ADVERTISEMENT

ಹದಗೆಟ್ಟ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣ

​ಪ್ರಜಾವಾಣಿ ವಾರ್ತೆ
Published 23 ಜುಲೈ 2012, 4:55 IST
Last Updated 23 ಜುಲೈ 2012, 4:55 IST

ರಾಮನಾಥಪುರ: ಪಟ್ಟಣದಲ್ಲಿ ಕೆ.ಎಸ್.ಆರ್.ಟಿ.ಸಿ. ಬಸ್ ಡಿಪೋ ಇದ್ದರೂ ನಿಲ್ದಾಣ ವ್ಯವಸ್ಥೆ ಸರಿಯಿಲ್ಲದೆ, ಗುಂಡಿ ಬಿದ್ದು ಪರಿಸ್ಥಿತಿ ಹದಗೆಟ್ಟಿದೆ.

ಹಲವಾರು ಐತಿಹಾಸಿಕ ದೇಗುಲಗಳು, ಬ್ಯಾಂಕು ಗಳು, ನಾಡ ಕಚೇರಿ, ಶಾಲಾ- ಕಾಲೇಜುಗಳು, ಎರಡು ತಂಬಾಕು ಮಾರುಕಟ್ಟೆ ಸೇರಿದಂತೆ ಕೆಲ ಸರ್ಕಾರಿ ಕಚೇರಿಗಳನ್ನು ಹೊಂದಿರುವ ಪಟ್ಟಣವು ಪ್ರಮುಖ ಹೋಬಳಿ ಕೇಂದ್ರವಾಗಿ ಗುರುತಿಸಿಕೊಂಡಿದೆ. ಸುತ್ತಮುತ್ತಲಿನ ಹಳ್ಳಿಗಳಿಂದ ವ್ಯವಹಾರಕ್ಕೆ ದಿನನಿತ್ಯ ಸಾವಿರಾರು ಜನರು ಬಂದು ಹೋಗುತ್ತಾರೆ. ಇಂತಹ ದೊಡ್ಡ ಜನಸಂದಣಿಯುಳ್ಳ ಪಟ್ಟಣಕ್ಕೆ ಉತ್ತಮ ಬಸ್ ವ್ಯವಸ್ಥೆ ಇಲ್ಲವಾಗಿದೆ.

ಸದಾ ಪ್ರಯಾಣಿಕರಿಂದಲೇ ತುಂಬಿ ತುಳುಕುತ್ತಿರುವ ಬಸ್ ನಿಲ್ದಾಣ ಒಂದು ಸಣ್ಣ ತಂಗುದಾಣದಂತೆ ಗೋಚರಿಸುತ್ತದೆ. ಕುಡಿಯುವ ನೀರಿಲ್ಲ. ಉತ್ತಮ ಶೌಚಾಲಯ ಕಟ್ಟಡವಿಲ್ಲದೆ ಗಬ್ಬೆದ್ದು ನಾರುತ್ತಿದೆ. ನಿಲ್ದಾಣದ ಕಟ್ಟಡ ಪ್ರಾಂಗಣದಲ್ಲಿ ಕುಳಿತುಕೊಳ್ಳಲು ಬೇಕಾಗುವಷ್ಟು ಆಸನಗಳನ್ನು ಹಾಕಿಲ್ಲ. ಶಾಲಾ- ಕಾಲೇಜು ವಿದ್ಯಾರ್ಥಿಗಳು ಬಸ್‌ಗಾಗಿ ನಿಲ್ದಾಣಕ್ಕೆ ಬಂದಾಗ ನಿಲ್ಲಲೂ ಸಹ ಜಾಗವಿಲ್ಲದಾಗುತ್ತದೆ. ಇನ್ನು ಮಳೆ ಬಂದರೆ ಜನಸಂದಣಿಯಿಂದ ಗಿಜಿಗುಡುತ್ತದೆ. ಕಟ್ಟಡದ ಹಿಂಭಾಗ ಬಿದ್ದಿರುವ ತ್ಯಾಜ್ಯ ಕೊಳೆತು ದುರ್ವಾಸನೆ ಹೊರ ಸೂಸುತ್ತಿದೆ.

ಎಲ್ಲಕ್ಕಿಂತ ದೊಡ್ಡ ಸಮಸ್ಯೆಯಿಂದರೆ ನಿಲ್ದಾಣ ಆವರಣ ಸಾಕಷ್ಟು ಕಿರಿದಾಗಿದೆ. ಪಕ್ಕದಲ್ಲಿಯೇ ಬಸ್ ಡಿಪೋ ಇರುವುದರಿಂದ ಬೆಂಗಳೂರು- ಮೈಸೂರು ಹಾಗೂ ರಾಜ್ಯದ ಇನ್ನಿತರ ನಗರ ಪ್ರದೇಶಗಳಿಗೆ ನೇರ ಬಸ್ ಸಂಪರ್ಕವಿದೆ. ಅಲ್ಲದೇ ಸುತ್ತಮುತ್ತಲಿನ ಗ್ರಾಮೀಣ ಪ್ರದೇಶಗಳಿಗೆ ಹೊರಡುವ ಬಸ್‌ಗಳು ನಿಲ್ದಾಣಕ್ಕೆ ಬಂದು ನಿಲ್ಲುವುದರಿಂದ ಸ್ಥಳಾವಕಾಶ ಸಾಕಾಗುವುದಿಲ್ಲ.

ಕೆಲವೊಮ್ಮೆ ನಿಲ್ದಾಣದ ತುಂಬಲ್ಲೆ ನಿಂತು ಬಸ್‌ನ್ನು ಚಾಲಕರು ಹಿಂದೆ- ಮುಂದೆ ತೆಗೆಯಲು ಸಾಧ್ಯವಾಗುವುದಿಲ್ಲ. ಅಂತಹ ಸಮಯ ದಲ್ಲಿ ಪ್ರಯಾಣಿಕರು ಬಸ್‌ನಿಂದ ಇಳಿಯುವಾಗ ಮತ್ತು ಹತ್ತುವಾಗ ನುಸುಳಿಕೊಂಡೇ ಹೋಗಬೇಕು. ಎಷ್ಟೋ ಮಂದಿ ಸೀಟು ಹಿಡಿಯುವ ಸಲುವಾಗಿ ಆತುರದಿಂದ ನುಸುಳಿ ಹೋಗುವ ವೇಳೆ ಸಾಕಷ್ಟು ಸಲ ಗಾಯ ಮಾಡಿಕೊಂಡು ನರಕಯಾತನೆ ಅನುಭವಿಸಿದ್ದಾರೆ.

ಬಸ್ ನಿಲ್ದಾಣವು ಹದಗೆಟ್ಟು ಹೋಗಿರುವುದಲ್ಲದೇ ಪ್ರವೇಶ ದ್ವಾರ ಸಹ ಕಿಷ್ಕಿಂಧೆಯಾಗಿದೆ. ಕೊರಕಲು ಗುಂಡಿ ಬಿದ್ದು ಹಾಳಾಗಿರುವ ಪ್ರವೇಶ ದ್ವಾರದ ತಿರುವಿನಲ್ಲಿ ಎರಡು ಬಸ್‌ಗಳು ಎದುರು- ಬದುರಾದಾಗ ಮುಂದೆ ಸಾಗಲು ಹೆಣಗಾಡ ಬೇಕಾಗುತ್ತದೆ ಎನ್ನುತ್ತಾರೆ ಚಾಲಕರು.

ಹಾಸನ- ಮೈಸೂರು- ಮಡಿಕೇರಿಗೆ ಸಂಪರ್ಕ ಕಲ್ಪಿಸಲು ರಾಮನಾಥಪುರದ ಮುಖ್ಯ ವೃತ್ತ ಇದಾಗಿದೆ. ಇದಲ್ಲದೇ ವೇಗವಾಗಿ ಬೆಳೆಯುತ್ತಿರುವ ಪಟ್ಟಣಕ್ಕೆ ಬಂದು ಹೋಗುವ ಸಾರ್ವಜನಿಕರ ಸಂಖ್ಯೆಯೂ ಹೆಚ್ಚುತ್ತಲಿದೆ. ಪ್ರತಿವರ್ಷ ನಡೆಯುವ ಪ್ರಸನ್ನ ಸುಬ್ರಹ್ಮಣ್ಯೇಶ್ವರ ಜಾತ್ರೆ ವೇಳೆ 3 ತಿಂಗಳ ಕಾಲ ದಿನನಿತ್ಯವೂ ಅಪಾರ ಸಂಖ್ಯೆಯ ಭಕ್ತರು ಆಗಮಿಸುತ್ತಾರೆ. ಇಂತಹ ಪ್ರಮುಖ ವ್ಯಾಪಾರಿ ಕೇಂದ್ರ ಹಾಗೂ ಯಾತ್ರಾ ಸ್ಥಳವಾಗಿ ಪ್ರಸಿದ್ದಿ ಪಡೆದಿರುವ ಪಟ್ಟಣಕ್ಕೆ ಉತ್ತಮ ಬಸ್ ನಿಲ್ದಾಣ ವ್ಯವಸ್ಥೆ ಕಲ್ಪಿಸಲು ಸಂಬಂಧಪಟ್ಟ ಮೇಲಾಧಿಕಾರಿಗಳು ಹಾಗೂ ಕ್ಷೇತ್ರದ ಜನಪ್ರತಿನಿಧಿಗಳು ಇನ್ನಾದರೂ ಆಸಕ್ತಿ ವಹಿಸಬೇಕು ಎಂಬುದು ಸ್ಥಳೀಯರ ಆಗ್ರಹ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.