ADVERTISEMENT

ಹಳೇಬೀಡು ಸರ್ಕಾರಿ ಶಾಲೆ: ಕಡಿಮೆ ಏನಲ್ಲ!

ಎಚ್.ಎಸ್.ಅನಿಲ್ ಕುಮಾರ್
Published 22 ಜೂನ್ 2013, 10:54 IST
Last Updated 22 ಜೂನ್ 2013, 10:54 IST

ಹಳೇಬೀಡು: ಸರ್ಕಾರಿ ಶಾಲೆಗಳೆಂದರೆ ಮೂಗುಮುರಿಯುತ್ತಿದ್ದ ಕಾಲ ಈಗ ಬದಲಾಗುತ್ತಿದೆ. ಸರ್ಕಾರಿ ಶಾಲೆಗಳಲ್ಲಿ ಗುಣಮಟ್ಟದ ಶಿಕ್ಷಣಕ್ಕೆ ಮಹತ್ವ ನೀಡಿರುವುದರಿಂದ ಸಾಕಷ್ಟು ಪ್ರೌಢಶಾಲೆಗಳು ಈಗ ವಿದ್ಯಾರ್ಥಿಗಳಿಂದ ತುಂಬಿ ತುಳುಕುತ್ತಿವೆ ಎಂಬುದಕ್ಕೆ ಹಳೇಬೀಡಿನ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಪ್ರೌಢಶಾಲಾ ವಿಭಾಗ ಸಾಕ್ಷಿಯಾಗಿದೆ.

ಪೋಷಕರು ಖಾಸಗಿ ಶಾಲೆಗಳ ವ್ಯಾಮೋಹದಿಂದ ಕೆಲವು ಸರ್ಕಾರಿ ಶಾಲೆಗಳು ಮುಚ್ಚುವ ಹಂತ ತಲುಪಿವೆ. ಆದರೆ ಈ ಸರ್ಕಾರಿ ಶಾಲೆ ವಿದ್ಯಾರ್ಥಿಗಳನ್ನು ಆಕರ್ಷಿಸುವಲ್ಲಿ ಯಶಸ್ವಿಯಾಗಿದೆ. ಎರಡು ವರ್ಷದ ಹಿಂದೆ ಶಾಲೆಯಲ್ಲಿ ಆಂಗ್ಲ ಮಾಧ್ಯಮ ಆರಂಭವಾಗಿದ್ದು ವಿದ್ಯಾರ್ಥಿ ಸಂಖ್ಯೆ ಹೆಚ್ಚಳಕ್ಕೆ ಪ್ರಮುಖ ಕಾರಣವಾಗಿದೆ. ಪ್ರಯೋಗಾಲಯ, ಗ್ರಂಥಾಲಯ, ಕಂಪ್ಯೂಟರ್ ಲ್ಯಾಬ್, ಆಟದ ಮೈದಾನ ಸೇರಿದಂತೆ ಮೂಲಸೌಕರ್ಯ ಉತ್ತಮವಾಗಿದೆ. ಜತೆಗೆ ಪರಿಣತ ಶಿಕ್ಷಕರ ತಂಡ ಬೋಧನೆಯ ಗುಣಮಟ್ಟವನ್ನು ಹೆಚ್ಚಿಸಿದೆ.

ಕಳೆದ ಎರಡು ವರ್ಷದಿಂದ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಆಂಗ್ಲ ಮಾಧ್ಯಮ ವಿಭಾಗಕ್ಕೆ ಉತ್ತಮ ಫಲಿತಾಂಶ ಬರುತ್ತಿದೆ. ಮೂರ‌್ನಾಲ್ಕು ವರ್ಷದ ಹಿಂದೆ ಶಾಲೆಯ ದಾಖಲಾತಿ ಪ್ರಮಾಣ ಗಣನೀಯವಾಗಿ ಇಳಿಮುಖವಾಗಿತ್ತು. ಮಕ್ಕಳನ್ನು ಶಾಲೆಗೆ ದಾಖಲು ಮಾಡಲು ಉಪ ಪ್ರಾಂಶುಪಾಲರು ಹಾಗೂ ಶಿಕ್ಷಕರು ಹರಸಾಹಸ ಪಡುತ್ತಿದ್ದರು. ಈಗ ಶ್ರಮವಿಲ್ಲದೆ ಮಕ್ಕಳ ಸಂಖ್ಯೆ ವರ್ಷದಿಂದ ವರ್ಷಕ್ಕೆ ಹೆಚ್ಚಾಗುತ್ತಿದೆ. ಕಳೆದ ವರ್ಷ 315 ವಿದ್ಯಾರ್ಥಿಗಳು ಶಾಲೆಯಲ್ಲಿ ಕಲಿಯುತ್ತಿದ್ದರು. ಈಗ ವಿದ್ಯಾರ್ಥಿಗಳ ಸಂಖ್ಯೆ 395 ಆಗಿದೆ. ದಾಖಲಾತಿ ಸಂಖ್ಯೆ 400ಕ್ಕೂ ಹೆಚ್ಚಾಗುವ ಸಾಧ್ಯತೆ ಇದೆ. 8ನೇ ತರಗತಿ ಮಾತ್ರವಲ್ಲದೆ 9 ಹಾಗೂ 10ನೇ ತರಗತಿಯಲ್ಲಿಯೂ ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚಾಗಿದೆ.

`ರಾಷ್ಟ್ರೀಯ ಮಾಧ್ಯಮಿಕ ಶಿಕ್ಷಣ ಅಭಿಯಾನದ ಅಡಿಯಲ್ಲಿ ಶಾಲೆಗೆ 6 ಕೊಠಡಿ ಮಂಜೂರಾಗಿದೆ. ಇಲಾಖೆಯ ಉನ್ನತ ಅಧಿಕಾರಿಗಳು ಕಾಮಗಾರಿಗೆ ಶೀಘ್ರ ಚಾಲನೆ ನೀಡಿದರೆ ಮಕ್ಕಳ ಕಲಿಕೆ ಹಾಗೂ ಶಿಕ್ಷಕರ ಬೋಧನೆಗೆ ಅನುಕೂಲವಾಗುತ್ತದೆ' ಎನ್ನುತ್ತಾರೆ ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಕೆ.ಎಂ.ವೀರಣ್ಣ.
 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.