ADVERTISEMENT

97 ರಸಗೊಬ್ಬರ ಚೀಲ ವಶ

ತೋಟದಲ್ಲಿ ಅಕ್ರಮ ದಾಸ್ತಾನು: ಅಧಿಕಾರಿಗಳ ದಾಳಿ , ಜಪ್ತಿ

​ಪ್ರಜಾವಾಣಿ ವಾರ್ತೆ
Published 3 ಸೆಪ್ಟೆಂಬರ್ 2021, 4:20 IST
Last Updated 3 ಸೆಪ್ಟೆಂಬರ್ 2021, 4:20 IST
ಅಣ್ಣಾಯ್ಕನಹಳ್ಳಿ ಕೆಳಗಳಟ್ಟಿ ಗ್ರಾಮದ ಜಯಶಂಕರ್ ತೋಟದಲ್ಲಿ ಅಕ್ರಮವಾಗಿ ಸಂಗ್ರಹಿಸಿಟ್ಟಿದ್ದ 97 ರಸಗೊಬ್ಬರ ಚೀಲಗಳನ್ನು ಅಧಿಕಾರಿಗಳು ವಶಕ್ಕೆ ಪಡೆದರು
ಅಣ್ಣಾಯ್ಕನಹಳ್ಳಿ ಕೆಳಗಳಟ್ಟಿ ಗ್ರಾಮದ ಜಯಶಂಕರ್ ತೋಟದಲ್ಲಿ ಅಕ್ರಮವಾಗಿ ಸಂಗ್ರಹಿಸಿಟ್ಟಿದ್ದ 97 ರಸಗೊಬ್ಬರ ಚೀಲಗಳನ್ನು ಅಧಿಕಾರಿಗಳು ವಶಕ್ಕೆ ಪಡೆದರು   

ಅರಸೀಕೆರೆ: ಕಸಬಾ ಹೋಬಳಿಯ ಅಣ್ಣಾಯ್ಕನಹಳ್ಳಿ ಕೆಳಗಳಟ್ಟಿ ಗ್ರಾಮದ ತೋಟದಲ್ಲಿ ಅಕ್ರಮವಾಗಿ ರಸಗೊಬ್ಬರ ಚೀಲಗಳನ್ನು ಸಂಗ್ರಹಿಸಿಟ್ಟ ಖಚಿತ ಮಾಹಿತಿ ಆಧರಿಸಿ ಸ್ಥಳಕ್ಕೆ ಕೃಷಿ ಮತ್ತು ಪೊಲೀಸ್‌ ಅಧಿಕಾರಿಗಳು ಭೇಟಿ ನೀಡಿ ಪರಿಶೀಲಿಸಿದಾಗ 97 ಚೀಲಗಳು ಪತ್ತೆಯಾಗಿದ್ದು ವಶಕ್ಕೆ ಪಡೆಯಲಾಗಿದೆ.

ನಗರದಲ್ಲಿ ಸಹಾಯಕ ಕೃಷಿ ನಿರ್ದೇಶಕ ಅಶೋಕ್ ಸುದ್ದಿಗಾರರೊಂದಿಗೆ ಮಾತನಾಡಿ, ‘ಸ್ಥಳೀಯ ರೈತ ಮುಖಂಡರು ಮತ್ತು ಸುತ್ತಲಿನ ಗ್ರಾಮಸ್ಥರು ನೀಡಿದ ಮಾಹಿತಿ ಆಧರಿಸಿ, ಹಾಸನ ಸಹಾಯಕ ಕೃಷಿ ನಿರ್ದೇಶಕ ಜಾರಿ ದಳದ ಶಿವಕುಮಾರ್ ಹಾಗೂ ಕಸಬಾ ಹೋಬಳಿಯ ಕಂದಾಯ ನಿರೀಕ್ಷಕ ಮಂಜುನಾಥ್ ಮತ್ತು ತಂಡದಿಂದ, ಪೊಲೀಸರೊಂದಿಗೆ ಸ್ಥಳಕ್ಕೆ ಹೋಗಿ ನೋಡಿದಾಗ ಅಕ್ರಮ ದಾಸ್ತಾನು ಪತ್ತೆಯಾಗಿದೆ’ ಎಂದು ಹೇಳಿದರು.

ನಗರದ ಎಪಿಎಂಸಿ ಮಾರುಕಟ್ಟೆ ಆವರಣದಲ್ಲಿರುವ ಬಸವೇಶ್ವರ ಅಗ್ರೋ ಕೇಂದ್ರದ ಹೆಸರಿನಲ್ಲಿ ಹಾಸನದಲ್ಲಿ ಈ ರಸಗೊಬ್ಬರ ಚೀಲಗಳನ್ನು ಖರೀದಿಸಲಾಗಿದೆ. ಅಗ್ರೋ ಕೇಂದ್ರದ ವಿನೋದ್ ಎಂಬುವವರಿಗೆ ಕೃಷಿ ಇಲಾಖೆಯಿಂದ ನೋಟಿಸ್ ನೀಡಲಾಗಿದೆ, ಜಯಶಂಕರ್ ಏಕೆ 97 ರಸಗೊಬ್ಬರ ಚೀಲಗಳನ್ನು ತಮ್ಮ ತೋಟದ ಮನೆಯಲ್ಲಿ ಸಂಗ್ರಹಿಸಿಟ್ಟಿದ್ದರು ಎಂಬುದಕ್ಕೆ ಈಗಾಗಲೇ ಕೃಷಿ ಇಲಾಖೆ ವತಿಯಿಂದ, ಜಯಶಂಕರ್ ವಿರುದ್ಧ ಗ್ರಾಮಾಂತರ ಪೊಲೀಸ್ ಠಾಣೆಗೆ ದೂರು ನೀಡಲಾಗಿದೆ. ವಿನೋದ್‌ ಅವರಿಂದ ಉತ್ತರ ಪಡೆದ ನಂತರ ಮುಂದಿನ ಕಾನೂನು ಕ್ರಮಕ್ಕೆ ನ್ಯಾಯಾಂಗದ ಮೊರೆ ಹೋಗುವುದಾಗಿ’ ಮಾಹಿತಿ ನೀಡಿದರು.

ADVERTISEMENT

‘ಸರ್ಕಾರಿ ದರದಲ್ಲಿ ಖರೀದಿಸಿ ಹೆಚ್ಚಿನ ಬೆಲೆಗೆ ಮಾರಾಟ ಮಾಡಲು ಸಂಗ್ರಹಿಸಿಟ್ಟ ಚೀಲಗಳನ್ನು ವಶಕ್ಕೆ ಪಡೆದು ಟಿ.ಎ.ಪಿ.ಸಿ.ಎಂ.ಎಸ್. ಉಗ್ರಾಣದಲ್ಲಿ ಇರಿಸಲಾಗಿದೆ. ಜಿಲ್ಲಾಧಿಕಾರಿ ಗಮನಕ್ಕೆ ತಂದು ಅವರ ನಿರ್ದೇಶನದಂತೆ ಸರ್ಕಾರಿ ದರದಲ್ಲಿ ರೈತರಿಗೆ 97 ಚೀಲಗಳನ್ನು ಮಾರಾಟ ಮಾಡಲಾಗುವುದು’ ಎಂದರು.

ಕಸಬಾ ಹೋಬಳಿ ಕೃಷಿ ಅಧಿಕಾರಿ ಪ್ರಭಾವತಿ, ಕಂದಾಯ ನಿರೀಕ್ಷಕ ಮಂಜುನಾಥ್, ಜಿಲ್ಲಾ ಸಹಾಯಕ ಕೃಷಿ ನಿರ್ದೇಶಕ ಜಾರಿ ದಳದ ಅಧಿಕಾರಿ ಶಿವಕುಮಾರ್ ಸೇರಿದಂತೆ ಇತರರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.