ADVERTISEMENT

ಎರಡೂ ಕ್ಷೇತ್ರದಲ್ಲಿ ಬಿಜೆಪಿಗೆ ಗೆಲುವು: ಸಚಿವ ಕೆ.ಗೋಪಾಲಯ್ಯ ವಿಶ್ವಾಸ

​ಪ್ರಜಾವಾಣಿ ವಾರ್ತೆ
Published 1 ನವೆಂಬರ್ 2021, 16:05 IST
Last Updated 1 ನವೆಂಬರ್ 2021, 16:05 IST
ಗೋಪಾಲಯ್ಯ
ಗೋಪಾಲಯ್ಯ   

ಹಾಸನ: ‘ಹಾನಗಲ್‌ ಮತ್ತು ಸಿಂದಗಿ ವಿಧಾನಸಭಾ ಕ್ಷೇತ್ರಗಳ ಉಪ ಚುನಾವಾಣೆಯಲ್ಲಿ ಬಿಜೆಪಿ ಅಭ್ಯರ್ಥಿಗಳೇ ಗೆಲ್ಲಲಿದ್ದಾರೆ’ ಎಂದು ಉಸ್ತುವಾರಿ ಸಚಿವ ಕೆ.ಗೋಪಾಲಯ್ಯ ವಿಶ್ವಾಸ ವ್ಯಕ್ತಪಡಿಸಿದರು.

ನಗರದಲ್ಲಿ ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಬೇಲೂರು ತಾಲ್ಲೂಕಿನ ದ್ವಾರಸಮುದ್ರ
ಮತ್ತು ಇತರ 6 ಕೆರೆಗಳಿಗೆ ಕುಡಿಯುವ ನೀರು ಪೂರೈಸುವ ₹ 125 ಕೋಟಿ ವೆಚ್ಚದ ರಣಘಟ್ಟ ನೀರಾವರಿ
ಯೋಜನೆ ಭೂಮಿಪೂಜೆಗೆ ಮುಖ್ಯಮಂತ್ರಿ ಅವರನ್ನು ಆಹ್ವಾನಿಸಲಾಗಿದೆ. ಶೀಘ್ರದಲ್ಲಿಯೇ ಅವರೊಂದಿಗೆ ಚರ್ಚಿಸಿ ದಿನಾಂಕ ನಿಗದಪಡಿಸಲಾಗುವುದು. ಎಚ್.ಡಿ.ಕುಮಾರಸ್ವಾಮಿ ಬಜೆಟ್‌ನಲ್ಲಿ ನೂರು ಕೋಟಿ ಅನುದಾನ ಘೋಷಣೆ ಮಾಡಿದ್ದರು. ಆದರೆ, ಯಡಿಯೂರಪ್ಪ ಅವರು ಈ ಯೋಜನೆಗೆ ₹ 125 ಕೋಟಿ ಅನುದಾನದ ಜತೆಗೆ ಆಡಳಿತಾತ್ಮಕ ಅನುಮೋದನೆ ನೀಡಿದ್ದರು’ ಎಂದು ಸ್ಪಷ್ಟಪಡಿಸಿದರು.

‘ಪುನೀತ್‌ ರಾಜ್‌ಕುಮಾರ್ ನಿಧನ ಸುದ್ದಿ ತಿಳಿಯುತ್ತಿದ್ದಂತೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಕ್ಷಣ ಆಸ್ಪತ್ರೆಗೆ ಭೇಟಿ ನೀಡಿದರು. ಅಂತಿಮ ಕಾರ್ಯ ಮುಗಿಯುವವರೆಗೂ ಅಲ್ಲಿಯೇ ಇದ್ದು ಎಲ್ಲಾ ವ್ಯವಸ್ಥೆ ನೋಡಿಕೊಂಡಿದ್ದಾರೆ. ರಾಜ್‌ಕುಮಾರ್‌ ಕುಟುಂಬದವರು ಸಹ ಎಲ್ಲಾ ರೀತಿಯ ಸಹಕಾರ ನೀಡಿದರು. ಅಹಿತಕರ ಘಟನೆ ನಡೆಯದಂತೆ ರಾಜ್ಯದ ವಿವಿಧ ಭಾಗಗಳಿಂದ 20 ಸಾವಿರಕ್ಕಿಂತ ಹೆಚ್ಚಿನ ಪೊಲೀಸ್‌ ಸಿಬ್ಬಂದಿ ನಿಯೋಜಿಸಲಾಗಿತ್ತು’ ಎಂದರು.

ADVERTISEMENT

‘ಸರ್ಕಾರಿ ರಜೆ ದಿನಗಳಲ್ಲಿ ಹಾಸನಾಂಬಾ ದೇವಿ ದರ್ಶನಕ್ಕೆ ಬರುವವರ ಸಂಖ್ಯೆ ಹೆಚ್ಚುತ್ತಿದ್ದು, ಎಲ್ಲಾ ಭಕ್ತರಿಗೂ ದರ್ಶನಕ್ಕೆ ಅನುವು ಮಾಡಿಕೊಡಲಾಗುವುದು. ಭಕ್ತರ ಸಂಖ್ಯೆ ಹೆಚ್ಚಿದ್ದರೆ ರಾತ್ರಿ 8 ಗಂಟೆ ಬಳಿಕವೂ ದರ್ಶನಕ್ಕೆ ಅವಕಾಶ ನೀಡುವ ನಿರ್ಧಾರವನ್ನು ಜಿಲ್ಲಾಧಿಕಾರಿ ಕೈಗೊಳ್ಳುವರು’ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ಜಿಲ್ಲಾಧಿಕಾರಿ ಆರ್. ಗಿರೀಶ್, ಜಿಲ್ಲಾ ಪಂಚಾಯಿತಿ ಸಿಇಒ ಬಿ.ಎ. ಪರಮೇಶ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.