ADVERTISEMENT

ಆಲೂರು: ರೈತರಲ್ಲಿ ಕಾಣದ ಹುರುಪು

​ಪ್ರಜಾವಾಣಿ ವಾರ್ತೆ
Published 16 ಜನವರಿ 2026, 7:42 IST
Last Updated 16 ಜನವರಿ 2026, 7:42 IST
ಅಂಕಿಹಳ್ಳಿಪೇಟೆ ಗ್ರಾಮದ ಕಾಫಿ ಬೆಳೆಗಾರ ಎ. ಕೆ. ಪೋಷಿತ್‍ಕುಮಾರ್ ಕುಟುಂಬದವರು, ಸಂಕ್ರಾಂತಿ ಹಬ್ಬದ ಸಂದರ್ಭದಲ್ಲಿ ಕಣದಲ್ಲಿ ಕಾಫಿ ಕಾಳುಗಳನ್ನು ಗುಡ್ಡೆ ಮಾಡಿ ಪೂಜೆ ಸಲ್ಲಿಸಿದರು.  
ಅಂಕಿಹಳ್ಳಿಪೇಟೆ ಗ್ರಾಮದ ಕಾಫಿ ಬೆಳೆಗಾರ ಎ. ಕೆ. ಪೋಷಿತ್‍ಕುಮಾರ್ ಕುಟುಂಬದವರು, ಸಂಕ್ರಾಂತಿ ಹಬ್ಬದ ಸಂದರ್ಭದಲ್ಲಿ ಕಣದಲ್ಲಿ ಕಾಫಿ ಕಾಳುಗಳನ್ನು ಗುಡ್ಡೆ ಮಾಡಿ ಪೂಜೆ ಸಲ್ಲಿಸಿದರು.     

ಆಲೂರು: ಸಂಕ್ರಾಂತಿ ಹಬ್ಬವನ್ನು ಎಲ್ಲಡೆ ಸಡಗರ ಸಂಭ್ರಮದಿಂದ ಆಚರಿಸಲಾಯಿತಾದರೂ, ಗ್ರಾಮೀಣ ಪ್ರದೇಶಗಳಲ್ಲಿ ಎಂದಿನಂತೆ ಹುರುಪು ಕಂಡುಬರಲಿಲ್ಲ.

ಹಬ್ಬದ ಹಿಂದಿನ ಎರಡು ದಿನ ಮೋಡ ಮುಸುಕಿದ ವಾತಾವರಣ ಮತ್ತು ಅಕಾಲಿಕ ಮಳೆಯಾದ್ದರಿಂದ, ಕೊಯ್ಲು ಮಾಡಿದ ಕಾಫಿ, ಭತ್ತ ಬೆಳೆ ಮಳೆ ನೀರಿನಿಂದ ತೋಯ್ದಿದ್ದರಿಂದ ರೈತರ ಮೊಗದಲ್ಲಿ ಮೂಡಿದ್ದ ಮಂದಹಾಸ ಮರೆಯಾಗಿತ್ತು. ಆದರೂ ಪುರಾತನ ಕಾಲದಿಂದ ನಡೆದು ಬಂದಿರುವ ಹಬ್ಬವನ್ನು ಆಚರಿಸಲು ಮುಂದಾದರು. ಮನೆಗಳನ್ನು ಸ್ವಚ್ಛಗೊಳಿಸಿ ಮುಂಭಾಗ ಬಣ್ಣದ ರಂಗೋಲಿ ಹಾಕಿ ತಳಿರು ತೋರಣಗಳಿಂದ ಶೃಂಗರಿಸಿದರು.

ಬೆಳಿಗ್ಗೆ ಮನೆಯಲ್ಲಿ ದೇವರಿಗೆ ಪೂಜೆ ಸಲ್ಲಿಸಿದ ಬಳಿಕ ಹೊಸ ಬಟ್ಟೆ ಧರಿಸಿದ ಮಕ್ಕಳು ಈಗಾಗಲೇ ತಯಾರಿಸಿದ್ದ ಎಳ್ಳು,ಬೆಲ್ಲ, ಕಡ್ಲೆ ತುಂಬಿದ ಪೊಟ್ಟಣಗಳನ್ನು, ಬಂಧುಗಳ ಮನೆಗೆ ಹೋಗಿ ಕೊಟ್ಟು ಶುಭಾಶಯ ವಿನಿಮಯ ಮಾಡಿಕೊಂಡರು.

ADVERTISEMENT

ಕೃಷಿಕರ ಕುಟುಂಬಗಳು, ಮನೆಯಂಗಳದಲ್ಲಿ ಕಾಫಿ ಬೀಜವನ್ನು ಗುಡ್ಡೆ ಮಾಡಿ, ರಂಗೋಲಿ ಇಟ್ಟು ಪೂಜಿಸಿ ಕಬ್ಬು, ಬೆಲ್ಲ, ಎಳ್ಳು, ಪೊಂಗಲ್ ನೈವೇದ್ಯ ಅರ್ಪಿಸಿ ಪೂಜಿಸಿದರು.

ಮಧ್ಯಾಹ್ನ ಕಡುಬು, ಚಿಲುಕವರೆಕಾಳು ಸಾರು ಮಾಡಿ ದೇವರಿಗೆ ನೈವೇದ್ಯ ಸಲ್ಲಿಸಿ ಊಟ ಸವಿದರು. ಕೆಲವು ಮನೆಗಳಲ್ಲಿ ಹಿಂದಿನಿಂದ ನಡೆದು ಬಂದಿರುವಂತೆ ಹಿರಿಯರಿಗೆ ಪೂಜೆ ಸಲ್ಲಿಸಿ ಪಕ್ಷ ಆಚರಣೆ ಮಾಡಿದರು.

ದಶಕದ ಹಿಂದೆ ಗ್ರಾಮೀಣ ಪ್ರದೇಶದಲ್ಲಿ ಗದ್ದೆ ಗುಂಡಿಗಳಲ್ಲಿ ಸಿಗುತ್ತಿದ್ದ ಮೀನು ಹಿಡಿದು ಅಡುಗೆ ಮಾಡಿಕೊಂಡು ಹಬ್ಬದ ಸಡಗರ ಸಂಭ್ರಮಿಸುತ್ತಿದ್ದರು. ಇತ್ತೀಚೆಗೆ ಕಾರ್ಮಿಕರ ಅಭಾವದಿಂದ ಯಾಂತ್ರಿಕ ಕೃಷಿಗೆ ಮಾರು ಹೋಗಿರುವುದರಿಂದ ಗದ್ದೆಗಳಲ್ಲಿ ಭತ್ತ ಬೆಳೆಯುವುದು ಕಡಿಮೆಯಾಗಿ, ಅತಿಯಾಗಿ ಕ್ರಿಮಿನಾಶಕ ಬಳಸುತ್ತಿರುವುದರಿಂದ ಮೀನುಗಳು ಕಾಣಸಿಗುತ್ತಿಲ್ಲವಾದ್ದರಿಂದ ಶಾಖಾಹಾರಿಗಳಲ್ಲಿ ಮಂದಹಾಸ ಕಡಿಮೆಯಾಗಿತ್ತು.

ಪ್ರತಿಯೊಂದು ದೇವಸ್ಥಾನಗಳಲ್ಲಿ ವಿಶೇಷ ಪೂಜೆ ನಡೆಯಿತು. ಹಬ್ಬ ಮುಗಿದ ನಂತರ ಜನರು ದೇವಸ್ಥಾನಗಳಿಗೆ ಭೇಟಿ ನೀಡಿ ದೇವರ ದರ್ಶನ ಮಾಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.