ADVERTISEMENT

7 ದಿನದಲ್ಲಿ ₹ 8 ಲಕ್ಷ ವಹಿವಾಟು

25 ಮೆಟ್ರಿಕ್ ಟನ್ ಮಾವು ಮಾರಾಟ

​ಪ್ರಜಾವಾಣಿ ವಾರ್ತೆ
Published 15 ಜೂನ್ 2018, 12:20 IST
Last Updated 15 ಜೂನ್ 2018, 12:20 IST

ಹಾಸನ: ನಗರ ಸಾರಿಗೆ ಬಸ್ ನಿಲ್ದಾಣದಲ್ಲಿ ಆಯೋಜಿಸಿದ್ದ ಮಾವು, ಹಲಸು ಮೇಳದಲ್ಲಿ ಈ ಬಾರಿ 25 ಮೆಟ್ರಿಕ್‌ ಟನ್‌ ಮಾವು ಮಾರಾಟವಾಗಿದೆ.

ತೋಟಗಾರಿಕೆ ಇಲಾಖೆ, ಜಿಲ್ಲಾ ಪಂಚಾಯಿತಿ, ಮಾವು ಅಭಿವೃದ್ಧಿ ಮತ್ತು ಮಾರುಕಟ್ಟೆ ನಿಗಮದ ವತಿಯಿಂದ ಏಳು ದಿನ ನಡೆದ ಮೇಳದಲ್ಲಿ ರಾಮನಗರ, ಮಂಡ್ಯ, ಕೋಲಾರ ಹಾಗೂ ಹಾಸನ ಜಿಲ್ಲೆಯ ಬೆಳೆಗಾರರು ಮಾವು ಮತ್ತು ಹಲಸನ್ನು ನೇರವಾಗಿ ಗ್ರಾಹಕರಿಗೆ ಮಾರಾಟ ಮಾಡಿದರು.

ಸಾರ್ವಜನಿಕರಿಂದ ಉತ್ತಮ ಪ್ರತಿಕ್ರಿಯೆ ಬಂದಿದ್ದು, ಏಳು ದಿನದಲ್ಲಿ ₹ 8 ಲಕ್ಷಕ್ಕೂ ಹೆಚ್ಚು ವಹಿವಾಟು ನಡೆದಿದೆ.
ಕ್ಯಾಲ್ಸಿಯಂ ಕಾರ್ಬೈಡ್, ನಿಫಾ ವೈರಸ್ ಭೀತಿಯಿಂದ ಹಣ್ಣು ಖರೀದಿಸಲು ಜನರು ಹಿಂದೇಟು ಹಾಕುತ್ತಿದ್ದರು. ಆದರೆ ಇಲಾಖೆಯೇ ಮೇಳ ಆಯೋಜಿಸಿದ್ದು, ಹಾಗೂ ಕಡಿಮೆ ದರ ನಿಗದಿ ಆಗಿದ್ದರಿಂದ ಮುಗಿಬಿದ್ದು ಖರೀದಿಸಿದರು.

ADVERTISEMENT

ತೋಟಗಾರಿಕೆ ಇಲಾಖೆಯೇ ದರ ನಿಗದಿಪಡಿಸಿತ್ತು. ಗ್ರಾಹಕರನ್ನು ಸೆಳೆಯಲು ಹಾಗೂ ಹಣ್ಣುಗಳು ಕೊಳೆಯುವ ಭೀತಿಯಿಂದ ಇಲಾಖೆ ನಿಗದಿಪಡಿಸಿರುವ ದರಕ್ಕಿಂತಲೂ ಕೆ.ಜಿ. ಗೆ ₹ 10 ರಿಂದ ₹ 20 ಕಡಿಮೆ ದರಕ್ಕೆ ಬೆಳೆಗಾರರು ಹಣ್ಣು ಮಾರಿದರು.

ಕಳೆದ ವರ್ಷ ಹಾಸನಾಂಬ ಕಲಾ ಕ್ಷೇತ್ರದಲ್ಲಿ ಆಯೋಜಿಸಿದ್ದ ಮಾವು ಮೇಳದಲ್ಲಿ ₹ 15 ಮೆಟ್ರಿಕ್ ಟನ್ ಮಾವು ಮಾರಾಟವಾಗಿತ್ತು. ಬೇಡಿಕೆ ಹೆಚ್ಚಿದ್ದರಿಂದ ಈ ಬಾರಿ 15ಕ್ಕೂ ಹೆಚ್ಚು ಮಳಿಗೆಗಳನ್ನು ತೆರೆದ ಪರಿಣಾಮ ನಿರೀಕ್ಷೆಗಿಂತ ಹೆಚ್ಚು ವ್ಯಾಪಾರವಾಗಿದೆ.

ಮೇಳದಲ್ಲಿ ಕೆಲ ರೈತರು ಎರಡು, ಮೂರು ದಿನಗಳಲ್ಲೇ ತಾವು ತಂದಿದ್ದ ಹಣ್ಣುಗಳನ್ನು ಮಾರಿ ಊರಿಗೆ ಹೋದರು. ಮತ್ತೆ ಕೆಲವು ಬೆಳೆಗಾರರು ಹೆಚ್ಚು ವ್ಯಾಪಾರವಾಗಬಹುದೆಂಬ ನಿರೀಕ್ಷೆಯಲ್ಲಿ ಕ್ವಿಂಟಲ್ ಗಟ್ಟಲೇ ಮಾವು ತಂದಿದ್ದರು. ಆದರೆ, ಕೊನೆ ಮೂರು ದಿನ ಮಳೆ ಸುರಿದ ಕಾರಣ ಹಣ್ಣುಗಳು ಬಾಕ್ಸ್‌ನಲ್ಲಿಯೇ ಕೊಳೆತು, ನಷ್ಟ ಅನುಭವಿಸಿದರು.

ವಿವಿಧ ತಳಿಯ ಮಾವು, ಹಲಸು, ತೆಂಗು, ಅಡಿಕೆ, ನೆಲ್ಲಿ, ಸೀಬೆ, ಹುಣಸೆ, ಕರಿಬೇವು, ಹೆರಳಿಕಾಯಿ ಸೇರಿದಂತೆ ಹಲವು ಸಸಿಗಳನ್ನು ಮಾರಾಟ ಮಾಡಲಾಯಿತು. ಸಸಿಗಳ ದರ ನರ್ಸರಿಗೆ ಹೋಲಿಸಿದರೆ ಕಡಿಮೆ ಇತ್ತು.

‘ಮಾವು ಮೇಳಕ್ಕೆ ಗ್ರಾಹಕರಿಂದ ಉತ್ತಮ ಸ್ಪಂದನೆ ಸಿಕ್ಕಿದ್ದು ಅಂದಾಜು 25 ಮೆಟ್ರಿಕ್ ಟನ್ ಮಾವು ಮಾರಾಟವಾಗಿದೆ. ಏಳು ದಿನದ ಮೇಳದಲ್ಲಿ 10 ಸಾವಿರಕ್ಕೂ ಹೆಚ್ಚು ಮಂದಿ ಭೇಟಿ ನೀಡಿದ್ದಾರೆ. ಗ್ರಾಹರಿಗೆ ತೊಂದರೆ ಆಗದಂತೆ ತೋಟಗಾರಿಕೆ ಇಲಾಖೆ ವತಿಯಿಂದ ದರ ನಿಗದಿಪಡಿಸಲಾಗಿದ್ದು, ಹೆಚ್ಚು ವ್ಯಾಪಾರವಾಗಲು ಕಾರಣವಾಯಿತು. ಬೆಳೆಗಾರರಿಂದ ಶುಲ್ಕ ತೆಗೆದುಕೊಂಡಿಲ್ಲ’ ಎಂದು ತೋಟಗಾರಿಕೆ ಇಲಾಖೆ ಉಪ ನಿರ್ದೇಶಕ ಸಂಜಯ್ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.