ADVERTISEMENT

ಕಲಿತ ವಿದ್ಯೆ ಸಮಾಜದ ಏಳಿಗೆಗೆ ಬಳಕೆಯಾಗಲಿ

​ಪ್ರಜಾವಾಣಿ ವಾರ್ತೆ
Published 1 ಜನವರಿ 2018, 7:14 IST
Last Updated 1 ಜನವರಿ 2018, 7:14 IST

ಹಾಸನ: ವಿದ್ಯಾರ್ಥಿಗಳು ಕಲಿತ ವಿದ್ಯೆಯನ್ನು ಸಮಾಜದ ಸಮಸ್ಯೆ ಪರಿಹರಿಸಲು ಬಳಸಬೇಕು. ಆಗಷ್ಟೇ ರಾಷ್ಟ್ರೀಯ ಸೇವಾ ಯೋಜನೆಯ ಉದ್ದೇಶ ಸಾರ್ಥಕವಾಗುತ್ತದೆ ಎಂದು ಬಿಈಜಿ ಪ್ರಥಮದರ್ಜೆ ಕಾಲೇಜು ಪ್ರಾಂಶುಪಾಲ ಬಿ.ಈ.ಜಗದೀಶ್ ಸಲಹೆ ನೀಡಿದರು.

ತಾಲ್ಲೂಕಿನ ಶಾಂತಿಗ್ರಾಮ ಹೋಬಳಿ ಎಸ್.ಬಂಡೀಹಳ್ಳಿಯಲ್ಲಿ ಮೈಸೂರು ವಿಶ್ವವಿದ್ಯಾಲಯ ರಾಷ್ಟ್ರೀಯ ಸೇವಾ ಯೋಜನೆ ಮತ್ತು ಹಾಸನದ ಬಿಈಜಿ ಪ್ರಥಮದರ್ಜೆ ಕಾಲೇಜಿನ ಆಶ್ರಯದಲ್ಲಿ ನಡೆದ ಎನ್‌ಎಸ್‌ಎಸ್ ವಾರ್ಷಿಕ ಶಿಬಿರದ ಸಮಾರೋಪ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ದೇಶವನ್ನು ರಾಮರಾಜ್ಯವಾಗಿಸಲು ಯುವಪಡೆ ಸಜ್ಜುಗೊಳಿಸಬೇಕು ಎಂಬ ಕನಸಿನಿಂದ ಹುಟ್ಟಿದ ಕೂಸು ರಾಷ್ಟ್ರೀಯ ಸೇವಾ ಯೋಜನೆ. ವಿದ್ಯಾರ್ಥಿಗಳಲ್ಲಿ ಸಾಮಾಜಿಕ, ಶೈಕ್ಷಣಿಕ, ಧಾರ್ಮಿಕ ಮತ್ತು ಸಾಂಸ್ಕೃತಿಕ ಪ್ರಜ್ಞೆ ಮೂಡಿಸಲು ಎನ್‌ಎಸ್‌ಎಸ್ ಸಹಕಾರಿ ಎಂದರು.

ADVERTISEMENT

ಗ್ರಾಮೀಣ ಜನರು ಎದುರಿಸುತ್ತಿರುವ ವಿವಿಧ ಸಮಸ್ಯೆಗಳಿಗೆ ಪರಿಹಾರ ರೂಪಿಸುವ ಕೆಲಸವನ್ನು ಮಾಡುವ ಮೂಲಕ ಸಂವಹನ ಕಲೆ ಮತ್ತು ನಾಯಕತ್ವ ಗುಣ ಬೆಳೆಸಿಕೊಳ್ಳಲು ಇಂತಹ ಶಿಬಿರಗಳು ವೇದಿಕೆ ಕಲ್ಪಿಸಿಕೊಡುತ್ತವೆ ಎಂದು ತಿಳಿಸಿದರು.

ಉಪ ವಿಭಾಗಾಧಿಕಾರಿ ಎಚ್.ಎಲ್.ನಾಗರಾಜ ಅವರು, ದೇಶಪ್ರೇಮ ಕೇವಲ ತೋರಿಕೆಯದ್ದಾಗಬಾರದು. ಭಗತ್‌ಸಿಂಗ್, ಸುಖದೇವ್ ಮತ್ತು ರಾಜಗುರು ಅವರಂತಹ ಕ್ರಾಂತಿಕಾರಿಗಳು ವಿದ್ಯಾರ್ಥಿಗಳ ಆದರ್ಶವಾಗಬೇಕು ಎಂದು ಸಲಹೆ ಮಾಡಿದರು.

ಕೆಪಿಸಿಸಿ ಕಾರ್ಮಿಕ ಘಟಕದ ಕಾರ್ಯದರ್ಶಿ ತಾರಾಚಂದನ್ ಮಾತನಾಡಿ, ಸರ್ಕಾರದ ಜನಪರ ಯೋಜನೆಗಳು ಅರ್ಹರಿಗೆ ತಲುಪುವಂತೆ ನೋಡಿಕೊಳ್ಳುವುದೂ ವಿದ್ಯಾರ್ಥಿಗಳ ಜವಾಬ್ದಾರಿಯಾಗಿರುತ್ತದೆ. ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳು ತಮ್ಮ ಊರುಗಳಲ್ಲಿ ಸಾಮರಸ್ಯ ಕೆಡದಂತೆ ನೋಡಿಕೊಂಡು ಅಭಿವೃದ್ಧಿಗೆ ಸಹಕರಿಸಬೇಕು ಎಂದು ಹೇಳಿದರು.

ಎ.ಜಿ. ಕೊಪ್ಪಲು ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷೆ ಲಕ್ಷ್ಮಮ್ಮ ಸೋಬಾನೆ ಪದಗಳನ್ನು ಹಾಡಿ ರಂಜಿಸಿದರು.

ತಾ.ಪಂ ಸದಸ್ಯೆ ಪದ್ಮಾ, ಗ್ರಾ.ಪಂ ಸದಸ್ಯರಾದ ದೇವರಾಜು, ಧರ್ಮಪ್ಪ ಗೌಡ, ಮುಖಂಡರಾದ ಚುಂಚೇಗೌಡ, ಜಯರಾಂ, ಹೊನ್ನೇ
ಗೌಡ, ದೊಡ್ಡೇಗೌಡ, ನಂಜೇಗೌಡ, ಕೃಷ್ಣ ಕುಮಾರ್, ರೂಪಾ, ಶಿಬಿರಾಧಿಕಾರಿ ಅಕ್ಷಯ್ ಕುಮಾರ್ ಮತ್ತು ಡಿ.ಶೋಭಾ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.