ADVERTISEMENT

‘ಜನರ ಸಹಕಾರದಿಂದ ಅಪರಾಧ ನಿಯಂತ್ರಣ’

​ಪ್ರಜಾವಾಣಿ ವಾರ್ತೆ
Published 20 ಡಿಸೆಂಬರ್ 2013, 5:15 IST
Last Updated 20 ಡಿಸೆಂಬರ್ 2013, 5:15 IST

ಹೊಳೆನರಸೀಪುರ: ‘ಅಪರಾಧ ನಡೆದ ನಂತರ ಪೊಲೀಸರು ತನಿಖೆ ನಡೆಸಿ ಅಪರಾಧಿಗಳಿಗೆ ಶಿಕ್ಷೆ ಕೊಡಿಸುತ್ತಾರೆ. ಆದರೆ, ಅಪರಾಧಗಳೇ ನಡೆಯದಂತೆ ತಡೆಯುವ ಅವಕಾಶ ಪೊಲೀಸರಿಗಿಂತ ಸಾರ್ವಜನಿಕರಿಗೆ ಹೆಚ್ಚು ಇರುತ್ತವೆ. ಆದ್ದರಿಂದ ಸಾರ್ವಜನಿಕರು ಸದಾ ಜಾಗೃತರಾಗಿ ಅಪರಾದಗಳ ತಡೆಗೆ ಸಹಕರಿಸಬೇಕು’ ಎಂದು ಸಿಪಿಐ ಕೃಷ್ಣಪ್ಪ ಹೇಳಿದರು.

ಇಲ್ಲಿನ ವಾಸವಿ ಮಹಲ್‌ನಲ್ಲಿ ಜೆರಾಕ್ಸ್‌ ಅಂಗಡಿಗಳ ಮಾಲೀಕರ ಸಂಘದ ಆಶ್ರಯದಲ್ಲಿ ಬುಧವಾರ ಏರ್ಪಡಿಸಿದ್ದ ಅಪರಾಧ ತಡೆ ಮಾಸಾ­ಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಪೊಲೀಸ್‌ ಹಾಗೂ ಸಂಚಾರಿ ಕಾನೂನು ನಿಯಮ­ಗಳು ಇರುವುದು ಜನರ ಮಾನ, ಪ್ರಾಣ ರಕ್ಷಣೆಗಾಗಿ. ಆದ್ದರಿಂದ ನಿಯಮಗಳನ್ನು ಗೌರವಿಸಿ, ಪಾಲಿಸಿ’ ಎಂದರು.

ಎಸ್‌ಐ ಶಿವಕುಮಾರ್‌ ಮಾತನಾಡಿ, ‘ಈ ಹಿಂದೆ ಜಿಲ್ಲಾ ಪೊಲೀಸ್‌ ವರಿಷ್ಠಾಧಿ­ಕಾರಿಗಳ ಅಧ್ಯಕ್ಷತೆ­ಯಲ್ಲಿ ನಡೆದ ಸಭೆಯಲ್ಲಿ ಸಾರ್ವಜನಿಕರು ವಿವರಿಸಿದ ಸಮಸ್ಯೆಗಳಲ್ಲಿ ಶೇ 75ರಷ್ಟನ್ನು ಸಂಪೂರ್ಣ ಪರಿಹರಿಸಿದ್ದೇವೆ. ಇನ್ನು 25ರಷ್ಟಿರುವ ಸಮಸ್ಯೆಗಳು ತಾಂತ್ರಿಕ ಕಾರಣಗಳಿಂದ ತಡವಾಗುತ್ತಿದೆ’ ಎಂದರು.

‘ಶಾಲೆ, ಕಾಲೇಜು, ಬಸ್‌ ನಿಲ್ದಾಣ ಬಳಿ ಪುಂಡರ ಹಾವಳಿ ನಿಯಂತ್ರಿಸಿದ್ದೇವೆ. ಪಟ್ಟಣದ ಪ್ರಮುಖ ಸ್ಥಳಗಳಲ್ಲಿ ಸಿಸಿ ಟಿ.ವಿ. ಅಳವಡಿಸುತ್ತಿದ್ದೇವೆ. ರಸ್ತೆ ಬದಿ ವ್ಯಾಪಾರಿಗಳನ್ನು ತೆರವುಗೊಳಿಸಿದ್ದೇವೆ. ಪೇಟೆ ಮುಖ್ಯ ರಸ್ತೆಯಲ್ಲಿ ಬಾರಿ ವಾಹನಗಳು ಏಕಮುಖ ಸಂಚಾರ ಮಾತ್ರಮಾಡಬೇಕು ಎಂಬ ನಿಯಮ ಜಾರಿಗೆ ತಂದಿದ್ದೇವೆ.

ಪೇಟೆ ಮುಖ್ಯ ರಸ್ತೆಯಲ್ಲಿ ದ್ವಿಚಕ್ರವಾಹನಗಳು ದಿನಕ್ಕೊಂದು ಬದಿಯಲ್ಲಿ ನಿಲ್ಲಿಸುವ ವ್ಯವಸ್ಥೆ ಜಾರಿಗೊಳಿಸಿದ್ದೇವೆ. ಯಾವುದೇ ಕಾರು, ಆಟೊ, ವಾಹನಗಳು ಪೇಟೆ ಮುಖ್ಯ ರಸ್ತೆಯಲ್ಲಿ ನಿಲ್ಲದಂತೆ ನಿಯಂತ್ರಿ­ಸಿ­­ದ್ದೇವೆ. ಯಾವುದೇ ತೊಂದರೆ ಉಂಟಾದಲ್ಲಿ ತಕ್ಷಣ ನನ್ನ ಮೊಬೈಲ್‌ (94808 04765)ಗೆ ಕರೆ ಮಾಡಿ ಮಾಹಿತಿ ನೀಡಿ ಎಂದರು.

ಅಪರಾಧ ವಿಭಾಗದ ಎಸ್‌ಐ ಸವಿ, ನಗರಠಾಣೆ ಎಸ್‌ಐ ಶಿವಕುಮಾರ್‌, ಪುರಸಭಾ ಸದಸ್ಯ ಎಚ್‌.ವಿ. ಪುಟ್ಟ­ರಾಜು, ಗುಲ್ಷನ್‌ ಅಲಿ, ರೋಟರಿ ಸಂಸ್ಥೆ ಅಧ್ಯಕ್ಷ ಪುಟ್ಟೇಗೌಡ, ನಿವೃತ್ತ ಪ್ರಾಂಶು­ಪಾಲ ಡಾ.ಕೆ.ಸಿ. ಮರಿಯಪ್ಪ, ಪತ್ರಕರ್ತ ಗುರುಪ್ರಸಾದ್‌, ವಸಂತಕುಮಾರ್‌, ಮಾತನಾಡಿದರು.

ಜೆರಾಕ್ಸ್‌ ಅಂಗಡಿಗಳ ಮಾಲೀಕರ ಸಂಘದ ಮಂಜುನಾಥ್‌ ಗುಪ್ತಾ ಕಾರ್ಯಕ್ರಮ ನಿರೂಪಿಸಿದರು. ಪ್ರಸನ್ನಕುಮಾರ್‌ ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.