ADVERTISEMENT

ಗಣತಿದಾರರಿಗೆ ನಿಖರ ಮಾಹಿತಿ ನೀಡಲು ಸಲಹೆ

ಪರಿಶಿಷ್ಟ ಜಾತಿಗಳ ಸಮಗ್ರ ಸಮೀಕ್ಷೆ ನಾಳೆಯಿಂದ ಜಿಲ್ಲಾಧಿಕಾರಿ ಸಿ.ಸತ್ಯಭಾಮಾ

​ಪ್ರಜಾವಾಣಿ ವಾರ್ತೆ
Published 3 ಮೇ 2025, 14:50 IST
Last Updated 3 ಮೇ 2025, 14:50 IST
ಹಾಸನದ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ನಡೆದ ಸಭೆಯಲ್ಲಿ ಜಿಲ್ಲಾಧಿಕಾರಿ ಸಿ.ಸತ್ಯಭಾಮಾ ಮಾತನಾಡಿದರು. ವೆಂಕಟೇಶ್‌, ಬಿ.ಆರ್.ಪೂರ್ಣಿಮಾ, ಕೆ.ಟಿ. ಶಾಂತಲಾ, ಕೃಷ್ಣಮೂರ್ತಿ ಪಾಲ್ಗೊಂಡಿದ್ದರು
ಹಾಸನದ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ನಡೆದ ಸಭೆಯಲ್ಲಿ ಜಿಲ್ಲಾಧಿಕಾರಿ ಸಿ.ಸತ್ಯಭಾಮಾ ಮಾತನಾಡಿದರು. ವೆಂಕಟೇಶ್‌, ಬಿ.ಆರ್.ಪೂರ್ಣಿಮಾ, ಕೆ.ಟಿ. ಶಾಂತಲಾ, ಕೃಷ್ಣಮೂರ್ತಿ ಪಾಲ್ಗೊಂಡಿದ್ದರು   

ಹಾಸನ: ಪರಿಶಿಷ್ಟ ಜಾತಿಗಳ ಸಮಗ್ರ ಸಮೀಕ್ಷೆಯು ಮೇ 5ರಿಂದ 17ವರೆಗೆ ಜಿಲ್ಲೆಯಲ್ಲಿ ನಡೆಯಲಿದೆ. ಯಾವುದೇ ಗೊಂದಲವಿಲ್ಲದಂತೆ ಗಣತಿದಾರರಿಗೆ ನಿಖರ ಮಾಹಿತಿ ನೀಡುವಂತೆ ಜಿಲ್ಲಾಧಿಕಾರಿ ಸತ್ಯಭಾಮ ಸಲಹೆ ನೀಡಿದರು.

ಜಿಲ್ಲಾ ಪಂಚಾಯಿತಿ ಹೊಯ್ಸಳ ಸಭಾಂಗಣದಲ್ಲಿ ಸಮೀಕ್ಷೆ ಕುರಿತು ಶನಿವಾರ ನಡೆದ ಸಭೆಯಲ್ಲಿ ಮಾತನಾಡಿದ ಅವರು, ಗಣತಿದಾರರು ಬೆಳಿಗ್ಗೆ 6.30ರಿಂದ ಸಂಜೆ 6ರವರೆಗೆ ಮನೆ ಮನೆಗೆ ಭೇಟಿ ನೀಡಿ ಸಮೀಕ್ಷೆ ನಡೆಸಲಿದ್ದಾರೆ ಎಂದರು.

ಈ ಗಣತಿ ಕಾರ್ಯ ಸುಗಮವಾಗಿ ನಡೆಯುವ ನಿಟ್ಟಿನಲ್ಲಿ, ಯಾರ ಒತ್ತಡಕ್ಕೂ ಒಳಗಾಗದೇ ನಿಸ್ಸಂಕೋಚವಾಗಿ ಜಾತಿ ಯಾವುದು ಎಂಬ ನಿಖರ ಮಾಹಿತಿ ನೀಡಬೇಕು. ಪರಿಶಿಷ್ಟಜಾತಿಯ ಪಟ್ಟಿಯಲ್ಲಿರುವ ಜಾತಿಗಳನ್ನು ಉಪ ವರ್ಗೀಕರಣ ಮಾಡಿ, ಒಳಮೀಸಲಾತಿ ಜಾರಿ ಮಾಡಲು ಸರ್ಕಾರ ನ್ಯಾ.ಎಚ್. ಎನ್. ನಾಗಮೋಹನ್ ದಾಸ್ ಅಧ್ಯಕ್ಷತೆಯಲ್ಲಿ ಏಕ ವ್ಯಕ್ತಿ ವಿಚಾರಣಾ ಆಯೋಗ ನೇಮಿಸಿದೆ. ಅವಶ್ಯವಿರುವ ದತ್ತಾಂಶ ಸಂಗ್ರಹಿಸಲು ಈ ಸಮೀಕ್ಷೆಯನ್ನು ಕೈಗೊಳ್ಳಲಾಗಿದೆ ಎಂದು ವಿವರಿಸಿದರು.

ADVERTISEMENT

ಪರಿಶಿಷ್ಟ ಜಾತಿಗೆ ಸೇರಿದ ಕುಟುಂಬಗಳು ಸಮೀಕ್ಷೆಯಿಂದ ತಪ್ಪಿ ಹೋಗದಂತೆ ನಿಗಾ ವಹಿಸಬೇಕು. ಪ್ರತಿ ತಾಲ್ಲೂಕಿಗೂ ನೇಮಿಸಿರುವ ನೋಡಲ್ ಅಧಿಕಾರಿಗಳು ಸಮೀಕ್ಷೆ ಕಾರ್ಯವನ್ನು ಜವಾಬ್ದಾರಿ ವಹಿಸಿ ಯಶಸ್ವಿಗೊಳಿಸುವಂತೆ ಹೇಳಿದರು.

ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಬಿ.ಆರ್‌. ಪೂರ್ಣಿಮಾ ಮಾತನಾಡಿ, ಸಮೀಕ್ಷೆಗೆ ಸಹಕಾರ ನೀಡುವಂತೆ ಪಿಡಿಒಗಳಿಗೆ ಈಗಾಗಲೇ ನಿರ್ದೇಶನ ನೀಡಲಾಗಿದೆ ಎಂದರು.

ಹೆಚ್ಚುವರಿ ಜಿಲ್ಲಾಧಿಕಾರಿ ಕೆ.ಟಿ.ಶಾಂತಲಾ, ಜಿಲ್ಲಾ ಪಂಚಾಯಿತಿ ಉಪ ಕಾರ್ಯದರ್ಶಿ ಚಂದ್ರಶೇಖರ್, ಸಮುದಾಯದ ಮುಖಂಡರಾದ ಕಲಿವೀರ್, ಈರಪ್ಪ, ಶಂಕರ್ ರಾಜ್, ಕೃಷ್ಣ ದಾಸ್ ಹಾಗೂ ಸಮುದಾಯದ ಪ್ರತಿನಿಧಿಗಳು ಉಪಸ್ಥಿತರಿದ್ದರು.

‘ಜಾತಿ ಮೂಲಜಾತಿ ನಮೂದಿಸಿ’

ಆದಿ ಆಂಧ್ರ ಆದಿ ದ್ರಾವಿಡ ಆದಿ ಕರ್ನಾಟಕ ಎಂದು ನಮೂದಿಸಿರುವ ಜಾತಿಗಳು ಮೂಲಜಾತಿಗಳಲ್ಲ. ಇವು ಜಾತಿಗಳ ಗುಂಪುಗಳು. ಈ ಜಾತಿಗಳನ್ನು ನಮೂದಿಸುವವರು ಕಡ್ಡಾಯವಾಗಿ ತಮ್ಮ ಜಾತಿ ಮೂಲ ಜಾತಿಯನ್ನು ನಮೂದಿಸಬೇಕು. ಅವುಗಳು ಪರಿಶಿಷ್ಟ ಜಾತಿಯ ಪಟ್ಟಿಯಲ್ಲಿರುವ 98 ಜಾತಿಗಳಲ್ಲಿ ಯಾವುದಾದರೂ ಆಗಿರಬಹುದು ಎಂದು ಸಂಪನ್ಮೂಲ ವ್ಯಕ್ತಿ ವೆಂಕಟೇಶ್ ತಿಳಿಸಿದರು.

ಪರಿಶಿಷ್ಟ ಜಾತಿಗಳ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಯನ್ನು ಸಮಾಜ ಕಲ್ಯಾಣ ಇಲಾಖೆಯ ಮೂಲಕ ಕೈಗೊಳ್ಳಲಾಗುತ್ತಿದೆ. ರಾಜ್ಯದ ಎಲ್ಲ ಪರಿಶಿಷ್ಟ ಜಾತಿಗಳ ಸಾಮಾಜಿಕ ಶೈಕ್ಷಣಿಕ ಮತ್ತು ಔದ್ಯೋಗಿಕ ಸ್ಥಿತಿಗತಿಗಳ ಕುರಿತು ಸಮೀಕ್ಷೆ ಮೂಲಕ ಸಮಗ್ರ ಅಂಕಿ-ಅಂಶ ಸಂಗ್ರಹಿಸಲಾಗುತ್ತಿದೆ ಎಂದು ತಿಳಿಸಿದರು. ಸಂಗ್ರಹಿಸಿದ ಅಂಕಿ-ಅಂಶಗಳ ಆಧಾರದ ಮೇಲೆ ಒಳ ಮೀಸಲಾತಿಯ ವರ್ಗೀಕರಣ ಮಾಡಲಾಗುತ್ತಿದ್ದು ಸಮೀಕ್ಷೆದಾರರು ಸರಿಯಾದ ಕೋಡ್ ಸಂಖ್ಯೆಗಳನ್ನು ಬಳಸಿ ಮಾಹಿತಿಗಳನ್ನು ಸರಿಯಾಗಿ ಭರ್ತಿ ಮಾಡಿರುವ ಬಗ್ಗೆ ದೃಢಪಡಿಸಿಕೊಳ್ಳಬೇಕು ಎಂದು ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.