ADVERTISEMENT

ಆಧುನೀಕರಣಕ್ಕೆ ಕ್ರಮ: ಸಚಿವ ರೇವಣ್ಣ

ಗೊರೂರು ಹೇಮಾವತಿ ಬಲ ಮೇಲ್ದಂಡೆ ನಾಲೆ

​ಪ್ರಜಾವಾಣಿ ವಾರ್ತೆ
Published 16 ಅಕ್ಟೋಬರ್ 2018, 19:24 IST
Last Updated 16 ಅಕ್ಟೋಬರ್ 2018, 19:24 IST
ಅರಕಲಗೂಡಿನಲ್ಲಿ ಸೋಮವಾರ ನಡೆದ ರೈತ ದಸರಾ ಕಾರ್ಯಕ್ರಮದಲ್ಲಿ ಸಚಿವ ಎಚ್.ಡಿ. ರೇವಣ್ಣ ಮಾತನಾಡಿದರು
ಅರಕಲಗೂಡಿನಲ್ಲಿ ಸೋಮವಾರ ನಡೆದ ರೈತ ದಸರಾ ಕಾರ್ಯಕ್ರಮದಲ್ಲಿ ಸಚಿವ ಎಚ್.ಡಿ. ರೇವಣ್ಣ ಮಾತನಾಡಿದರು   

ಅರಕಲಗೂಡು: ಗೊರೂರು ಹೇಮಾವತಿ ಬಲಮೇಲ್ದಂಡೆ ನಾಲೆಯನ್ನು ₹ 420 ಕೋಟಿ ವೆಚ್ಚದಲ್ಲಿ ಆಧುನೀಕರಣಗೊಳಿಸಲು ಕ್ರಮ ಕೈಗೊಳ್ಳಲಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಚ್.ಡಿ. ರೇವಣ್ಣ ತಿಳಿಸಿದರು.

ಪಟ್ಟಣದಲ್ಲಿ ಸೋಮವಾರ ನಡೆದ ರೈತರ ದಸರಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ತಾಲ್ಲೂಕಿನ ದೊಡ್ಡಮಗ್ಗೆ ಹೋಬಳಿ, ಹೊಳೆನರಸೀಪುರ ತಾಲ್ಲೂಕಿನ ಹಳ್ಳಿಮೈಸೂರು ಹಾಗೂ ಮಂಡ್ಯ ಜಿಲ್ಲೆಯ ಕೆ.ಆರ್.ಪೇಟೆ ಮಾರ್ಗವಾಗಿ ಹಾದು ಹೋಗಿರುವ ನಾಲೆ ಮೂಲಕ ಸಾವಿರಾರು ಎಕರೆ ಅಚ್ಚುಕಟ್ಟಿಗೆ ನೀರುಣಿಸುತ್ತಿದೆ. ಈಗಾಗಲೇ ಹೇಮಾವತಿ ಜಲಾಶಯದಿಂದ ನಾಲೆ ಮೂಲಕ 190 ಕೆರೆಗಳಿಗೆ ನೀರು ತುಂಬಿಸಲಾಗಿದೆ. ನಾಲೆ ನವೀಕರಣ ಮಾಡುವುದರಿಂದ ರೈತರಿಗೆ ಮತ್ತಷ್ಟು ನೀರಾವರಿ ಸೌಲಭ್ಯ ದೊರಕಲಿದೆ ಎಂದರು.

ಸಂಸದ ಎಚ್.ಡಿ.ದೇವೇಗೌಡರು ಕೇಂದ್ರ ಸರ್ಕಾರದ ಮೇಲೆ ಒತ್ತಡ ತಂದು ಚನ್ನರಾಯಪಟ್ಟಣ, ಹೊಳೆನರಸೀಪುರ, ಅರಕಲಗೂಡು, ಕೊಣನೂರು, ಕುಶಾಲನಗರ ಮೂಲಕ ಮಡಿಕೇರಿ ಸಂಪರ್ಕಿಸುವ ರಸ್ತೆಯನ್ನು ರಾಷ್ಟ್ರೀಯ ಹೆದ್ದಾರಿಯಾಗಿ ಮೇಲ್ದರ್ಜೆಗೆ ಏರಿಸಿದ್ದಾರೆ. ಮಾಗಡಿ, ಕೆ.ಆರ್.ಪೇಟೆಯಿಂದ ಕೇರಳಾಪುರ, ರಾಮನಾಥಪುರ ಮಾರ್ಗವಾಗಿ ಸೋಮವಾರಪೇಟೆ ಸಂಪರ್ಕಿಸುವ ರಸ್ತೆ ಕಾಮಗಾರಿಯನ್ನು ಸದ್ಯದಲ್ಲೇ ಕೈಗೆತ್ತಿಕೊಳ್ಳಲಾಗುವುದು. ಗೊರೂರು, ಹೊಳೆನರಸೀಪುರ ರಸ್ತೆ ಅಭಿವೃದ್ಧಿಪಡಿಸಲಾಗುವುದು. ತಾಲ್ಲೂಕಿನಲ್ಲಿ ಇನ್ನು ಹಲವು ಅಭಿವೃದ್ಧಿ ಕಾರ್ಯಗಳನ್ನು ನಡೆಸಲು ಕ್ರಮಕೈಗೊಳ್ಳಲಾಗಿದೆ ಎಂದು ಹೇಳಿದರು.

ADVERTISEMENT

ದಸರಾ ಉತ್ಸವವನ್ನು ಹತ್ತು ದಿನಗಳ ಕಾಲ ಹಮ್ಮಿಕೊಳ್ಳುವ ಮೂಲಕ ಸ್ಥಳೀಯ ಸಾಂಸ್ಕೃತಿಕ ಚಟುವಟಿಕೆಗಳಿಗೆ ವೇದಿಕೆ ರೂಪಿಸಿರುವುದು ಸಂತಸಕರ ವಿಚಾರ. ಕಾರ್ಯಕ್ರಮಕ್ಕೆ ಸರ್ಕಾರ ಅನುದಾನ ನೀಡುವ ಮೂಲಕ ಪ್ರೋತ್ಸಾಹಿಸಿದೆ ಎಂದರು.

ಅಧ್ಯಕ್ಷತೆ ವಹಿಸಿದ್ದ ಶಾಸಕ ಎ.ಟಿ.ರಾಮಸ್ವಾಮಿ ಮಾತನಾಡಿ, ಕ್ಷೇತ್ರದಲ್ಲಿ ಸದ್ಯದಲ್ಲೇ ಅಭಿವೃದ್ಧಿ ಪರ್ವ ಶುರುವಾಗಲಿದೆ. ಈ ನಿಟ್ಟಿನಲ್ಲಿ ಅ. 26ರಂದು ಮುಖ್ಯಮಂತ್ರಿಗಳನ್ನು ಕರೆಸಿ ಕಾರ್ಯಕ್ರಮಗಳಿಗೆ ಚಾಲನೆ ನೀಡಲು ಯೋಜಿಸಲಾಗಿತ್ತು. ಆದರೆ ಇನ್ನಷ್ಟು ಅಭಿವೃದ್ಧಿ ಕಾರ್ಯಗಳಿಗೆ ಮಂಜೂರಾತಿ ದೊರಕಿಸಿಕೊಳ್ಳುವ ಉದ್ದೇಶದಿಂದ ಕಾರ್ಯಕ್ರಮ ಮುಂದೂಡಲಾಗಿದ್ದು ಮುಂದಿನ ತಿಂಗಳು ಕಾರ್ಯಕ್ರಮ ನಡೆಸಲಾಗುವುದು ಎಂದರು.

ದಸರಾ ಕಾರ್ಯಕ್ರಮವನ್ನು ಈ ಬಾರಿ 9 ದಿನಗಳ ಕಾಲ ವಿಶೇಷವಾಗಿ ಆಯೋಜಿಸಿದ್ದು ಎಲ್ಲರ ಸಹಕಾರ ಸಿಕ್ಕಿರುವುದು ಸಂತಸ ತಂದಿದೆ ಎಂದು ಹೇಳಿದರು.

ಚಿಲುಮೆ ಮಠದ ಜಯದೇವ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಕೃಷಿಕ ಸಮಾಜದ ಅಧ್ಯಕ್ಷ ಎಂ.ಸಿ. ರಂಗಸ್ವಾಮಿ, ಜೆಡಿಎಸ್ ರಾಜ್ಯ ಘಟಕದ ಪ್ರಧಾನ ಕಾರ್ಯದರ್ಶಿ, ಅನಿಲ್‌ಕುಮಾರ್, ಜಿ.ಪಂ. ಸದಸ್ಯೆ ರತ್ನಮ್ಮ ಲೋಕೇಶ್, ಪ.ಪಂ ಅಧ್ಯಕ್ಷ ಕೆ.ಸಿ. ಲೋಕೇಶ್, ಉಪಾಧ್ಯಕ್ಷೆ ಸಾಕಮ್ಮ, ಮಾಜಿ ಅಧ್ಯಕ್ಷ ಪಾಪಣ್ಣ, ಮಾಜಿ ಸದಸ್ಯ ಎನ್. ರವಿಕುಮಾರ್, ಬಿಎಸ್‌ಪಿ ಮುಖಂಡ ಅತ್ನಿ ಹರೀಶ್, ರೈತ ಸಂಘದ ಅಧ್ಯಕ್ಷ ಎಸ್.ವಿ. ಯೋಗಣ್ಣ ಉಪಸ್ಥಿತರಿದ್ದರು.

ಕಾರ್ಯಕ್ರಮದಲ್ಲಿ ವಿವಿಧ ಸ್ವಸಹಾಯ ಸಂಘಗಳಿಗೆ ₹ 25 ಸಾವಿರ ಸುತ್ತು ನಿಧಿ ಹಾಗೂ ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು.

ರೈತ ದಸರಾ ಅಂಗವಾಗಿ ಸುಮಂತ್ ನಾರಾಯಣ್ ಮತ್ತು ತಂಡದವರು ಗೀತಗಾಯನ ನಡೆಸಿಕೊಟ್ಟರು. ಕಂಚೀರಾಯ ಸ್ವಾಮಿ ಪ್ರೌಢಶಾಲೆ ವಿದ್ಯಾರ್ಥಿಗಳು ಪ್ರದರ್ಶಿಸಿದ ‘ಪುಣ್ಯಕೋಟಿ’ ನೃತ್ಯರೂಪಕವನ್ನು ವೀಕ್ಷಿಸಿದ ಜನತೆ ಭಾವುಕರಾದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.