ADVERTISEMENT

ಇಂದಿರಾ ಕ್ಯಾಂಟೀನ್ ನಿರ್ಮಾಣ ಆರಂಭ

ಕೆ.ಎಸ್.ಸುನಿಲ್
Published 5 ಫೆಬ್ರುವರಿ 2018, 10:32 IST
Last Updated 5 ಫೆಬ್ರುವರಿ 2018, 10:32 IST
ಹಾಸನದ ಜಯಚಾಮರಾಜೇಂದ್ರ ಆಸ್ಪತ್ರೆ ಮುಂಭಾಗ ಇಂದಿರಾ ಕ್ಯಾಂಟೀನ್ ಕಟ್ಟಡ ನಿರ್ಮಾಣ ಕಾಮಗಾರಿ ನಡೆಯುತ್ತಿದೆ (ಎಡಚಿತ್ರ). ಸಾಮಗ್ರಿ ಜೋಡಿಸುವ ಕಾರ್ಯ ನಡೆದಿರುವುದು
ಹಾಸನದ ಜಯಚಾಮರಾಜೇಂದ್ರ ಆಸ್ಪತ್ರೆ ಮುಂಭಾಗ ಇಂದಿರಾ ಕ್ಯಾಂಟೀನ್ ಕಟ್ಟಡ ನಿರ್ಮಾಣ ಕಾಮಗಾರಿ ನಡೆಯುತ್ತಿದೆ (ಎಡಚಿತ್ರ). ಸಾಮಗ್ರಿ ಜೋಡಿಸುವ ಕಾರ್ಯ ನಡೆದಿರುವುದು   

ಹಾಸನ: ರಾಜ್ಯ ಸರ್ಕಾರದ ಮಹತ್ವಕಾಂಕ್ಷಿ ಯೋಜನೆಗಳಲ್ಲಿ ಒಂದಾದ ಇಂದಿರಾ ಕ್ಯಾಂಟೀನ್‌ ನಿರ್ಮಾಣ ಕಾರ್ಯಾರಂಭ ಮಾಡಿದೆ. ನಗರದ ಜಯಚಾಮರಾಜೇಂದ್ರ ಆಸ್ಪತ್ರೆ ಮುಂಭಾಗ ಹಾಗೂ ಸಂತೆಪೇಟೆ ವಸ್ತು ಪ್ರದರ್ಶನ ಮೈದಾನ ಸೇರಿದಂತೆ ಜಿಲ್ಲೆಯ ಎಲ್ಲಾ ತಾಲ್ಲೂಕುಗಳಲ್ಲಿ ತಲಾ ಒಂದು ಕ್ಯಾಂಟೀನ್ ನಿರ್ಮಾಣ ಕಾಮಗಾರಿ ಭರದಿಂದ ಸಾಗಿದ್ದು, ತಮಿಳುನಾಡಿನಿಂದ ಬಂದಿರುವ ಕಟ್ಟಡ ಸಾಮಗ್ರಿಗಳನ್ನು ಅಳವಡಿಸಲಾಗುತ್ತಿದೆ.

ಕಡಿಮೆ ವೆಚ್ಚದಲ್ಲಿ ಉಪಾಹಾರ, ಊಟ ದೊರೆಯಬೇಕು ಎಂಬ ಉದ್ದೇಶ ದಿಂದ ಜನದಟ್ಟಣೆ ಇರುವ ಸ್ಥಳಗಳಲ್ಲಿ ಕ್ಯಾಂಟೀನ್ ಆರಂಭಿಸಲಾಗುತ್ತಿದೆ. ಜನಸಂಖ್ಯೆ ಆಧರಿಸಿ ಉಪಾಹಾರ ಮತ್ತು ಊಟ ಮಿತಿಗೊಳಿಸಲಾಗಿದೆ. ಅದರಂತೆ ನಗರದಲ್ಲಿ 1,000, ಅರಸೀಕೆರೆ ಮತ್ತು ಚನ್ನರಾಯಪಟ್ಟಣ ತಲಾ 500, ಹೊಳೆನರಸೀಪುರ, ಸಕಲೇಶಪುರ ಮತ್ತು ಬೇಲೂರಿನಲ್ಲಿ ತಲಾ 300, ಆಲೂರು ಮತ್ತು ಅರಕಲಗೂಡಿನಲ್ಲಿ 200 ಜನರಿಗೆ ಉಪಹಾರ ಹಾಗೂ ಊಟ ಒದಗಿಸಲು ಕ್ರಮ ವಹಿಸಲಾಗಿದೆ.

ಜಿಲ್ಲಾದ್ಯಂತ ಪ್ರತಿದಿನ 3,300 ಜನರು ಈ ಯೋಜನೆ ಸದುಪಯೋಗ ಪಡೆಯಲಿದ್ದಾರೆ ಎಂದು ಜಿಲ್ಲಾಡಳಿತ ಅಂದಾಜಿಸಿದೆ. ಬೆಳಿಗ್ಗೆ ಉಪಾಹಾರಕ್ಕೆ ₹ 5 ಹಾಗೂ ಮಧ್ಯಾಹ್ನ, ಸಂಜೆ ಊಟಕ್ಕೆ ₹ 10 ದರ ನಿಗದಿಪಡಿಸಲಾಗಿದೆ.

ADVERTISEMENT

ಇಂದಿರಾ ಕ್ಯಾಂಟೀನ್ ಗಳಿಗೆ ತ್ವರಿತವಾಗಿ ಆಹಾರ ಸರಬರಾಜು ಮಾಡುವ ಸಂಬಂಧ ಆಹಾರ ಸರಬರಾಜುದಾರರನ್ನು ಗುರುತಿಸಲು ಟೆಂಡರ್ ಕರೆಯಲಾಗಿದೆ. ನಗರ ಸ್ಥಳೀಯ ಸಂಸ್ಥೆಗಳ ಮುಖ್ಯಾಧಿಕಾರಿ, ಪೌರಾಯುಕ್ತರನ್ನು ನೋಡಲ್ ಅಧಿಕಾರಿಯನ್ನಾಗಿ ನೇಮಿಸಲಾಗಿದೆ. ಕ್ಯಾಂಟೀನ್ ಸ್ಥಳದಲ್ಲಿ ವಾಟರ್ ರೀಚಾರ್ಜ್, ನೀರಿನ ನೆಲತೊಟ್ಟಿ, ತಂತಿ ಬೇಲಿ ನಿರ್ಮಿಸಲಾಗುವುದು. ಶುಚಿತ್ವ ಮತ್ತು ನೈರ್ಮಲ್ಯಕ್ಕೆ ಆದ್ಯತೆ ನೀಡುವುದರ ಜತೆಗೆ ಸಿ.ಸಿ.ಟಿ.ವಿ ಕ್ಯಾಮೆರಾ ಅಳವಡಿಸಲು ಕ್ರಮವಹಿಸಲಾಗಿದೆ.

‘ಇಂದಿರಾ ಕ್ಯಾಂಟೀನ್‌ಗೆ ನಗರಸಭೆ ಎರಡು ಕಡೆ ನಿವೇಶನ ನೀಡಿದ್ದು, ಎಲ್ಲ ಸಲಕರಣೆಗಳನ್ನು ರಾಜ್ಯ ಸರ್ಕಾರವೇ ಒದಗಿಸಿಕೊಡಲಿದೆ. ಆದರೆ, ಕುಡಿಯುವ ನೀರು, ವಿದ್ಯುತ್, ಒಳಚರಂಡಿ ವ್ಯವಸ್ಥೆಯನ್ನು ನಗರಸಭೆಯೇ ನಿರ್ವಹಿಸಬೇಕು. ಇದಕ್ಕಾಗಿ ಸರ್ಕಾರ ಯಾವುದೇ ಪ್ರತ್ಯೇಕ ಅನುದಾನ ನೀಡುವುದಿಲ್ಲ. ಎಸ್‌ಎಫ್‌ಸಿ ಅನುದಾನದಡಿ ಖರ್ಚು ಮಾಡಬೇಕಿದೆ. ವಿದ್ಯುತ್ ಹಾಗೂ ಒಳಚರಂಡಿ ಕಾಮಗಾರಿಗೆ ಟೆಂಡರ್ ಕರೆಯಲಾಗಿದೆ’ ಎಂದು ನಗರಸಭೆ ಪೌರಾಯುಕ್ತ ಬಿ.ಎ. ಪರಮೇಶ್ ಹೇಳಿದರು.

‘ವಾರದಲ್ಲಿ ಕಾಮಗಾರಿ ಪೂರ್ಣಗೊಳಿಸಲು ನಿರ್ಧರಿಸಲಾಗಿದೆ. ಆಹಾರ ಸರಬರಾಜು ಪ್ರಕ್ರಿಯೆಗೆ ಸಂಬಂಧಿಸಿದಂತೆ ಜಿಲ್ಲಾಧಿಕಾರಿ
ಸಲಹೆ ಪಡೆದು ಕ್ರಮ ಕೈಗೊಳ್ಳಲಾಗುವುದು. ಎರಡು ಕ್ಯಾಂಟೀನ್‌ಗಳಿಗಾಗಿ ₹ 10 ಲಕ್ಷ ಖರ್ಚಾಗುವ ಸಾಧ್ಯತೆ ಇದೆ.’ ಎಂದು ಅವರು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.