದ ಚಿತ್ರಣ
ಹಾಸನ ನಗರದ ಕಟ್ಟಿನಕೆರೆ ಮಾರುಕಟ್ಟೆಯಲ್ಲಿ ಹಣ್ಣು ಮಾರಾಟದ ಚಿತ್ರಣ   

ಹಾಸನ: ಸೇಬು, ದಾಳಿಂಬೆ, ದ್ರಾಕ್ಷಿ, ಬಾಳೆಹಣ್ಣು ಸೇರಿದಂತೆ ವಿವಿಧ ಹಣ್ಣುಗಳಿಗೆ ಬೇಡಿಕೆ ಹೆಚ್ಚುತ್ತಿದ್ದು, ಬೆಲೆ ಗಗನಮುಖಿಯಾಗಿದೆ. ಇದರಿಂದಾಗಿ ಗ್ರಾಹಕರ ಜೇಬಿಗೆ ಹೊರೆ ಬಿದ್ದಿದೆ.

ಪ್ರಸ್ತುತ ಹಬ್ಬ, ಮದುವೆ, ಶುಭ ಸಮಾರಂಭಗಳು ಹೆಚ್ಚು ನಡೆಯುತ್ತಿವೆ. ಸಹಜವಾಗಿ ಬೇಡಿಕೆ ಹೆಚ್ಚಿದೆ. ಸೇಬು ಬಾಳೆಹಣ್ಣು, ದಾಳಿಂಬೆ, ಮೂಸಂಬಿ ಹಣ್ಣಿಗೆ ಹೆಚ್ಚಿನ ಬೇಡಿಕೆಯಿದೆ.

ಹಣ್ಣುಗಳ ರಾಜ ಮಾವು ಮಾರುಕಟ್ಟೆಗೆ ಹೆಚ್ಚಿನ ಪ್ರಮಾಣದಲ್ಲಿ ಆವಕವಾಗಿದೆ. ನಿತ್ಯ 4 ಟನ್‌ ಮಾವಿನಹಣ್ಣು ಮಾರಾಟವಾಗುತ್ತಿದೆ ಎಂಬುದು ಒಂದು ಅಂದಾಜು.

ADVERTISEMENT

ಬೇಡಿಕೆ ಹೆಚ್ಚುತ್ತಿದ್ದಂತೆ ಬೆಲೆಯಲ್ಲಿಯೂ ಏರಿಕೆಯಾಗಿದೆ. ತಿಂಗಳ ಹಿಂದೆ ಸೇಬು ಒಂದು ಕೆ.ಜಿ. ಗೆ ₹ 100 ರಂತೆ ಮಾರಾಟವಾಗುತ್ತಿತ್ತು. ಆದರೆ ಇಂದು ಸೇಬು ಒಂದು ಕೆ.ಜಿ.ಗೆ ₹ 180ರಂತೆ ಮಾರಾಟವಾಗುತ್ತಿದೆ.

ದಾಳಿಂಬೆ ಹಣ್ಣಿನ ಬೆಲೆ ಏರಿದ್ದು, ಒಂದು ಕೆ.ಜಿ. 160ರಂತೆ ಮಾರಾಟವಾಗುತ್ತಿದೆ. ಕೆಲ ದಿನಗಳ ಹಿಂದೆ ಒಂದು ಕೆ.ಜಿ ಗೆ ₹ 100 ಇತ್ತು.

ಉತ್ತಮ ಮಳೆಯಾಗಿರುವ ಹಿನ್ನೆಲೆಯಲ್ಲಿ ಬಾಳೆ ಇಳುವರಿ ಚೆನ್ನಾಗಿದೆ. ಬಾಳೆಹಣ್ಣಿಗೆ ಬೆಲೆ ಏರಿಕೆ ಆಗಿಲ್ಲ. ಒಂದು ಕೆ.ಜಿ. ₹ 50 ರಿಂದ 60ರಂತೆ ಮಾರಾಟವಾಗುತ್ತಿದೆ.

ಮಕ್ಕಳಿಂದ ವಯಸ್ಕರವರೆಗೆ ಎಲ್ಲರೂ ಇಷ್ಟ ಪಡುವ ದ್ರಾಕ್ಷಿ ಬೆಲೆಯೂ ಏರಿದೆ. ಕೆಲ ದಿನಗಳ ಹಿಂದೆ ಕೆ.ಜಿ ₹ 80 ಇದ್ದರೆ; ಈಗ ಕೆ.ಜಿ ದ್ರಾಕ್ಷಿಗೆ ₹ 160 ಆಗಿದೆ. ಮೂಸಂಬಿ ಕೆ.ಜಿ.ಗೆ ರೂ. 20 ಏರಿದ್ದು, ಸದ್ಯ ಕೆ.ಜಿಗೆ 100 ಇದೆ.

‘ಮದುವೆ ಹಾಗೂ ಇತರೆ ಶುಭ ಕಾರ್ಯಕ್ರಮಗಳಿಂದಾಗಿ ಬೇಡಿಕೆ ಇರುವ ಕಾರಣ ಬೆಲೆಯೂ ಏರಿದೆ. ಆದರೂ, ಖರೀದಿಸಲೇ ಬೇಕಾದ ಅನಿವಾರ್ಯವಿದೆ’ ಎನ್ನುತ್ತಾರೆ ದಾಸರಕೊಪ್ಪಲಿನ ನಿವಾಸಿ ಪ್ರಮೋದ್‌.

‘ವಿವಿಧೆಡೆಯಿಂದ ಹಾಸನ ಮಾರುಕಟ್ಟೆಗೆ ಹಣ್ಣು ಆವಕ ಆಗುತ್ತದೆ. ಪ್ರಸ್ತುತ ಬೇಡಿಕೆಗಿಂತ ಕಡಿಮೆ ಪ್ರಮಾಣದಲ್ಲಿ ಹಣ್ಣುಗಳು ಮಾರುಕಟ್ಟೆಗೆ ಬರುತ್ತಿರುವುದೇ ಬೆಲೆ ಏರಿಕೆಗೆ ಕಾರಣ’ ಎಂದು ಹಣ್ಣಿನ ವ್ಯಾಪಾರಿ ಫಯಾಜ್‌ ಅವರು ಪ್ರತಿಕ್ರಿಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.