ADVERTISEMENT

ವಿಶ್ವ ಶಾಂತಿಗೆ ಬೌದ್ಧ ಧರ್ಮ ಅವಶ್ಯ

​ಪ್ರಜಾವಾಣಿ ವಾರ್ತೆ
Published 12 ಫೆಬ್ರುವರಿ 2018, 10:27 IST
Last Updated 12 ಫೆಬ್ರುವರಿ 2018, 10:27 IST
ಹಾಸನದಲ್ಲಿ ಅಷ್ಟಾಂಗ ಮಾರ್ಗ ಧ್ಯಾನ ಕೇಂದ್ರವನ್ನು ಲಂಡನ್‌ನ ಬೌದ್ಧ ಸನ್ಯಾಸಿ ಭಂತೆ ಧಮ್ಮನಾಗ ಉದ್ಘಾಟಿಸಿದರು
ಹಾಸನದಲ್ಲಿ ಅಷ್ಟಾಂಗ ಮಾರ್ಗ ಧ್ಯಾನ ಕೇಂದ್ರವನ್ನು ಲಂಡನ್‌ನ ಬೌದ್ಧ ಸನ್ಯಾಸಿ ಭಂತೆ ಧಮ್ಮನಾಗ ಉದ್ಘಾಟಿಸಿದರು   

ಹಾಸನ: ಕೆಲವೇ ವರ್ಷಗಳಲ್ಲಿ ಬೌದ್ಧಧರ್ಮ ವಿಶ್ವದ ಮುಂಚೂಣಿ ಧರ್ಮವಾಗಲಿದೆ ಎಂದು ಲಂಡನ್‌ನ ಬೌದ್ಧ ಸನ್ಯಾಸಿ ಭಂತೆ ಧಮ್ಮನಾಗ ಅಭಿಪ್ರಾಯ ವ್ಯಕ್ತಪಡಿಸಿದರು.

ಇಲ್ಲಿನ ವಿದ್ಯಾನಗರದಲ್ಲಿರುವ ಬೌದ್ಧ ಮಹಾಸಭಾದ ಆಶ್ರಯದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಅಷ್ಟಾಂಗಮಾರ್ಗ ಧ್ಯಾನ ಕೇಂದ್ರದ ಉದ್ಘಾಟನೆ ನೆರವೇರಿಸಿ ಮಾತನಾಡಿದರು.

ಇಂಗ್ಲೆಂಡ್‌ನ ಶೇ 70 ರಷ್ಟು ಜನರು ಬೌದ್ಧ ಧರ್ಮ ಸ್ವೀಕಾರ ಮಾಡಿದ್ದಾರೆ. ಮುಂದುವರಿದ 35 ರಾಷ್ಟ್ರಗಳು ಬೌದ್ಧ ಧರ್ಮ ಸ್ವೀಕರಿಸಿ ಜೀವನದಲ್ಲಿ ಅನುಸರಿಸುತ್ತಿದ್ದಾರೆ. ಧರ್ಮ ಸಂಘರ್ಷದ ಕುಲುಮೆಯಲ್ಲಿ ನಲುಗುತ್ತಿರುವ ಭಾರತಕ್ಕೆ ಬುದ್ಧನ ಪ್ರೀತಿ, ಮೈತ್ರಿಯ ಪಾಲನೆ ಅವಶ್ಯಕವಾಗಿದೆ ಎಂದು ಹೇಳಿದರು.

ADVERTISEMENT

ಬೌದ್ಧ ಧರ್ಮದ ಪಂಚ ಶೀಲ ತತ್ವಗಳು ಮತ್ತು ಅಷ್ಟಾಂಗ ಮಾರ್ಗಗಳ ಅನುಕರಣೆ ಬಹಳ ಮುಖ್ಯ. ಬೌದ್ಧ ಧರ್ಮ ವಿಶ್ವಕ್ಕೆ ಶಾಂತಿ ಸಾರಿದ ಧರ್ಮವಾಗಿದೆ. ಯುದ್ಧ, ಅಹಿಂಸೆ ಹೆಚ್ಚುತ್ತಿದ್ದು, ವಿಶ್ವದಲ್ಲಿ ಶಾಂತಿ ನೆಲೆಸಬೇಕಾದರೆ ಬೌದ್ಧ ಧರ್ಮವೊಂದೇ ಮಾರ್ಗ ಎಂದು ತಿಳಿಸಿದರು.

ಬೌದ್ಧ ಮಹಾಸಭಾದ ಜಿಲ್ಲಾ ಅಧ್ಯಕ್ಷ ಆರ್. ಶ್ರೀನಿವಾಸ್ ಮಾತನಾಡಿ, ಜಗತ್ತಿನಲ್ಲಿ ದುಃಖ ಸರ್ವವ್ಯಾಪ್ತಿಯಾಗಿದೆ. ಮಾನವನ ಎಲ್ಲಾ ಸುಖ-ದುಃಖಗಳಿಗೆ ಆತನ ಮನಸ್ಸೇ ಕಾರಣ. ಉತ್ತಮ ಯೋಚನೆಗೆ ಮನಸ್ಸಿನ ಚಿಕಿತ್ಸೆ ಬೇಕು. ಧ್ಯಾನದಿಂದ ಮಾತ್ರ ಮನಸ್ಸಿಗೆ ಚಿಕಿತ್ಸೆ ದೊರೆತು ನೆಮ್ಮದಿ ಜೀವನ ಸಾಗಿಸಬಹುದು ಎಂದು ಸಲಹೆ ನೀಡಿದರು.

ಬೌದ್ಧ ಮಹಾಸಭಾ ಕಟ್ಟಡವನ್ನು ಸ್ವಂತ ಖರ್ಚಿನಲ್ಲಿ ನಿರ್ಮಿಸಲಾಗಿದೆ. ಒತ್ತಡದಲ್ಲಿ ಇರುವವರಿಗೆ ಉಚಿತವಾಗಿ ಧ್ಯಾನ ಮಾಡಲು ಅಷ್ಟಾಂಗ ಮಾರ್ಗ ಧ್ಯಾನ ಕೇಂದ್ರ ಸ್ಥಾಪಿಸಲಾಗಿದೆ. ಇದರ ಸದುಪಯೋಗ ಪಡೆದುಕೊಳ್ಳುವಂತೆ ಕರೆ ನೀಡಿದರು.

68ಕ್ಕೂ ಹೆಚ್ಚು ಜನರು ಬೌದ್ಧ ದೀಕ್ಷೆ ಪಡೆದರು. ಬೆಂಗಳೂರಿನ ಮಹಾಬೋಧಿ ಸಂಸ್ಥೆ ಪ್ರಧಾನ ಕಾರ್ಯದರ್ಶಿ ಭಂತೆ ಆನಂದ ಮಹಾಥೇರ, ಕೆಪಿಸಿಸಿ ಉಪಾಧ್ಯಕ್ಷ ಬಿ. ಶಿವರಾಂ, ಹುಡಾ ಮಾಜಿ ಅಧ್ಯಕ್ಷ ನವಿಲೆ ಅಣ್ಣಪ್ಪ, ಸಾಹಿತಿ ಕುಮಾರಯ್ಯ, ಬೌದ್ಧ ಧರ್ಮದ ನಿರ್ದೇಶಕರು, ಸದಸ್ಯರು, ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.