ADVERTISEMENT

ಹಳೇಬೀಡು ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣ; ಸಮಸ್ಯೆಗಳ ತಾಣ

​ಪ್ರಜಾವಾಣಿ ವಾರ್ತೆ
Published 4 ಮೇ 2012, 4:50 IST
Last Updated 4 ಮೇ 2012, 4:50 IST

 ಹಳೇಬೀಡು: ಪಟ್ಟಣದ ಕರ್ನಾಟಕ ರಾಜ್ಯ ಸಾರಿಗೆ ಸಂಸ್ಥೆ (ಕೆಎಸ್‌ಆರ್‌ಟಿಸಿ) ಬಸ್ ನಿಲ್ದಾಣ ಸಮಸ್ಯೆಗಳ ಕೂಪವಾ ಗಿದ್ದು, ಪ್ರಯಾಣಿಕರು ತೊಂದರೆ ಅನುಭವಿಸುವಂತಾಗಿದೆ.

 ನಿಲ್ದಾಣದ ಕಟ್ಟಡಕ್ಕೆ ಶೌಚಾಲಯ ಹೊಂದಿಕೊಂಡಿದ್ದು, ನಿಯಂತ್ರಕರ ಕೊಠಡಿ, ಮಹಿಳೆಯರ ಕೊಠಡಿ, ತಂಗುದಾಣ ತುಂಬ ಸದಾ ಸಹಿಸಲಸಾಧ್ಯ ದುರ್ನಾತದ ಹಾವಳಿ. ಈ ಕಟ್ಟಡದ ಮುಂಭಾಗ ಶೆಲ್ಟರ್ ಅಳವಡಿಸಿಲ್ಲ.
ಹೀಗಾಗಿ ಪ್ರಯಾಣಿಕರಿಗೆ ಕುಳಿತುಕೊಳ್ಳಲು ಸಾಕಷ್ಟು ಸ್ಥಳವಕಾಶ, ಆಸನಗಳೂ ಇಲ್ಲ. ಹೀಗಾಗಿ ಪ್ರಯಾಣಿಕರು ನಿಲ್ದಾಣದ ಕಾಂಪೌಂಡಿನ ಮೇಲೆ, ಮರದ ನೆರಳಿನಲ್ಲಿ ಕುಳಿತುಕೊಳ್ಳಬೇಕಾಗಿದೆ. ಕಾಂಪೌಂಡಿನ ಪಕ್ಕ ಚರಂಡಿ ಇದ್ದು ಅನಾಹುತ ಸಂಭವಿಸುವ ಸಾಧ್ಯತೆಗಳು ಇಲ್ಲದಿಲ್ಲ. 

 ನಿಲ್ದಾಣದಲ್ಲಿ ಪ್ಲಾಟ್‌ಫಾರಂ ವ್ಯವಸ್ಥೆಗೆ ಸೂಕ್ತ ಸ್ಥಳಾವಕಾಶ ಇಲ್ಲ. ನಿಗದಿತ ಸ್ಥಳದಲ್ಲಿ ಬಸ್ ನಿಲುಗಡೆ ಮಾಡದೇ, ಪ್ರವೇಶ ದ್ವಾರದಲ್ಲಿ ನಿಲುಗಡೆ ಮಾಡಲಾಗುತ್ತದೆ. ಇದರಿಂದಾಗಿ ಅಂಗವಿಕಲರು, ವೃದ್ಧರು ನಿಲ್ದಾಣದೊಳಕ್ಕೆ ಬರುವುದು ಕಷ್ಟವಾಗಿದೆ.

ನಿಲ್ದಾಣದ ತುಂಬ ಕಂದಕಗಳಾಗಿವೆ ಹೀಗಾಗಿ ಇಲ್ಲಿ ಬಸ್ ಚಾಲನೆ ಮಾಡುವುದು ಹರಸಾಹಸದ ಕೆಲಸವಾಗಿದೆ ಎನ್ನುತ್ತಾರೆ ಚಾಲಕರು. 

 ಬೆಳಿಗ್ಗೆ 9.30ಕ್ಕೆ ಹಳೇಬೀಡು ಮಾರ್ಗವಾಗಿ ಧರ್ಮಸ್ಥಳ ತಲುಪಿ ಸಂಜೆ 4.30ಕ್ಕೆ ತುರುವೇಕೆರೆಗೆ ಹೋಗುತ್ತಿದ್ದ ಬಸ್ಸು, ಮೈಸೂರಿನಿಂದ ಮಧ್ಯಾಹ್ನ 2 ಗಂಟೆಗೆ  ಹಳೇಬೀಡಿಗೆ ಬಂದು ಜಾವಗಲ್ ತಲುಪಿ ಮೈಸೂರಿಗೆ ವಾಪಸ್ಸಾಗುತ್ತಿದ್ದ ಬಸ್ಸುಗಳನ್ನು ಸ್ಥಗಿತಗೊಳಿಸಲಾಗಿದೆ. ಹಾಸನಕ್ಕೆ ಸಾಕಷ್ಟು ಬಸ್ಸುಗಳಿದ್ದರೂ ಸಮಯ ನಿಗದಿಗೊಳಿದಿರುವುದರಿಂದ ಕೆಲವೊಮ್ಮೆ ಗಂಟೆಗಂಟಲೆ ಪ್ರಯಾಣಿಕರು ಕಾಯಬೇಕಾದ ಸ್ಥಿತಿ ಇದೆ. 

 ಹಗರೆ ಮಾರ್ಗದಲ್ಲಿ ಕಲವೇ ಬಸ್ಸುಗಳು ಸಂಚರಿಸುತ್ತಿದ್ದು, ಸಾಲಗಾಮೆ ಹಾಗೂ ಹಗರೆ ಮಾರ್ಗದಲ್ಲಿ ಬೆಳಿಗ್ಗೆ 6 ರಿಂದ ರಾತ್ರಿ 9 ಗಂಟೆವರೆಗೆ ಹೆಚ್ಚುವರಿ ಎರಡು ಬಸ್ಸು  ಅನುಕೂಲವಾಗಲಿದೆ ಎನ್ನುತ್ತಾರೆ ಈ ಭಾಗದ ಪ್ರಯಾಣಿಕರು.
 
ಈ ಹಿಂದೆ ಹಳೇಬೀಡು ಮಾರ್ಗವಾಗಿ ಸಂಚರಿಸುತ್ತಿದ್ದ ಈಗ ಸ್ಥಗಿತಗೊಳಿಸಿರುವ ಬೆಳಗಾವಿ-ಹಾಸನ, ಬಳ್ಳಾರಿ ಧರ್ಮಸ್ಥಳ, ಬೆಂಗಳೂರು-ಧರ್ಮಸ್ಥಳ, ಸಕಲೇಶಪುರ-ದಾವಣಗೆರೆ, ಸಕಲೇಶಪುರ-ಬೆಂಗಳೂರು, ಶಿವಮೊಗ್ಗ-ಹಾಸನ ಮೂಡಿಗೆರೆ-ಬೆಂಗಳೂರು(ರಾತ್ರಿ) ಬಸ್ಸುಗಳನ್ನು ಪುನಃ ಆರಂಭಿಸಬೇಕು. ಚಿಕ್ಕಮಗಳೂರು ಭಾಗದಿಂದ ಹಳೇಬೀಡು ಮಾರ್ಗವಾಗಿ ಬಹಳಷ್ಟು ಪ್ರಯಾಣಿಕರು ಪುರದಮ್ಮ ಕ್ಷೇತ್ರಕ್ಕೆ ನಿತ್ಯ ಪ್ರಯಾಣಿಸುತ್ತಾರೆ.

ಚಿಕ್ಕಮಗಳೂರಿನಿಂದ ಹಾಸನ, ಪುರದಮ್ಮ ಕ್ಷೇತ್ರಕ್ಕೆ ಹೊಸ ಬಸ್ಸು ಬಿಟ್ಟರೆ ಬಹಳಷ್ಟು ಜನಕ್ಕೆ ಉಪಯೋಗವಾಗಲಿದೆ ಎಂಬುದು ಸಾರ್ವಜನಿಕರ ಅಭಿಪ್ರಾಯ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.