ಅರಕಲಗೂಡು: ಪಟ್ಟಣದ ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆಯಲ್ಲಿ ಬುಧವಾರ ಬೆಂಗಳೂರಿನ ಟೊಯೋಟಾ ಕಿರ್ಲೊಸ್ಕರ್ ಕಂಪನಿ ಆಯೋಜಿಸಿದ್ದ ಸಂದರ್ಶನ ಮತ್ತು ಲಿಖಿತ ಪರೀಕ್ಷೆಯಲ್ಲಿ ಅಪ್ರೆಂಟಿಸ್ ತರಬೇತಿಗೆ 150 ಐಟಿಐ ವಿದ್ಯಾರ್ಥಿಗಳು ಆಯ್ಕೆಯಾಗಿದ್ದಾರೆ ಎಂದು ಸಂಸ್ಥೆಯ ಉದ್ಯೋಗ ಮಾಹಿತಿ ಅಧಿಕಾರಿ ಎ.ಎಸ್. ಯೋಗನಾಥ್ ತಿಳಿಸಿದ್ದಾರೆ.
ಲಿಖಿತ ಪರೀಕ್ಷೆ ಮತ್ತು ಸಂದರ್ಶನಕ್ಕೆ ಹಾಜರಾಗಿದ್ದ 167 ಅಭ್ಯರ್ಥಿಗಳಲ್ಲಿ 17 ಅಭ್ಯರ್ಥಿಗಳು ಲಿಖಿತ ಪರೀಕ್ಷೆ ಮತ್ತು ಸಂದರ್ಶನದಲ್ಲಿ ಅನರ್ಹಗೊಂಡು ಅಂತಿಮವಾಗಿ 150 ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಯಿತು. ಆಯ್ಕೆಯಾದವರಿಗೆ ವೈದ್ಯಕೀಯ ತಪಾಸಣೆ ನಡೆಸಿ ಆಗಸ್ಟ್ ಎರಡನೆ ವಾರದಲ್ಲಿ ತರಬೇತಿಗೆ ಹಾಜರಾಗಲು ಸೂಚಿಸಲಾಯಿತು.
ಆಯ್ಕೆ ಪ್ರಕ್ರಿಯೆಯನ್ನು ಟೊಯೋಟಾ ಕಂಪನಿಯ ಮಾನವ ಸಂಪನ್ಮೂಲ ವಿಭಾಗದ ಅಧಿಕಾರಿಗಳಾದ ಅಭಿಷೇಕ್, ಪ್ರದೀಪ್, ಪ್ರಭಾಕರ್, ಚಂದು ಮತ್ತು ಇತರೆ ಅಧಿಕಾರಿಗಳು ನಡೆಸಿದರು. ತಾಲ್ಲೂಕು ಕೇಂದ್ರಗಳಲ್ಲಿ ಪ್ರತಿ ವರ್ಷ ಈ ರೀತಿಯ ಕ್ಯಾಂಪಸ್ ಸಂದರ್ಶನವನ್ನು ನಡೆಸುವುದರಿಂದ ಐಟಿಐ ವಿದ್ಯಾರ್ಥಿಗಳಿಗೆ ಅಪ್ರೆಂಟಿಸ್ ತರಬೇತಿ ಪಡೆಯಲು ಅನುಕೂಲವಾಗುತ್ತದೆಂದು ಹಾಜರಿದ್ದ ಹಲವಾರು ವಿದ್ಯಾರ್ಥಿಗಳು ಸಂತಸ ವ್ಯಕ್ತಪಡಿಸಿದರು. ಜಿಲ್ಲೆಯ ವಿವಿಧ ತಾಲ್ಲೂಕುಗಳಿಂದ ಮತ್ತು ಪಕ್ಕದ ಜಿಲ್ಲೆಗಳಿಂದ ಐಟಿಐ ವಿದ್ಯಾರ್ಥಿಗಳು ಈ ಸಂದರ್ಶನದಲ್ಲಿ ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.