ADVERTISEMENT

ಹೊಸಕೆರೆ: ಜಾಲಿ ದರ್ಬಾರು

​ಪ್ರಜಾವಾಣಿ ವಾರ್ತೆ
Published 12 ಆಗಸ್ಟ್ 2012, 3:55 IST
Last Updated 12 ಆಗಸ್ಟ್ 2012, 3:55 IST
ಹೊಸಕೆರೆ: ಜಾಲಿ ದರ್ಬಾರು
ಹೊಸಕೆರೆ: ಜಾಲಿ ದರ್ಬಾರು   

ಬಾಣಾವರ: ಪಟ್ಟಣದ ಕೃಷಿ ಭೂಮಿಗೆ ನೀರುಣಿಸುವ ಮಾತು ಹಾಗಿರಲಿ, ಹೋಬಳಿಗೆ ಕಳೆದ ಒಂದು ದಶಕದಲ್ಲಿ ಮಳೆ ಬಂದ ರೀತಿಗೆ ಸಾಕ್ಷಿ ಎಂಬಂತೆ ಪಟ್ಟಣದ ಹುಳಿಯಾರ್ ರಸ್ತೆ ಪಕ್ಕದಲ್ಲಿ ಒಡಲು ಬರಿದಾಗಿರುವ ಹೊಸಕೆರೆ ಬಣಗುಡುತ್ತ ದನಕರುಗಳಿಗೂ ನೀರುಣಿಸಲಾಗದೆ ಅಸಹಾಯಕವಾಗಿದೆ.

ಬಾಣಾವರ ಪಟ್ಟಣವನ್ನು ಮೂರು ಕೆರೆಗಳು ಸುತ್ತುವರೆದಿದ್ದರೂ ಆ ಕೆರೆಗಳಲ್ಲಿ ನೋಡಲು ಸಹ ನೀರು ಸಿಗದ ಪರಿಸ್ಥಿತಿ ಇದೆ. ನೂರಾರು ಎಕರೆಗಳಷ್ಟು ವಿಸ್ತಿರ್ಣದ ಬೃಹತ್ ಕೆರೆಗಳಿದ್ದರೂ, ಅವು ಖಾಲಿ ಖಾಲಿಯಾಗಿವೆ. ಹಿಂದೆ ಕೆರೆಗಳು ತುಂಬಿರುವಾಗ ಕೆರೆ ಸುತ್ತಮುತ್ತ ವರ್ಷ ಪೂರ್ತಿ ಕೃಷಿ ಚಟುವಟಿಕೆಗಳು ನಡೆದು ಕೃಷಿಕರು ನೆಮ್ಮದಿಯಿಂದ ಬದುಕುತ್ತಿದ್ದರು. ಸಾವಿರಾರು ತೆಂಗಿನ ಮರಗಳಿಗೆ ನೀರು ಒದಗಿಸುತ್ತಿದ್ದ ಕೆರೆಗಳು ಇಂದು ಬರಿದಾದ ಪರಿಣಾಮ ತೆಂಗಿನ ಫಸಲು ಇಳಿಮುಖ ಕಂಡಿದೆ ಇದರಿಂದ  ರೈತರ ವಾಣಿಜ್ಯ ಅಭಿವೃದ್ಧಿ ಹಿನ್ನಡೆಯಾದಂತಾಗಿದೆ.

ಪ್ರತಿವರ್ಷ ಮಳೆಗಾಲಲ್ಲಿ ಕೆರೆಗಳಲ್ಲಿರುವ ಚಿಕ್ಕ ಚಿಕ್ಕ ಗುಂಡಿಗಳಲ್ಲಾದರೂ ನೀರು ಕಾಣಬಹುದಿತ್ತು. ಈ ಬಾರಿ ಮಳೆರಾಯ ಇತ್ತ ಸುಳಿಯದಿರುವುದರಿಂದ ಗುಂಡಿಗಳಲ್ಲೂ ನೀರು ಕಾಣುವುದು ಸಾಧ್ಯವಿಲ್ಲದಂತಾಗಿದೆ. ವಿಶಾಲವಾದ ಹೊಸಕೆರೆ ಸದಾ ಬರದಾಗಿರುವುದರಿಂದ ಆಳೆತ್ತರಕ್ಕೆ ಜಾಲಿ ಗಿಡ ಬೆಳೆದು ನಿಂತಿವೆ.

ಹೋಬಳಿಯ ಶ್ಯಾನೇಗೆರೆ, ಭಾಗಿಲುಘಟ್ಟ, ಮನಕತ್ತೂರು, ಸುಳದಿಮ್ಮನಹಳ್ಳಿ ಕೆರೆಗಳು ಬತ್ತಿಹೋಗಿರುವುದರಿಂದ ಆಟದ ಮೈದಾನದಂತಾಗಿವೆ. ಕೆರೆ ಕಟ್ಟೆಗಳಲ್ಲಿ ನೀರು ಇಲ್ಲದೆ ರೈತರಿಗೆ ಜಾನುವಾರುಗಳನ್ನು ಸಲಹುವುದೇ ಸಮಸ್ಯೆಯಾಗಿದೆ. ದನ ಕರುಗಳಿಗೆ ಮೇವು ಸಹ ದೊರೆಯುತ್ತಿಲ್ಲ. ಕೆರೆ ಕಟ್ಟೆ ತುಂಬದೆ ಅಂತರ್ಜಲದ ಮಟ್ಟ ಕುಸಿದಿದೆ. ಕೊಳವೆ ಬಾವಿಗಳು ಇದ್ದೂ ಇಲ್ಲದಂತಾಗುತ್ತಿವೆ.

ಕೆರೆ ತುಂಬಿದರೆ ಮಾತ್ರ ಸುತ್ತ ಮುತ್ತಲಿನ ರೈತರು ಸುಭಿಕ್ಷವಾಗಿರಲು ಸಾಧ್ಯ ಹಾಗೂ ಈಗಿನ ಕುಡಿಯುವ ನೀರಿನ ಬವಣೆ ನೀಗಲು ಸಾಧ್ಯವಾಗುತ್ತದೆ. ಕಳೆದ ದಶಕದಿಂದ ಸರಿಯಾದ ಮಳೆಯನ್ನೆ ಕಾಣದ ಪಟ್ಟಣದ ಕೆರೆಗಳಿಗೆ ಸರ್ಕಾರ, ಜನಪ್ರತಿನಿಧಿಗಳು ನೀರು ತುಂಬಿಸುವ ಶಾಶ್ವತ ಯೋಜನೆಗಳ ಬಗ್ಗೆ ಯೋಚಿಸಬೇಕು ಎಂಬುದು ಸಾರ್ವಜನಿಕರ ಒಕ್ಕೂರಲಿನ ಮನವಿ.
 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.