ಬಾಗೂರು (ನುಗ್ಗೇಹಳ್ಳಿ): ಬಾಗೂರು ಗ್ರಾಮ ಪಂಚಾಯತಿ ವ್ಯಾಪ್ತಿಯ ಪಿ.ದಾಸಪುರ ಗ್ರಾಮದ ಚೆನ್ನಿಗರಾಯ ಸ್ವಾಮಿ ನೂತನ ದೇವಾಲಯ ನಿರ್ಮಾಣಕ್ಕೆ ₹4 ಲಕ್ಷ ಅನುದಾನ ನೀಡಲಾಗುತ್ತದೆ ಎಂದು ಶಾಸಕ ಎನ್ ಬಾಲಕೃಷ್ಣ ತಿಳಿಸಿದರು.
ಹೋಬಳಿಯ ಪಿ.ದಾಸಪುರ ಗ್ರಾಮದಲ್ಲಿ ಗ್ರಾಮದ ವತಿಯಿಂದ ನಿರ್ಮಾಣ ಮಾಡಲಾಗುತ್ತಿರುವ ಚೆನ್ನಿಗರಾಯ ಸ್ವಾಮಿ ನೂತನ ದೇವಾಲಯಕ್ಕೆ ಭೂಮಿ ಪೂಜೆ ನೆರವೇರಿಸಿ ಮಾತನಾಡಿದರು.
ಗ್ರಾಮದಲ್ಲಿ ನೂರಾರು ವರ್ಷಗಳ ಇತಿಹಾಸವಿದ್ದ ಶ್ರೀ ಚೆನ್ನಿಗರಾಯ ಸ್ವಾಮಿ ಹಳೆಯ ದೇವಾಲಯ ತುಂಬಾ ಶೀಥಿಲಗೊಂಡಿರುವ ಕಾರಣದಿಂದ ಗ್ರಾಮಸ್ಥರು ಒಗ್ಗಟ್ಟಿನಿಂದ ಸುಮಾರು ₹70 ಲಕ್ಷ ವೆಚ್ಚದಲ್ಲಿ ನೂತನ ದೇವಾಲಯ ನಿರ್ಮಾಣಕ್ಕೆ ಗುರುವಾರ ಚಾಲನೆ ನೀಡಿದ್ದಾರೆ ದೇವಾಲಯ ಬೇಗ ಪೂರ್ಣಗೊಂಡು ಲೋಕಾರ್ಪಣೆ ಆಗಲಿ ಎಂದು ಆಶಿಸಿದರು.
ಬಾಗೂರು ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಬರುವ ಪಿ ದಾಸಪುರ ಗ್ರಾಮದ ಅಭಿವೃದ್ಧಿಗೆ, ವಿವಿಧ ಅಭಿವೃದ್ಧಿ ಕೆಲಸಗಳಿಗೆ ಹೆಚ್ಚಿನ ಅನುದಾನ ನೀಡುವ ಮೂಲಕ ಆದ್ಯತೆ ನೀಡಲಾಗಿದೆ. ಅಧ್ಯಕ್ಷರು ಸಹ ಇದೇ ಗ್ರಾಮದವರಾಗಿದ್ದು ಮಹಾತ್ಮ ಗಾಂಧಿ ಉದ್ಯೋಗ ಖಾತ್ರಿ ಯೋಜನೆ ಮೂಲಕ ಗ್ರಾಮದ ಅಭಿವೃದ್ಧಿಗೆ ಅಧ್ಯಕ್ಷರು ಹೆಚ್ಚಿನ ಆದ್ಯತೆ ನೀಡಿದ್ದಾರೆ. ನೂತನ ದೇವಾಲಯ ನಿರ್ಮಾಣಕ್ಕೆ ಅಧ್ಯಕ್ಷರು ಸಹ ವೈಯಕ್ತಿಕವಾಗಿ ₹50 ಸಾವಿರ, ನಾನು ಕೂಡ ಪೂಜೆಯ ಪ್ರಾರಂಭದಲ್ಲಿ ವೈಯಕ್ತಿಕವಾಗಿ ₹50 ಸಾವಿರ ನೀಡಿದ್ದೇನೆ ಮುಂಬರುವ ದಿನಗಳಲ್ಲಿ ಇನ್ನು ಹೆಚ್ಚಿನ ಅನುದಾನ ನೀಡುವುದಾಗಿ ಭರವಸೆ ನೀಡಿದರು.
ಬಾಗೂರು ಗ್ರಾಮ ಪಂಚಾಯಿತಿ ಅಧ್ಯಕ್ಷ ಕೆಂಪೇಗೌಡ ಮಾತನಾಡಿದರು. ಎಪಿಎಂಸಿ ಮಾಜಿ ಅಧ್ಯಕ್ಷ ಬಿ.ಎಚ್ ಶಿವಣ್ಣ, ಚನ್ನರಾಯಪಟ್ಟಣ ನಗರ ಪ್ರಾಧಿಕಾರದ ಮಾಜಿ ಅಧ್ಯಕ್ಷ ಎ.ಸಿ ಆನಂದ್ ಕುಮಾರ್, ತಾ.ಪಂ ಮಾಜಿ ಸದಸ್ಯ ಓಬಳಾಪುರ ಬಸವರಾಜ್, ಮುಖಂಡರಾದ ಬಂಕ್ ಸ್ವಾಮಣ್ಣ, ದೇವಾಲಯ ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಕೆಂಪೇಗೌಡ, ಸದಸ್ಯರಾದ ಪುಟ್ಟರಾಜು, ಕಸ್ತೂರ ಚಾರ್, ದೇವರಾಜು, ಶೋಭಾ ರಂಗಸ್ವಾಮಿ, ಡೈರಿ ಅಶೋಕ್, ಯೋಗರಾಜ್, ಲಕ್ಕಯ್ಯ, ಯುವ ಮುಖಂಡ ಧರಣಿ ಕುಮಾರ್, ಅರ್ಚಕರಾದ ವಾಸು, ಅರುಣ್ ಕುಮಾರ್, ದರ್ಶನ್ ಸೇರಿದಂತೆ ಗ್ರಾಮಸ್ಥರು ಹಾಜರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.