ADVERTISEMENT

113 ಸ್ಥಾನ ಗೆಲ್ಲುವುದೇ ಗುರಿ: ದೇವೇಗೌಡ

ಪಕ್ಷ ತೊರೆಯುವವರ ಬಗ್ಗೆ ತಲೆ ಕೆಡಿಸಿಕೊಳ್ಳುವುದಿಲ್ಲ

​ಪ್ರಜಾವಾಣಿ ವಾರ್ತೆ
Published 31 ಮಾರ್ಚ್ 2018, 9:40 IST
Last Updated 31 ಮಾರ್ಚ್ 2018, 9:40 IST

ಹಾಸನ: ವಿಧಾನಸಭಾ ಚುನಾವಣೆಯಲ್ಲಿ 113 ಸ್ಥಾನ ಗೆಲ್ಲುವುದೇ ಗುರಿಯಾಗಿದ್ದು, ಜೆಡಿಎಸ್ ಸ್ವಂತ ಶಕ್ತಿಯಿಂದ ಸರ್ಕಾರ ರಚನೆ ಮಾಡಲಿದೆ ಎಂದು ಸಂಸದ ಎಚ್.ಡಿ.ದೇವೇಗೌಡ ವಿಶ್ವಾಸ ವ್ಯಕ್ತಪಡಿಸಿದರು.‘ಚುನಾವಣಾ ಪೂರ್ವ ಸಮೀಕ್ಷೆಗಳಲ್ಲಿ ಕಾಂಗ್ರೆಸ್ 76, ಜೆಡಿಎಸ್ 75 ಹಾಗೂ ಬಿಜೆಪಿ 75 ಎಂದು ವರದಿಗಳು ಬಂದಿವೆ. ಇಂತಹ ಸಮೀಕ್ಷೆ ನೋಡಿಕೊಂಡು ಸುಮ್ಮನೆ ಇರುವುದಿಲ್ಲ. ಇನ್ನೂ 45 ದಿನ ಇದೆ. ಅಷ್ಟೂ ದಿನ ವಿರಮಿಸದೇ ರಾಜ್ಯ ಸುತ್ತುತ್ತೇನೆ. ರಾಜ್ಯಕ್ಕೆ ಅಲ್ಪ ಸ್ವಲ್ಪ ಕೆಲಸ ಮಾಡಿದ್ದೇನೆ. ಸಾಮಾಜಿಕ ನ್ಯಾಯದ ಬಗ್ಗೆ ಬೇರೆಯವರಿಂದ ಹೇಳಿಸಿಕೊಳ್ಳಬೇಕಿಲ್ಲ. ಹಣದ ಕೊರತೆ ಇದೆ. ಆದರೆ, ಜನರ ಆಶೀರ್ವಾದ ಹಾಗೂ ಹೋರಾಟ ಮಾಡುವ ಚೈತನ್ಯವಿದೆ. ಎಚ್.ಡಿ.ಕುಮಾರಸ್ವಾಮಿಯನ್ನು ನಾನು ಮುಖ್ಯಮಂತ್ರಿ ಮಾಡಬೇಕು ಎನ್ನುತ್ತಿಲ್ಲ. ಜನರೇ ಹೇಳುತ್ತಿದ್ದಾರೆ’ ಎಂದು ಸುದ್ದಿಗೋಷ್ಠಿಯಲ್ಲಿ ಹೇಳಿದರು.

ಜೆಡಿಎಸ್ ಅಧಿಕಾರವಧಿಯಲ್ಲಿ ಯಾವ ಸಮುದಾಯಕ್ಕೂ ಅನ್ಯಾಯ ಮಾಡಿಲ್ಲ. ಪಕ್ಷ ತೊರೆಯುವ ಮುಖಂಡರ ಬಗ್ಗೆ ತಲೆ ಕೆಡಿಸಿಕೊಳ್ಳುವುದಿಲ್ಲ. ನರಸಿಂಹರಾಜ ಕ್ಷೇತ್ರದಲ್ಲಿ ಮುಸ್ಲಿಂ ಸಮುದಾಯಕ್ಕೆ ಟಿಕೆಟ್‌ ನೀಡಲಾಗುತ್ತಿದೆ. ಟಿಕೆಟ್‌ ಸಿಗಲಿಲ್ಲ ಎಂಬ ಕಾರಣಕ್ಕೆ ಸಂದೇಶ್‌ ಸ್ವಾಮಿ ಬಿಜೆಪಿ ಸೇರುತ್ತಿದ್ದಾರೆ. ಆದರೆ ಸಂದೇಶ್‌ ನಾಗರಾಜ್‌ ಪಕ್ಷದಲ್ಲಿ ಇರುತ್ತಾರೆ’ ಎಂದು ಸ್ಪಷ್ಟಪಡಿಸಿದರು.ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಅವರ ಮೈಸೂರು ವಿಚಾರ ಕುರಿತು ಪ್ರತಿಕ್ರಿಯಿಸಿದ ಅವರು, ರಾಜವಂಶಸ್ಥರನ್ನು ಭೇಟಿ ಮಾಡುತ್ತಿರುವುದು ಯಾವ ಕಾರಣಕ್ಕೆ ಗೊತ್ತಿಲ್ಲ. ಈಗಲಾದರೂ ಬುದ್ಧಿ ಬಂದಿದೆ, ದಲಿತರೊಂದಿಗೆ ಭೋಜನ ಮಾಡಿದ್ದಾರೆ ಎಂದು ನುಡಿದರು.

‘ಇದು ನನ್ನ ಕೊನೆಯ ಚುನಾವಣೆ’ ಎಂಬ ಸಿದ್ದರಾಮಯ್ಯ ಹೇಳಿಕೆಗೆ ವ್ಯಂಗ್ಯವಾಡಿದ ಅವರು, ಈ ರೀತಿಯ ಹೇಳಿಕೆಯನ್ನು ಯಾರೂ ಗಂಭೀರವಾಗಿ ತೆಗೆದುಕೊಳ್ಳಬಾರದು. ಕಳೆದ ಬಾರಿಯೂ ಸಿದ್ದರಾಮಯ್ಯ ಹೀಗೆ ಹೇಳಿದ್ದರು. ಅವರ ಬಳಿ ಅಧಿಕಾರ ಇದೆ. ಅದಕ್ಕೆ ಯಾರು ಏನೇ ಮಾಡಿದರೂ ಗೆದ್ದೇ ಗೆಲ್ಲುವೆ ಎನ್ನುತ್ತಿದ್ದಾರೆ. ನಮ್ಮ ಅಭ್ಯರ್ಥಿ ಜಿ.ಟಿ.ದೇವೇಗೌಡರ ಪರ ಹೋರಾಟ ಮಾಡುವೆ’ ಎಂದು ಹೇಳಿದರು.

ADVERTISEMENT

ಶಾಸಕ ಎಚ್.ಎಸ್ ಪ್ರಕಾಶ್, ಮುಖಂಡ ಕೆ.ಎಂ. ರಾಜೇಗೌಡ ಸೇರಿದಂತೆ ಹಲವರು ಇದ್ದರು.

**

ಎರಡೂ ರಾಷ್ಟ್ರೀಯ ಪಕ್ಷಗಳಿಂದ ದೂರ ಉಳಿದು ಹೋರಾಟ ಮಾಡಲಾಗುವುದು – ಎಚ್.ಡಿ.ದೇವೇಗೌಡ, ಸಂಸದ.

**

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.