ADVERTISEMENT

‘ಮತದಾರರ ವಿಶ್ವಾಸ ಗಳಿಸುವುದೇ ಗುರಿ’

​ಪ್ರಜಾವಾಣಿ ವಾರ್ತೆ
Published 22 ಮಾರ್ಚ್ 2014, 8:55 IST
Last Updated 22 ಮಾರ್ಚ್ 2014, 8:55 IST
ಹಾಸನದ ಸೀತಾರಾಮಾಂಜನೇಯ ದೇವಸ್ಥಾನದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಬಿಜೆಪಿ ಕಾರ್ಯಕರ್ತರ ಸಭೆಯಲ್ಲಿ ಪಕ್ಷದ ಹಾಸನ ಲೋಕಸಭಾ ಕ್ಷೇತ್ರದ ಅಭ್ಯರ್ಥಿ ವಿಜಯಶಂಕರ್‌ ಮಾತನಾಡಿದರು.
ಹಾಸನದ ಸೀತಾರಾಮಾಂಜನೇಯ ದೇವಸ್ಥಾನದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಬಿಜೆಪಿ ಕಾರ್ಯಕರ್ತರ ಸಭೆಯಲ್ಲಿ ಪಕ್ಷದ ಹಾಸನ ಲೋಕಸಭಾ ಕ್ಷೇತ್ರದ ಅಭ್ಯರ್ಥಿ ವಿಜಯಶಂಕರ್‌ ಮಾತನಾಡಿದರು.   

ಹಾಸನ: ಪಕ್ಷದ ಮುಖಂಡರ ಸೂಚನೆಯ ಮೇರೆಗೆ ನಾನು ಹಾಸನ ಕ್ಷೇತ್ರದಿಂದ ಸ್ಪರ್ಧಿಸಲು ಬಂದಿ­ದ್ದೇನೆ. ಶನಿವಾರದಿಂದಲೇ ಕ್ಷೇತ್ರದಲ್ಲಿ ಪ್ರಚಾರ ಆರಂಭಿಸಿ ಜನರ ವಿಶ್ವಾಸ ಗಳಿಸುತ್ತೇನೆ’ ಎಂದು ಹಾಸನ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ, ಮಾಜಿ ಸಚಿವ ವಿಜಯಶಂಕರ್‌ ಹೇಳಿದರು.

ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಮೈಸೂರು–ಕೊಡಗು ಕ್ಷೇತ್ರದಿಂದ ಸ್ಪರ್ಧಿಸಬೇಕು ಎಂದು ಬಯಸಿದ್ದೆ. ಆ ಕ್ಷೇತ್ರದ ಜತೆಗೂ ನನಗೂ ಭಾವನಾತ್ಮಕ ಸಂಬಂಧವಿದೆ. ಆದರೆ, ಪಕ್ಷದ ಮುಖಂಡರು ಹಾಸನಕ್ಕೆ ಹೋಗು ಎಂದರು. ಅದರಂತೆ ಜಿಲ್ಲೆಗೆ ಬಂದಿದ್ದೇನೆ. ಇಲ್ಲಿಯ ನಾಯಕರು ಮತ್ತು ಕಾರ್ಯಕರ್ತರನ್ನು ಭೇಟಿ ಮಾಡಿದ್ದೇನೆ. ಮುಂದೆ ನೇರವಾಗಿ ಜನರನ್ನು ಭೇಟಿ ಮಾಡಿ ನನ್ನ ಪ್ರಣಾಳಿಕೆಯನ್ನು ಅವರ ಮುಂದಿಡು­ತ್ತೇನೆ. ನಾನು ಗೆದ್ದೇ ಗೆಲ್ಲುತ್ತೇನೆ ಎಂಬ ವಿಶ್ವಾಸ ಇದೆ. ನರೇಂದ್ರ ಮೋದಿ ಸೇರಿದಂತೆ ರಾಜ್ಯ ಮತ್ತು ರಾಷ್ಟ್ರಮಟ್ಟದ ಅನೇಕ ನಾಯಕರು ಪ್ರಚಾರಕ್ಕಾಗಿ ಹಾಸನಕ್ಕೆ ಬರಲಿದ್ದಾರೆ ಎಂದ ಹೇಳಿದರು.

‘ಸೋಮವಾರ (ಮಾ. 24) ಬೆಳಿಗ್ಗೆ ಹಾಸನದಲ್ಲಿ ಪಕ್ಷದ ಕಾರ್ಯಕರ್ತ ಸಭೆ ಹಾಗೂ ರ್‌್ಯಾಲಿ ಆಯೋಜಿಸಿ ಮಧ್ಯಾಹ್ನ 12 ರಿಂದ 12.30ರ ಒಳಗಿನ ಅವಧಿಯಲ್ಲಿ ನಾಮಪತ್ರ ಸಲ್ಲಿಸುತ್ತೇನೆ ಎಂದು ತಿಳಿಸಿದರು.

ಶಿವಪ್ಪ ಬರುತ್ತಾರೆ: ಜಿಲ್ಲೆಯ ಹಿರಿಯ ಬಿಜೆಪಿ ಮುಖಂಡ ಬಿ.ಬಿ. ಶಿವಪ್ಪ ಬಿಜೆಪಿ ಪ್ರಚಾರಕ್ಕೆ ಬರುವುದಿಲ್ಲ ಎಂದು ಹೇಳಿಕೆ ನೀಡಿರುವ ಬಗ್ಗೆ ಪ್ರತಿಕ್ರಿಯೆ ನೀಡಿದ ವಿಜಯಶಂಕರ್‌, ‘ಅವರ ನೋವು ಅರ್ಥವಾಗಿದೆ. ನಾನು ಸ್ವತಃ ಅವರನ್ನು ಭೇಟಿ ಮಾಡಿ ಬಂದಿದ್ದೇನೆ. ಪ್ರಚಾರಕ್ಕೆ ಬರುವುದಿಲ್ಲ ಎಂದಿದ್ದೂ ನಿಜ. ಆದರೆ, ನಮ್ಮ ರಾಷ್ಟ್ರ ಮತ್ತು ರಾಜ್ಯ ನಾಯಕರು ಬಂದು ಹೋದ ಮೇಲೆ ಅವರೂ ಸಕ್ರಿಯವಾಗಿ ಪಕ್ಷದ ಪರ ಕೆಲಸ ಮಾಡುತ್ತಾರೆ ಎಂಬ ವಿಶ್ವಾಸವಿದೆ’ ಎಂದರು.

ಜಿಲ್ಲೆಯಲ್ಲಿ ಜಾತಿ ರಾಜಕಾರಣ ನಡೆಯುತ್ತದೆ ಎಂಬುದು ನಿಜ. ಆದರೆ, ನನಗೆ ಜಾತಿ ರಾಜಕಾರಣದ ಮೇಲೆ ನಂಬಿಕೆ ಇಲ್ಲ. ಜಿಲ್ಲೆಯ ಜನರ ಮೇಲೆ ವಿಶ್ವಾಸವಿಟ್ಟು ಕೆಲಸ ಮಾಡುತ್ತೇನೆ. ಜಿಲ್ಲೆಯಲ್ಲಿ ಅನೇಕ ಹಿರಿಯ ಮತ್ತು ಅನುಭವಿ ರಾಜಕಾರಣಿಗಳಿದ್ದಾರೆ. ನಾನು ಯಾರನ್ನೂ ಟೀಕಿಸುವುದಿಲ್ಲ. ಬದಲಿಗೆ ಜಿಲ್ಲೆಗೆ ಏನೇನಾಗಬೇಕು, ನಾನು ಗೆದ್ದು ಬಂದರೆ ಏನೇನು ಮಾಡುತ್ತೇನೆ ಎಂಬ ಪ್ರಣಾಳಿಕೆಯನ್ನು ಜನರ ಮುಂದಿಟ್ಟು ಮತ ಯಾಚಿಸುತ್ತೇನೆ’ ಎಂದರು.

ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ರೇಣು­ಕುಮಾರ್, ವಿಧಾನ ಪರಿಷತ್ ಮಾಜಿ ಸದಸ್ಯ ಗುರುದೇವ್, ಹಾಸನ ಲೋಕಸಭಾ ಚುನಾವಣಾ ಉಸ್ತುವಾರಿ ಹೊತ್ತಿರುವ ಅಶ್ವತ್ಥನಾರಾಯಣ, ಮುಖಂಡರಾದ ನಿರ್ವಾಣಯ್ಯ, ಪ್ರಾಣೇಶ್, ನವಿಲೆ ಅಣ್ಣಪ್ಪ ಇತರರು ಹಾಜರಿದ್ದರು.

ಇದೇ ನನ್ನ ಕೊನೆಯ ಲೋಕಸಭಾ ಚುನಾವಣೆ: ವಿಜಯಶಂಕರ್
ಹಾಸನ:
‘ಈ ಬಾರಿ ದೇಶದಲ್ಲಿ ಎನ್‌ಡಿಎ ಅಧಿಕಾರಕ್ಕೆ ಬಾರದಿದ್ದರೆ ದೇಶ ಅದೋಗತಿಗೆ ಹೋಗುವುದು ಖಚಿತ. ಆದ್ದರಿಂದ, ಎಲ್ಲರೂ ಬಿಜೆಪಿ ಗೆಲುವಿಗೆ ಶ್ರಮಿಸಲೇಬೇಕಾಗಿದೆ’ ಎಂದು ಹಾಸನ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ವಿಜಯಶಂಕರ್‌ ಹೇಳಿದರು.

ಹಾಸನ ಕ್ಷೇತ್ರದಿಂದ ಅಭ್ಯರ್ಥಿ ಎಂದು ಘೋಷಣೆಯಾದ ಬಳಿಕ ಇಲ್ಲಿನ ಸೀತಾ ರಾಮಾಂಜನೇಯ ದೇವಸ್ಥಾನದಲ್ಲಿ ಆಯೋಜಿ ಸಿದ್ದ ಮೊದಲ ಕಾರ್ಯಕರ್ತರ ಸಭೆಯಲ್ಲಿ ಅವರು ಮಾತನಾಡಿದರು. ‘ದೇಶದ ಆಡಳಿತ ನಡೆಸುವವರ ಸಚ್ಚಾರಿತ್ರ್ಯದವರಾಗಬೇಕು. ನನ್ನ ರಾಜಕೀಯ ಮತ್ತು ವೈಯಕ್ತಿಕ ಬದುಕುಗಳೆರಡೂ ಪಾರದರ್ಶಕವಾಗಿದೆ. ಎರಡರ ಬಗ್ಗೆಯೂ ಜನರು ತಿಳಿದುಕೊಂಡು ಟೀಕೆ ಮಾಡಬಹುದು’ ಎಂದರು.

‘ಕಳೆದ ಹತ್ತು ವರ್ಷಗಳಲ್ಲಿ ದೇಶದ ಸ್ಥಿತಿ ಏನಾಗಿದೆ ಎಂಬುದು ಪ್ರಜ್ಞಾವಂತ ನಾಗರಿಕರಿಗೆ ತಿಳಿದಿದೆ. ಇಂಥ ಸ್ಥಿತಿಯಲ್ಲಿ ಬಿಜೆಪಿ ಒಂದೇ ದೇಶದ ಆಶಾಕಿರಣವಾಗಿದೆ. ಎಲ್ಲ ರೀತಿಯ ವಿಚಾರ ಗಳಿಗೂ ಇದು ಸತ್ವ ಪರೀಕ್ಷೆಯ ಕಾಲ. ಈ ಬಾರಿ ಹಾಸನದಲ್ಲಿ ಬಿಜೆಪಿ ಬಾವುಟ ಹಾರಿಸಲೇಬೇಕು ಎಂದು ಪಣತೊಡಬೇಕು’ ಎಂದು ಕಾರ್ಯಕರ್ತ ರನ್ನು ಹುರಿದುಂಬಿಸಿದರು.

‘ನಾನು ಮೈಸೂರು ಕ್ಷೇತ್ರದ ಆಕಾಂಕ್ಷಿ ಯಾಗಿದ್ದೆ. ಕಳೆದ ಕೆಲವು ತಿಂಗಳಿಂದ ಆ ಕ್ಷೇತ್ರದಲ್ಲಿ ಓಡಾಡಿದ್ದೇನೆ. ಅಲ್ಲಿಂದ ಸ್ಪರ್ಧಿಸಿದರೆ ಗೆದ್ದೇ ಗೆಲ್ಲುತ್ತೇನೆ ಎಂದು ಪಕ್ಷದ ಮುಖಂಡರಿಗೆ ತಿಳಿಸಿದ್ದೆ. ಆದರೆ, ಟಿಕೆಟ್‌ ಕೊಟ್ಟಿಲ್ಲ. ಹಾಸನಕ್ಕೆ ಹೋಗಿ ಅಲ್ಲಿ ಕೆಲಸ ಮಾಡು ಎಂದು ಪಕ್ಷ ಸೂಚಿಸಿದೆ. ಪಕ್ಷದ ನಿಷ್ಠಾವಂತ ಕಾರ್ಯಕರ್ತ­ನಾ­ಗಿ­ರುವುದರಿಂದ ಎಲ್ಲ ತ್ಯಾಗಕ್ಕೂ ಸಿದ್ಧನಾಗಿ ಇಲ್ಲಿಗೆ ಬಂದಿದ್ದೇನೆ. ಇಲ್ಲಿ ಒಳ್ಳೆಯ ಕಾರ್ಯ­ಕರ್ತರ ಸೇನೆ ಇದೆ. ಎಲ್ಲರೂ ಕಷ್ಟಪಟ್ಟು ದುಡಿದರೆ ಗೆಲುವು ಸಾಧಿಸಬಹುದೆಂಬ ವಿಶ್ವಾಸವಿದೆ’ ಎಂದರು.

ಇದೇ ಕೊನೆಯ ಚುನಾವಣೆ: ನಾನು ಎರಡು ಬಾರಿ ಲೋಕಸಭಾ ಸದಸ್ಯನಾಗಿದ್ದೆ. ಎರಡು ಬಾರಿ ಸೋತಿದ್ದೇನೆ. ಇದು ಐದನೇ ಚುನಾವಣೆ ಮತ್ತು ಲೋಕಸಭೆಗೆ ಇದೇ ನನ್ನ ಕೊನೆಯ ಸ್ಪರ್ಧೆ. ಇನ್ನು ಮುಂದೆ ನಾನು ರಾಜ್ಯ ರಾಜಕಾರಣಕ್ಕೆ ಬರುತ್ತೇನೆ ಎಂದು ವಿಜಯಶಂಕರ್‌ ಇದೇ ಸಂದರ್ಭದಲ್ಲಿ ಘೊಷಿಸಿಕೊಂಡರು.

ಬಸವಾನಂದ ಸ್ವಾಮೀಜಿ, ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ರೇಣುಕುಮಾರ್‌, ಮಾಜಿ ಅಧ್ಯಕ್ಷ ಎಂ.ಎಸ್‌. ಕೃಷ್ಣೇಗೌಡ, ಮಾಜಿ ಶಾಸಕ ಬಿ.ಆರ್. ಗುರುದೇವ್‌, ಬಿಜೆಪಿಯ ಹಾಸನ ಲೋಕಸಭಾ ಕ್ಷೇತ್ರದ ಉಸ್ತುವಾರಿ ಹೊತ್ತಿರುವ ಅಶ್ವತ್ಥನಾರಾಯಣ, ಜಿ.ಪಂ. ಸದಸ್ಯ ಅಮಿತ್‌ ಶೆಟ್ಟಿ ಇತರರು ವೇದಿಕೆಯಲ್ಲಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT