ADVERTISEMENT

ದಿಕ್ಕು ತಪ್ಪಿದ ಸಮೀಕ್ಷೆ: ಕ್ರಮಕ್ಕೆ ಒತ್ತಾಯ

ಬೇಕಾಬಿಟ್ಟಿ ಸಮೀಕ್ಷೆಯಿಂದ ಪರಿಶಿಷ್ಟ ಜಾತಿಗಳಿಗೆ ಅನ್ಯಾಯ: ಆರೋಪ

​ಪ್ರಜಾವಾಣಿ ವಾರ್ತೆ
Published 29 ಮೇ 2025, 13:34 IST
Last Updated 29 ಮೇ 2025, 13:34 IST

ಹಾಸನ: ‘ಪರಿಶಿಷ್ಟ ಜಾತಿಗಳಿಗೆ ಒಳ ಮೀಸಲಾತಿ ಕಲ್ಪಿಸಲು ನಡೆಸಲಾಗುತ್ತಿರುವ ಜಾತಿ ಸಮೀಕ್ಷೆ ದಿಕ್ಕು ತಪ್ಪಿದ್ದು, ಈ ಬಗ್ಗೆ ಆಯೋಗ ಮತ್ತು ಜಿಲ್ಲಾಡಳಿತ ಅಗತ್ಯ ಕ್ರಮ ಕೈಗೊಳ್ಳಬೇಕು’ ಎಂದು ದಲಿತ ಸಂಘಟನೆಗಳ ಸಮನ್ವಯ ಸಮಿತಿ ಜಿಲ್ಲಾ ಘಟಕದ ಅಧ್ಯಕ್ಷ ಕೃಷ್ಣ ದಾಸ್ ಒತ್ತಾಯಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಪರಿಶಿಷ್ಟ ಜಾತಿಯ 101 ಜಾತಿಗಳ ಸಾಮಾಜಿಕ ಮತ್ತು ಆರ್ಥಿಕ ಸಮೀಕ್ಷೆಯನ್ನು 20 ದಿನಗಳಿಂದ ಕೈಗೊಳ್ಳಲಾಗುತ್ತಿದೆ. ಆದರೆ ಮನೆಮನೆ ಸಮೀಕ್ಷೆ ಮಾಡದೆ ಗಣತಿದಾರರು ಬೇಕಾಬಿಟ್ಟಿಯಾಗಿ ಸಮೀಕ್ಷೆಯಲ್ಲಿ ತೊಡಗಿದ್ದು, ಸಮೀಕ್ಷೆಯು ದಾರಿ ತಪ್ಪುವ ಸಾಧ್ಯತೆಗಳೇ ಹೆಚ್ಚಿದೆ’ ಎಂದು ದೂರಿದರು.

‘ಸಮೀಕ್ಷೆ ಕಾರ್ಯದಲ್ಲಿ ಆಯೋಗದ ನಿರ್ದೇಶನದಂತೆ ಸುಮಾರು 42 ಪ್ರಶ್ನೆಗಳನ್ನು ಗಣತಿದಾರರು ಕೇಳಬೇಕಿದೆ. ಆದರೆ ಕೇವಲ 3–4 ಪ್ರಶ್ನೆಗಳನ್ನು ಕೇಳಿ, ಉಳಿದ ಪ್ರಶ್ನೆಗಳಿಗೆ ತಮಗೆ ಇಷ್ಟ ಬಂದಂತೆ ಬರೆದುಕೊಂಡು ಹೋಗುತ್ತಿದ್ದಾರೆ. ಸಮೀಕ್ಷೆ ಸಮಯದಲ್ಲಿ ಒಂದು ಕುಟುಂಬದಲ್ಲಿ ಐದು ಜನ ಸದಸ್ಯರಿದ್ದರೆ, ಮೂರು ಜನರ ಮಾಹಿತಿ ದಾಖಲಿಸಿ, ಉಳಿದವರ ಮಾಹಿತಿಯನ್ನು ದಾಖಲಿಸದೆ ಉದಾಸೀನ ಮಾಡಲಾಗುತ್ತಿದೆ. ಇದರಿಂದ ಸಮೀಕ್ಷೆಯು ಪಾರದರ್ಶಕವಾಗಿ ನಡೆಯುತ್ತಿಲ್ಲ ’ ಎಂದು ಆರೋಪಿಸಿದರು.

ADVERTISEMENT

‘ದಲಿತ ಮುಖಂಡರ ವಿಶೇಷ ಸಭೆಯನ್ನು ಕರೆದಿದ್ದ ಜಿಲ್ಲಾಧಿಕಾರಿ ಸಮೀಕ್ಷೆ ಬಗ್ಗೆ ಚರ್ಚೆ ನಡೆಸಿದ್ದರು. ಈ ವೇಳೆ ಜಿಲ್ಲೆಯಲ್ಲಿ ಶೇ 92 ರಷ್ಟು ಸಮೀಕ್ಷೆ ಪ್ರಗತಿ ಸಾಧಿಸಲಾಗಿದೆ ಎಂದು ಹೇಳಿದ್ದಾರೆ. ಆದರೆ ಗಣತಿದಾರರು ಬೇಕಾಬಿಟ್ಟಿ ಸಮೀಕ್ಷೆ ಮಾಡಿದ್ದು,  ಕ್ರಮ ಕೈಗೊಳ್ಳುವಂತೆ ತಿಳಿಸಲಾಗಿದೆ’ ಎಂದರು.

‘2–3 ದಿನಗಳಿಂದ ಸಕಲೇಶಪುರ, ಬೇಲೂರು ಸೇರಿದಂತೆ ಮಲೆನಾಡು ಭಾಗದಲ್ಲಿ ವಿಪರೀತ ಮಳೆಯಾಗುತ್ತಿದ್ದು, ಸಮೀಕ್ಷೆ ಮಾಡಲು ಬಳಸಲಾಗುತ್ತಿರುವ ಆ್ಯಪ್, ನೆಟ್‌ವರ್ಕ್ ಇಲ್ಲದೆ ತೊಡಕಾಗಿದೆ. ಆಯೋಗ ಸಮೀಕ್ಷೆ ಅವಧಿ ವಿಸ್ತರಿಸಬೇಕು’ ಎಂದು ಒತ್ತಾಯಿಸಿದರು.

‘ಜಿಲ್ಲೆಯಲ್ಲಿ ಬೇಡ ಜಂಗಮ ಜಾತಿಗೆ ಸೇರಿದ  ಕುಟುಂಬಗಳಿಲ್ಲ. ಆದರೆ ವೀರಶೈವ ಲಿಂಗಾಯತರು ಬೇಡ ಜಂಗಮ ಹೆಸರಿನಲ್ಲಿ ಸಮೀಕ್ಷೆಯಲ್ಲಿ ನೋಂದಾಯಿಸುವಂತೆ ಅಧಿಕಾರಿಗಳಿಗೆ ಒತ್ತಡ ಹಾಕುತ್ತಿದ್ದಾರೆ. ಅರಸೀಕೆರೆಯಲ್ಲಿ 200ಕ್ಕೂ ಹೆಚ್ಚು ಮಂದಿ ಸಮೀಕ್ಷೆಯಲ್ಲಿ ಪಾಲ್ಗೊಂಡಿರುವುದನ್ನು ಜಿಲ್ಲಾಡಳಿತ ಪರಿಶೀಲಿಸಬೇಕು’ ಎಂದು ಮನವಿ ಮಾಡಿದರು.

‘ಜೂನ್ 1 ರವರೆಗೆ ಸಮೀಕ್ಷೆಯನ್ನು ವಿಸ್ತರಿಸಿದ್ದು, ಈಗಲಾದರೂ ಸಮೀಕ್ಷೆ ಕಾರ್ಯದಲ್ಲಿ ಮೇಲುಸ್ತುವಾರಿ ವಹಿಸುವ ಸಮಾಜ ಕಲ್ಯಾಣ ಇಲಾಖೆ ಅಧಿಕಾರಿಗಳು ನಿರ್ಲಕ್ಷ್ಯ ಮಾಡದೆ ಗಣತಿದಾರರ ಸಭೆ ಕರೆದು, ಜವಾಬ್ದಾರಿಯುತ ಸಮೀಕ್ಷೆ ಪೂರ್ಣಗೊಳಿಸುವಂತೆ ಕ್ರಮ ಕೈಗೊಳ್ಳಬೇಕು’ ಎಂದು ಆಗ್ರಹಿಸಿದರು. ಆರ್‌ಪಿಐ ಸತೀಶ್, ಅಂಬುಗ ಮಲ್ಲೇಶ್, ಹರೀಶ್, ಶಿವಮ್ಮ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.