ADVERTISEMENT

‘ಪೌರಕಾರ್ಮಿಕರ ಕೊರತೆ: ಸವಾಲಾದ ಸ್ವಚ್ಛತೆ’

​ಪ್ರಜಾವಾಣಿ ವಾರ್ತೆ
Published 24 ಸೆಪ್ಟೆಂಬರ್ 2013, 6:33 IST
Last Updated 24 ಸೆಪ್ಟೆಂಬರ್ 2013, 6:33 IST

ಹಾಸನ: ‘ಒಂದೆಡೆ ನಗರಗಳ ಜನಸಂಖ್ಯೆ ಹೆಚ್ಚುತ್ತಿದ್ದರೆ, ಇನ್ನೊಂದೆಡೆ ಪೌರ ಕಾರ್ಮಿಕರ ಸಂಖ್ಯೆ ಕಡಿಮೆಯಾಗುತ್ತಲೇ ಇದೆ. ಇದರಿಂದಾಗಿ ನಗರಗಳಲ್ಲಿ ಸ್ವಚ್ಛತೆ ಕಾಪಾಡುವುದು ಸವಾಲಾಗುತ್ತಿದೆ’ ಎಂದು ಹಾಸನ ಕ್ಷೇತ್ರದ ಶಾಸಕ ಎಚ್‌.ಎಸ್‌. ಪ್ರಕಾಶ್‌ ಹೇಳಿದರು.

ಪೌರ ಕಾರ್ಮಿಕರ ದಿನಾಚರಣೆ ಅಂಗವಾಗಿ ಹಾಸನಾಂಬ ಕಲಾ ಕ್ಷೇತ್ರದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

‘ಹಾಸನ ನಗರಸಭೆಯಲ್ಲೂ ಪೌರ ಕಾರ್ಮಿಕರ ಕೊರತೆ ಇದೆ. ನಗರ ಸ್ವಚ್ಛಗೊಳಿಸುವ ಪೌರ ಕಾರ್ಮಿಕರ ಸೇವೆ ಮಹತ್ವದ್ದಾಗಿದೆ. ಬೇರೆ ಯಾರೂ ಮಾಡಲಾಗದಂಥ ಕಲಸವನ್ನು ಇವರು ಮಾಡುತ್ತಿದ್ದಾರೆ. ಹಿಂದೆ ನಗರಸಭೆಯಲ್ಲಿ ಕಾರ್ಮಿಕರಿಗೆ ವೇತನ ನೀಡಲೂ ಹಣ ಇಲ್ಲದ ಸ್ಥಿತಿ ಇತ್ತು. ಈಗ ಅಂಥ ಸ್ಥಿತಿ ಇಲ್ಲ. ನಗರಸಭೆಯ ಆರ್ಥಿಕ ಸ್ಥಿತಿ ಸುಧಾರಿಸಿದೆ. ಪೌರ ಕಾರ್ಮಿಕರಿಗೆ ಇನ್ನಷ್ಟು ಸೌಲಭ್ಯಗಳನ್ನು ನೀಡಬೇಕಾಗಿದೆ. ಈ ನಿಟ್ಟಿನಲ್ಲಿ ವಿಧಾನಸಭೆಯಲ್ಲೂ ಚರ್ಚೆಗಳಾಗಿವೆ’ ಎಂದರು.

ವಿಧಾನ ಪರಿಷತ್ ಸದಸ್ಯ ಪಟೇಲ್ ಶಿವರಾಂ ಮಾತನಾಡಿ, ‘ಪೌರ ಕಾರ್ಮಿಕರಿಗೆ ಸೇವಾ ಭದ್ರತೆ ಮತ್ತು ಹೆಚ್ಚಿನ ವೇತನ ನೀಡುವ ಬಗ್ಗೆ ವಿಧಾನ ಪರಿಷತ್ತಿನಲ್ಲೂ ಚರ್ಚೆಯಾಗಿದೆ. ಅದು ಶೀಘ್ರ ಜಾರಿಯಾಗಬೇಕು.  ಪ್ರಸಕ್ತ ಹಲವು ಒತ್ತಡಗಳ ಮಧ್ಯೆ ಪೌರ ಕಾರ್ಮಿಕರು ಕೆಲಸ ಮಾಡಬೇಕಾದ ಸ್ಥಿತಿ ಇದೆ’ ಎಂದರು.

‘ಒಂದೇ ಕೆಲಸ ಮಾಡುವ ಕಾರ್ಮಿಕರಲ್ಲಿ ಕೆಲವರು ಕಾಯಂ ಆಗಿದ್ದರೆ ಇನ್ನೂ ಕೆಲವರು ಗುತ್ತಿಗೆ ಆಧಾರದಲ್ಲಿ ಯಾವುದೇ ಭದ್ರತೆ ಇಲ್ಲದೆ ದುಡಿಯುತ್ತಿದ್ದಾರೆ.  ದಿನಗೂಲಿ ನೌಕರರನ್ನು ಖಾಯಂ ಮಾಡುವ ಕೆಲಸ ಆಗಬೇಕು’ ಎಂದು ಹೇಳಿದರು.

ನಗರಸಭೆ ಅಧ್ಯಕ್ಷೆ ಶ್ರೀವಿದ್ಯಾ ಆನಂದ್, ‘ನಗರದ ಸ್ವಚ್ಛತೆ ಕಾಯ್ದುಕೊಳ್ಳುವುದು ಕೇವಲ ಪೌರ ಕಾರ್ಮಿಕರ ಜವಾಬ್ದಾರಿ ಅಲ್ಲ. ಇವರ ಜತೆಗೆ ಎಲ್ಲ ನಾಗರಿಕರೂ ಕೈ ಜೋಡಿಸಬೇಕು. ಜನರು ಸರಿಯಾದ ರೀತಿಯಲ್ಲಿ ಮತ್ತು ಸರಿಯಾದ ಜಾಗದಲ್ಲಿ ಕಸ ವಿಲೇವಾರಿ ಮಾಡಿದರೆ ನಗರವನ್ನು ಸ್ವಚ್ಛವಾಗಿಡಬಹುದು’ ಎಂದರು.

ಉತ್ತಮ ರೀತಿಯಲ್ಲಿ ಕೆಲಸ ಮಾಡಿದ ಐದು ಮಂದಿ ಪೌರ ಕಾರ್ಮಿಕರನ್ನು ಸನ್ಮಾನಿಸಲಾಯಿತು. ಇದಕ್ಕೂ ಮೊದಲು ಕಾರ್ಮಿಕರು ನಗರಸಭೆ ಆವರಣದಿಂದ ಕಲಾಕ್ಷೇತ್ರದವರೆಗೆ ಮೆರವಣಿಗೆ ನಡೆಸಿದರು.

ನಗರಸಭೆ ಉಪಾಧ್ಯಕ್ಷ ಇರ್ಷಾದ್‌ ಪಾಷ, ಎಂಜಿನಿಯರ್‌ ಆನಂದ್, ನಾಗೇಂದ್ರ, ಪ್ರವೀಣ್, ಶಾಂತಶೆಟ್ಟಿ, ರಾಮಣ್ಣ ಹಾಗೂ ನಗರಸಭೆ ಸದಸ್ಯರು ಹಾಜರಿದ್ದರು.

‘ಪೌರಕಾರ್ಮಿಕರಿಗೆ ನಿವೇಶನ ನೀಡಲು ಕ್ರಮ’
ಬೇಲೂರು: ‘ಜನರ ಆರೋಗ್ಯ ರಕ್ಷಣೆಯ ಜವಾಬ್ದಾರಿ ಹೊತ್ತಿರುವ ಪೌರಕಾರ್ಮಿಕರನ್ನು ಸರ್ಕಾರ ಕಾಯಂಗೊಳಿಸಲು ಅಗತ್ಯ ಕ್ರಮ ಕೈಗೊಳ್ಳಬೇಕು. ಈ ಕುರಿತು ಮುಂದಿನ ವಿಧಾನಸಭಾ ಅಧಿವೇಶವನದಲ್ಲಿ ಚರ್ಚಿಸಲಾಗುವುದು’ ಎಂದು ಶಾಸಕ ವೈ.ಎನ್‌. ರುದ್ರೇಶಗೌಡ ಹೇಳಿದರು.

ಪುರಸಭೆಯಲ್ಲಿ ಸೋಮವಾರ ಏರ್ಪಡಿಸಿದ್ದ ಪೌರ ಕಾರ್ಮಿಕರ ದಿನಾಚರಣೆಯನ್ನು ಉದ್ಘಾಟಿಸಿ ಮಾತನಾಡಿದ ಅವರು, ತಮ್ಮ ಆರೋಗ್ಯದ ಬಗ್ಗೆಯೂ ಗಮನಹರಿಸದೆ ಪಟ್ಟಣದ ಜನರ ಆರೋಗ್ಯವನ್ನು ಪೌರಕಾರ್ಮಿಕರು ರಕ್ಷಣೆ ಮಾಡುತ್ತಿದ್ದಾರೆ ಎಂದರು.

ಪಟ್ಟಣದಲ್ಲಿ ಕಾರ್ಯ ನಿರ್ವಹಿಸುತ್ತಿರುವ ನಿವೇಶನ ರಹಿತ ಪೌರಕಾರ್ಮಿಕರಿಗೆ ನಿವೇಶನ ನೀಡಲು ಕ್ರಮ ಕೈಗೊಳ್ಳಲಾಗುವುದು. ಪಟ್ಟಣದ ಸ್ವಚ್ಛತೆ ಕಾಪಾಡುವ ನಿಟ್ಟಿನಲ್ಲಿ ಸಾರ್ಜನಿಕರ ಸಹಕಾರವೂ ಅಗತ್ಯವಾಗಿದೆ. ಜನರು ತಮ್ಮ ಮನೆಗಳ ಸುತ್ತಮುತ್ತಲಿನ ಪರಿಸರವನ್ನು ಸ್ವಚ್ಛವಾಗಿಟ್ಟು ಕೊಂಡರೆ ಪರಿಸರ ಸಂರಕ್ಷಿಸಿದಂತಾಗುತ್ತದೆ ಎಂದು ತಿಳಿಸಿದರು.

ಪೌರಕಾರ್ಮಿಕರಾದ ವಿಮಲಾ, ರಾಮು, ನರಸಿಂಹ ಮತ್ತು ಸೀತಾರಾಮು ಅವರನ್ನು ಶಾಸಕ ವೈ.ಎನ್‌. ರುದ್ರೇಶಗೌಡ ಸನ್ಮಾನಿಸಿದರು. ಪುರಸಭೆ ಮುಖ್ಯಾಧಿಕಾರಿ ಬಿ.ಸಿ. ಬಸವರಾಜು, ಸದಸ್ಯರಾದ ಎಂ.ಆರ್. ವೆಂಕಟೇಶ್‌, ಜಿ. ಶಾಂತಕುಮಾರ್‌, ಬಿ.ಡಿ. ಚನ್ನಕೇಶವ, ಶ್ರೀನಿಧಿ, ಕಾಯಿ ಶಿವು, ಅಕ್ರಂ ಪಾಷ, ಬಿ.ಎಸ್‌.ಸತೀಶ, ಮಂಜುನಾಥ, ಆರೋಗ್ಯಾಧಿಕಾರಿ ಎಸ್‌.ವೆಂಕಟೇಶ್‌ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.