ADVERTISEMENT

38 ಸಾವಿರ ಎಕರೆಗೆ ನೀರು: ಶಾಸಕ

​ಪ್ರಜಾವಾಣಿ ವಾರ್ತೆ
Published 18 ಸೆಪ್ಟೆಂಬರ್ 2013, 6:53 IST
Last Updated 18 ಸೆಪ್ಟೆಂಬರ್ 2013, 6:53 IST

ಬೇಲೂರು: ‘ಯಗಚಿ ಜಲಾಶಯದಿಂದ  ಈ ವರ್ಷ 100 ಕಿ.ಮೀ. ವರೆಗೆ ನೀರು ಹರಿಸಲು ಉದ್ದೇಶಿಸಲಾಗಿದ್ದು, 38 ಸಾವಿರ ಎಕರೆ ಪ್ರದೇಶಕ್ಕೆ ನೀರಾವರಿ ಸೌಲಭ್ಯ ದೊರಕಲಿದೆ’ ಎಂದು ಶಾಸಕ ವೈ.ಎನ್.ರುದ್ರೇಶಗೌಡ ತಿಳಿಸಿದರು.

ಯಗಚಿ ಜಲಾಶಯಕ್ಕೆ ಬಾಗಿನ ಅರ್ಪಿಸಿದ ಬಳಿಕ ಪತ್ರಕರ್ತರೊಂದಿಗೆ ಮಾತನಾಡಿದ ಅವರು ಕಂದಲಿ ಸಮೀಪ
ನಿರ್ಮಿಸುತ್ತಿದ್ದ ಮೇಲ್ಗಾಲುವೆ ಕಾಮಗಾರಿ ಮಂದಗತಿಯಲ್ಲಿ ಸಾಗಿದ್ದರಿಂದ ಪೂರ್ಣ ಪ್ರಮಾಣ ದಲ್ಲಿ ನೀರು ಬಳಸಿಕೊಳ್ಳಲು ಸಾಧ್ಯವಾಗಿರಲಿಲ್ಲ. ಈ ಕಾಮಗಾರಿ ಪೂರ್ಣಗೊಂಡಿರುವುದರಿಂದ ಮತ್ತು ಮುಖ್ಯ ಕಾಲುವೆ ಮತ್ತು ವಿತರಣಾ ಕಾಲುವೆಗಳ ಕಾಮಗಾರಿ ಬಹುತೇಕ ಅಂತಿಮ ಹಂತದಲ್ಲಿರು ವುದರಿಂದ ಯೋಜನೆಯಂತೆ ಪೂರ್ಣ ಪ್ರಮಾಣದಲ್ಲಿ ನೀರು ಬಳಸಿ ಕೊಳ್ಳಲು ಸಾಧ್ಯವಾಗಲಿದೆ ಎಂದು ಹೇಳಿದರು.

ಹಳೇಬೀಡು–ಮಾದಿಹಳ್ಳಿ ಹೋಬಳಿಗಳ ಕೆರೆಗಳಿಗೆ ಏತ ನೀರಾವರಿ ಯೋಜನೆಯ ಮೂಲಕ ನೀರು ಹರಿಸುವ ಕಾಮಗಾರಿಗೆ ಅರಣ್ಯ ಇಲಾಖೆಯಿಂದ ತೊಡಕಾಗಿದೆ. ಅರಣ್ಯ ಇಲಾಖೆ ಜಾಗದಲ್ಲಿ ಕಾಲುವೆ ಹಾದು ಹೋಗ ಬೇಕಾಗಿದೆ. ಜಿಲ್ಲಾಧಿಕಾರಿಗಳು ಬದಲಿ ಜಾಗ ನೀಡಿದ ನಂತರ ಕಾಮಗಾರಿ ಆರಂಭ ವಾಗಲಿದೆ ಯಗಚಿ ಜಲಾಶಯದ ಹಿನ್ನೀರಿನಿಂದ ಶೀತಪೀಡಿತಕ್ಕೊಳಗಾಗುವ ನಾರಾಯಣಪುರ, ಕೆಳಹಳ್ಳಿ, ಮಾಸವಳ್ಳಿ, ಕೊರಟಿಗೆರೆ ಸೇರಿದಂತೆ ಆರು ಗ್ರಾಮಗಳನ್ನು ಶೀತಪೀಡಿತ ಪಟ್ಟಿಗೆ ಸೇರಿಸಲು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದರು.

ಪುರಸಭಾ ಸದಸ್ಯ ಬಿ.ಎಲ್‌.ಧರ್ಮೇಗೌಡ, ಕಾಂಗ್ರೆಸ್‌ ಮುಖಂಡರಾದ ಎಸ್‌.ಎನ್‌.ಲಿಂಗೇಶ್‌, ಅಜಿತ್‌ ಇದ್ದರು.
ಜೂಜು ದಂಧೆಗೆ ಪೋಲಿಸರ ಕುಮ್ಮಕ್ಕು: ಆರೋಪ

ಬೇಲೂರು: ತಾಲ್ಲೂಕಿನ ನವಿಲಹಳ್ಳಿಯಲ್ಲಿ ಜೂಜು ದಂಧೆ ನಡೆಸಲು ಪೊಲೀಸರೇ ಕುಮ್ಮಕ್ಕು ನೀಡಿ ಮಾಮೂಲಿ ವಸೂಲು ಮಾಡುತ್ತಿದ್ದಲ್ಲದೆ, ಈಗ ವಿನಾಕಾರಣ ತಮ್ಮನ್ನು ಬಂಧಿಸಿ ಕಿರುಕುಳ ನೀಡಿದ್ದಾರೆ ಎಂದು ನವಿಲಹಳ್ಳಿ ಕಿಟ್ಟಿ ಆರೋಪಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಮಂಗಳವಾರ ಮಾತನಾಡಿದ ಅವರು ವೃತ್ತ ನಿರೀಕ್ಷಕ ಆರ್‌.ಶ್ರೀಕಾಂತ್‌ ಮತ್ತು ಪೇದೆ ದೇವರಾಜು ಕಳೆದ ಮೂರು ತಿಂಗಳಿನಿಂದ ಜೂಜು ದಂಧೆ ನಡೆಸಲು ಕುಮ್ಮಕ್ಕು ನೀಡಿದ್ದರು. ಸೆಪ್ಟಂಬರ್‌ 7ರಂದು ತಾವು ಯಾವುದೇ ಜೂಜಾಟದಲ್ಲಿ ತೊಡಗದಿದ್ದರೂ ಉದ್ದೇಶಪೂರ್ವಕವಾಗಿ ತಮ್ಮನ್ನು ಬಂಧಿಸಿ ಪೊಲೀಸ್‌ ಠಾಣೆಗೆ ಕರೆದುಕೊಂಡು ಹೋದರಲ್ಲದೆ, ತಮ್ಮ ಬಳಿ ಇದ್ದ ನಾಲ್ಕು ಲಕ್ಷ ರೂಪಾಯಿ ಹಣ ಮತ್ತು ಮನೆಯ ಮುಂದೆ ನಿಲ್ಲಿಸಿದ್ದ ವಾಹನಗಳನ್ನು ವಶಪಡಿಸಿ ಕೊಂಡಿದ್ದಾರೆ ಎಂದು ದೂರಿದರು.

ಜೂಜು ದಂಧೆ ಪ್ರಕರಣದಿಂದ ತಮ್ಮ ಹೆಸರನ್ನು ಕೈಬಿಡುವುದಾಗಿ ಹೇಳಿ 50 ಸಾವಿರ ರೂಪಾಯಿ ಪಡೆದಿದ್ದ ಇವರು ಮಧ್ಯರಾತ್ರಿಯಲ್ಲಿ ಅರೇಹಳ್ಳಿ ಪೊಲೀಸ್‌ ಠಾಣೆಗೆ ಕರೆತಂದು ಮಾನಸಿಕವಾಗಿ ಹಿಂಸೆ ನೀಡಿದ್ದಾರೆ.

ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿಗಳು ಈ ಬಗ್ಗೆ ಸಮಗ್ರ ತನಿಖೆ ನಡೆಸಿ ಜೂಜು ದಂಧೆಗೆ ಕುಮ್ಮಕ್ಕು ನೀಡುತ್ತಿರುವ ಪೊಲೀಸರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳ ಬೇಕೆಂದು ಒತ್ತಾಯಿಸಿದರು. ನಾಗೇಶ್, ಚಿಕ್ಕಮಗಳೂರು ವಿಶ್ವನಾಥ್‌ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT