ADVERTISEMENT

ರಾಜ್ಯದಲ್ಲಿ ಆಡಳಿತ ವಿರೋಧಿ ಅಲೆ ಇಲ್ಲ

​ಪ್ರಜಾವಾಣಿ ವಾರ್ತೆ
Published 7 ಜನವರಿ 2018, 6:11 IST
Last Updated 7 ಜನವರಿ 2018, 6:11 IST

ತೀರ್ಥಹಳ್ಳಿ: ‘ನಮ್ಮ ಸರ್ಕಾರದ ವಿರುದ್ಧ ಆಡಳಿತ ವಿರೋಧಿ ಅಲೆ ಇಲ್ಲ; ಬದಲಾಗಿ ಪರವಾದ ಅಲೆ ಇದೆ. ಎಷ್ಟೇ ತಿಪ್ಪರಲಾಗ ಹಾಕಿದರೂ ಬಿಜೆಪಿ, ಜೆಡಿಎಸ್‌ ಅಧಿಕಾರಕ್ಕೆ ಬರಲು ಸಾಧ್ಯವಿಲ್ಲ. ಕೆಲಸ ಮಾಡದೇ ಧರ್ಮ, ಜಾತಿ ಹೆಸರಿನಲ್ಲಿ ಅಧಿಕಾರಕ್ಕೆ ಬರುತ್ತೇವೆ ಎಂಬುದು ಭ್ರಮೆ’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.

ಪಟ್ಟಣದ ಸಾರ್ವಜನಿಕ ಕ್ರೀಡಾಂಗಣದಲ್ಲಿ ಶನಿವಾರ ಹಮ್ಮಿಕೊಂಡಿದ್ದ ‘ಸಾಧನಾ ಸಂಭ್ರಮ’ ಸಮಾವೇಶದಲ್ಲಿ ತೀರ್ಥಹಳ್ಳಿ ವಿಧಾನಸಭಾ ಕ್ಷೇತ್ರದ ವಿವಿಧ ಕಾಮಗಾರಿಗಳ ಉದ್ಘಾಟನೆ ಹಾಗೂ ಶಂಕುಸ್ಥಾಪನೆ ನೆರವೇರಿಸಿ ಅವರು ಮಾತನಾಡಿದರು.

‘ಕುವೆಂಪು ಅವರ ನಾಡಗೀತೆಯನ್ನು ಹಾಡುತ್ತೇವೆ. ಸರ್ವ ಜನಾಂಗದ ಶಾಂತಿಯ ತೋಟವಾಗಿ ನಾವು ಬಾಳಬೇಕಲ್ಲವೇ? ಧರ್ಮ– ಧರ್ಮಗಳ ಹಾಗೂ ಜಾತಿ–ಜಾತಿಗಳ ನಡುವೆ ಬೆಂಕಿ ಹಚ್ಚಿ ಸಮಾಜದ ಸಾಮರಸ್ಯವನ್ನು ಹಾಳುಮಾಡುವ ಕೆಲಸವನ್ನು ಬಿಜೆಪಿ ಮಾಡುತ್ತಿದೆ. ಅಂಥವರು ಅಧಿಕಾರಕ್ಕೆ ಬರಲು ಸಾಧ್ಯವಿಲ್ಲ’ ಎಂದು ತಿಳಿಸಿದರು.

ADVERTISEMENT

‘ಕೋಮುವಾದಿಗಳು ಎಂದಿಗೂ ತಲೆ ಎತ್ತದಂತೆ ನೋಡಿಕೊಳ್ಳಬೇಕು. ಸಂವಿಧಾನವನ್ನು ಬದಲು ಮಾಡುತ್ತೇವೆ ಎನ್ನುತ್ತಾರೆ. ಅಂಥವರು ಗ್ರಾಮ ಪಂಚಾಯ್ತಿ ಸದಸ್ಯರಾಗಲೂ ನಾಲಾಯಕ್‌’ ಎಂದು ಹೇಳಿದರು.

‘ನಮ್ಮದು ನುಡಿದಂತೆ ನಡೆದ ಸರ್ಕಾರ. ರಾಜ್ಯದ ಎಲ್ಲಾ ಭಾಗದ ಅಭಿವೃದ್ಧಿಗೆ ಆದ್ಯತೆ ನೀಡಲಾಗಿದೆ. ನಮ್ಮ ಬದ್ಧತೆ ರಾಜ್ಯದ ಸಮಗ್ರ ಅಭಿವೃದ್ಧಿಯಾಗಿದೆ. ಆ ಮೂಲಕ ರಾಜ್ಯದ ಆಂತರಿಕ ಉತ್ಪನ್ನ ಹೆಚ್ಚಾಗಿಸಲು ಸಾಧ್ಯವಾಗಲಿದೆ. ನಾವು ಜನರ ನಿರೀಕ್ಷೆಗೆ ತಕ್ಕಂತೆ ಅಭಿವೃದ್ಧಿ ಕೆಲಸ ಮಾಡಿದ್ದೇವೆ’ ಎಂದರು.

‘ಸಜ್ಜನ, ಪ್ರಾಮಾಣಿಕ ರಾಜಕಾರಣಿಗಳ ಸಂಖ್ಯೆ ಕಡಿಮೆಯಾಗುತ್ತಿದೆ. ಇದರ ನಡುವೆಯೂ ಶಾಸಕ ಕಿಮ್ಮನೆ ರತ್ನಾಕರ ಪ್ರಾಮಾಣಿಕವಾಗಿ ಕೆಲಸ ಮಾಡುತ್ತಿದ್ದಾರೆ. ಸಚಿವರಾಗಿ ಉತ್ತಮ ಕೆಲಸ ಮಾಡಿದ್ದರು. ಅನಿವಾರ್ಯ ಕಾರಣದಿಂದ ಮಂತ್ರಿ ಪದವಿಯಿಂದ ಕೈಬಿಡಬೇಕಾಯಿತು. ಅವರಿಗೆ ಮುಂದಿನ ದಿನಗಳಲ್ಲಿ ಒಳ್ಳೆಯ ಭವಿಷ್ಯವಿದೆ’ ಎಂದು ಸಿದ್ದರಾಮಯ್ಯ ಹೇಳಿದರು.

ಕಂದಾಯ ಸಚಿವ ಕಾಗೋಡು ತಿಮ್ಮಪ್ಪ ಮಾತನಾಡಿ, ‘ಸರ್ಕಾರಿ ಜಾಗದಲ್ಲಿ ಮನೆ ಕಟ್ಟಿಕೊಂಡವರಿಗೆ ಹಕ್ಕುಪತ್ರ ನೀಡುವ ಕೆಲಸ ಆಗಿದೆ. ಹುಟ್ಟಿ ಸಾಯುವ ಜಾಗಕ್ಕೆ ಹಕ್ಕು ಸಿಗದೇ ಹೋದರೆ ಮನುಷ್ಯ ಹುಟ್ಟಿ ಏನು ಪ್ರಯೋಜನ? ಆ ಕೆಲಸ ಮಾಡಿ ಜೀವನದಲ್ಲಿ ಮುಕ್ತಿ ಪಡೆಯಬೇಕು ಎಂದುಕೊಂಡಿದ್ದೇನೆ’ ಎಂದರು. ಕಿಮ್ಮನೆ ರತ್ನಾಕರ ಮಾತನಾಡಿ, ‘ತೀರ್ಥಹಳ್ಳಿ ದೊಡ್ಡ ಕ್ಷೇತ್ರವಾಗಿದ್ದು, ಹೆಚ್ಚಿನ ಅನುದಾನದ ಅಗತ್ಯವಿದೆ. ಮುಖ್ಯಮಂತ್ರಿ ಕ್ಷೇತ್ರದ ಅಭಿವೃದ್ಧಿಗೆ ಹೆಚ್ಚಿನ ಅನುದಾನ ನೀಡಿದ್ದಾರೆ’ ಎಂದರು.

‘ತಮ್ಮ ರಕ್ಷಣೆಗೆಂದು ಕಾಂಗ್ರೆಸ್‌ಗೆ ಬಂದವರು ಪಕ್ಷ ವಿರೋಧಿ ಚಟುವಟಿಕೆ ನಡೆಸುತ್ತಿದ್ದಾರೆ. ಜನರು ಬೆಟ್ಟುಬಂಗಾರಕ್ಕೆ ಮನ್ನಣೆ ನೀಡಬಾರದು’ ಎಂದು ಆರ್‌.ಎಂ.ಮಂಜುನಾಥಗೌಡ ಅವರನ್ನು ಕಿಮ್ಮನೆ ಟೀಕಿಸಿದರು.

ಜಿಲ್ಲಾ ಪಂಚಾಯ್ತಿ ಉಪಾಧ್ಯಕ್ಷೆ ವೇದಾ ವಿಜಯಕುಮಾರ್‌, ತಾಲ್ಲೂಕು ಪಂಚಾಯ್ತಿ ಅಧ್ಯಕ್ಷೆ ನವಮಣಿ ರವಿಕುಮಾರ್‌, ಪಟ್ಟಣ ಪಂಚಾಯ್ತಿ ಅಧ್ಯಕ್ಷ ಸಂದೇಶ್‌ ಜವಳಿ, ಜಿಲ್ಲಾ ಪಂಚಾಯ್ತಿ ಸದಸ್ಯರಾದ ಶ್ವೇತಾ ಬಂಡಿ, ಭಾರತಿ ಪ್ರಭಾಕರ್‌, ಕಲ್ಪನಾ ಪದ್ಮನಾಭ್‌, ಉಪ ವಿಭಾಗಾಧಿಕಾರಿ ಎಚ್‌.ಕೆ.ಕೃಷ್ಣಮೂರ್ತಿ ಇದ್ದರು. ಜಿಲ್ಲಾ ಪಂಚಾಯ್ತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ.ಕೆ.ರಾಕೇಶ್‌ ಕುಮಾರ್‌ ಸ್ವಾಗತಿಸಿದರು.

ಜನ ನೋಡಿ ಪುಳಕಿತರಾದ ಸಿಎಂ

ಸಾಧನಾ ಸಂಭ್ರಮದಲ್ಲಿ ಪಾಲ್ಗೊಂಡಿದ್ದ ಅಪಾರ ಸಂಖ್ಯೆಯ ಜನರನ್ನು ಕಂಡು ಪುಳಕಿತರಾದ ಸಿದ್ದರಾಮಯ್ಯ ಅವರು ಒಂದು ಗಂಟೆ ಕಾಲ ಮಾತನಾಡಿ, ಹಲವು ಬಾರಿ ಚಪ್ಪಾಳೆ ಗಿಟ್ಟಿಸಿಕೊಂಡರು.

‘ತೀರ್ಥಹಳ್ಳಿಗೆ ಅನೇಕ ಬಾರಿ ಬಂದಿದ್ದರೂ ಈ ಹಿಂದೆ ಈ ರೀತಿ ಜನ ಸೇರಿದ್ದನ್ನು ನೋಡಿಲ್ಲ. ನಿಮ್ಮ ಅಭಿಮಾನ ಹೀಗೆಯೇ ಇರಲಿ. ಚುನಾವಣಾ ಪ್ರಚಾರಕ್ಕೆ ಮತ್ತೆ ಬರುತ್ತೇನೆ. ಕಿಮ್ಮನೆಯವರನ್ನು ಗೆಲ್ಲಿಸಿ’ ಎಂದು ತಮ್ಮ ಮಾತು ಮುಗಿಸಿದರು.

‘ಬಿಜೆಪಿಯ ಮಿಷನ್‌ 150 ಠುಸ್‌’

‘ಮಿಷನ್‌ 150 ಎಂದು ಬಿಜೆಪಿ ಹೊರಟಿದೆ. ಅದು ಅವರ ಜೀಬಿನಲ್ಲಿದೆಯೇ? ನಂಜನಗೂಡು, ಗುಂಡ್ಲುಪೇಟೆ ಉಪ ಚುನಾವಣೆಯಲ್ಲಿ ವೀರಾವೇಶದಿಂದ ಭಾಷಣ ಮಾಡಿದ ಬಿ.ಎಸ್‌. ಯಡಿಯೂರಪ್ಪನವರು ಈ ಚುನಾವಣೆ ಮುಂದಿನ ವಿಧಾನಸಭೆ ಚುನಾವಣೆಗೆ ದಿಕ್ಸೂಚಿ ಎಂದರು. ಅಲ್ಲಿ ಸೋತ ನಂತರ ದಿಕ್ಸೂಚಿ ನಮ್ಮ ಕಡೆ ತಿರುಗಿದೆ. ಈಗ ಬಿಜೆಪಿಯ ಮಿಷನ್‌ 150 ಠುಸ್‌ ಆಗಿದ್ದು, ಮಿಷನ್‌ 50ಕ್ಕೆ ಬಂದುಬಿಟ್ಟಿದೆ’ ಎಂದು ಸಿದ್ದರಾಮಯ್ಯ ವ್ಯಂಗ್ಯವಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.