ADVERTISEMENT

₹ 60 ಲಕ್ಷ ವೆಚ್ಚದಲ್ಲಿ ಜವೇನಹಳ್ಳಿ ಕೆರೆ ಅಭಿವೃದ್ಧಿ

ಸುಸಜ್ಜಿತ ಉದ್ಯಾನ, ವಾಕಿಂಗ್ ಪಾಥ್ ನಿರ್ಮಾಣ

​ಪ್ರಜಾವಾಣಿ ವಾರ್ತೆ
Published 14 ಡಿಸೆಂಬರ್ 2018, 14:49 IST
Last Updated 14 ಡಿಸೆಂಬರ್ 2018, 14:49 IST
ಹಾಸನದಲ್ಲಿ ಜವೇನಹಳ್ಳಿ ಕೆರೆ ಅಭಿವೃದ್ಧಿ ಕಾಮಗಾರಿ ಕೈಗೊಳ್ಳಲಾಗಿದೆ.
ಹಾಸನದಲ್ಲಿ ಜವೇನಹಳ್ಳಿ ಕೆರೆ ಅಭಿವೃದ್ಧಿ ಕಾಮಗಾರಿ ಕೈಗೊಳ್ಳಲಾಗಿದೆ.   

ಹಾಸನ: ಹಸಿರುಭೂಮಿ ಪ್ರತಿಷ್ಠಾನ ಹಾಗೂ ಕೆರೆ ಅಭಿವೃದ್ಧಿ ಸಮಿತಿ ವತಿಯಿಂದ ₹ 60 ಲಕ್ಷ ವೆಚ್ಚದಲ್ಲಿ ನಗರದ ಜವೇನಹಳ್ಳಿ ಕೆರೆಯನ್ನು ಮಾದರಿ ಕೆರೆಯಾಗಿ ರೂಪಿಸಲು ನಿರ್ಧರಿಸಲಾಗಿದೆ.

ಪ್ರತಿಷ್ಠಾನದ ಅಧ್ಯಕ್ಷ ಸುಬ್ಬುಸ್ವಾಮಿ ಹಾಗೂ ಪದಾಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿದ ಮಾಧ್ಯಮ ಪ್ರತಿನಿಧಿಗಳಿಗೆ ಜಿಲ್ಲೆಯ ಕೆರೆ, ಕಲ್ಯಾಣಿಗಳ ಅಭಿವೃದ್ಧಿ ಕುರಿತು ಮಾಹಿತಿ ನೀಡಿದರು.

ನಗರದ 13,14 ಹಾಗೂ 15ನೇ ವಾರ್ಡ್‍ಗೆ ಜವೇನಹಳ್ಳಿ ಕೆರೆ ಹೊಂದಿಕೊಂಡಿದ್ದು, 4.9 ಎಕರೆ ವಿಸ್ತಾರ ಹೊಂದಿದೆ. 1 ಎಕರೆ ಪ್ರದೇಶದಲ್ಲಿ ಸುಸಜ್ಜಿತ ಪಾರ್ಕ್ ನಿರ್ಮಿಸಲು ಯೋಚಿಸಿದ್ದು, ಉಳಿದ 3.9 ಎಕರೆಯಲ್ಲಿ ಶ್ರವಣಬೆಳಗೊಳ ಕಲ್ಯಾಣಿ ಮಾದರಿಯಲ್ಲಿ ಕೆರೆ ಅಭಿವೃದ್ಧಿ ಪಡಿಸಲಾಗುವುದು ಎಂದರು.

ADVERTISEMENT

ಜವೇನಹಳ್ಳಿ ಕೆರೆ ಅಭಿವೃದ್ಧಿ ಸಮಿತಿ ಅಧ್ಯಕ್ಷ ವಿಶ್ವನಾಥ್, ಖಜಾಂಚಿ ಭರತ್ ಭೂಷಣ್, ನಗರಸಭೆ ಸದಸ್ಯರು, ವಿವಿಧ ಸಂಘ ಸಂಸ್ಥೆಗಳು ಸಾರ್ವಜನಿಕರಿಂದ ಈಗಾಗಲೇ ₹ 6 ಲಕ್ಷ ಸಂಗ್ರಹಿಸಿ ಹಿಟಾಚಿ ಮೂಲಕ ಹೂಳು ಎತ್ತುವ ಕಾರ್ಯ ಪ್ರಾರಂಭಿಸಲಾಗಿದೆ ಎಂದು ಮಾಹಿತಿ ನೀಡಿದರು.

ಸರ್ವೆ ನಂ. 388ರಲ್ಲಿರುವ ವಿಶಾಲವಾದ ಕೆರೆ ತನ್ನ ಸ್ವರೂಪವನ್ನೇ ಕಳೆದುಕೊಂಡಿದೆ. ನಗರದ ತ್ಯಾಜ್ಯ, ಗಿಡ, ಗಂಟಿಗಳ ತುಂಬಿ ಅವ್ಯವಸ್ಥೆಯ ಗೂಡಾಗಿತ್ತು. ಕೆರೆ ಸಂರಕ್ಷಣೆ ಮಾಡದಿದ್ದರೆ ಮುಂದಿನ ದಿನಗಳಲ್ಲಿ ನೀರಿಗೆ ಪರಿತಪಿಸಬೇಕಾಗುತ್ತದೆ ಎಂಬುದನ್ನು ಅರಿತು ಕೆರೆ ಸ್ವಚ್ಛತೆಗೆ ನಿರ್ಧರಿಸಲಾಗಿದೆ ಎಂದು ವಿವರಿಸಿದರು.

ಈಗ ಸುತ್ತಲಿನ ನಿವಾಸಿಗಳು ಕೆರೆ ಉಳಿವಿಗೆ ಮುಂದಾಗಿರುವುದರಿಂದ ಜವೇನಹಳ್ಳಿ ಕೆರೆ ಗತ ವೈಭವ ಕಾಣಲಿದೆ ಎಂಬ ಆಶಾಭಾವ ಇದೆ. ಕೆರೆ ಪುನಶ್ಚೇತನ, ಪಾರ್ಕ್ ಅಭಿವೃದ್ಧಿ ಹಾಗೂ ಸುಸಜ್ಜಿತ ವಾಕಿಂಗ್ ಪಾಥ್ ನಿರ್ಮಿಸಲು ಯೋಜನೆ ರೂಪಿಸಲಾಗಿದೆ ಎಂದು ನುಡಿದರು.

ಪ್ರತಿಷ್ಠಾನದ ಕಾರ್ಯದರ್ಶಿ ರಾಜೇಗೌಡ, ಜವೇನಹಳ್ಳಿ ಕೆರೆ ಅಭಿವೃದ್ಧಿ ಅಧ್ಯಕ್ಷ ವಿಶ್ವನಾಥ್, ಖಜಾಂಚಿ ಭರತ್ ಭೂಷಣ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.