ADVERTISEMENT

ಅನೈರ್ಮಲ್ಯ ಕಾಯಿಲೆಗಳ ಉಗಮ ಸ್ಥಾನ

ಸ್ತ್ರೀ ರೋಗ ಮತ್ತು ಪ್ರಸೂತಿ ತಜ್ಞೆ ಡಾ. ವಿದ್ಯಾ

​ಪ್ರಜಾವಾಣಿ ವಾರ್ತೆ
Published 4 ಜುಲೈ 2018, 13:32 IST
Last Updated 4 ಜುಲೈ 2018, 13:32 IST
ಹಾಸನ ತಾಲ್ಲೂಕಿನ ದೊಡ್ಡಮಂಡಿಗನಹಳ್ಳಿಯಲ್ಲಿ ಭಾರತ ಜ್ಞಾನ ವಿಜ್ಞಾನ ಸಮಿತಿ ಆಯೋಜಿಸಿದ್ದ ಆರೋಗ್ಯ ಜಾಗೃತಿ ಕಾರ್ಯಕ್ರಮದಲ್ಲಿ ಸ್ತ್ರೀ ರೋಗ ತಜ್ಞೆ ಡಾ.ವಿದ್ಯಾ ಮಾತನಾಡಿದರು.
ಹಾಸನ ತಾಲ್ಲೂಕಿನ ದೊಡ್ಡಮಂಡಿಗನಹಳ್ಳಿಯಲ್ಲಿ ಭಾರತ ಜ್ಞಾನ ವಿಜ್ಞಾನ ಸಮಿತಿ ಆಯೋಜಿಸಿದ್ದ ಆರೋಗ್ಯ ಜಾಗೃತಿ ಕಾರ್ಯಕ್ರಮದಲ್ಲಿ ಸ್ತ್ರೀ ರೋಗ ತಜ್ಞೆ ಡಾ.ವಿದ್ಯಾ ಮಾತನಾಡಿದರು.   

ಹಾಸನ : ಜಿಲ್ಲೆಯಾದ್ಯಂತ ಡೆಂಗಿ ಪ್ರಕರಣ ಹೆಚ್ಚು ಕಂಡು ಬರುತ್ತಿದ್ದು, ಈ ರೋಗ ಹರಡಲು ಅನೈರ್ಮಲ್ಯತೆ ಮುಖ್ಯ ಕಾರಣ ಎಂದು ಎಸ್ಎಸ್ಎಂ ಆಸ್ಪತ್ರೆಯ ಸ್ತ್ರೀರೋಗ ಮತ್ತು ಪ್ರಸೂತಿ ತಜ್ಞೆ ಡಾ. ವಿದ್ಯಾ ಹೇಳಿದರು.

ತಾಲ್ಲೂಕಿನ ದೊಡ್ಡಮಂಡಿಗನಹಳ್ಳಿಯಲ್ಲಿ ಭಾರತ ಜ್ಞಾನ ವಿಜ್ಞಾನ ಸಮಿತಿ ಆಯೋಜಿಸಿದ್ದ ಆರೋಗ್ಯ ಜಾಗೃತಿ ಕಾರ್ಯಕ್ರಮದಲ್ಲಿ ‘ಮಹಿಳೆ ಮತ್ತು ಆರೋಗ್ಯ’ ಎಂಬ ವಿಷಯ ಕುರಿತು ಮಾತನಾಡಿದರು. ಜಿಲ್ಲೆಯಲ್ಲಿ ವಾಡಿಕೆಗಿಂತ ಹೆಚ್ಚು ಮಳೆಯಾದ ಪರಿಣಾಮ ತೇವಾಂಶ ಹೆಚ್ಚಾಗಿದೆ. ವಾತಾವರಣದ ಈ ಲಾಭ ಪಡೆದು ಸೊಳ್ಳೆಗಳು ಹೆಚ್ಚು ಉತ್ಪತ್ತಿಯಾಗುತ್ತಿವೆ. ಡೆಂಗಿ, ಮಲೇರಿಯಾ, ಚಿಕುನ್ ಗುನ್ಯಾದಂತಹ ಮಾರಕ ಕಾಯಿಲೆಗಳು ಹರಡಲು ಪೂರಕ ವಾತಾವರಣ ಸೃಷ್ಟಿಯಾಗಿದೆ ಎಂದು ತಿಳಿಸಿದರು.

‘ಡೆಂಗಿ ಜ್ವರ ವೈರಸ್‌ನಿಂದ ಹರಡುವ ಒಂದು ಸೋಂಕು ರೋಗ. ಈಡೀಸ್‌ ಎಂಬ ಹೆಣ್ಣು ಸೊಳ್ಳೆ ಬೆಳಗಿನ ಜಾವದಲ್ಲಿ ಕಚ್ಚುವುದರಿಂದ ಈ ಜ್ವರ ಹೆಚ್ಚಾಗಿ ಹರಡುತ್ತದೆ. ಈ ಸೊಳ್ಳೆಗಳು ನೀರಿನ ತೊಟ್ಟಿಗಳು ಮತ್ತು ಮನೆ ಸುತ್ತಲಿನ ಪ್ರದೇಶದ ನಿಂತಿರುವ ನೀರಿನಲ್ಲಿ ವಾಸಿಸುತ್ತವೆ. ಆದ್ದರಿಂದ ಮನೆ ಒಳಗೆ ಮತ್ತು ಹೊರಗೆ ಸ್ವಚ್ಛತೆ ಕಾಪಾಡಿ ಕಾಯಿಲೆಗಳು ಹರಡದಂತೆ ಎಚ್ಚರ ವಹಿಸಬೇಕು’ ಎಂದು ಕಿವಿಮಾತು ಹೇಳಿದರು.

ADVERTISEMENT

ಜಂಕ್ ಫುಡ್ ಸೇವನೆಯಿಂದ ಹೆಣ್ಣುಮಕ್ಕಳು ವಯಸ್ಸಿಗೆ ಮೊದಲೇ ಋತುಮತಿಯಾಗುತ್ತಿದ್ದು, ಆಹಾರ ಮತ್ತು ದಿನಚರಿಗಳಲ್ಲಿ ಎಚ್ಚರಿಕೆ ವಹಿಸಬೇಕು. ಇಂದು ಮಹಿಳೆ ಮನೆ ಒಳಗೆ ಮತ್ತು ಹೊರಗೆ ಹೆಚ್ಚು ಜವಾಬ್ದಾರಿ ನಿಭಾಯಿಸುತ್ತಿದ್ದಾಳೆ. ಅಗತ್ಯಕ್ಕೆ ತಕ್ಕಂತೆ ವಿಶ್ರಾಂತಿ, ಪೌಷ್ಠಿಕ ಆಹಾರ ಸೇವಿಸಬೇಕು. ನಿಯಮಿತ ವ್ಯಾಯಾಮ ಮಾಡುವ ಮೂಲಕ ಉತ್ತಮ ಆರೋಗ್ಯ ಕಾಪಾಡಿಕೊಳ್ಳಬೇಕು ಎಂದರು.

ಜಿಲ್ಲಾ ಉಪಾಧ್ಯಕ್ಷೆ ಪ್ರಮಿಳಾ ಮಾತನಾಡಿ, ಸಮಿತಿಯು ವಿಜ್ಞಾನ, ಸಾಕ್ಷರತೆ, ಮಹಿಳಾ ಸಬಲೀಕರಣ ಮತ್ತು ಪರಿಸರ ಸಂರಕ್ಷಣೆಗಳಂತಹ ಜನಪರ ವಿಷಯಗಳ ಮೇಲೆ ಕ್ರಿಯಾಶೀಲವಾಗಿ ಕಾರ್ಯ ನಿರ್ವಹಿಸುತ್ತಿದೆ. ಪ್ರಸಕ್ತ ವರ್ಷದ ಸದಸ್ಯತ್ವ ಪಡೆಯುವುದರೊಂದಿಗೆ ವಿಜ್ಞಾನ ಚಳುವಳಿಯಲ್ಲಿ ಕೈ ಜೋಡಿಸಲು ಮನವಿ ಮಾಡಿದರು.

ಜಿಲ್ಲಾ ಸಹ ಕಾರ್ಯದರ್ಶಿ ಮಾತನಾಡಿ, ಇತ್ತೀಚಿನ ದಿನಗಳಲ್ಲಿ ಹೈಟೆಕ್ ಮೌಢ್ಯತೆಗಳು ಮೈದಳೆಯುತ್ತಿವೆ ಅವುಗಳೆಂದರೆ ಸರಳವಾಸ್ತು, ಸಂಖ್ಯಾಶಾಸ್ತ್ರ, ಬಣ್ಣಗಳವಾಸ್ತು ಹೀಗೆ ಹತ್ತು ಹಲವು. ಕಾಣದ ಕೈಗಳು ವ್ಯವಸ್ಥಿತವಾಗಿ ಮಾಧ್ಯಮಗಳ ಮೂಲಕ ಪಿತೂರಿ ನಡೆಸುತ್ತಿರುವುದರ ಬಗ್ಗೆ ಆತಂಕ ವ್ಯಕ್ತಪಡಿಸಿದರು.
ಘಟಕದ ಗೌರವ ಅಧ್ಯಕ್ಷ ರಾಮಕೃಷ್ಣ, ಯು.ಆರ್.ವೀಣಾ, ಎಚ್.ಜಿ.ವೀಣಾ, ಎಚ್.ವಿಜಯಲಕ್ಷ್ಮಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.