ಹಾಸನ: ಮುಖ್ಯಮಂತ್ರಿ ಸಿದ್ದರಾಮಯ್ಯ ಮಂಡಿಸಿದ ರಾಜ್ಯ ಬಜೆಟ್ ಜನವಿರೋಧಿ, ದಲಿತ ವಿರೋಧಿ ಆಗಿದೆ ಎಂದು ಆರೋಪಿಸಿ ಬಿಜೆಪಿ ಜಿಲ್ಲಾ ಘಟಕದ ಸದಸ್ಯರು ಹಾಗೂ ಮುಖಂಡರು ಶನಿವಾರ ನಗರದಲ್ಲಿ ಪ್ರತಿಭಟನೆ ನಡೆಸಿದರು.
ನಗರದ ಹೇಮಾವತಿ ಪ್ರತಿಮೆ ಎದುರು ಸಂಘಟಿತರಾದ ಪ್ರತಿಭಟನಕಾರರು. ನಂತರ ಟ್ರ್ಯಾಕ್ಟರ್‌ನಲ್ಲಿ ಎನ್.ಆರ್. ವೃತ್ತದ ಮೂಲಕ ಜಿಲ್ಲಾಧಿಕಾರಿ ಕಚೇರಿವರೆಗೂ ಮೆರವಣಿಗೆಯಲ್ಲಿ ಸಾಗಿದರು. ರಾಜ್ಯ ಕಾಂಗ್ರೆಸ್ ಸರ್ಕಾರದ ದಲಿತ ವಿರೋಧಿ, ಗ್ಯಾರಂಟಿ ಹೆಸರಲ್ಲಿ ಜನರಿಗೆ ಮೋಸ ಸೇರಿದಂತೆ ಇತರೆ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಕೆಲ ಕಾಲ ಧರಣಿ ನಡೆಸಿದರು.
ಈ ವೇಳೆ ಮಾತನಾಡಿದ ಬಿಜೆಪಿ ಜಿಲ್ಲಾ ಘಟಕದ ಪ್ರಧಾನ ಕಾರ್ಯದರ್ಶಿ ಅಮಿತ್ ಶೆಟ್ಟಿ, ಸಿದ್ದರಾಮಯ್ಯ ಅವರ ಬಜೆಟ್ ಅಭಿವೃದ್ಧಿಗೆ ವಿರುದ್ದವಾಗಿದೆ. ಕೇವಲ ಮುಸ್ಲಿಮರ ಓಲೈಸುವ ಬಜೆಟ್ ಮಂಡಿಸಿದ್ದಾರೆ. ರಾಜ್ಯದ ಅಭಿವೃದ್ಧಿ ಶೂನ್ಯ ಬಜೆಟ್ ಮಂಡಿಸಲಾಗಿದೆ ಎಂದು ದೂರಿದರು.
ಜಿಲ್ಲೆಯಲ್ಲಿನ ಕಾಡಾನೆ ಸಮಸ್ಯೆ, ಹಾಸನ ನಗರದ ರೈಲ್ವೆ ಮೇಲ್ಸೇತುವೆ ಸೇರಿದಂತೆ ಹಲವು ಪ್ರಮುಖ ಸಮಸ್ಯೆಗಳ ಪರಿಹಾರಕ್ಕೆ ಹಣ ಬಿಡುಗಡೆ ಮಾಡಬಹುದು ಎಂಬ ನಿರೀಕ್ಷೆ ಇತ್ತು. ಆದರೆ ನಿರೀಕ್ಷೆಯಷ್ಟು ಅನುದಾನ ಬಿಡುಗಡೆ ಮಾಡಿಲ್ಲ. ರೈತರ, ದಲಿತರ ಅಭಿವೃದ್ಧಿಯ ಎಸ್‌ಸಿಎಸ್‌ಪಿ, ಟಿಎಸ್‌ಪಿ ಹಣವನ್ನು ಗ್ಯಾರಂಟಿ ಯೋಜನೆಗಳಿಗೆ ಬಳಸಿಕೊಂಡು ಹಿಂದುಳಿದ ಸಮುದಾಯಗಳಿಗೆ ಅನ್ಯಾಯ ಮಾಡಿದೆ ಎಂದು ಆರೋಪಿಸಿದರು.
ರಾಜ್ಯದಲ್ಲಿ ಯಾವುದೇ ಅಭಿವೃದ್ಧಿ ಕೆಲಸ ಆಗುತ್ತಿಲ್ಲ. ರಸ್ತೆ, ಶಾಲಾ-ಕಾಲೇಜು ಕಟ್ಟಡಗಳು ಶಿಥಿಲವಾಗಿವೆ. ಕುಡಿಯುವ ನೀರಿನ ಸಮಸ್ಯೆಯಿಂದ ಜನರು ತೊಂದರೆ ಅನುಭವಿಸುತ್ತಿದ್ದಾರೆ. ಇವುಗಳ ಬಗ್ಗೆ ಕಾಳಜಿ ಇಲ್ಲದೇ ಒಂದು ಸಮುದಾಯ ಓಲೈಸುವ ಹಾಗೂ ಮತ ಬ್ಯಾಂಕ್ ಗುರಿಯಾಗಿಸಿ ಬಜೆಟ್ ಮಂಡಿಸಲಾಗಿದೆ ಎಂದು ಟೀಕಿಸಿದರು.
ಜನಪರ ಸರ್ಕಾರವಾಗಿದ್ದರೆ, ಎಲ್ಲ ಸಮುದಾಯ, ವರ್ಗಗಳ ಜನರಿಗೂ ನ್ಯಾಯ ಒದಗಿಸುವ ಬಜೆಟ್ ಮಂಡಿಸಬೇಕಿತ್ತು. ಆದರೆ ಅಭಿವೃದ್ದಿ ಶೂನ್ಯ ಹಾಗೂ ಜನ ವಿರೋಧಿ ಬಜೆಟ್ ಕೊಟ್ಟಿದ್ದಾರೆ. ಈ ಬಾರಿ ಹಾಸನ ಜಿಲ್ಲೆಯನ್ನು ಸಂಪೂರ್ಣ ಕಡೆಗಣಿಸಲಾಗಿದೆ. ಇದರ ವಿರುದ್ಧ ಮುಂದಿನ ದಿನಗಳಲ್ಲಿ ಜಿಲ್ಲಾ, ತಾಲ್ಲೂಕು ಹಾಗೂ ಗ್ರಾಮೀಣ ಮಟ್ಟದಲ್ಲಿ ಬಿಜೆಪಿಯಿಂದ ಹೋರಾಟ ರೂಪಿಸಿ, ಜನರಲ್ಲಿ ಜಾಗೃತಿ ಮೂಡಿಸಲಾಗುವುದು ಎಂದರು.
ಪ್ರತಿಭಟನೆಯಲ್ಲಿ ನಗರಸಭೆ ಮಾಜಿ ಅಧ್ಯಕ್ಷ ಆರ್.ಮೋಹನ್, ಪ್ರಧಾನ ಕಾರ್ಯದರ್ಶಿ ಗಿರೀಶ್, ಚನ್ನಕೇಶವ, ನಾಗೇಶ್, ಮುಖಂಡರು, ಕಾರ್ಯಕರ್ತರು ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.