ADVERTISEMENT

ಹಿರೀಸಾವೆ: ರೈಲ್ವೆ ಇಲಾಖೆ ವಿರುದ್ಧ ಪ್ರಯಾಣಿಕರ ಆಕ್ರೋಶ

​ಪ್ರಜಾವಾಣಿ ವಾರ್ತೆ
Published 3 ಅಕ್ಟೋಬರ್ 2017, 8:42 IST
Last Updated 3 ಅಕ್ಟೋಬರ್ 2017, 8:42 IST

ಹಿರೀಸಾವೆ: ಇಲ್ಲಿಯ ರೈಲ್ವೆ ನಿಲ್ದಾಣದಲ್ಲಿ ಸೋಮವಾರ ಮದ್ಯಾಹ್ನ ಬೆಂಗಳೂರು ಕಡೆಗೆ ಸಂಚರಿಸುವ ರೈಲನ್ನು ಹತ್ತಲಾಗದೇ ನೂರಾರು ಪ್ರಯಾಣಿಕರು ತೊಂದರೆ ಅನುಭವಿಸಿದರು.

ದಸರಾ ಸೇರಿದಂತೆ ನಾಲ್ಕು ದಿನ ರಜೆ ಇದ್ದ ಕಾರಣ ಹೋಬಳಿಯ ಹಲವು ಗ್ರಾಮಗಳಿಗೆ ರಾಜಧಾನಿಯಿಂದ ಬಂದಿದ್ದ ಸಾವಿರಾರು ಜನರು ರಜೆ ಮುಗಿಸಿ, ರೈಲಿನಲ್ಲಿ ತೆರಳಲು ರೈಲ್ವೆ ನಿಲ್ದಾಣಕ್ಕೆ ಬಂದಿದ್ದರು. ಎಲ್ಲರೂ ಟಿಕೆಟ್‌ ಸಹ ಪಡೆದಿದ್ದರು. ಮೈಸೂರಿನಿಂದ ಹಾಸನ ಮೂಲಕ ಬೆಂಗಳೂರಿಗೆ ಪ್ರತಿನಿತ್ಯ ಸಂಚರಿಸುವ ಪ್ಯಾಸೆಂಜರ್‌ ರೈಲು ಬಂದಿತ್ತು, ರೈಲು ನಿಲ್ದಾಣದಲ್ಲಿ ಪ್ರತಿನಿತ್ಯ ಒಂದು ನಿಮಿಷ ನಿಲ್ಲುವ ರೈಲನ್ನು, ಹೆಚ್ಚು ಜನ ಇದ್ದ ಕಾರಣ 6 ನಿಮಿಷಗಳ ಕಾಲ ನಿಲ್ಲಿಸಲಾಗಿತ್ತು. ಆದರೆ ಅಪಾರ ಜನರು ಇದ್ದ ಕಾರಣ, ಬೋಗಿಗಳಲ್ಲಿ ಸ್ಥಳಾವಕಾಶ ಇಲ್ಲದೇ, ಹಿರೀಸಾವೆ ರೈಲ್ವೆ ನಿಲ್ದಾಣದಲ್ಲಿ ನೂರಾರು ಮಂದಿಗೆ ಹತ್ತಲಾಗಲಿಲ್ಲ. ಇದರಿಂದ ಕುಪಿತಗೊಂಡ ಟಿಕೆಟ್‌ ಪಡೆದ ಜನರು ಹಣವನ್ನು ಹಿಂದಿರುಗಿಸುವಂತೆ ರೈಲ್ವೆ ನಿಲ್ದಾಣದ ಅಧಿಕಾರಿಗಳ ಮೇಲೆ ಹರಿಹಾಯ್ದರು.

ಹೆಚ್ಚು ಜನರು ಪ್ರಯಾಣ ಮಾಡುತ್ತಾರೆ ಎಂದು ಗೊತ್ತಿದ್ದು, ಹೆಚ್ಚು ಬೋಗಿಗಳು ಇಲ್ಲದಿರುವ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದರು. ವಿಷಯ ತಿಳಿದ ಹಿರೀಸಾವೆ ಪೊಲೀಸರು ಸ್ಥಳಕ್ಕೆ ಬಂದು, ಎಲ್ಲರನ್ನೂ ಸಮಧಾನ ಪಡಿಸಿದರು. ಹಾಸನ–ಬೆಂಗಳೂರು ರೈಲ್ವೆ ಮಾರ್ಗದಲ್ಲಿ ಸಂಚರಿಸುವ ರೈಲುಗಳಲ್ಲಿ ಮೈಸೂರು, ಬೆಂಗಳೂರು ಪ್ಯಾಸೆಂಜರ್ ರೈಲು ಒಂದೇ ಹಿರೀಸಾವೆಯಲ್ಲಿ ನಿಲುಗಡೆ ಇರುವುದರಿಂದ ಜನರು ಪ್ರತಿನಿತ್ಯ ತೊಂದರೆ ಅನುಭವಿಸುತ್ತಿದ್ದಾರೆ.

ADVERTISEMENT

ಸಾವಿರಕ್ಕೂ ಹೆಚ್ಚು ಜನರು ಬೆಂಗಳೂರು ಕಡೆಗೆ ಪ್ರಯಾಣ ಮಾಡಲು ನಿಲ್ದಾಣಕ್ಕೆ ಬಂದಿದ್ದರು, 416 ಜನರಿಗೆ ಮಾತ್ರ ಟಿಕೆಟ್‌ ನೀಡಲು ಸಾದ್ಯವಾಯಿತು, ಅದರಲ್ಲಿ ಕೆಲವರು ರೈಲು ಹತ್ತಲು ಆಗಲಿಲ್ಲ ಎಂದು ನಿಲ್ದಾಣದ ಅಧಿಕಾರಿಗಳು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.