ADVERTISEMENT

‘ಸಾವಯವ ಕೃಷಿಯಿಂದ ಉತ್ತಮ ಇಳುವರಿ’

​ಪ್ರಜಾವಾಣಿ ವಾರ್ತೆ
Published 20 ಡಿಸೆಂಬರ್ 2013, 5:23 IST
Last Updated 20 ಡಿಸೆಂಬರ್ 2013, 5:23 IST

ಆಲೂರು: ‘ಹೆದ್ದುರ್ಗ ಗ್ರಾಮದ ರೈತರು ಸಾವಯವ ಕೃಷಿಗೆ ಹೆಚ್ಚು ಒತ್ತುನೀಡಿ, ಬದಲಾವಣೆಯಲ್ಲಿ ಮುಂದಿ­ದ್ದಾರೆ. ಅವರ ಶ್ರಮ ತೃಪ್ತಿಕರ­ವಾಗಿದೆ’ ಎಂದು ಹಾಸನ ಜಿಲ್ಲಾ ಜಂಟಿ ಕೃಷಿ ನಿರ್ದೇಶಕ ಬಿ. ಶಿವರಾಜ್ ಹೇಳಿದರು.

ತಾಲ್ಲೂಕಿನ ಹೆದ್ದುರ್ಗ ಗ್ರಾಮದಲ್ಲಿ ಸಾವಯವ ಭತ್ತದ ಬೆಳೆ ಕ್ಷೇತ್ರೋತ್ರವ ಹಾಗೂ ಪ್ರಗತಿ ಪರಿಶೀಲನಾ ಸಭೆ­ಯನ್ನು ಮಂಗಳವಾರ ಉದ್ಘಾಟಿಸಿ ಅವರು ಮಾತನಾಡಿದರು.

ಸಾವಯವದಲ್ಲಿ ಅನೇಕ ಹಳೆ ತಳಿಯ ಭತ್ತಗಳನ್ನು ಬೆಳೆದು ರೈತರು ಉತ್ತಮ ಇಳುವರಿ ಪಡೆಯಬಹುದು. ‘ಭೂಮಿ’ ಸಂಸ್ಥೆಯವರು ಈ ಬೆಳೆಗಳಿಗೆ ಉತ್ತಮ ಮಾರುಕಟ್ಟೆ ಸೌಲಭ್ಯ ಒದಗಿಸುವುದು ಅವಶ್ಯಕ. ಈ ಯೋಜನೆ ಯು ಮಾರ್ಚ್‌ 2014ಕ್ಕೆ ಪೂರ್ಣ ಗೊಳ್ಳಲಿದ್ದು, ಇದನ್ನು ಸ್ವ ಆಸಕ್ತಿಯಿಂದ ಮುಂದುವರಿಸುವಂತೆ ರೈತರಿಗೆ ತಿಳಿಸಿದರು.

ಭೂಮಿ ಸಂಸ್ಥೆಯ ಕಾರ್ಯಕಾರಿ ನಿರ್ದೇಶಕ ಜಯಪ್ರಕಾಶ್ ಮಾತನಾಡಿ, ಈ ಗ್ರಾಮದಲ್ಲಿ 75 ರೈರು ಸಾವಯವ ಕೃಷಿಯಲ್ಲಿ ತೊಡಗಿಸಿಕೊಂಡಿದ್ದಾರೆ. ಇದು ಸಾವಯವ ಕೃಷಿಗೆ ಉತ್ತಮ ಬೆಳವಣಿಗೆಯಾಗಿದೆ ಎಂದರು.

ಜಿಲ್ಲೆಯ ಸಹಾಯಕ ಕೃಷಿ ನಿರ್ದೇಶಕ ವಿಷಯತಜ್ಞ ನಾಗರಾಜ್ ಮಾತನಾಡಿ, ಸಾವಯವದಲ್ಲಿ ರೈತರ ನ್ನು ತರಬೇತಿಗೊಳಿಸಿ ಅಗತ್ಯವಿರುವ ಮೂಲ ಸೌಲಭ್ಯಗಳನ್ನು ಒದಗಿಸಿ ಅನುಷ್ಠಾನಗೊಳಿಸಿದರೆ ಸಂಪೂರ್ಣ ವಾಗಿ ಸಾವಯವಕ್ಕೆ ಪರಿವರ್ತನೆ ಆಗಬಹುದು ಎಂದರು.

ಗೋಮಾತೆ ಸಾವಯವ ಕೃಷಿ ಸಂಘದ ಅಧ್ಯಕ್ಷ ಎಚ್.ಎಂ. ಜಗದೀಶ್ ಮಾತಾಡಿದರು. ಸಹಾಯಕ ಕೃಷಿ ನಿರ್ದೇಶಕ ಡಾ.ನಾಗರಾಜ್, ಆಲೂರು ತಾಲ್ಲೂಕು ಸಹಾಯಕ ಕೃಷಿ ನಿರ್ದೇಶಕ ಸುಬ್ರಮಣ್ಯ, ಹಾಗೂ ಪಾಳ್ಯ ಹೋಬಳಿ ಸ್ಥಳಾಧಿಕಾರಿಯಾದ ಪ್ರಸಾದ್, ಸಕಲೇಶಪುರ ತಾಲ್ಲೂಕಿನ ಸಾವಯವ ಗ್ರಾಮ ಜಾನೆಕೆರೆ, ಹಾಸನ ತಾಲ್ಲೂಕಿನ ಬೋಗಾರಹಳ್ಳಿ ಸ್ವಯಂ ಸೇವಾ ಸಂಸ್ಥೆಗಳ ಪ್ರತಿನಿಧಿಗಳು ಇದ್ದರು.

ಪ್ರವೇಶ ಅವಧಿ ವಿಸ್ತರಣೆ
ಹಾಸನ: ಕರ್ನಾಟಕ ರಾಜ್ಯ ಮುಕ್ತ ವಿವಿ ವು  ಪ್ರಥಮ, ­ದ್ವಿತೀಯ, ತೃತೀಯ ಬಿ.ಎ, ಬಿ.ಕಾಂ., ಪ್ರಥಮ, ಅಂತಿಮ ಎಂ.ಎ, ಎಂ.ಕಾಂ., ಡಿಪ್ಲೋಮಾ, ಎಲ್.ಎಲ್.ಎಂ., ಬಿ.ಎಲ್.ಐ.ಎಸ್ಸಿ., ಎಂ.ಎಲ್.ಐ.ಎಸ್ಸಿ., ಎಂ.ಎಸ್ಸಿ., ಸರ್ಟಿಫೀಕೇಟ್ ಕೋರ್ಸ್‌ಗಳ ಪ್ರವೇಶ ದಿನ (400 ರೂ ದಂಡ ಸಹಿತ) ಡಿ. 28 ರವರೆಗೆ ವಿಸ್ತರಿಸಲಾಗಿದೆ.

ಬಿಪಿಎಲ್ ಕಾರ್ಡ್ ಹೊಂದಿರುವ ವಿದ್ಯಾರ್ಥಿನಿಯರಿಗೆ ಬೋಧನಾ ಶುಲ್ಕದಲ್ಲಿ ಶೇ. 25 ರಿಯಾಯಿತಿ ನೀಡಲಾಗುವುದು. ಎಸ್.ಎಸ್.ಎಲ್.ಸಿ ಅಥವಾ ಪಿ.ಯು.ಸಿ., ಉತ್ತೀರ್ಣ ಅಥವಾ ಅನುತ್ತೀರ್ಣರಾಗಿರುವ 18 ವರ್ಷದ ಅಭ್ಯರ್ಥಿಗಳು ಬಿ.ಎ, ಬಿ.ಕಾಂ ಗೆ ನೇರವಾಗಿ ಪ್ರವೇಶ ಪಡೆಯ ಬಹುದು. ಮಾಹಿತಿಗೆ ಹಾಸನ ಪ್ರಾದೇಶಿಕ ಕೇಂದ್ರ, ಆದಿಚುಂಚನಗಿರಿ ಕಲ್ಯಾಣ ಮಂಟಪ ಕಟ್ಟಡ, ಎಂ.ಜಿ. ರಸ್ತೆ, ರವೀಂದ್ರ ನಗರ, ಹಾಸನ ದೂ. 08172– 269244, 98441 45234 ಸಂಪರ್ಕಿಸಬಹುದು ಎಂದು ಪ್ರಕಟಣೆ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.