ADVERTISEMENT

ಸಾಹಿತ್ಯ ಎಲ್ಲರಿಗೂ ಹಿತವೆನಿಸುವಂತಿರಲಿ

​ಪ್ರಜಾವಾಣಿ ವಾರ್ತೆ
Published 30 ಜನವರಿ 2018, 10:07 IST
Last Updated 30 ಜನವರಿ 2018, 10:07 IST

ಅರಸೀಕೆರೆ (ಗರುಡನಗಿರಿ ನಾಗರಾಜ್ ವೇದಿಕೆ): ಇಂಗ್ಲಿಷ್‌ ಪ್ರಭಾವದಿಂದ ತಪ್ಪಿಸಿಕೊಳ್ಳಬೇಕಾದರೆ ಎಲ್ಲರೂ ಒಂದಾಗಿ ಕನ್ನಡವನ್ನು ಜನಮನದಲ್ಲಿ ಭಿತ್ತಿ ಬೆಳೆಯಬೇಕು. ಇಡೀ ವಿಶ್ವಕ್ಕೆ ಕನ್ನಡ ಭಾಷೆ ಮತ್ತು ಸಾಹಿತ್ಯ ಮಾದರಿಯಾಗಿದೆ ಎಂದು ತಾಲ್ಲೂಕು 7ನೇ ಕನ್ನಡ ಸಾಹಿತ್ಯ ಸಮ್ಮೇಳನಾಧ್ಯಕ್ಷ ಎಚ್‌.ಆರ್‌. ಸ್ವಾಮಿ ಹೇಳಿದರು.

ನಗರದ ಹಳೆ ಸರ್ಕಾರಿ ಪ್ರಾಥಮಿಕ ಶಾಲಾ ಆವರಣದ ಗರುಡನಗಿರಿ ನಾಗರಾಜ್‌ ವೇದಿಕೆಯಲ್ಲಿ ಸಮ್ಮೇಳನಾಧ್ಯಕ್ಷರ ಭಾಷಣ ಮಾಡಿದ ಅವರು, ‘ಕನ್ನಡ ಸಾಹಿತ್ಯ, ಸಂಗೀತ, ಸಂಸ್ಕೃತಿ ಕೆಲವರ ಕಪಿಮುಷ್ಠಿಯಲ್ಲಿದೆ. ಅದು ಸರಿಯಲ್ಲ. ಎಲ್ಲ ಕನ್ನಡಿಗರ ಮನೆ, ಮನ ಮುಟ್ಟುವಂತಿರಬೇಕು. ಸಾಹಿತ್ಯ ಸಾಮಾನ್ಯ ಜನರಿಗೂ ಹಿತವೆನಿಸಿ ಪರಸ್ಪರ ಕೂಡಿಸುವಂತಿರಬೇಕೆ ಹೊರತು ನಾಡಿನ ಜನರನ್ನು ವಿಭಜಿಸಿ ವಾದ, ವಿವಾದ ಹುಟ್ಟಿಸಬಾರದು. ಸಾಹಿತ್ಯವು ವಿಕೃತ ಮನಸ್ಸುಗಳನ್ನು ಪರಿವರ್ತಿಸಿ ವಿಕಸಿತಗೊಳಿಸುವಂತೆ ಇರಬೇಕು’ ಎಂದು ಪ್ರತಿಪಾದಿಸಿದರು.

ಸಾಹಿತ್ಯ ಎಂದರೆ ನೋವು, ಸಂಕಟಗಳನ್ನು ಅಭಿವ್ಯಕ್ತಿಸುತ್ತ ನಮ್ಮ ಸುತ್ತಣದ ಬದುಕು, ಮೌಢ್ಯ, ಕಂದಾಚಾರ, ಹಸಿವು, ಅನಕ್ಷರತೆ, ಬಡತನಗಳಂತಹ ಸಾಮಾಜಿಕ ಜಾಢ್ಯಗಳಿಂದ ಬಿಡುಗಡೆ ಗೊಳಿಸುವಂತದ್ದೇ ಆಗಿರುತ್ತದೆ. ಹೀಗಾದಾಗ ಮಾತ್ರ ಸಾಹಿತ್ಯಕ್ಕೆ ಸಾರ್ವಕಾಲಿಕ ಮಾನ್ಯತೆ ಸಿಗುತ್ತದೆ ಎಂದರು.

ADVERTISEMENT

ಶಾಸಕ ಶಿವಲಿಂಗೇಗೌಡ ಮಾತನಾಡಿ ಕನ್ನಡ ಭಾಷೆಯ ಉಳಿವಿಗೆ ಸಂಕಷ್ಟದ ಪರಿಸ್ಥಿತಿ ಬಂದೊದಗಿದ್ದು, ಭಾಷೆ ಸ್ಥಿರವಾಗಿ ಉಳಿಯಬೇಕಾದರೆ ಹೋರಾಟ ಅನಿವಾರ್ಯ. ಕನ್ನಡ ಭಾಷೆ ಆಪಾಯದ ಅಂಚಿನಲ್ಲಿದೆ. ಭಾಷೆಯ ಬಗೆಗೆ ನಮ್ಮಲ್ಲಿಯೇ ತಾತ್ಸಾರ ಮನೋಭಾವವಿದ್ದು, ಇದು ಉತ್ತಮ ಬೆಳವಣಿಗೆಯಲ್ಲ. ಕನ್ನಡ ನಾಡು ಭಾಷೆ ಶಾಶ್ವತವಾಗಿ ಗಟ್ಟಿಯಾಗಿ ಉಳಿಯಬೇಕಾದರೆ ಕನ್ನಡ ಪರ ಸಂಘಟನೆಗಳು ಗಟ್ಟಿಯಾಗಬೇಕು ಎಂದು ತಿಳಿಸಿದರು.

ನಿಕಟ ಪೂರ್ವ ಸಮ್ಮೇಳನಾಧ್ಯಕ್ಷ ಚಲನಚಿತ್ರ ನಟ ಎಸ್‌. ದೊಡ್ಡಣ್ಣ ಸಮ್ಮೇಳನಾಧ್ಯಕ್ಷ ಸ್ವಾಮಿ ಅವರಿಗೆ ಕನ್ನಡ ಧ್ವಜವನ್ನು ಹಸ್ತಾಂತರಿಸಿ ಮಾತನಾಡಿದರು. ಕೋಳುಗುಂದ ಎಂ.ಎನ್‌.ಜಯಲಕ್ಷ್ಮಿ ರಚಿಸಿದ ‘ತಾಯೊಡಲ ತಲ್ಲಣ’ ಕೃತಿಯನ್ನು ಪ್ರಮುಖರಾದ ಮಹೇಶ್‌ಜೋಶಿ ಬಿಡುಗಡೆಗೊಳಿಸಿದರು.

ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್‌ ಅಧ್ಯಕ್ಷ ನಾಯಕರಹಳ್ಳಿ ಮಂಜೇಗೌಡ ಆಶಯ ನುಡಿಗಳನ್ನಾಡಿದರು. ಕವನ ಸಂಕಲನಗಳ ಕೃತಿಯನ್ನು ಅರಸೀಕೆರೆ ಗ್ರಾಮಾಂತರ ಮಂಡಲ ಅಧ್ಯಕ್ಷ ಜಿ.ವಿ.ಟಿ. ಬಸವರಾಜ್‌ ಬಿಡುಗಡೆಗೊಳಿಸಿದರು.

ನಗರಸಭಾ ಅಧ್ಯಕ್ಷ ಎಂ.ಸಮೀವುಲ್ಲಾ, ಉಪಾಧ್ಯಕ್ಷ ಪಾರ್ಥಸಾರಥಿ, ಜಿ.ಪಂ ಸಾಮಾಜಿಕ ನ್ಯಾಯಸ್ಥಾಯಿ ಸಮಿತಿ ಅಧ್ಯಕ್ಷೆ ಎಸ್‌.ವತ್ಸಲಾ ಶೇಖರಪ್ಪ, ಜಿ.ಪಂ ಸದಸ್ಯ ಮಾಡಾಳು ಎಂ.ಎಸ್‌.ವಿ. ಸ್ವಾಮಿ, ತಾ.ಪಂ ಅಧ್ಯಕ್ಷ ಎಸ್‌.ಕೆ. ಬಸವಲಿಂಗಯ್ಯ, ತಾ.ಪಂ ಸಂಘದ ಅಧ್ಯಕ್ಷ ಟಿ.ಆನಂದ್‌, ಎಂ.ವಿ.ಕುಸುಮಾ, ಡಾ.ಹರಶಿವಮೂರ್ತಿ, ಕೆ.ಎ. ನಾಗೇಶ್ವರ್‌ರಾವ್‌ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.