ADVERTISEMENT

ಅಕ್ರಮ ಮದ್ಯ ಮಾರಾಟ ತಡೆಗೆ ಆಗ್ರಹ: ನೀಲಗಿರಿ ಕಾವಲು ಗ್ರಾಮಸ್ಥರ ಪ್ರತಿಭಟನೆ

ಡಿಸಿ ಕಚೇರಿ ಎದುರು

​ಪ್ರಜಾವಾಣಿ ವಾರ್ತೆ
Published 16 ಅಕ್ಟೋಬರ್ 2018, 12:04 IST
Last Updated 16 ಅಕ್ಟೋಬರ್ 2018, 12:04 IST
ಹಾಸನ ಜಿಲ್ಲಾಧಿಕಾರಿ ಕಚೇರಿ ಎದುರು ನೀಲಗಿರಿ ಕಾವಲು ಗ್ರಾಮಸ್ಥರು ಪ್ರತಿಭಟನೆ ನಡೆಸಿದರು.
ಹಾಸನ ಜಿಲ್ಲಾಧಿಕಾರಿ ಕಚೇರಿ ಎದುರು ನೀಲಗಿರಿ ಕಾವಲು ಗ್ರಾಮಸ್ಥರು ಪ್ರತಿಭಟನೆ ನಡೆಸಿದರು.   

ಹಾಸನ: ಅಕ್ರಮ ಮದ್ಯ ಮಾರಾಟ ಹಾಗೂ ಜೂಜಾಕ್ಕೆ ಕಡಿವಾಣ ಹಾಕಬೇಕು ಎಂದು ಆಗ್ರಹಿಸಿ ಜಾವಗಲ್ ಹೋಬಳಿಯ ನೀಲಗಿರಿ ಕಾವಲು ಗ್ರಾಮಸ್ಥರು ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿದರು.

‘ಗ್ರಾಮದಲ್ಲಿ ಸುಮಾರು ಆರು ತಿಂಗಳಿನಿಂದ ಅಕ್ರಮವಾಗಿ ಮದ್ಯ ಮಾರಾಟ ಹಾಗೂ ಜೂಜಾಟದ ಚಟುವಟಿಕೆಗಳು ಹೆಚ್ಚಾಗಿವೆ. ಗ್ರಾಮದ ಮಹಿಳೆಯರು, ಮಕ್ಕಳು, ವೃದ್ಧರ ಮೇಲೆ ಇದರಿಂದ ತೊಂದರೆ ಉಂಟಾಗಿದೆ’ ಎಂದು ಪ್ರತಿಭಟನಾಕಾರರು ಆರೋಪಿಸಿದರು.

‘ಅಲ್ಲಲ್ಲಿ ಅಕ್ರಮ ಮದ್ಯ ದೊರೆಯುವುದರಿಂದ ಕುಡುಕರ ಸಂಖ್ಯೆ ಹೆಚ್ಚಾಗಿದೆ. ಜೀವನ ನಡೆಸಲು ಆಗದೆ ಕುಟುಂಬಗಳು ಬೀದಿಗೆ ಬರುತ್ತಿವೆ. ನೀಲಗಿರಿ ಕಾವಲಿನ ಗ್ರಾಮದ ಬಸವಣ್ಣ ಎಂಬಾತ ಅಕ್ರಮವಾಗಿ ಮದ್ಯ ಮಾರಾಟ ಮಾಡುತ್ತಿದ್ದಾರೆ. ಕುಡುಕರು ರಸ್ತೆಯಲ್ಲಿ ಓಡಾಡುವ ಹೆಣ್ಣುಮಕ್ಕಳೊಂದಿಗೆ  ಅಸಭ್ಯವಾಗಿ ವರ್ತಿಸುತ್ತಿದ್ದಾರೆ. ಕುಡಿತದ ಚಟವಿರುವ ಗಂಡಸರ ಮನೆಯಲ್ಲಿ ನೆಮ್ಮದಿ ಮಾಯವಾಗಿದೆ. ಅಲ್ಲದೇ ಗ್ರಾಮದಲ್ಲಿ ಜೂಜಾಡಿಸುವ ತಂಡಗಳು ಹುಟ್ಟಿಕೊಂಡಿದ್ದು, ಪುರುಷರು ದುಡಿಮೆ ಬಿಟ್ಟು ಜೂಜಾಟದಲ್ಲಿ ತೊಡಗುತ್ತಿದ್ದಾರೆ’ ಎಂದು ಅವಲತ್ತುಕೊಂಡರು.

ADVERTISEMENT

‘ಈ ಬಗ್ಗೆ ಜಾವಗಲ್ ಪೊಲೀಸ್ ಠಾಣೆಗೆ ದೂರು ನೀಡಿದ್ದರೂ ಪೊಲೀಸರು ಇದುವರೆಗೂ ಕ್ರಮ ಕೈಗೊಂಡಿಲ್ಲ’ ಎಂದು ದೂರಿದ ಅವರು, ಜಿಲ್ಲಾಧಿಕಾರಿ ಕೂಡಲೇ ಕಡಿವಾಣ ಹಾಕಬೇಕು’ ಎಂದು ಒತ್ತಾಯಿಸಿ ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಿದರು.

ದಲಿತ ಮುಖಂಡ ಕೃಷ್ಣದಾಸ್, ನೀಲಗಿರಿ ಕಾವಲು ಗ್ರಾಮದ ಭಾರತಿ, ಜ್ಯೋತಿ, ಚೈತ್ರಾ, ರೂಪ, ರೇಣುಕ, ಜಯ, ಮಂಜುಳಾ, ಗೀತಾ, ಸುಮಿತ್ರಾ, ಕುಸುಮ, ಕಾಳಮ್ಮ, ಸಣ್ಣಮ್ಮ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.