
ಶ್ರವಣಬೆಳಗೊಳ: ಹೋಬಳಿಯ ಬೆಕ್ಕ ಗ್ರಾಮ ಪಂಚಾಯಿತಿ ವ್ಯಾಪ್ತಿಯ ರಾಚೇನಹಳ್ಳಿಯಲ್ಲಿ ಬಸವೇಶ್ವರ ಮಂದಿರದೊಳಗೆ ಬಸವ ಮೂರ್ತಿಯ ಸನ್ನಿಧಾನದಲ್ಲಿ ನಾಗಸರ್ಪ ವಾಸಿಸುವ ಉದ್ಬವ ಹುತ್ತ ಇದ್ದು, ಕಾರ್ತಿಕ ಮಾಸದಲ್ಲಿ ಹೋರಿ- ರಾಸುಗಳನ್ನು ಪೂಜಿಸುವುದಕ್ಕೆ ಈಗಲೂ ಈ ಕ್ಷೇತ್ರ ಪ್ರಸಿದ್ಧಿಯಾಗಿದೆ.
ಈ ಗ್ರಾಮವು ಹೆಚ್ಚಾಗಿ ಕೃಷಿಯನ್ನು ಅವಲಂಬಿಸಿದ್ದು, 150ಕ್ಕೂ ಹೆಚ್ಚಿನ ಕುಟುಂಬಗಳು ವ್ಯವಸಾಯದಲ್ಲಿ ನಿರತರಾಗಿವೆ. ಹತ್ತಾರು ತಲೆಮಾರಿನಿಂದ ಗ್ರಾಮದ ಮಧ್ಯದಲ್ಲಿ ಕಲ್ಲು ಚಪ್ಪಡಿ ಮಣ್ಣಿನಿಂದ ಕೂಡಿದ ಬಸವೇಶ್ವರರ ದೇವಸ್ಥಾನವಿತ್ತು. ಗರ್ಭಗುಡಿಯಲ್ಲಿ ಬಸವಮೂರ್ತಿ ಪಶ್ಚಿಮಕ್ಕೆ ಮುಖ ಮಾಡಿದರೆ ಅದರ ವಿರುದ್ಧ ಎಡಭಾಗದಲ್ಲಿ ಉದ್ಭವ ಹುತ್ತ ಇದೆ. ಅದರಲ್ಲಿ ನಾಗಸರ್ಪ ವಾಸವಾಗಿದ್ದು, ಜಾನುವಾರು, ಮನುಷ್ಯರಿಗಾಗಲಿ ಎಳ್ಳಷ್ಟೂ ತೊಂದರೆ ಕೊಡದೇ ತನ್ನ ಪಾಡಿಗೆ ವಿಹರಿಸುತ್ತಾ ಇದೆ ಎನ್ನುತ್ತಾರೆ ಇಲ್ಲಿಯ ಗ್ರಾಮಸ್ಥರು.
ಈ ನಾಗಸರ್ಪವು ಬಸವೇಶ್ವರ ದೇವಸ್ಥಾನದಿಂದ ಗ್ರಾಮದ ಮಧ್ಯದಲ್ಲಿರುವ ಕೋಟೆ ಮಾರಮ್ಮ ಗುಡಿಯವರೆಗೆ ಹೋಗಿ ಬರುತ್ತಿತ್ತು. ಅಂದಿನಿಂದ ಇಂದಿನವರೆಗೂ ತನ್ನ ಪಾಡಿಗೆ ಇದೆ ಎಂದು ಕಣ್ಣಾರೆ ಕಂಡಿರುವುದನ್ನು ಗ್ರಾಮದವರಾದ ಶಿವೇಗೌಡ, ಬಾಬು, ರವೀಂದ್ರಕುಮಾರ್, ಯಜಮಾನ್ ಲಿಂಗಪ್ಪ ಹೇಳುತ್ತಾರೆ.
‘ಇಡೀ ಗ್ರಾಮವೇ ಕಾರ್ತಿಕ ಶಿವರಾತ್ರಿ ಹಬ್ಬವನ್ನು ಅತ್ಯಂತ ಸಡಗರ ಸಂಭ್ರಮದಿಂದ ಆಚರಿಸುವ ಪರಿಪಾಠವಿದ್ದು, ಕಡೆಯ ಕಾರ್ತಿಕ ಸೋಮವಾರದಂದು ಗ್ರಾಮದ ಎಲ್ಲ ಹೋರಿ, ರಾಸುಗಳನ್ನು ಮೈತೊಳೆದು ಅಲಂಕರಿಸಿಕೊಂಡು ಬಸವೇಶ್ವರರ ಸನ್ನಿಧಿಯಲ್ಲಿ ಸಾಲಾಗಿ ನಿಲ್ಲಿಸಲಾಗುತ್ತದೆ. ಪೂಜೆ ಮಾಡಿ ದೇವಾಲಯದ ಪ್ರದಕ್ಷಿಣೆ ಹಾಕಿಸಿ, ಪ್ರಸಾದ ತಿನ್ನಿಸಿ, ಜನತೆಗೂ ಸಿಹಿ ವಿತರಿಸಿ ಸಂಭ್ರಮಿಸಲಾಗುತ್ತದೆ’ ಎನ್ನುತ್ತಾರೆ ಪುಟ್ಟಸ್ವಾಮಯ್ಯ. ನಿಂಗಪ್ಪ, ಯಶೋಧಾ ಮಣಿ, ಲಲಿತಾ, ಶಾಂತಮ್ಮ.
‘ನಮ್ಮೂರು ಕಾಪಾಡಿದ ಬಸವೇಶ್ವರ ದೇವಾಲಯದಲ್ಲಿರುವ ಬಸವಮೂರ್ತಿ ಮತ್ತು ಉದ್ಭವ ಹುತ್ತದಲ್ಲಿ ನಾಗ ವಾಸಿಸುವ ಸದ್ಥಳವು ಶಿಥಿಲಗೊಂಡಿದ್ದರಿಂದ ಅದಕ್ಕೆ ನೂತನವಾಗಿ ಶಿಲಾಮಯ ದೇವಾಲಯವನ್ನು ನಿರ್ಮಿಸಲು ಸಂಕಲ್ಪ ಮಾಡಲಾಗಿತ್ತು. ಇಡೀ ಗ್ರಾಮ ಸುತ್ತಲಿನ ಜನರು ಹಾಗೂ ದಾನಿಗಳಿಂದ ಸಂಗ್ರಹಿಸಿದ ಹಣದಿಂದ ದೇವಾಲಯ ನಿರ್ಮಿಸಲಾಗಿದೆ’ ಎನ್ನುತ್ತಾರೆ ಗ್ರಾಮಸ್ಥರು.
ಗ್ರಾಮದಲ್ಲಿ ಅಶ್ವತ್ಥ ಕಟ್ಟೆ ಇದ್ದು, ನ್ಯಾಯ ಪಂಚಾಯಿತಿಯನ್ನು ನ್ಯಾಯಾಲಯಕ್ಕೆ ಹೋಗದೇ ನಮ್ಮಲ್ಲಿಯೇ ಪರಿಹರಿಸಿಕೊಳ್ಳುವ ವಾಡಿಕೆ ಇತ್ತು ಎಂದು ಹೇಳುತ್ತಾರೆ ಇಲ್ಲಿನ ಹಿರಿಯರು. ಮಾರಮ್ಮ, ಕಾಳಿಕಾ ದೇವಿ, ಚಾಮುಂಡೇಶ್ವರಿ ಮತ್ತು ಗಣಪತಿ ದೇವಸ್ಥಾನಗಳಿದ್ದು, ಭಕ್ತಿಯಿಂದ ಇಲ್ಲಿನ ಜನತೆ ನಡೆದುಕೊಳ್ಳುತ್ತಾರೆ.
ಮೂರುವರೆ ಎಕರೆ ಜಮೀನಿದ್ದು, ಅದರಿಂದ ಬರುವ ಆದಾಯವನ್ನು ಪೂಜೆಯ ನಿರ್ವಹಣೆ ಮತ್ತು ಅರ್ಚಕರಿಗೆ ಗೌರವ ಸಂಭಾವನೆ ಕೊಡಲಾಗುತ್ತಿದೆ ಎನ್ನುತ್ತಾರೆ ಶಿವೇಗೌಡ.
ಸುಂದರ ದೇವಾಲಯ
ಸುಂದರವಾಗಿ ಕಂಗೊಳಿಸುವ ಶಿಲಾಮಯ ಗರ್ಭಗುಡಿಯು 11X9 ಅಡಿ ಇದ್ದು ಸುತ್ತಳತೆಯು 23X21 ಅಡಿ ಇದೆ. ಸುಮಾರು ₹75 ಲಕ್ಷ ವೆಚ್ಚದಲ್ಲಿ ನಿರ್ಮಿಸಿದ ದೇವಾಲಯದ ಲೋಕಾರ್ಪಣೆಯನ್ನು ಶ್ರವಣಬೆಳಗೊಳ ಜೈನ ಮಠದ ಪೀಠಾಧಿಪತಿ ಸ್ವಸ್ತಿಶ್ರೀ ಅಭಿನವ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿ ಇನ್ನಿತರೆ ಗಣ್ಯರ ಉಪ ಸ್ಥಿತಿಯಲ್ಲಿ ನೆರವೇರಿಸಲಾಗಿತ್ತು ಎಂದು ಶಿವೇಗೌಡ ಟೈಲರ್ ಆನಂದ್ ಹೇಳುತ್ತಾರೆ. ಗರ್ಭಗುಡಿಯ ಒಳಗೆ ಬಸವಮೂರ್ತಿ ಇದ್ದರೆ ಮೇಲ್ಭಾಗದಲ್ಲಿ ಬಸವ ವಿರಾಜಮಾನರಾಗಿರುವ ದೃಶ್ಯ ನಯನ ಮನೋಹರವಾಗಿದೆ. 4 ಮೂಲೆಗಳಲ್ಲಿ ಬಸವ ಮೂರ್ತಿಯನ್ನು ಪ್ರತಿಷ್ಠಾಪಿಸಿದ್ದಾರೆ. ಪ್ರವೇಶ ದ್ವಾರದ ಮೇಲ್ಭಾಗದಲ್ಲಿ ಶಿವ ಪಾರ್ವತಿ ಲಿಂಗ ಸುಬ್ರಹ್ಮಣ್ಯ ಗಣಪತಿ ಪ್ರತಿಷ್ಠಾಪಿಸಿ ನಿತ್ಯ ಪೂಜೆ ಹಬ್ಬಗಳಲ್ಲಿ ವಿಶೇಷ ಪೂಜೆಗಳಿಗೂ ವ್ಯವಸ್ಥೆ ಕಲ್ಪಿಸಿದ್ದಾರೆ ಎನ್ನುತ್ತಾರೆ ಅರ್ಚಕ ಅಶೋಕ್.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.