ADVERTISEMENT

ಜಿಲ್ಲೆಯಲ್ಲಿ 375 ಕೆರೆ ಒತ್ತುವರಿ

ಶೇಕಡಾ 15ರಷ್ಟು ಒತ್ತುವರಿ ತೆರವು ಕಾರ್ಯ ಪೂರ್ಣ

ಜೆ.ಎಸ್.ಮಹೇಶ್‌
Published 14 ಮಾರ್ಚ್ 2021, 5:39 IST
Last Updated 14 ಮಾರ್ಚ್ 2021, 5:39 IST
ಹಾಸನ ನಗರದ ಸತ್ಯಮಂಗಲ ಕೆರೆ (ಸಾಂದರ್ಭಿಕ ಚಿತ್ರ)
ಹಾಸನ ನಗರದ ಸತ್ಯಮಂಗಲ ಕೆರೆ (ಸಾಂದರ್ಭಿಕ ಚಿತ್ರ)   

ಹಾಸನ: ಅಂತರ್ಜಲ ವೃದ್ಧಿಗೆ ಮೂಲ ಆಧಾರವಾಗಿರುವ ನೂರಾರು ಕೆರೆಗಳ ಸಾವಿರಾರು ಎಕರೆ ಜಾಗ ಒತ್ತುವರಿ ಆಗಿರುವುದನ್ನು ಪತ್ತೆ ಮಾಡಲಾಗಿದೆ.

ಕಳೆದ ಹತ್ತು ವರ್ಷದಿಂದ ಅಸರ್ಮಪಕ ಮಳೆಯಿಂದಾಗಿ ಕೆಲವೆಡೆ ಕೆರೆಗಳ ಒಡಲು ಬರಿದಾಗಿದ್ದವು. ಇದನ್ನೇ ಲಾಭ ಮಾಡಿಕೊಂಡ ಕೆಲ ಕೃಷಿಕರು ಹಾಗೂ ಪ್ರಭಾವಿಗಳುಕೆರೆಯ ಜಾಗವನ್ನು ಒತ್ತುವರಿ ಮಾಡಿಕೊಂಡಿದ್ದಾರೆ.

ಜಿಲ್ಲಾಡಳಿತ ಮಾಹಿತಿ ಪ್ರಕಾರ ಜಿಲ್ಲೆಯಲ್ಲಿ 6,807 ಕೆರೆಗಳಿದ್ದು, ಒಟ್ಟು 61,590 ಎಕರೆ ವಿಸ್ತೀರ್ಣ ಹೊಂದಿವೆ. ಈ ಪೈಕಿ ಮೊದಲ ಹಂತದಲ್ಲಿ 1,093 ಕೆರೆಗಳ ಸರ್ವೆ ಪೂರ್ಣಗೊಂಡಿದ್ದು, 452 ಕೆರೆಗಳ 373 ಎಕರೆ ಪ್ರದೇಶ ಒತ್ತುವರಿ ಆಗಿರುವುದನ್ನು ಗುರುತಿಸ ಲಾಗಿದೆ. ಇದರಲ್ಲಿಈಗಾಗಲೇ 77 ಕೆರೆಗಳ 44 ಎಕರೆ ಜಾಗ ಒತ್ತುವರಿ ತೆರವುಗೊಳಿಸಿದೆ.

ADVERTISEMENT

ಮತ್ತೊಂದೆಡೆ ನಗರ, ಪಟ್ಟಣ ಪ್ರದೇಶಗಳಲ್ಲಿ ನಗರೀಕರಣ, ಅಭಿವೃದ್ಧಿ ನೆಪದಲ್ಲಿ ಹಲವು ಕೆರೆಗಳು ಮಾಯವಾಗಿದ್ದು, ಆ ಜಾಗದಲ್ಲಿ ಬಸ್ ನಿಲ್ದಾಣ, ಕ್ರೀಡಾಂಗಣ, ವಸತಿ ಬಡಾವಣೆ ಹಾಗೂ ಉದ್ಯಾನ ನಿರ್ಮಾಣವಾಗಿವೆ. ಕೃಷಿ ಉದ್ದೇಶಕ್ಕಾಗಿಯೂ ಕೆರೆಗಳ ಜಾಗ ಅತಿಕ್ರಮಿಸಿಕೊಳ್ಳಲಾಗಿದೆ.

ಜಿಲ್ಲಾಡಳಿತ ಇದುವರೆಗೂ ಕೇವಲ ಶೇಕಡಾ 15 ರಷ್ಟು ಮಾತ್ರ ಕೆರೆಗಳ ಒತ್ತುವರಿ ಸರ್ವೆ ಕಾರ್ಯ ನಡೆಸಿದೆ. ಇನ್ನು ಶೇಕಡಾ 75 ರಷ್ಟು ಅಂದರೆ 5,714 ಕೆರೆಗಳ 54,821 ಎಕರೆ ಪ್ರದೇಶ ಸರ್ವೆ ಬಾಕಿ ಇದೆ.

ಅರಕಲಗೂಡು ತಾಲ್ಲೂಕಿನಲ್ಲಿ 1,066 ಕೆರೆಗಳ ಪೈಕಿ ಇದುವರೆಗೂ ಭೂ ಮಾಪನ ಇಲಾಖೆಯಿಂದ 170 ಕೆರೆಗಳನ್ನು ಮಾತ್ರ ಅಳತೆ ಮಾಡಲಾಗಿದೆ. 99 ಕೆರೆಗಳ 73 ಎಕರೆ ಒತ್ತುವರಿಯಾಗಿದೆ. ಈಗಾಗಲೇ 11 ಕೆರೆಗಳಲ್ಲಿ ಒತ್ತುವರಿಯಾಗಿದ್ದ 2 ಎಕರೆ 11 ಗುಂಟೆ ಜಾಗವನ್ನುತಹಶೀಲ್ದಾರ್ ತೆರವುಗೊಳಿಸಿದ್ದಾರೆ.

ಬರ ಪೀಡಿತ ಪ್ರದೇಶ ಅರಸೀಕೆರೆ ತಾಲ್ಲೂಕು ಅತಿ ಕಡಿಮೆ 324 ಕೆರೆಗಳನ್ನು ಹೊಂದಿದೆ. ಇಲಾಖೆ ವತಿಯಿಂದ 43ಕೆರೆಗಳ ಸರ್ವೆ ಮಾಡಿದ್ದು, 37 ಕೆರೆಗಳ 86 ಎಕರೆ 37 ಗುಂಟೆ ಪ್ರದೇಶ ಒತ್ತುವರಿಯಾಗಿರುವ ಬಗ್ಗೆ ವರದಿ ಸಲ್ಲಿಸಲಾಗಿದೆ. ಆದರೆ ಈವರೆಗೂ ತೆರವು ಕಾರ್ಯ ನಡೆದಿಲ್ಲ.

ಹಾಸನ ತಾಲ್ಲೂಕಿನಲ್ಲಿ 1,264 ಕೆರೆಗಳಿದ್ದು, 13,412 ಎಕರೆ ವಿಸ್ತೀರ್ಣ ಹೊಂದಿವೆ. ಈ ಪೈಕಿ 322 ಕೆರೆಗಳ 1,360 ಎಕರೆ ಸರ್ವೆ ಮುಗಿದಿದ್ದು, 43 ಕೆರೆಗಳ 20 ಎಕರೆ ಪ್ರದೇಶ ಒತ್ತುವರಿಯಾಗಿದೆ ಎಂದು ಗುರುತಿಸಲಾಗಿದೆ.

ಹೊಳೆನರಸೀಪುರ ತಾಲ್ಲೂಕಿನಲ್ಲಿ ಕೆರೆಗಳ ಒತ್ತುವರಿ ತೆರವುಗೊಳಿಸುವ ಕಾರ್ಯ ಪ್ರಗತಿಯಲ್ಲಿದೆ. ಒಟ್ಟು 535 ಕೆರೆಗಳಪೈಕಿ 53 ಕೆರೆಗಳನ್ನು ಸರ್ವೆ ನಡೆಸಲಾಗಿದೆ. 45ಕೆರೆಗಳ 34 ಎಕರೆ ಒತ್ತುವರಿಯಾಗಿರುವುದನ್ನು ಪತ್ತೆ ಮಾಡಲಾಗಿದೆ. ಈವರೆಗೆ 29ಕೆರೆಗಳ 22 ಎಕರೆ ಪ್ರದೇಶ ತೆರವುಗೊಳಿಸಲಾಗಿದೆ.

‘ಮೊದಲ ಹಂತದಲ್ಲಿ 3,400 ಕೆರೆಗಳ ಸರ್ವೆ ಮಾಡುವ ಗುರಿ ಇಟ್ಟುಕೊಳ್ಳಲಾಗಿದೆ. ಮುಂದೆ ವಾರಕ್ಕೆ ಒಂದು ಕೆರೆ ಅಳತೆ ಮಾಡುವಂತೆ ಸೂಚಿಸಲಾಗಿದೆ. ಅಲ್ಲದೇ ಖಾಸಗಿಯ ವರ ಮೂಲಕವೂ ನಿಗದಿತ ಶುಲ್ಕ ಪಾವತಿಸಿ ಸರ್ವೆ ಮಾಡಿಸಲು ಅವಕಾಶ ನೀಡಲಾಗಿದೆ’ ಎಂದು ಭೂದಾಖಲೆಗಳ ಉಪ ನಿರ್ದೇಶಕಿ ಎಂ.ಡಿ. ಹೇಮಲತಾ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.