ADVERTISEMENT

ಅರಕಲಗೂಡು | ಸ್ಥಳೀಯ ಸಂಸ್ಥೆಗಳ ನಿರ್ಲಕ್ಷ್ಯ: ಆರೋಪ

​ಪ್ರಜಾವಾಣಿ ವಾರ್ತೆ
Published 28 ಮೇ 2024, 14:41 IST
Last Updated 28 ಮೇ 2024, 14:41 IST

ಅರಕಲಗೂಡು: ‘ರಾಜ್ಯದಲ್ಲಿ ಸ್ಥಳೀಯ ಸಂಸ್ಥೆಗಳಿಗೆ ನಿಗದಿತ ಅವಧಿಗೆ ಸರಿಯಾಗಿ ಚುನಾವಣೆ ನಡೆಸದೇ ವಿಕೇಂದ್ರೀಕೃತ ಆಡಳಿತ‌ ವ್ಯವಸ್ಥೆಗೆ ಧಕ್ಕೆ ತರಲಾಗುತ್ತಿದ್ದು, ಈ ಮೂಲಕ ಸಂವಿಧಾನದ ಆಶಯಗಳಿಗೆ ವಿರುದ್ಧವಾಗಿ ವರ್ತಿಸಲಾಗುತ್ತಿದೆ’ ಎಂದು ಪಟ್ಟಣ ಪಂಚಾಯಿತಿ ಸದಸ್ಯ ರಮೇಶ್ ವಾಟಾಳ್ ಆಕ್ಷೇಪ ವ್ಯಕ್ತಪಡಿಸಿದರು.

ಪಟ್ಟಣದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಸಂವಿಧಾನದಲ್ಲಿ ಸ್ಥಳೀಯ ಸಂಸ್ಥೆಗಳ ಆಡಳಿತಕ್ಕೆ ಸ್ಥಳೀಯ ಸರ್ಕಾರಗಳು ಎನ್ನುವ ಅಂಶ ಅಡಕವಾಗಿದೆ. ಆದರೆ ಸರ್ಕಾರಗಳು ಇವುಗಳನ್ನು ತಮ್ಮ ಕೈಗೊಂಬೆಯಾಗಿ ಮಾಡಿಕೊಳ್ಳುವ ದುರುದ್ದೇಶದಿಂದ ರಾಜ್ಯದಲ್ಲಿ ಬಿಬಿಎಂಪಿ, ಜಿಲ್ಲಾ ಮತ್ತು ತಾಲ್ಲೂಕು ಪಂಚಾಯಿತಿಗಳಿಗೆ ನಿಗದಿತ ಅವಧಿಗೆ ಚುನಾವಣೆ ನಡೆಸಲು ಮೀನಮೇಷ ಎಣಿಸಲಾಗುತ್ತಿದೆ’ ಎಂದು ಆಪಾದಿಸಿದರು.

‘ದೇಶದಲ್ಲಿ ಲೋಕಸಭೆ ಮತ್ತು ವಿಧಾನಸಭೆಗಳಿಗೆ ಅವಧಿಗೆ ಅನುಗುಣವಾಗಿ ಚುನಾವಣೆ ನಡೆಸಲಾಗುತ್ತಿದೆ. ಸ್ಥಳೀಯ ಸಂಸ್ಥೆಗಳನ್ನು ನಿರ್ಲಕ್ಷ್ಯಿಸುತ್ತಿರುವ ದುರುದ್ದೇಶವಾದರೂ’ ಏನು ಎಂದು ಪ್ರಶ್ನಿಸಿದರು.

ADVERTISEMENT

ಅರಕಲಗೂಡು ಪಟ್ಟಣ ಪಂಚಾಯಿತಿ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾನದ ಎರಡನೇ ಅವಧಿಯ ಮೀಸಲಾತಿ ವರ್ಷ ಕಳೆದರೂ ಪ್ರಕಟವಾಗಿಲ್ಲ. ಹೀಗಾಗಿ ಚುನಾಯಿತ ಪ್ರತಿಧಿಗಳು ಇದ್ದೂ ಇಲ್ಲದಂತಹ ಪರಿಸ್ಥಿತಿ ನಿರ್ಮಾಣವಾಗಿದೆ ಎಂದರು.

ನಮ್ಮನ್ನು ಆಯ್ಕೆ ಮಾಡಿದ ಮತದಾರರಿಗೂ ಮೋಸ ಮಾಡಿದಂತಾಗಿದೆ. ನಮ್ಮ ಹಕ್ಕುಗಳನ್ನು ಮೊಟಕುಗೊಳಿಸಿ, ಅಧಿಕಾರಶಾಹಿ ಆಡಳಿತ ನಡೆಸುವ‌ ದುಸ್ಥಿತಿ ಬಂದೊದಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಸ್ಥಳೀಯ ಸಂಸ್ಥೆಗಳಿಗೆ ನಿಗದಿತ ಅವಧಿಗೆ ಚುನಾವಣೆ ನಡೆಸುವ ಸಂಬಂಧ ಸೂಕ್ತ ಕಾನೂನು ಕ್ರಮ ಜರುಗಿಸುವಂತೆ ಸುಪ್ರೀಂ ಕೋರ್ಟ್ ಹಾಗೂ ರಾಷ್ಟ್ರಪತಿಗೆ ದೂರು ಸಲ್ಲಿಸಿರುವುದಾಗಿ ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.