ADVERTISEMENT

ಆಲೂರು: ಅಡಿಬೈಲು ಬಿಂದಿಗಮ್ಮ ಹಗಲು ಜಾತ್ರೆ ಸಂಭ್ರಮ

​ಪ್ರಜಾವಾಣಿ ವಾರ್ತೆ
Published 6 ಫೆಬ್ರುವರಿ 2023, 7:21 IST
Last Updated 6 ಫೆಬ್ರುವರಿ 2023, 7:21 IST
ರಂಗನಾಥಸ್ವಾಮಿ ಮೆರೆ ದೇವರಿಗೆ ಹೊಳೆ ಬದಿಯಲ್ಲಿ ಪೂಜೆ ಸಲ್ಲಿಸಲಾಯಿತು.
ರಂಗನಾಥಸ್ವಾಮಿ ಮೆರೆ ದೇವರಿಗೆ ಹೊಳೆ ಬದಿಯಲ್ಲಿ ಪೂಜೆ ಸಲ್ಲಿಸಲಾಯಿತು.   

ಆಲೂರು: ಹೇಮಾವತಿ ನದಿ ದಡ ಭರತೂರು ಬಳಿ ಬಿಂದಿಗಮ್ಮ ಜಾತ್ರಾ ಮಹೋತ್ಸವ ಶನಿವಾರ ವಿಜೃಂಭಣೆಯಿಂದ ನಡೆಯಿತು.

ಶುಕ್ರವಾರ ರಾತ್ರಿ ರಂಗನಾಥಸ್ವಾಮಿ ದೇವರು(ವರ) ಮತ್ತು ಬಿಂದಿಗಮ್ಮ ದೇವತೆ(ವಧು) ಮದುವೆ ಕಾರ್ಯಕ್ರಮ ಬೆಟ್ಟದ ಮೇಲಿರುವ ರಂಗನಾಥಸ್ವಾಮಿ ದೇವಾಲಯದಲ್ಲಿ ನೆರವೇರಿತು. ಉಯ್ಯಾಲೆ ಉತ್ಸವದ ನಂತರ ದಂಪತಿಯನ್ನು ಮೆರವಣಿಗೆಯಲ್ಲಿ ವಧುವಿನ ಊರು ಭರತೂರು ಹೊಳೆ ಬದಿಗೆ ತರಲಾಯಿತು. ಶನಿವಾರ ರಂಗನಾಥಸ್ವಾಮಿ ಮೆರೆ ದೇವರು ಮತ್ತು ಬಿಂದಿಗಮ್ಮ ಕಳಸವನ್ನು ಪ್ರತಿಷ್ಠಾಪಿಸಿದ್ದ ಆವರಣದಲ್ಲಿ ಹಗಲು ಜಾತ್ರೆ ನಡೆಯಿತು. ಸುಮಾರು ಹತ್ತು ಸಾವಿರಕ್ಕೂ ಹೆಚ್ಚು ಜನರು ಪಾಲ್ಗೊಂಡಿದ್ದರು.

ಶನಿವಾರ ಸಂಜೆ ವರನ ಜೊತೆ ವಧುವನ್ನು ಕಳುಹಿಸುವ ಸಂದರ್ಭದಲ್ಲಿ ಭರತೂರು ಹಳ್ಳಿ (ವಧು) ಕಡೆಯವರು, ಕುಂದೂರು ಹಳ್ಳಿ (ವರ) ಕಡೆಯವರನ್ನು ಕರೆದು ಹೂ ಹಾರ ಹಾಕಿ ಗೌರವಿಸಿದರು.

ADVERTISEMENT

ಬಿಂದಿಗಮ್ಮ ಕಳಸವನ್ನು ಪುರಾತನ ಕಾಲದಿಂದ ಬ್ರಾಹ್ಮಣ ಸಂಪ್ರದಾಯದವರಾದ ಶಾನುಭೋಗ ನೊಚ್ಚಪ್ಪನವರ ಕುಟುಂಬದವರು ಕೈಯಲ್ಲಿ ಹಿಡಿದು, ಹತ್ತಾರು ಹೆಜ್ಜೆ ಇಟ್ಟು, ವೈಷ್ಣವ ವಂಶಸ್ಥರಾದ ಕೃಷ್ಣಮೂರ್ತಿ ಅವರ ಬೋಳು ತಲೆ ಮೇಲೆ ಇಟ್ಟರು. ಕೇವಲ ಪಂಜಿನ ಬೆಳಕು, ತಮಟೆ ವಾದ್ಯದೊಂದಿಗೆ ಸಾಗಿದ ಕಳಸ, 12 ಊರು ಬಾಗಿಲು ಪ್ರವೇಶ ಮಾಡಿ, 7 ಕಿ.ಮೀ. ದೂರ ಬೆಟ್ಟದ ಮೇಲಿರುವ ದೇವಸ್ಥಾನವನ್ನು ಒಂದೂವರೆ ಗಂಟೆ ಆವಧಿಯಲ್ಲಿ ಬೆಟ್ಟ ತಲುಪಿತು.

ಅಕ್ಕಿ ಹಸೆಯಿಂದ ಶೃಂಗರಿಸಿದ ಊರು ಬಾಗಿಲುಗಳ ಬಳಿ ಬಂದ ಕಳಸ, ಮಂಡಿಯೂರಿ ಗದ್ದದಿಂದ ನೆಲ ಮುಟ್ಟುತ್ತದೆ. ಆಗ ಕಳಸ ತಲೆ ಹಿಂಬದಿಗೆ ಜಾರಿ ಪುನಃ ಬಂದು ನೆತ್ತಿ ಮೇಲೆ ನಿಲ್ಲುತ್ತದೆ. ಇದು ಸತ್ಯಕ್ಕೆ ಸಾಕ್ಷಿಯಾಗಿದೆ ಎನ್ನಲಾಗಿದೆ.

ಅರ್ಚಕರಾದ ಎ.ಜಿ. ನಾರಾಯಣ, ಎಚ್.ಎಸ್. ಚಂದ್ರು, ಪದ್ಮರಾಜು, ಕೃಷ್ಣಮೂರ್ತಿ, ಪುರುಷೋತ್ತಮ, ಲಕ್ಷ್ಮಿನಾರಾಯಣ, ಪ್ರಕಾಶ್, ಮೂರ್ತಿ, ಮನೋಜ್, ಲೋಕೇಶ್, ಶಾಂತರಾಜ್ ಪೂಜಾ ಕೈಂಕರ್ಯದಲ್ಲಿ ಭಾಗವಹಿಸಿದ್ದರು.

ದೇವಸ್ಥಾನ ಸಮಿತಿ ಅಧ್ಯಕ್ಷ ಕೆ.ವಿ. ಉಮೇಶ್ ಮತ್ತು ಸದಸ್ಯರು ಜಾತ್ರೆ ಉತ್ಸವದ ನೇತೃತ್ವ ವಹಿಸಿದ್ದರು. ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿತ್ತು. ನಲ್ಲೂರು ಬಳಿ ಕಾಡಾನೆ ಇದ್ದುದರಿಂದ ಕಳಸ ಬೆಟ್ಟಕ್ಕೆ ಹೋಗಲು ಯಾವುದೇ ಅಡಚಣೆ ಆಗದಂತೆ ಅರಣ್ಯ ಇಲಾಖೆ ಸಿಬ್ಬಂದಿ ಜಾಗ್ರತೆ ವಹಿಸಿದ್ದರು. ರಾತ್ರಿ ಹಂಜಳಿಗೆ ಮತ್ತು ಪುರಬೈರವನಹಳ್ಳಿ ಗ್ರಾಮದಲ್ಲಿ ಪೌರಾಣಿಕ ನಾಟಕ ಪ್ರದರ್ಶನ ನಡೆಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.