ADVERTISEMENT

ಹಾಸನ | 'ಮೋದಿ ಸರ್ಕಾರಕ್ಕೆ ಅಹಲ್ಯಾ ಆಡಳಿತ ಮಾದರಿ'

ಅಹಲ್ಯಾ ಬಾಯಿ ಹೋಳ್ಕರ್‌ ಜನ್ಮಶತಮಾನೋತ್ಸವದಲ್ಲಿ ಮಂಜುಳಾ

​ಪ್ರಜಾವಾಣಿ ವಾರ್ತೆ
Published 30 ಮೇ 2025, 13:22 IST
Last Updated 30 ಮೇ 2025, 13:22 IST
ಹಾಸನದಲ್ಲಿ ಶುಕ್ರವಾರ ನಡೆದ ಕಾರ್ಯಕ್ರಮದಲ್ಲಿ ಅಹಲ್ಯಬಾಯಿ ಹೊಳ್ಕರ್ ಕುರಿತಾದ ಪುಸ್ತಕವನ್ನು ಬಿಜೆಪಿ ಮಹಿಳಾ ಮೋರ್ಚಾ ರಾಜ್ಯ ಘಟಕದ ಅಧ್ಯಕ್ಷೆ ಮಂಜುಳಾ ಬಿಡುಗಡೆ ಮಾಡಿದರು.
ಹಾಸನದಲ್ಲಿ ಶುಕ್ರವಾರ ನಡೆದ ಕಾರ್ಯಕ್ರಮದಲ್ಲಿ ಅಹಲ್ಯಬಾಯಿ ಹೊಳ್ಕರ್ ಕುರಿತಾದ ಪುಸ್ತಕವನ್ನು ಬಿಜೆಪಿ ಮಹಿಳಾ ಮೋರ್ಚಾ ರಾಜ್ಯ ಘಟಕದ ಅಧ್ಯಕ್ಷೆ ಮಂಜುಳಾ ಬಿಡುಗಡೆ ಮಾಡಿದರು.   

ಹಾಸನ: ಮರಾಠಾ ಸಾಮ್ರಾಜ್ಯದ ರಾಣಿ ಅಹಲ್ಯಬಾಯಿ ಹೋಳ್ಕರ್‌ ಮಾದರಿಯಲ್ಲಿ ಪ್ರಧಾನಿ ಮೋದಿ ಉತ್ತಮ ಆಡಳಿತ ನೀಡುತ್ತಿದ್ದಾರೆ ಎಂದು ಬಿಜೆಪಿ ಮಹಿಳಾ ಮೋರ್ಚಾ ರಾಜ್ಯ ಘಟಕದ ಅಧ್ಯಕ್ಷೆ ಮಂಜುಳಾ ತಿಳಿಸಿದರು.

ನಗರದಲ್ಲಿ ಶುಕ್ರವಾರ ಆಯೋಜಿಸಿದ್ದ ಅಹಲ್ಯಾಬಾಯಿ ಹೋಳ್ಕರ್ ಜನ್ಮ ಶತಮಾನೋತ್ಸವ ಉದ್ಘಾಟಿಸಿ ಅವರು ಮಾತನಾಡಿದರು.

ಅಹಲ್ಯಾಬಾಯಿ  ಛತ್ರಗಳನ್ನು ನಿರ್ಮಿಸಿ ಅನ್ನದಾನ ಮಾಡುತ್ತಿದ್ದರು. ಅನೇಕ ಕೆರೆ, ಬಾವಿ, ನಿರ್ಮಾಣ ಮಾಡುವಲ್ಲಿಯೂ ಆಸಕ್ತಿ ಹೊಂದಿದ್ದರು. ಇಂದು ನರೇಂದ್ರ ಮೋದಿ ಸಹ ಅಹಲ್ಯಬಾಯಿ ಮಾದರಿಯಲ್ಲಿಯೇ ಕಟ್ಟ ಕಡೆಯ ಜನರಿಗೂ ಅಗತ್ಯ  ಸೌಕರ್ಯ ಒದಗಿಸುವ ನಿಟ್ಟಿನಲ್ಲಿ ಆಡಳಿತ ನೀಡುತ್ತಿದ್ದಾರೆ ಎಂದು ಅಭಿಪ್ರಾಯಪಟ್ಟರು.

ADVERTISEMENT

ಕೇಂದ್ರ ಸರ್ಕಾರ ಅಹಲ್ಯಬಾಯಿ ಅವರನ್ನು ಮಾದರಿಯಾಗಿ ಇಟ್ಟುಕೊಂಡು ಉತ್ತಮ ಆಡಳಿತ ನೀಡುತ್ತಿದ್ದು, ಅವರ ಆಡಳಿತ ವೈಖರಿಯನ್ನು ಜನರಿಗೆ ತಿಳಿಸುವ ನಿಟ್ಟಿನಲ್ಲಿ ಜಯಂತಿಯನ್ನು ಆಚರಿಸಲಾಗುತ್ತಿದೆ ಎಂದರು.

ಸಾಮಾಜಿಕ ಕಾರ್ಯಕರ್ತೆ ಮೈಸೂರಿನ ಸುಧಾ ಫಣೀಶ್ ಮಾತನಾಡಿ, ಅಹಲ್ಯಾಬಾಯಿ  ತಮ್ಮ ಆಡಳಿತ ಅವಧಿಯಲ್ಲಿ ಜನತಾದರ್ಶನ, ಮಹಿಳೆಯರಿಗೆ ಶಿಕ್ಷಣಕ್ಕೆ ಒತ್ತು, ಸೈನ್ಯದಲ್ಲಿ ಉನ್ನತ ಸ್ಥಾನ ಸೇರಿದಂತೆ ಅನೇಕ ಜನಪರ ಕ್ರಮಗಳನ್ನು ಕೈಗೊಂಡು ಇಂದಿಗೂ ಮಾದರಿಯಾಗಿದ್ದಾರೆ. ಮೋದಿ ಆಡಳಿತಕ್ಕೂ, ಅಹಲ್ಯಾಬಾಯಿ ಅವರ ಆಡಳಿತಕ್ಕೂ ಸಾಮ್ಯತೆ ಇದೆ ಎಂದರು.

ಸಾಮಾಜಿಕ ಜೀವನದಲ್ಲಿ ಮಹಿಳೆಯರಿಗೆ , ರೈತರಿಗೆ ಹೆಚ್ಚು ಪ್ರೋತ್ಸಾಹ ನೀಡುತ್ತಿದ್ದ ರಾಣಿ, ಯುದ್ಧದಲ್ಲಿ  ರೈತರ ಬೆಳೆ ಹಾನಿಯಾದರೆ ರಾಜ್ಯ ಕೋಶದಿಂದ ಪರಿಹಾರ ಒದಗಿಸುತ್ತಿದ್ದರು. ಬರ ಹಾಗೂ ನೆರೆಹಾವಳಿ ಸಂದರ್ಭದಲ್ಲಿ ತೆರಿಗೆ ಕಡಿತ,  ನ್ಯಾಯ ತೀರ್ಮಾನದಲ್ಲಿ ಪಾರದರ್ಶಕತೆ ಕಾಯ್ದುಕೊಂಡಿದ್ದರು ಎಂದು ಸ್ಮರಿಸಿದರು.

ಬಿಜೆಪಿ ಮಹಿಳಾ ಮೋರ್ಚಾ ಜಿಲ್ಲಾ ಘಟಕದ ಅಧ್ಯಕ್ಷೆ ನೇತ್ರಾವತಿ, ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಸಿದ್ದೇಶ್ ನಾಗೇಂದ್ರ, ಪ್ರತಿಭಾ ಮಂಜುನಾಥ್ ಹಾಜರಿದ್ದರು. 

‘ಅಹಲ್ಯಬಾಯಿ ಆದರ್ಶ ತಿಳಿಸಲು ಜಯಂತಿ’ ಅಕ್ಬರ್ ಅಲೆಕ್ಸಾಂಡರ್ ಎಂದರೆ ದೇಶದ ಎಲ್ಲರಿಗೂ ತಿಳಿದಿದೆ. ಏಕೆಂದರೆ ನಮ್ಮ ದೇಶದ ಜಾತ್ಯತೀತ ನಾಯಕರು ಪುಸ್ತಕದಲ್ಲಿ ಬಲವಂತವಾಗಿ ಇದನ್ನೆಲ್ಲಾ ತಿಳಿಸಿದರು. ಅವರ ಮನಸ್ಥಿತಿಯನ್ನು ಜನರ ಮೇಲೆ ಹೇರಲು ಹೊರಟರು. ಆದರೆ ದೇಶದ ಉತ್ತಮ ಆಡಳಿತಗಾರರಾಗಿದ್ದ ರಾಜಮನೆತನದ ಒಬ್ಬ ಮಹಿಳೆ ಅಹಲ್ಯಬಾಯಿ ಅವರ ಬಗ್ಗೆ ತಿಳಿಸಿರಲಿಲ್ಲ ಎಂದು ಬಿಜೆಪಿ ರಾಜ್ಯ ಘಟಕದ ಪ್ರಧಾನ ಕಾರ್ಯದರ್ಶಿ ಪ್ರೀತಂ ಗೌಡ ಹೇಳಿದರು. ಪ್ರಧಾನಿ ಮೋದಿ ಅವರು ದೇಶದ ಉತ್ತಮ ಆಡಳಿತಗಾರರ ಬಗ್ಗೆ ತಿಳಿಸುವ ನಿಟ್ಟಿನಲ್ಲಿ ಅಹಲ್ಯಬಾಯಿಯವರ ಜಯಂತಿ ಆಚರಿಸಲು ಹಾಗೂ ಅವರ ಆದರ್ಶ ಆಡಳಿತ ವೈಖರಿಯನ್ನು ಜನರಿಗೆ ತಿಳಿಸುವ ನಿಟ್ಟಿನಲ್ಲಿ ಕಾರ್ಯಕ್ರಮ ಹಮ್ಮಿಕೊಂಡಿದ್ದು ರಾಜ್ಯದಲ್ಲಿ ಪ್ರಚಾರ ಪಡಿಸುವ ನಿಟ್ಟಿನಲ್ಲಿ ನನಗೆ ಜವಾಬ್ದಾರಿ ವಹಿಸಲಾಗಿದ್ದು ಅಹಲ್ಯಬಾಯಿಯವರ ಆಡಳಿತ ಎಲ್ಲ ಮಹಿಳೆಯರಿಗೂ ಪ್ರೇರಣೆಯಾಗಲಿ ಎಂದು ಹಾರೈಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.