ಆಲೂರು: ಮಲೆನಾಡು ವ್ಯಾಪ್ತಿಗೆ ಒಳಪಡುವ ಆಲೂರು ಮತ್ತು ಬೇಲೂರು ತಾಲ್ಲೂಕು ಗಡಿಯಲ್ಲಿರುವ ಬಿಕ್ಕೋಡು ಹೋಬಳಿ ಹೊಳಲು ಗ್ರಾಮದಲ್ಲಿರುವ ಆದಿಶಕ್ತಿ ದೇವೀರಮ್ಮ ಸುಗ್ಗಿ ಮಹೋತ್ಸವ ಮೇ 2ರಿಂದ 5ರವರೆಗೆ ವಿಜೃಂಭಣೆಯಿಂದ ನಡೆಯಲಿದೆ.
ಕಾರಣಾಂತರದಿಂದ 29 ವರ್ಷಗಳಿಂದ ಸುಗ್ಗಿ ಮಹೋತ್ಸವ ಸ್ಥಗಿತಗೊಂಡಿತ್ತು. ಈ ವರ್ಷ ಸ್ಥಳೀಯ ಯುವಕರು, ಹಿರಿಯರ ಮಾರ್ಗದರ್ಶನದಲ್ಲಿ ನಡೆಸಲು ಸಿದ್ಧತೆ ಮಾಡಿಕೊಂಡಿದ್ದಾರೆ.
ಮೇ 2ರಂದು ಬೆಳಿಗ್ಗೆ 6 ಗಂಟೆಗೆ ಗಂಗಾರತಿ, ನಂತರ ಅಮ್ಮನವರಿಗೆ ಹಾಗೂ ಪರಿವಾರ ದೇವತೆಗಳಿಗೆ ಅಭಿಷೇಕ ಸೇವೆ, ಅಷ್ಟೋತ್ತರ ಕುಂಕುಮಾರ್ಚನೆ, ಮಹಾಮಂಗಳಾರತಿ ನಡೆಯಲಿದೆ. ಮೇ 3ರಂದು ಸಂಜೆ 6ರಿಂದ ಹೊನ್ನಾರು ಮತ್ತು ಮಲ್ಲು ಉತ್ಸವ ನಡೆಯಲಿದೆ. ಮೇ 4ರಂದು ಸಂಜೆ 6ರಿಂದ ಬಿಲ್ಲೋತ್ಸವ ನಡೆಯಲಿದ್ದು, ಮೇ 5ರಂದು ಬೆಳಿಗ್ಗೆ 6ರಿಂದ 7.30ರೊಳಗೆ ಕೆಂಡೋತ್ಸವ ನಡೆಯಲಿದೆ.
ಇತಿಹಾಸ ಹೇಳುವಂತೆ ಸಾವಿರಾರು ವರ್ಷಗಳ ಹಿಂದೆ ಆದಿಶಕ್ತಿ ದೇವಿಯು ನೆಲೆಸಿದ್ದ ಈ ಗ್ರಾಮದಲ್ಲಿ, ಬಲ್ಲಾಳ ರಾಕ್ಷಸ ಹೊಳವು ಎಂಬಾತನು ಬಂದು, ದೇವಿ ಸಂಹಾರಕ್ಕೆ ಪ್ರಯತ್ನಿಸುತ್ತಾನೆ. ಆ ಸಂದರ್ಭದಲ್ಲಿ ದೇವಿಯು ಚಾಮುಂಡೇಶ್ವರಿ ಅವತಾರ ತಾಳಿ ರಾಕ್ಷಸನನ್ನು ಸಂಹರಿಸುತ್ತಾಳೆ.
ಈ ಕಾರಣದಿಂದ ಈ ಗ್ರಾಮಕ್ಕೆ ಹೊಳಲು ಎಂಬ ಹೆಸರು ಬಂತು. ಪ್ರತಿ ಹಬ್ಬಗಳು, ದಸರಾ ಸಂದರ್ಭದಲ್ಲಿ ವಿಶೇಷ ಪೂಜೆಗಳು ದೇವಾಲಯದಲ್ಲಿ ನಡೆಯುತ್ತದೆ ಎಂದು ಗ್ರಾಮದ ಹಿರಿಯರಾದ ರುದ್ರಪ್ಪ ಹೇಳುತ್ತಾರೆ.
ಪುರಾತನ ಕಾಲದಿಂದ ಮುಜರಾಯಿ ಇಲಾಖೆಗೆ ಸೇರಿರುವ ಆದಿಶಕ್ತಿ ದೇವೀರಮ್ಮ ದೇವಾಲಯಕ್ಕೆ ಸಂಬಂಧಿಸಿದಂತೆ ಸುತ್ತಲಿನ ಚಟ್ಟನಹಳ್ಳಿ, ಹೊಳಲು, ಹೊಸಳ್ಳಿ, ಕೆಸಗೋಡು, ಹಿರುವಾಟೆ ಸೇರಿದಂತೆ ಅನೇಕ ಗ್ರಾಮಗಳ ನಿವಾಸಿಗಳು, ನೆಂಟರಿಷ್ಟರು ಸುಗ್ಗಿ ಮಹೋತ್ಸವದಲ್ಲಿ ಭಾಗವಹಿಸಿ ವಿಜೃಂಭಣೆಯಿಂದ ಆಚರಿಸುತ್ತಾರೆ.
29 ವರ್ಷಗಳ ನಂತರ ಯುವಕರು ಒಗ್ಗೂಡಿ ಸುಗ್ಗಿ ಮಹೋತ್ಸವ ಆಚರಿಸಲು ಮುಂದಾಗಿದ್ದಾರೆ. ಸ್ಥಳೀಯರು ನೆಂಟರಿಷ್ಟರು ಸಹಕರಿಸುತ್ತಿದ್ದಾರೆ. ದೇವಾಲಯದ ಮೇಲ್ಚಾವಣಿ ಶಿಥಿಲಗೊಂಡಿದ್ದು ಪುನರುಜ್ಜೀವನ ಆಗಬೇಕು.ಎಚ್.ಎ. ಯೋಗೇಶ್ ಹೊಳಲು ಗ್ರಾಮದ ಕಾಫಿ ಬೆಳೆಗಾರ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.