
ಬೇಲೂರು: ಚನ್ನಕೇಶವ ದೇವಾಲಯ ನಮ್ಮ ಸಂಸ್ಕೃತಿ, ಪರಂಪರೆ ಮತ್ತು ಹೊಯ್ಸಳರ ಶಿಲ್ಪಕಲೆಯ ಜೀವಂತ ನಿದರ್ಶನ ಎಂದು ವಿಧಾನಸಭೆ ಉಪಸಭಾಪತಿ ರುದ್ರಪ್ಪ ಲಮಾಣಿ ಹೇಳಿದರು.
ಇಲ್ಲಿನ ಚನ್ನಕೇಶವ ದೇಗುಲಕ್ಕೆ ಶುಕ್ರವಾರ ಭೇಟಿ ನೀಡಿ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು.
‘ಐತಿಹಾಸಿಕ ಸ್ಥಳಗಳನ್ನು ಮುಂದಿನ ಪೀಳಿಗೆಗೆ ಯಥಾಸ್ಥಿತಿಯಲ್ಲಿ ಉಳಿಸುವುದು ನಮ್ಮಲ್ಲರ ಜವಾಬ್ದಾರಿ. ನಾನು ಮುಜರಾಯಿ ಸಚಿವನಾಗಿದ್ದಾಗ ಇದನ್ನು ವಿಶ್ವದರ್ಜೆಗೆ ಏರಿಸಲು ಹತ್ತು ಹಲವು ಯೋಜನೆಗಳನ್ನು ರೂಪಿಸಿದ್ದೆ. ಈಗಾಗಲೇ ಯುನೆಸ್ಕೊ ಪಟ್ಟಿಗೆ ಸೇರಿರುವುದು ಸಂತೋಷದ ವಿಷಯ. ವಿಶ್ವ ದರ್ಜೆಯ ಪ್ರವಾಸಿ ತಾಣವನ್ನಾಗಿ ಅಭಿವೃದ್ಧಿಪಡಿಸಲು ಸರ್ಕಾರಕ್ಕೆ ಮನವಿ ಮಾಡುತ್ತೇನೆ. ದೇಗುಲದ ನಿರ್ವಹಣೆಯನ್ನು ರಾಜ್ಯ ಸರ್ಕಾರ ಮಾಡುತ್ತಿದ್ದು, ಸಂಪೂರ್ಣ ಜವಾಬ್ದಾರಿಯನ್ನು ಭಾರತೀಯ ಪುರತತ್ವ ಇಲಾಖೆ ವಹಿಸಿದೆ’ ಎಂದರು.
ಈ ಹಿಂದೆ ಇಲ್ಲಿ ಹೊಯ್ಸಳ ಮಹೋತ್ಸವವನ್ನು ಆಚರಿಸಿದ್ದು ಅದು ಈಗ ನಿಂತಿರುವುದು ಗಮನಕ್ಕೆ ಬಂದಿದ್ದು, ಉತ್ಸವ ನಡೆಸುವಂತೆ ಸರ್ಕಾರಕ್ಕೆ ತಿಳಿಸುವೆ ಎಂದರು.
ಉಪ ಸಭಾಪತಿಯವರನ್ನು ದೇವಾಲಯದ ಪ್ರಧಾನ ಅರ್ಚಕರಾದ ಶ್ರೀನಿವಾಸ್ ಭಟ್, ನರಸಿಂಹಪ್ರಿಯ ಭಟ್, ತಹಶೀಲ್ದಾರ್ ಶ್ರೀಧರ್ ಕಂಕನವಾಡಿ, ದೇಗುಲದ ಇ.ಒ. ಯೋಗೇಶ್ ಸ್ವಾಗತಿಸಿದರು.
ಕಾಂಗ್ರೆಸ್ ತಾಲ್ಲೂಕು ಘಟಕದ ಅಧ್ಯಕ್ಷ ಎಂ.ಜೆ. ನಿಶಾಂತ್, ಮಹಿಳಾ ಘಟಕದ ಅಧ್ಯಕ್ಷೆ ತೀರ್ಥಕುಮಾರಿ ವೆಂಕಟೇಶ್, ಪುರಸಭೆ ಅಧ್ಯಕ್ಷೆ ಉಷಾ ಸತೀಶ್, ಸದಸ್ಯರಾದ ಬಿ.ಎ.ಜಮಾಲೂದ್ದೀನ್, ಮೀನಾಕ್ಷಿ, ಕಾಂಗ್ರೆಸ್ ಮುಖಂಡ ಜುಬೇರ್ ಇತರರು ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.