ADVERTISEMENT

ಶೇ 50 ರಿಯಾಯಿತಿಯಲ್ಲಿ ಔಷಧಿ ವಿತರಣೆ: ಸಂಸದ ಶ್ರೇಯಸ್‌ ಪಟೇಲ್‌

ಮೆಕ್ಕೆಜೋಳಕ್ಕೆ ಬಿಳಿಸುಳಿ ರೋಗ ನಿಯಂತ್ರಣ ಕ್ರಮದ ಅರಿವು: ಸಂಸದ ಶ್ರೇಯಸ್ ಪಟೇಲ್‌

​ಪ್ರಜಾವಾಣಿ ವಾರ್ತೆ
Published 10 ಜೂನ್ 2025, 13:43 IST
Last Updated 10 ಜೂನ್ 2025, 13:43 IST
ಶ್ರೇಯಸ್‌ ಪಟೇಲ್‌
ಶ್ರೇಯಸ್‌ ಪಟೇಲ್‌   

ಹಾಸನ: ಮೆಕ್ಕೆಜೋಳಕ್ಕೆ ತಗುಲಿರುವ ಬಿಳಿಸುಳಿ ರೋಗ ನಿಯಂತ್ರಣಕ್ಕೆ ಕೃಷಿ ಇಲಾಖೆಯಿಂದ ಶೇ 50 ಸಬ್ಸಿಡಿಯಲ್ಲಿ ಜಿಲ್ಲೆಯ 38 ರೈತ ಸಂಪರ್ಕ ಕೇಂದ್ರಗಳ ಮೂಲಕ ಅಗತ್ಯ ಔಷಧಿಗಳನ್ನು ವಿತರಿಸಲಾಗುವುದು. ರೋಗ ನಿಯಂತ್ರಣಕ್ಕೆ ಕ್ರಮ ಕೈಗೊಳ್ಳಲಾಗುವುದು ಎಂದು ಸಂಸದ ಶ್ರೇಯಸ್‌ ಪಟೇಲ್‌ ಹೇಳಿದರು.

ನಗರದಲ್ಲಿ ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ರೋಗ ನಿಯಂತ್ರಣಕ್ಕೆ ಕೃಷಿ ಇಲಾಖೆಯಿಂದ ಗ್ರಾಮಗಳಲ್ಲಿ ಅರಿವು ಮೂಡಿಸಲು ಕೃಷಿ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ. ಈಗಾಗಲೇ ಜಂಟಿ ಕೃಷಿ ನಿರ್ದೇಶಕರ ನೇತೃತ್ವದಲ್ಲಿ ಇಲಾಖೆಯ ಸಿಬ್ಬಂದಿ ಸಭೆ ನಡೆಸಿ ಸಲಹೆ ಸೂಚನೆಗಳನ್ನು ನೀಡಲಾಗಿದೆ ಎಂದರು.

ಕೃಷಿ ಇಲಾಖೆಯ ಪ್ರಚಾರ ವಾಹನಗಳು, ಆಟೊಗಳ ಮೂಲಕ ಹೋಬಳಿ ಹಾಗೂ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ರೋಗ ನಿಯಂತ್ರಣದ ಕುರಿತು ಅರಿವು ಮೂಡಿಸಲಾಗುವುದು. ಕೃಷಿ ಇಲಾಖೆಯ ಸಿಬ್ಬಂದಿ ಹಾಗೂ ಬೀಜ ಉತ್ಪಾದನಾ ಕಂಪನಿಗಳ ಸಹಾಯದಲ್ಲಿ ಈ ಕಾರ್ಯಕ್ರಮ ಹಮ್ಮಿಕೊಳ್ಳಲಾಗುತ್ತಿದೆ ಎಂದು ತಿಳಿಸಿದರು.

ADVERTISEMENT

ಹೊಳೆನರಸೀಪುರ, ಚನ್ನರಾಯಪಟ್ಟಣ, ಅರಕಲಗೂಡು ತಾಲ್ಲೂಕಿನಲ್ಲಿ ಈ ರೋಗ ಹೆಚ್ಚು ಕಾಣಿಸಿಕೊಂಡಿದ್ದು, ಆಲೂರಿನಲ್ಲೂ ಸ್ವಲ್ಪ ಪ್ರದೇಶಗಳಲ್ಲಿ ರೋಗ ಕಾಣಿಸಿಕೊಂಡಿದೆ ಎಂದರು.

ಮುಂದಿನ ಜೂನ್ 11ರಿಂದ ಮತ್ತೆ ಮಳೆ ಹೆಚ್ಚಾಗಲಿದ್ದು, ಇದರಿಂದ ರೋಗ ಹೆಚ್ಚು ಕಾಣಿಸಲಿದೆ. ರೈತರು ಹೆಚ್ಚಿನ ಪ್ರಮಾಣದಲ್ಲಿ ಮೆಕ್ಕೆಜೋಳ ಬಿತ್ತನೆ ಮಾಡುವುದರಿಂದ, ಸರಿಯಾದ ಔಷಧೋಪಚಾರ ಕುರಿತು ರೈತರಿಗೆ ಅಗತ್ಯ ಜಾಗೃತಿ ಮೂಡಿಸಲಾಗುವುದು ಎಂದು ಹೇಳಿದರು.

ಫಸಲ್ ಬಿಮಾ ಯೋಜನೆಯಡಿ ವಿಮೆ ಕಂತು ಕಟ್ಟಲು ಮೆಕ್ಕೆಜೋಳ ಬೆಳೆಗಾರರಿಗೂ ಅರಿವು ಮೂಡಿಸಲಾಗುವುದು. ಪ್ರತಿ ಎಕರೆಗೆ ₹450-₹500ರಂತೆ ವಿಮೆ ಕಟ್ಟಿದರೆ, ಫಸಲು ಹಾನಿಯಾದಾಗ ವಿಮೆ ಪಾವತಿ ಆಗಲಿದೆ ಎಂದು ತಿಳಿಸಿದರು.

ರೈತರು ಶುಂಠಿ ಹಾಗೂ ಇತರೆ ಬೆಳೆ ಬಿತ್ತನೆ ಮಾಡಿದ ಜಮೀನಿನಲ್ಲಿಯೇ ಜೋಳ ಬಿತ್ತನೆ ಮಾಡುತ್ತಿದ್ದಾರೆ. ಇದರಿಂದ ರೋಗ ತಗುಲಿರುವ ಸಾಧ್ಯತೆ ಇದೆ ಎಂದು ಕೃಷಿ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.

ರೈತರು ಒಂದೇ ಬೆಳೆಯನ್ನು ಬೆಳೆಯದೇ ಪ್ರತಿ ವರ್ಷ ಬೆಳೆ ಬದಲಿಸುವುದನ್ನು ರೂಢಿಸಿಕೊಳ್ಳಬೇಕು. ಮಿಶ್ರ ಬೆಳೆ ಬೆಳೆಯುವಂತೆ ಕೃಷಿ ಇಲಾಖೆಯಿಂದ ಅರಿವು ಮೂಡಿಸಲು ತಿಳಿಸಲಾಗಿದೆ ಎಂದರು.

ಕಾಂಗ್ರೆಸ್ ಜಿಲ್ಲಾ ಘಟಕದ ವಕ್ತಾರ ದೇವರಾಜೇಗೌಡ, ಮುಖಂಡರಾದ ಸಲೀಂ, ಆರೀಫ್, ಚಂದ್ರಶೇಖರ್ ಇದ್ದರು.

ಬೆಂಗಳೂರಿನ ಕೃಷಿ ವಿಜ್ಞಾನ ಕೇಂದ್ರಕ್ಕೆ 80 ಮಾದರಿಗಳನ್ನು ಕಳುಹಿಸಲಾಗಿದೆ. ಬೀಜ ವಿತರಣೆಯಲ್ಲಿ ಲೋಪವಾಗಿದ್ದರೆ ಇಲಾಖೆ ಬೀಜ ಕಂಪನಿಗಳ ವಿರುದ್ಧ ಅಗತ್ಯ ಕ್ರಮ ಕೈಗೊಳ್ಳಲಾಗುವುದು
ಶ್ರೇಯಸ್ ಪಟೇಲ್‌ ಸಂಸದ

‘ಅಪರಾಧ ಹೆಚ್ಚಾಗಿದ್ದರೆ ರೇವಣ್ಣ ದಾಖಲೆ ಒದಗಿಸಲಿ’

ಜಿಲ್ಲೆಯಲ್ಲಿ ಅಪರಾಧ ಸಂಖ್ಯೆ ಹೆಚ್ಚಾಗಿದೆ. ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ ಎಂದು ಮಾಜಿ ಸಚಿವ ಎಚ್.ಡಿ. ರೇವಣ್ಣ ಅವರು ಆರೋಪಿಸಿರುವ ಕುರಿತು ಪ್ರತಿಕ್ರಿಯೆ ನೀಡಿದ ಶ್ರೇಯಸ್ ಪಟೇಲ್ ಜಿಲ್ಲೆಯಲ್ಲಿ 2023-24ಕ್ಕೆ ಹೋಲಿಸಿದರೆ ಕಾನೂನು ಸುವ್ಯವಸ್ಥೆ ಹತೋಟಿಯಲ್ಲಿದೆ. ಪ್ರತಿ ತಿಂಗಳು ಈ ಬಗ್ಗೆ ಪೊಲೀಸ್ ಇಲಾಖೆಯ ವರದಿ ಪರಿಶೀಲಿಸುತ್ತಿದ್ದೇನೆ. ರೇವಣ್ಣ ಅವರಿಗೆ ಈ ಬಗ್ಗೆ ಅನುಮಾನಗಳಿದ್ದರೆ ಇಲಾಖೆಯ ಹಿರಿಯ ಅಧಿಕಾರಿಗಳಿಗೆ ದಾಖಲೆ ಸಮೇತ ದೂರು ನೀಡಲಿ ಎಂದು ತಿರುಗೇಟು ನೀಡಿದರು. ‘ರೇವಣ್ಣ ಹಿರಿಯರಿದ್ದಾರೆ. ಹಲವು ದಶಕಗಳ ರಾಜಕೀಯ ಅನುಭವ ಇದೆ. ಯೋಚನೆ ಮಾಡಿ ಮಾತನಾಡಬೇಕು. ಜಿಲ್ಲೆಯ ಅಭಿವೃದ್ಧಿ ವಿಚಾರದಲ್ಲಿ ನಾವು ಪ್ರಾಮಾಣಿಕ ಪ್ರಯತ್ನ ಮಾಡುತಿದ್ದೇವೆ. ಮುಂದಿನ ದಿನಗಳಲ್ಲಿ ಜಿಲ್ಲೆಯ ಅಭಿವೃದ್ಧಿಗೆ ಜಿಲ್ಲಾ ಉಸ್ತುವಾರಿ ಸಚಿವ ಕೆ.ಎನ್. ರಾಜಣ್ಣ ನೇತೃತ್ವದಲ್ಲಿ ಮತ್ತಷ್ಟು ಕೆಲಸಗಳನ್ನು ಮಾಡಲಾಗುವುದು. ನಮ್ಮೊಂದಿಗೆ ಜಿಲ್ಲೆಯ ಶಾಸಕರು ಸಹಕರಿಸಬೇಕು’ ಎಂದರು. ಎಚ್.ಡಿ. ರೇವಣ್ಣ ಅವರು ಹೊಳೆನರಸೀಪುರ ಕ್ಷೇತ್ರದಲ್ಲಿ ನಡೆದ ಪೌತಿ ಖಾತೆ ಆಂದೋಲನ ಕಾರ್ಯಕ್ರಮದಲ್ಲಿ ಸರ್ಕಾರದ ವಿರುದ್ಧವೇ ಮಾತನಾಡಿದ್ದಾರೆ. ಒಬ್ಬ ಜನಪ್ರತಿನಿಧಿಯಾಗಿ ಸರ್ಕಾರದ ಕಾರ್ಯಕ್ರಮದಲ್ಲಿ ಈ ರೀತಿ ಸರ್ಕಾರದ ವಿರುದ್ಧವೇ ಮಾತನಾಡುವುದು ಸರಿಯಲ್ಲ. ಹಿರಿಯರಾದ ಅವರಿಗೆ ಈ ಬಗ್ಗೆ ಅರಿವು ಇರಬೇಕು. ರೇವಣ್ಣ ಅವರ ಇಂತಹ ವರ್ತನೆ ಸರಿಯಲ್ಲ ಎಂದು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.