ಆಲೂರು: ಪ್ರತಿಯೊಬ್ಬರೂ ಆರೋಗ್ಯವಂತರಾಗಿ ಬದುಕಲು ಉತ್ತಮ ಪರಿಸರ ಇರಬೇಕು. ಪ್ಲಾಸ್ಟಿಕ್ ಬಳಕೆಯಿಂದ ದೂರವಿರಬೇಕು ಎಂದು ವಿಶ್ವೇಶ್ವರಯ್ಯ ಪಬ್ಲಿಕ್ ಸ್ಕೂಲ್ ಮುಖ್ಯ ಶಿಕ್ಷಕಿ ಸಿ.ಎಸ್. ಪೂರ್ಣಿಮಾ ತಿಳಿಸಿದರು.
ಪಟ್ಟಣದ ವಿಶ್ವೇಶ್ವರಯ್ಯ ಪಬ್ಲಿಕ್ ಸ್ಕೂಲ್ ಆವರಣದಲ್ಲಿ ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ವಿದ್ಯಾರ್ಥಿಗಳಿಗೆ ಗಿಡಗಳನ್ನು ವಿತರಿಸಿ ಮಾತನಾಡಿದರು. ನಾವು ವಾಸ ಮಾಡುವ ಪರಿಸರವನ್ನು ಹಸಿರಾಗಿ ಇಟ್ಟುಕೊಳ್ಳಬೇಕು ಎಂದರು.
ವಿಶ್ವೇಶ್ವರಯ್ಯ ಐಟಿಐ ಪ್ರಾಂಶುಪಾಲ ಎಚ್.ವಿ. ನಾಗಭೂಷಣ್ ಮಾತನಾಡಿ, ಪ್ಲಾಸ್ಟಿಕ್ ಮಾಲಿನ್ಯ ಮಣಿಸಿ ಎಂಬುದು ವಿಶ್ವ ಪರಿಸರ ದಿನಾಚರಣೆಯ ಘೋಷವಾಕ್ಯ. ಏಕೆಂದರೆ, ಪ್ಲಾಸ್ಟಿಕ್ ಮಾರಿ ನಮ್ಮ ಬದುಕನ್ನು ಆವರಿಸಿಕೊಂಡಿರುವ ರೀತಿ, ವೇಗ ಗಾಬರಿ ಹುಟ್ಟಿಸುತ್ತಿದೆ. ಕಳೆದ ಒಂದು ದಶಕದಲ್ಲಿ ನಾವು ಬಳಸಿ ಬಿಸಾಕಿದ ಪ್ಲಾಸ್ಟಿಕ್ ಪ್ರಮಾಣ, ಹಿಂದಿನ ಒಂದು ಶತಮಾನದ ಒಟ್ಟು ಬಳಕೆಯ ಮೊತ್ತಕ್ಕೆ ಸಮ ಎಂದು ಮಾಹಿತಿ ನೀಡಿದರು.
ಇಂದು ನಾವು ಬಳಸುತ್ತಿರುವ ಪ್ಲಾಸ್ಟಿಕ್ ಪದಾರ್ಥ ಒಮ್ಮೆ ಬಳಸಿ ಎಸೆಯುವಂತದ್ದು. ನಾವು ಪ್ರತಿ ನಿಮಿಷಕ್ಕೆ ಹತ್ತು ಲಕ್ಷ ಪ್ಲಾಸ್ಟಿಕ್ ಬಾಟಲಿಗಳನ್ನು ಕೊಳ್ಳುತ್ತಿದ್ದೇವೆ. ಒಂದು ಸಮೀಕ್ಷೆ ಪ್ರಕಾರ 2050 ರವೇಳೆಗೆ ಸಮುದ್ರಗಳಲ್ಲಿ ಮೀನುಗಳಿಗಿಂತ ಹೆಚ್ಚು ಪ್ಲಾಸ್ಟಿಕ್ ಸೇರಿರುತ್ತದೆ ಎನ್ನಲಾಗಿದೆ. ಆದ್ದರಿಂದ ಈ ಕ್ಷಣದಿಂದ ಪ್ಲಾಸ್ಟಿಕ್ ಬಳಕೆಯನ್ನು ಸಂಪೂರ್ಣವಾಗಿ ನಿಲ್ಲಿಸಲು ಪ್ರಯತ್ನಿಸಬೇಕು.
ಪ್ರಕೃತಿ ಮಾಲಿನ್ಯದ ವಿರುದ್ಧವಷ್ಟೇ ಅಲ್ಲ. ಮನದ ಮಾಲಿನ್ಯದ ವಿರುದ್ಧವೂ ನಾವು ಯುದ್ಧ ಹೂಡಬೇಕಿದೆ. ಅದೇನಿದ್ರೂ ವ್ಯಕ್ತಿನೆಲೆಯಲ್ಲಿ ನೆರವೇರಬೇಕಾದ ಸ್ವಚ್ಛತಾ ಕಾರ್ಯ. ಅದು ಕಾರ್ಯಗತವಾದರೆ ಎಲ್ಲ ಬಗೆಯ ಪರಿಸರ ಮಾಲಿನ್ಯದ ನಿಯಂತ್ರಣವಷ್ಟೇ ಅಲ್ಲ, ನಿರ್ಮೂಲನೆಯೂ ಸಾಧ್ಯವಾಗುತ್ತದೆ ಎಂದರು.
ಸಹಶಿಕ್ಷಕಿ ದೀಪ್ತಿ ಮಾತನಾಡಿದರು. ಸ್ಕೌಟ್ಸ್ ಮತ್ತು ಗೈಡ್ ಮಾಸ್ಟರ್ಸ್ ಹಾಗೂ ಕಬ್ಸ್ ಘಟಕದ ವಿದ್ಯಾರ್ಥಿಗಳು, ಶಿಕ್ಷಕರು ಹಾಜರಿದ್ದರು. ರೈತ ಸಂಘದ ಅಧ್ಯಕ್ಷ ಎಚ್.ಬಿ. ಧರ್ಮರಾಜ್ ಮತ್ತು ಸೆಸ್ಕ್ ಎಇಇ ರಾಘವೇಂದ್ರ ಅವರಿಗೆ ಗಿಡಗಳನ್ನು ವಿತರಿಸಲಾಯಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.