ADVERTISEMENT

ಒಂಟೆಮಳ್ಳಿ ಗುಡ್ಡದ ಬಳಿ 6 ಎಕರೆ ಜಮೀನು ಮೀಸಲು

ವಸತಿರಹಿತರ ನಿವೇಶನಕ್ಕೆ ಜಾಗ ಕಾಯ್ದಿರಿಸಲು ಜಿಲ್ಲಾಧಿಕಾರಿ ಆದೇಶ

ಎಚ್.ಎಸ್.ಅನಿಲ್ ಕುಮಾರ್
Published 6 ಜುಲೈ 2022, 3:56 IST
Last Updated 6 ಜುಲೈ 2022, 3:56 IST
ಹಳೇಬೀಡಿನ ದ್ವಾರಸಮುದ್ರ ಕೆರೆಯ ಕೋಡಿ ಹಳ್ಳದ ಪಕ್ಕ ಅಪಾಯದ ಸ್ಥಳದಲ್ಲಿರುವ ವಸತಿರಹಿತರ ಮನೆಗಳು.
ಹಳೇಬೀಡಿನ ದ್ವಾರಸಮುದ್ರ ಕೆರೆಯ ಕೋಡಿ ಹಳ್ಳದ ಪಕ್ಕ ಅಪಾಯದ ಸ್ಥಳದಲ್ಲಿರುವ ವಸತಿರಹಿತರ ಮನೆಗಳು.   

ಹಳೇಬೀಡು: ದ್ವಾರಸಮುದ್ರ ಕೆರೆಯ ಕೋಡಿಹಳ್ಳದ ಪಕ್ಕದ ಅಪಾಯದ ಸ್ಥಳದಲ್ಲಿ ವಾಸವಾಗಿರುವ ಕುಟುಂಬ ಹಾಗೂ ಹಳೇಬೀಡಿನ ವಸತಿರಹಿತರಿಗಾಗಿ ನಿವೇಶನ ಹಾಗೂ ಸೂರು ಕಲ್ಪಿಸಲು, ಒಂಟಿಮಳ್ಳಿ ಗುಡ್ಡದ ಪಕ್ಕದ ಸರ್ಕಾರಿ ಜಾಗದಲ್ಲಿ ಬಡಾವಣೆಗೆ ಸಲ್ಲಿಸಿದ್ದ ಪ್ರಸ್ತಾವವನ್ನು ಜಿಲ್ಲಾಧಿಕಾರಿ ಪರಿಗಣಿಸಿದ್ದು, 6 ಎಕರೆ ಜಾಗವನ್ನು ಕಾಯ್ದಿರಿಸಲು ಹಾಸನ ಜಿಲ್ಲಾಧಿಕಾರಿ ಆರ್.ಗಿರೀಶ್ ಆದೇಶ ನೀಡಿದ್ದಾರೆ.

ಗ್ರಾಮ ಪಂಚಾಯಿತಿಗೆ ಜಿಲ್ಲಾಧಿಕಾರಿ ಆದೇಶ ಬಂದಿರುವ ವಿಚಾರವನ್ನು ಕೇಳಿದ ನಿವೇಶನ ರಹಿತರು ಸಂತಸ ವ್ಯಕ್ತಪಡಿಸಿದ್ದಾರೆ. ಸ್ವಂತ ಸೂರು ಹೊಂದಲು ಕನಸು ಕಂಡಿದ್ದ ಸೂರಿಲ್ಲದವರು, ನಿವೇಶನ ಪಡೆಯಲು ತುದಿಗಾಲಿನಲ್ಲಿ ನಿಂತಿದ್ದಾರೆ.

14 ವರ್ಷದ ಹಿಂದೆ ದ್ವಾರಸಮುದ್ರ ಕೆರೆಯಲ್ಲಿ ಪ್ರವಾಹ ಬಂದು ಮೂರು ಗುಡಿಸಲುಗಳು ಹಳ್ಳದಲ್ಲಿ ಕೊಚ್ಚಿ ಹೋಗಿದ್ದವು, ಹಲವು ಮನೆಯ ಪಾತ್ರೆ ಹಾಗೂ ದಿನಸಿ ಪದಾರ್ಥಗಳು ನೀರು ಪಾಲಾಗಿದ್ದವು. ಭೂದಿಗುಂಡಿ ಬಡಾವಣೆಯ ನಿವಾಸಿಗಳಿಗೆ ಪರಿಹಾರ ಕೇಂದ್ರದಲ್ಲಿ ಆಶ್ರಯ ನೀಡಲಾಗಿತ್ತು. ಪರಿಹಾರ ಕೇಂದ್ರದಲ್ಲಿದ್ದ ನಿರಾಶ್ರಿತರು ಮಳೆ ತಗ್ಗಿದ ತಕ್ಷಣ ಅಪಾಯದ ಸ್ಥಿತಿ ಎದುರಾಗಿದ್ದ ಜಾಗಕ್ಕೆ ಬಂದು ನೆಲೆಸಿದ್ದರು.

ADVERTISEMENT

‘ನಿರಾಶ್ರಿತ ಕುಟಂಬಗಳನ್ನು ಸುರಕ್ಷಿತ ಜಾಗಕ್ಕೆ ಸ್ಥಳಾಂತರ ಮಾಡಬೇಕು. ಒಂಟೆಮಳ್ಳಿ ಗುಡ್ಡದ ಬಳಿ ಸರ್ವೆ ನಂಬರ್ 263ರಲ್ಲಿ ಸರ್ಕಾರಿ ಜಾಗದಲ್ಲಿ ನಿವೇಶನ ಹಂಚಿಕೆಗಾಗಿ ಗ್ರಾಮ ಪಂಚಾಯಿತಿಯಿಂದ ಜಿಲ್ಲಾಧಿಕಾರಿ ಕಚೇರಿಗೆ ಪತ್ರ ಬರೆಯಲಾಗಿತ್ತು. 14 ವರ್ಷ ಕಡತ ಹಾಗೂ ಸ್ಥಳ ಪರಿಶೀಲನೆಯೇ ಮುಗಿಯಲಿಲ್ಲ. ಶಾಸಕ ಕೆ.ಎಸ್. ಲಿಂಗೇಶ್ ಹಾಗೂ ಗ್ರಾಮ ಪಂಚಾಯಿತಿಯವರು ಕಡತದ ಬೆನ್ನು ಹತ್ತಿದ್ದರಿಂದ ಹಳೇಬೀಡಿನ ನಿವೇಶನ ರಹಿತರಿಗೆ ಸೂರು ಕಲ್ಪಿಸಲು ಅವಕಾಶ ದೊರಕಿದೆ’ ಎಂದು ಗ್ರಾಮ ಪಂಚಾಯಿತಿ ಅಧ್ಯಕ್ಷೆ ಕವಿತಾ ರಮೇಶ್ ತಿಳಿಸಿದ್ದಾರೆ.

ಮಾಜಿ ಸೈನಿಕರು, ಮುಳುಗಡೆ ಸಂತ್ರಸ್ತರು ಹಾಗೂ ಸಂಘ–ಸಂಸ್ಥೆಗಳಿಗೆ ಜಾಗವನ್ನು ಕಾಯ್ಡಿರಿಸಿಲ್ಲ. ಜಾಗದಲ್ಲಿ ಅರಣ್ಯ ಬೆಳೆಸುವ ಉದ್ದೇಶ ಯೋಜನೆ ಕಾರ್ಯಗತವಾಗಿಲ್ಲ. ಜಾಗದಲ್ಲಿ ಗಣಿಗಾರಿಕೆಯ ಪ್ರಸ್ತಾಪವಿಲ್ಲ. ಜಾಗದ ಕುರಿತು ಕೋರ್ಟ್‌ ವ್ಯಾಜ್ಯ ಇಲ್ಲ. ಸಾರ್ವಜನಿಕರಿಂದ ಯಾವುದೇ ತಕರಾರು ಬಂದಿಲ್ಲ ಎಂದು ಸಕಲೇಶಪುರ ಉಪವಿಭಾಗಾಧಿಕಾರಿ ಕಚೇರಿಯಿಂದ ವರದಿ ಸಲ್ಲಿಸಲಾಗಿತ್ತು. ಈ ವರದಿಯನ್ನು ಪರಿಗಣಿಸಿದ ಜಿಲ್ಲಾಧಿಕಾರಿ ಜಾಗ ಕಾದಿರಿಸಿ ಆದೇಶ ನೀಡಿದ್ದಾರೆ.

‘ಕಾಯ್ದಿರಿಸಿದ ಜಾಗವನ್ನು ಎರಡು ವರ್ಷದೊಳಗೆ ಬಳಕೆ ಮಾಡಬೇಕು. ಭೂಮಿಯನ್ನು ವಿನಾಶಕಾರಿ ಹಾಗೂ ಹಾನಿಕಾರಕವಾಗಿ ಬಳಸುವಂತಿಲ್ಲ. ಕಂದಾಯ ಇಲಾಖೆ ಅನುಮತಿ ಇಲ್ಲದೆ ಜಾಗವನ್ನು ಮಾರಾಟ, ಗುತ್ತಿಗೆ, ಉಪಗುತ್ತಿಗೆ ಕೊಡುವಂತಿಲ್ಲ. ಕಾಯ್ದಿರಿಸಿದ ಜಮೀನು 1969ರ ಭೂ ಮಂಜೂರಾತಿ ನಿಯಮಗಳಿಗೆ ಬದ್ಧವಾಗಿರುತ್ತದೆ. ಉಲ್ಲಂಘಿಸಿದಲ್ಲಿ ಮಂಜೂರಾತಿ ರದ್ದಾಗುವುದು ಎಂದು ಜಿಲ್ಲಾಧಿಕಾರಿಗಳ ಆದೇಶ ಪತ್ರದಲ್ಲಿ ಉಲ್ಲೇಖಿಸಲಾಗಿದೆ’ ಎಂದು ಪಂಚಾಯಿತಿ ಅಭಿವೃದ್ದಿ ಅಧಿಕಾರಿ ರವಿಕುಮಾರ್ ವಿವರಿಸಿದರು.

ಗ್ರಾಮ ಪಂಚಾಯಿತಿಯಲ್ಲಿ ನಿವೇಶನಕ್ಕಾಗಿ 300 ಅರ್ಜಿಗಳು ಬಂದಿದೆ. ಕಾಯ್ದಿರಿಸಲು ಅನುಮತಿ ದೊರಕಿರುವ ಜಾಗದಲ್ಲಿ 150 ಕುಟುಂಬಕ್ಕೆ ಮಾತ್ರ ವಸತಿ ಕಲ್ಪಿಸಲು ಅವಕಾಶವಿದೆ. ಗ್ರಾಮ ಪಂಚಾಯಿತಿಯಿಂದ ನಿವೇಶನ ಹಂಚಿಕೆ ಮಾಡಲು ಅರ್ಹ ಫಲಾನುಭವಿಗಳನ್ನು ಆಯ್ಕೆ ಮಾಡುವುದು ದೊಡ್ಡ ಜವಾಬ್ದಾರಿಯಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.