ADVERTISEMENT

ಹಾಸನ: ಶುಂಠಿಗೂ ಅಂಟಿದ ಬೆಲೆ ಕುಸಿತದ ರೋಗ

​ಪ್ರಜಾವಾಣಿ ವಾರ್ತೆ
Published 3 ಫೆಬ್ರುವರಿ 2025, 4:25 IST
Last Updated 3 ಫೆಬ್ರುವರಿ 2025, 4:25 IST
<div class="paragraphs"><p>ಕಾರ್ಮಿಕರು ಶುಂಠಿಯನ್ನು ಗ್ರೇಡ್ ಮಾಡುತ್ತಿರುವುದು.</p></div>

ಕಾರ್ಮಿಕರು ಶುಂಠಿಯನ್ನು ಗ್ರೇಡ್ ಮಾಡುತ್ತಿರುವುದು.

   

ಹಾಸನ: ಪ್ರತಿಬಾರಿ ಅತಿವೃಷ್ಟಿ, ಅನಾವೃಷ್ಟಿಯಿಂದ ಕಂಗೆಟ್ಟಿರುವ ಬೆಳೆಗಾರರು, ಒಂದಿಲ್ಲೊಂದು ಸಮಸ್ಯೆ ಎದುರಿಸುವಂತಾಗಿದೆ. ಶುಂಠಿ ಮೂಲಕ ತಮ್ಮ ಆರ್ಥಿಕ ಸ್ಥಿತಿ ಸುಧಾರಿಸಿಕೊಳ್ಳಲು ಮುಂದಾಗಿದ್ದ ಬೆಳೆಗಾರರೂ, ಬೆಲೆ ಕುಸಿತದಿಂದಾಗಿ ಕೈಸುಟ್ಟುಕೊಳ್ಳುವಂತಾಗಿದೆ.

ಲಕ್ಷಾಂತರ ರೂಪಾಯಿ ವ್ಯಯಿಸಿ ಬೆಳೆದಿದ್ದ ಹಸಿ ಶುಂಠಿಗೆ ಬೆಲೆಯು ದಿನದಿಂದ ದಿನಕ್ಕೆ ಕುಸಿಯುತ್ತಿರುವುದರಿಂದ ಬೆಳೆಗಾರರು ಕಂಗಾಲಾಗಿದ್ದಾರೆ.

ADVERTISEMENT

20023-24 ರಲ್ಲಿ ಹಸಿ ಶುಂಠಿಗೆ ಉತ್ತಮ ಬೆಲೆ ದೊರೆತಿದ್ದು, ಸಾವಿರ ರೂಪಾಯಿಗಳಲ್ಲಿ ಸಿಗುತ್ತಿದ್ದ ಲಾಭವು ಲಕ್ಷಗಳಲ್ಲಿ ಸಿಕ್ಕಿದ್ದರಿಂದ ಪ್ರೇರಿತರಾದ ಬೆಳೆಗಾರರು, ಜಿಲ್ಲೆಯ ಕೊಣನೂರು, ರಾಮನಾಥಪುರ, ಆಲೂರು, ಅರಕಲಗೂಡು ತಾಲ್ಲೂಕಿನಲ್ಲಿ ವ್ಯಾಪಕವಾಗಿ ಶುಂಠಿ ಕೃಷಿ ಆರಂಭಿಸಿದರು. ಈಗ ಅದುವೇ ಬೆಳೆಗಾರರಿಗೆ ಶಾಪವಾಗಿ ಪರಿಣಮಿಸಿದೆ.

ಉತ್ತಮ ಆದಾಯದ ನಿರೀಕ್ಷೆಯಿ ಇಟ್ಟುಕೊಂಡು ಹಿಂದಿಗಿಂತಲೂ ಹೆಚ್ಚಿನ ವಿಸ್ತೀರ್ಣದಲ್ಲಿ ಶುಂಠಿ ಬೆಳೆಯಲು ಮುಂದಾದ ಬೆಳೆಗಾರರನ್ನು, ಈ ವರ್ಷದ ಬೆಲೆ ಕುಸಿತವು ಇನ್ನಿಲ್ಲದಂತೆ ಕಾಡಿದೆ.

ಶುಂಠಿ ಕಟಾವು ಪ್ರಾರಂಭವಾದ 2024 ರ ಅಗಸ್ಟ್‌ನಲ್ಲಿ 60 ಕೆ.ಜಿ. ಶುಂಠಿ ಮೂಟೆಗೆ ₹1600 ಬೆಲೆ ಇತ್ತು. ಅಕ್ಟೋಬರ್‌ನಲ್ಲಿ ₹1,900 ತಲುಪಿ ಸ್ವಲ್ಪ ಆಸೆ ಹುಟ್ಟಿಸಿತ್ತು. ಆದರೆ, ಅಂದಿನಿಂದ ಬೆಲೆ ಇಳಿಮುಖವಾಗಿದ್ದು, ಶುಂಠಿ ಬೆಳೆಗಾರರು ಲಕ್ಷಗಟ್ಟಲೆ ನಷ್ಟ ಅನುಭವಿಸುವಂತಾಗಿದೆ.

ಕಳೆದ ವರ್ಷ ಶುಂಠಿ ಕಟಾವು ಪ್ರಾರಂಭವಾದ ದಿನದಲ್ಲಿ ಪ್ರತಿ 60 ಕೆ.ಜಿ. ಮೂಟೆಗೆ ಬೆಲೆಯು ₹3,500 ದಿಂದ ಪ್ರಾರಂಭವಾಗಿ ಗರಿಷ್ಠ ₹6ಸಾವಿರ ತಲುಪಿತ್ತು. ಸದ್ಯ ಪ್ರತಿ 60 ಕೆ.ಜಿ. ಮೂಟೆಗೆ ₹700 ರಿಂದ ₹1ಸಾವಿರ ದರವಿದೆ.

ಕಳೆದ ವರ್ಷ ಪ್ರತಿ ಮೂಟೆ ಬೀಜದ ಶುಂಠಿಗೆ ₹6,200 ರಿಂದ ₹6,500ರವರೆಗೆ ಬೆಲೆ ಇತ್ತು. ಈ ವರ್ಷ ದರ ಕುಸಿತ ಹಿನ್ನೆಲೆಯಲ್ಲಿ ಬೀಜದ ಶುಂಠಿ ಬೆಲೆ ₹1,700 ದಿಂದ ₹1,800 ಕ್ಕೆ ಕುಸಿದಿದೆ.

ಒಂದು ಎಕರೆ ವಿಸ್ತೀರ್ಣದಲ್ಲಿ 400 ಚೀಲ ಶುಂಠಿ ಇಳುವರಿ ಬಂದರೂ, ಇಂದಿನ ದರದಲ್ಲಿ ಒಟ್ಟಾರೆ ₹4 ಲಕ್ಷ ದೊರಕುತ್ತಿದ್ದು, ₹6ಲಕ್ಷದಿಂದ ರಿಂದ ₹6.5 ಲಕ್ಷ ಖರ್ಚಾಗಿದೆ. ಎಕರೆಯೊಂದರಲ್ಲಿ ಶುಂಠಿ ಬೆಳೆದ ಬೆಳೆಗಾರರಿಗೆ ₹2 ಲಕ್ಷಕ್ಕೂ ಹೆಚ್ಚು ನಷ್ಟವಾಗಿದೆ.

ಕಳೆದ ವರ್ಷ ಶುಂಠಿಗೆ ಹೆಚ್ಚಿನ ಬೆಲೆ ದಕ್ಕಿದ್ದರಿಂದ ಉತ್ತೇಜಿತರಾದ ಅನೇಕರು ಮೊದಲ ಬಾರಿಗೆ ಶುಂಠಿ ಬೆಳೆಯಲು ಮುಂದಾಗಿದ್ದು, ಅವರಿಗೆ ಲಕ್ಷಾಂತರ ನಷ್ಟವಾಗಿದ್ದು, ಶುಂಠಿಯ ಸಹವಾಸವೇ ಬೇಡ ಎನ್ನುವಂತಾಗಿದೆ.

ಹಸಿ ಶುಂಠಿ ಬೆಲೆಯು ಇಳಿಮುಖವಾಗಿರುವುದರಿಂದ ಈ ವರ್ಷ ಶುಂಠಿ ಕೃಷಿ ಕೈಗೊಳ್ಳಲು ಬೆಳೆಗಾರರು ಆಸಕ್ತಿ ತೋರಿಲ್ಲ. ಅನೇಕ ವರ್ಷಗಳಿಂದ ಬೆಳೆಯುತ್ತಿರುವ ಕೆಲವೇ ಕೆಲವರು ಜಮೀನನ್ನು ಉತ್ತಿ, ಹದ ಮಾಡಲು ಪ್ರಾರಂಭಿಸಿದ್ದಾರೆ. ಕೋಳಿಗೊಬ್ಬರಕ್ಕೂ ಕಳೆದ ವರ್ಷವಿದ್ದ ಬೇಡಿಕೆ ಕುಗ್ಗಿದೆ. ಕಾರ್ಮಿಕರಿಗೆ ನೀಡುತ್ತಿದ್ದ ಕೂಲಿ ಇಳಿಯದೇ ದುಬಾರಿ ಎನಿಸಿದೆ.

ಕಳೆದ ವರ್ಷ ಫೆಬ್ರುವರಿ ಸಮಯಕ್ಕೆ ಬಹುತೇಕ ಶುಂಠಿ ಕಿತ್ತು ಮಾರಾಟ ಮಾಡಲಾಗಿತ್ತು. ಈ ವರ್ಷ ಬೆಲೆ ಏರಿಕೆಯಾಗಬಹುದು ಎಂಬ ನಿರೀಕ್ಷೆಯಲ್ಲಿ ಅದೆಷ್ಟೋ ಬೆಳೆಗಾರರು ಶುಂಠಿಯನ್ನು ಕೀಳದೆ ಜಮೀನಿನಲ್ಲೇ ಬಿಟ್ಟಿದ್ದಾರೆ. ಬಿರುಬಿಸಿಲಿನಲ್ಲಿ ಅದಕ್ಕೆ ನೀರುಣಿಸಲು ಸುಸ್ತಾಗುತ್ತಿದ್ದಾರೆ.

ನಿರ್ವಹಣೆ: ಚಿದಂಬರಪ್ರಸಾದ, ಪೂರಕ ಮಾಹಿತಿ: ಗಂಗೇಶ್‌ ಬಿ.ಪಿ., ಎಂ.ಪಿ. ಹರೀಶ್‌.

ಕೊಣನೂರು ಸಮೀಪದ ಶುಂಠಿ ಶುದ್ಧೀಕರಿಸುವ ಯಂತ್ರದ ಬಳಿ ಟ್ರ್ಯಾಕ್ಟರ್‌ಗಳು ಶುಂಠಿ ತುಂಬಿಕೊಂಡು ನಿಂತಿರುವುದು.

ಬೇರೆ ರಾಜ್ಯಗಳಲ್ಲಿ ಹೆಚ್ಚು ಇಳುವರಿ

ಕೇರಳ, ಮಹಾರಾಷ್ಟದ ಸತಾರ, ಔರಂಗಾಬಾದ್, ಆಸ್ಸಾಂ ಮತ್ತು ಛತ್ತಿಸಗಢ ರಾಜ್ಯಗಳಲ್ಲಿ ಶುಂಠಿ ಬೆಳೆಯಲು ಪ್ರಾರಂಭಿಸಿದ್ದು, ಅಲ್ಲಿ ಕರ್ನಾಟಕಕ್ಕಿಂತ ಉತ್ತಮ ಇಳುವರಿ ದೊರೆಯುತ್ತಿದೆ. ಹಾಗಾಗಿ ಕರ್ನಾಟಕದಲ್ಲಿ ಶುಂಠಿ ಬೆಲೆಯು ಕುಸಿದಿದೆ.

ಸತೀಶ್ ಕೆ.ಟಿ., ಶುಂಠಿ ಬೆಳೆಗಾರ, ಕಾರ್ಗಲ್

ಲಕ್ಷಾಂತರ ರೂಪಾಯಿ ನಷ್ಟ

ಹಸಿ ಶುಂಠಿಯ ಬೆಲೆ ಕುಸಿತದಿಂದ ಬೆಳೆಗಾರರೂ ಲಕ್ಷಾಂತರ ರೂಪಾಯಿ ನಷ್ಟ ಅನುಭವಿಸಿದ್ದು, ಅನೇಕ ವರ್ಷಗಳಿಂದ ಶುಂಠಿ ಕೃಷಿ ಮಾಡುತ್ತಿರುವ ಬೆಳೆಗಾರರೂ ಮುಗ್ಗರಿಸುವಂತಾಗಿದೆ.

ಮುರುಳೀಧರ್ ಎಚ್.ಟಿ., ಶುಂಠಿ ಬೆಳೆಗಾರ, ಹೊಸಗುತ್ತಿ

ಖರೀದಿಸಲು ಹಿಂದೇಟು

ಕಳೆದ ವರ್ಷ ಶುಂಠಿ ಮಾರಾಟ ಮಾಡಲು ವ್ಯಾಪಾರಿಗಳು ಜಮೀನಿನ ಬಳಿ ಬರುತ್ತಿದ್ದರು. ಈ ವರ್ಷ ಬೆಲೆ ಇಳಿಕೆಯಿಂದಾಗಿ ಬೆಳೆಗಾರರೆ ವ್ಯಾಪಾರಿಗಳನ್ನು ಹುಡುಕಿಕೊಂಡು ಹೋದರೂ ಕೊಳ್ಳಲು ಹಿಂದೆ ಮುಂದೆ ನೋಡುತ್ತಿದ್ದಾರೆ.

ಮಂಜು, ಶುಂಠಿ ಬೆಳೆಗಾರ, ಸಿದ್ದಾಪುರ

ಬೆಳೆಯದಿರಲು ತೀರ್ಮಾನ

10 ವರ್ಷಗಳಿಂದ ಶುಂಠಿ ಬೆಳೆಯುತ್ತಿದ್ದು, 2 ವರ್ಷ ಮಾತ್ರ ಲಾಭ ಬಂತು. ಐದು ವರ್ಷ ಖರ್ಚಾದ ಹಣ ಬಂತು. ಈ ವರ್ಷ ಸಂಪೂರ್ಣ ರೋಗ ತಗುಲಿದ್ದು, ಖರ್ಚು ಮಾಡಿದ್ದ ಹಣದಲ್ಲಿ ಶೇ 30 ರಷ್ಟು ಮಾತ್ರ ವಾಪಸ್‌ ಬಂತು. ಜೀವನದಲ್ಲಿ ಶುಂಠಿ ಬೆಳೆಯಬಾರದು ಎಂದು ತೀರ್ಮಾನಿಸಿದ್ದೇನೆ.

ಬಿ. ಸಿ. ವೇದಮೂರ್ತಿ, ಕೃಷಿಕ, ಭೈರಾಪುರ

ಶುಂಠಿ ಸಹವಾಸವೇ ಬೇಡ

4 ವರ್ಷಗಳಿಂದ ಬೆಳೆಯುತ್ತಿದ್ದು, ಕಳೆದ ವರ್ಷ ಲಾಭ ದೊರಕಿತು. ಈ ವರ್ಷ ದುಪ್ಪಟ್ಟು ಬೆಳೆ ನಾಟಿ ಮಾಡಿದೆ. ಬೆಳೆ ಸಂಪೂರ್ಣ ರೋಗ ತಗುಲಿ, ನಷ್ಟ ಅನುಭವಿಸಬೇಕಾಗಿದೆ. ಶುಂಠಿ ಸಹವಾಸ ಬೇಡವೇ ಬೇಡ.

ಶಿವನಂಜೇಗೌಡ, ಕೃಷಿಕ, ಮರಸು ಗ್ರಾಮ

ಹೊಸರೋಗದ ತಲೆನೋವು

ಶುಂಠಿಯ ಬೆಲೆ ಕುಸಿದರೂ ಕೂಲಿಯ ದರ ಇಳಿಕೆಯಾಗಿಲ್ಲ. ಕಳೆದ ವರ್ಷದಿಂದ ಶುಂಠಿಗೆ ಹೊಸದಾಗಿ ತಗುಲುತ್ತಿರುವ ಕೆಂಪು ಕೊಳೆ ವೈರಸ್ ಮತ್ತಷ್ಟು ಭಯ ತಂದಿದೆ. ಈ ರೋಗ ತಗುಲಿದ 3–4 ದಿನಗಳಲ್ಲೆ ಕಾಂಡ ಒಣಗಿ ಗಿಡವೇ ಇಲ್ಲದಂತಾಗುತ್ತದೆ.

ಮನು, ಶುಂಠಿ ಬೆಳೆಗಾರ, ಹೊಡೆನೂರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.