ADVERTISEMENT

ಮೇಲುಕೋಟೆ ರಸ್ತೆ ಮಾರ್ಗದಲ್ಲಿ ಮಳಿಗೆ ನಿರ್ಮಾಣಕ್ಕೆ ಬಾಲಕೃಷ್ಣ ಸೂಚನೆ

​ಪ್ರಜಾವಾಣಿ ವಾರ್ತೆ
Published 30 ಏಪ್ರಿಲ್ 2025, 14:40 IST
Last Updated 30 ಏಪ್ರಿಲ್ 2025, 14:40 IST
ಶ್ರವಣಬೆಳಗೊಳದ ಹೊರವಲಯದಲ್ಲಿರುವ ಮೇಲುಕೋಟೆ ರಸ್ತೆ ಮಾರ್ಗದ ಬಳಿ ಮೀಸಲಿರಿಸಿದ್ದ ಸ್ಥಳವನ್ನು ಶಾಸಕ ಸಿ.ಎನ್.ಬಾಲಕೃಷ್ಣ ಪರಿಶೀಲಿಸಿದರು. ತಹಶೀಲ್ದಾರ್ ನವೀನ್ ಕುಮಾರ್, ಪಿಡಿಒ ಬಸವರಾಜ್, ಅಫ್ತಾಬ್ ಪಾಷಾ, ಸದಸ್ಯರು ಹಾಜರಿದ್ದರು 
ಶ್ರವಣಬೆಳಗೊಳದ ಹೊರವಲಯದಲ್ಲಿರುವ ಮೇಲುಕೋಟೆ ರಸ್ತೆ ಮಾರ್ಗದ ಬಳಿ ಮೀಸಲಿರಿಸಿದ್ದ ಸ್ಥಳವನ್ನು ಶಾಸಕ ಸಿ.ಎನ್.ಬಾಲಕೃಷ್ಣ ಪರಿಶೀಲಿಸಿದರು. ತಹಶೀಲ್ದಾರ್ ನವೀನ್ ಕುಮಾರ್, ಪಿಡಿಒ ಬಸವರಾಜ್, ಅಫ್ತಾಬ್ ಪಾಷಾ, ಸದಸ್ಯರು ಹಾಜರಿದ್ದರು     

ಶ್ರವಣಬೆಳಗೊಳ: ಇಲ್ಲಿನ ಮಾಂಸದ ಮಳಿಗೆಗಳನ್ನು ಒಂದೇ ಕಡೆಗೆ ಸ್ಥಳಾಂತರಿಸುವ ಕುರಿತು ನಿರ್ಧರಿಸಲಾಗಿದ್ದು, 1 ಎಕರೆ ಪ್ರದೇಶದಲ್ಲಿ ಮಳಿಗೆಗಳ ನಿರ್ಮಾಣ ಮಾಡಿ, ಸ್ಥಳಾಂತರಿಸಲು ಶಾಸಕ ಸಿ.ಎನ್‌. ಬಾಲಕೃಷ್ಣ ಸೂಚಿಸಿದರು.

ಅತಿಥಿ ಗೃಹದಲ್ಲಿ ನಡೆದ ಸಭೆಯಲ್ಲಿ, ಜನತೆಗೆ ಅನುಕೂಲ ಆಗುವಂತೆ ಒಂದೇ ಕಡೆ ಮಾಂಸ, ಕುರಿ, ಮೇಕೆ ಕೋಳಿಗಳ ಅಂಗಡಿಗಳನ್ನು ನಿರ್ಮಿಸಿ ಸ್ಥಳಾಂತರಕ್ಕೆ ತೀರ್ಮಾನಿಸಲಾಯಿತು.

ನೂತನವಾಗಿ ನಿರ್ಮಿಸಲಿರುವ ಪ್ರತ್ಯೇಕ ಮಾಂಸ ಮಾರಾಟದ ಅಂಗಡಿಗಳಿಗೆ ಶ್ರವಣಬೆಳಗೊಳ ಸರ್ವೆ ನಂಬರ್ 331ರಲ್ಲಿ 1 ಎಕರೆ 5 ಗುಂಟೆ ಪ್ರದೇಶವನ್ನು 2018ರ ಮಹಾಮಸ್ತಕಾಭಿಷೇಕದ ಸಂದರ್ಭದಲ್ಲಿಯೇ ಕಂದಾಯ ಇಲಾಖೆ ಒದಗಿಸಿತ್ತು. ಅದರಲ್ಲಿ ಸುಸಜ್ಜಿತ ಮಳಿಗೆಗಳನ್ನು ನಿರ್ಮಿಸಿ, ಸ್ಥಳಾಂತರಿಸಲು ಅಧಿಕಾರಿಗಳಿಗೆ ಸೂಚಿಸಿದರು.

ADVERTISEMENT

ಈ ಮಾಂಸದ ಅಂಗಡಿಗಳ ನೂತನ ಪ್ರದೇಶವು ಎಚ್.ಡಿ. ದೇವೇಗೌಡ ಸರ್ಕಲ್ ಬಳಿಯ ಮೇಲುಕೋಟೆ ರಸ್ತೆ ಮಾರ್ಗದ ಬಳಿ ಬರಲಿದ್ದು, ಶ್ರವಣಬೆಳಗೊಳ ಪಟ್ಟಣಕ್ಕೆ ಹತ್ತಿರ ಇರುವುದರಿಂದ ಮಾಂಸ ಮಾರಾಟದಾರರಿಗೆ ಮತ್ತು ಖರೀದಿದಾರರಿಗೆ ಹೆಚ್ಚಿನ ಅನುಕೂಲವಾಗಲಿದೆ ಎಂದರು.

ಈ ಮಳಿಗೆಗಳನ್ನು ನಿರ್ಮಿಸಲು ಸರ್ಕಾರದಿಂದ ವಿಶೇಷ ಅನುದಾನ ಒದಗಿಸುವ ಬಗ್ಗೆ ಸಚಿವ ಡಿ.ಸುಧಾಕರ್, ಮಹಾವೀರ ಜಯಂತಿ ಕಾರ್ಯಕ್ರಮದಲ್ಲಿ ಒಪ್ಪಿದ್ದು, ತುರ್ತು ಅಂದಾಜು ವೆಚ್ಚದ ಪಟ್ಟಿ, ನಕಾಶೆ ತಯಾರಿಸಲು ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚಿಸಿದರು.

ಯಾರಿಗೂ ತೊಂದರೆ ಆಗದಂತೆ ಹಾಲಿ ಮಾರಾಟ ಮಾಡುತ್ತಿರುವವರ ವಿವರವನ್ನು ದಾಖಲಿಸಲು ಸ್ಥಳೀಯ ಗ್ರಾಮ ಪಂಚಾಯಿತಿ ಅಧಿಕಾರಿಗಳಿಗೆ ಸೂಚಿಸಿದರು.

ಶ್ರವಣಬೆಳಗೊಳ ಅಹಿಂಸಾ ಕ್ಷೇತ್ರವಾಗಿದ್ದು, ಸಾವಿರಾರು ತ್ಯಾಗಿಗಳು, ಸಸ್ಯಾಹಾರಿಗಳು, ವೈರಾಗ್ಯ ಮೂರ್ತಿ ಬಾಹುಬಲಿ ದರ್ಶನಕ್ಕೆ ಬರುತ್ತಾರೆ. ಈ ಸಂದರ್ಭದಲ್ಲಿ ಪ್ರವೇಶ ದ್ವಾರದಲ್ಲಿಯೇ ಎಗ್ಗಿಲ್ಲದೇ ಮಾಂಸದ ಅಂಗಡಿಗಳಿಂದ ಬೇಸತ್ತ ತ್ಯಾಗಿಗಳು ಉಪವಾಸ ಮಾಡುತ್ತ ನೋವಿನಿಂದ ತೆರಳುತ್ತಾರೆ ಎಂದು ಕ್ಷೇತ್ರದ ಪೀಠಾಧಿಪತಿ ಸ್ವಸ್ತಿಶ್ರೀ ಅಭಿನವ ಚಾರುಕೀರ್ತಿ ಸ್ವಾಮೀಜಿ, ರಾಜ್ಯಪಾಲರ ಎದುರೇ ಹೇಳಿದ್ದರು.

ಅಹಿಂಸಾ ಕ್ಷೇತ್ರವಾಗಿರುವ ಶ್ರವಣಬೆಳಗೊಳದ ಪ್ರವೇಶ ದ್ವಾರದಲ್ಲಿ ಇನ್ನು ಮುಂದೆ ಮಾಂಸ ಮಾರಾಟ ಮಾಡದಂತೆ ಸರ್ಕಾರದ ಗಮನಕ್ಕೆ ತರುವುದಾಗಿ ಈಚೆಗೆ ಭೇಟಿ ನೀಡಿದ್ದ ರಾಜ್ಯಪಾಲ ಥಾವರ್‌ಚಂದ್ ಗೆಹಲೋತ್‌ ಭರವಸೆ ನೀಡಿದ್ದರು. ಅಹಿಂಸಾ ಧರ್ಮ ಪಾಲಕರಿಗೆ ತೊಂದರೆ ಆಗದಂತೆ ಈಗಾಗಲೇ ಶ್ರೀಗಳು, ಶಾಸಕರು, ಜಿಲ್ಲಾಡಳಿತ ಮತ್ತು ಸರ್ಕಾರದ ಗಮನಕ್ಕೆ ಲಿಖಿತ ರೂಪದಲ್ಲಿ ತರಲಾಗಿದೆ ಎಂದರು.

ಗ್ರಾಮ ಪಂಚಾಯಿತಿ ಅಧ್ಯಕ್ಷ ಅಫ್ತಾಬ್ ಪಾಷಾ, ಉಪಾಧ್ಯಕ್ಷೆ ಕಾವ್ಯಾ ಕಿರಣ್, ಗ್ರಾಮ ಪಂಚಾಯಿತಿ ಸದಸ್ಯರಾದ ಎಸ್.ಟಿ. ಮಹೇಶ್, ಎಸ್.ಬಿ. ಯಶಸ್, ಅನುರಾಧಾ ಲೋಹಿತ್, ರಾಧಾ ಬಸವರಾಜು, ಯಶೋದಾ ಲೋಕೇಶ್, ಕೃಷ್ಣಮೂರ್ತಿ, ತಹಶೀಲ್ದಾರ್ ನವೀನ್ ಕುಮಾರ್, ಸಹಾಯಕ ಕಾರ್ಯ ನಿರ್ವಹಣಾಧಿಕಾರಿ ಗಿರೀಶ್, ಕಂದಾಯ ನಿರೀಕ್ಷಕ ಲೋಕೇಶ್, ಪಿಡಿಒ ಬಸವರಾಜು, ಗ್ರಾಮ ಲೆಕ್ಕಾಧಿಕಾರಿಗಳಾದ ವಿಜಯಕುಮಾರ, ಸುಧೀರ್, ನವೀನ್ ಕುಮಾರ್, ಕಾರ್ಯದರ್ಶಿ ಅನಿತಾ, ಎಸ್‌ಡಿಜೆಎಂಐ ಆಡಳಿತ ಮಂಡಳಿಯ ಕಾರ್ಯದರ್ಶಿ ಎಸ್.ಪಿ. ಮಹೇಶ್, ಬಾಬುರಾವ್, ಮುಖಂಡರಾದ ಲೋಕೇಶ್, ರೋಹಿತ್, ರವಿ ನಂಜಪ್ಪ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.