ADVERTISEMENT

ಬಿಎಂ ರಸ್ತೆ ಕಟ್ಟಡಗಳ ಒತ್ತುವರಿ ತೆರವು

ಮೂರು ದಿನ ಕಾರ್ಯಾಚರಣೆ ನಡೆಸಲಿರುವ ನಗರಸಭೆ

​ಪ್ರಜಾವಾಣಿ ವಾರ್ತೆ
Published 11 ಜನವರಿ 2019, 13:36 IST
Last Updated 11 ಜನವರಿ 2019, 13:36 IST
ಹಾಸನದ ಬಿ.ಎಂ ರಸ್ತೆಯಲ್ಲಿ ಜೆಸಿಬಿ ಮೂಲಕ ಅಕ್ರಮ ಕಟ್ಟಡಗಳ ಭಾಗವನ್ನು ತೆರವುಗೊಳಿಸಲಾಯಿತು.
ಹಾಸನದ ಬಿ.ಎಂ ರಸ್ತೆಯಲ್ಲಿ ಜೆಸಿಬಿ ಮೂಲಕ ಅಕ್ರಮ ಕಟ್ಟಡಗಳ ಭಾಗವನ್ನು ತೆರವುಗೊಳಿಸಲಾಯಿತು.   

ಹಾಸನ: ನಗರದ ಬಿ.ಎಂ.ರಸ್ತೆಯಲ್ಲಿ ಒತ್ತುವರಿ ಮಾಡಿ ಕಟ್ಟಿದ್ದ ಅಕ್ರಮ ಕಟ್ಟಡಗಳ ತೆರವು ಕಾರ್ಯಾಚರಣೆ ತೀವ್ರ ಹಗ್ಗ, ಜಗ್ಗಾಟದ ನಂತರ ಕೊನೆಗೂ ಚಾಲನೆ ಪಡೆಯಿತು.

ಎನ್‌.ಆರ್.ವೃತ್ತದಿಂದ ಪೃಥ್ವಿ ಚಿತ್ರಮಂದಿರದ ಎದುರಿನ ಜಮುನಾ ಬಾರ್‌ವರೆಗಿನ ರಸ್ತೆ ಮಾರ್ಜಿನ್‌ ಒತ್ತುವರಿ ಮಾಡಿ ನಿರ್ಮಿಸಿರುವ ಎಲ್ಲ ಕಟ್ಟಡಗಳ ತೆರವು ಕಾರ್ಯ ಶುಕ್ರವಾರ ಮಧ್ಯಾಹ್ನ 12 ಗಂಟೆಗೆ ಆರಂಭಗೊಂಡಿತು.

ನಗರಸಭೆ ಮೂರು ತಿಂಗಳ ಹಿಂದೆಯೇ ರಸ್ತೆ ಮಾರ್ಜಿನ್ ಒತ್ತುವರಿ ಮಾಡಿರುವ ಕಟ್ಟಡಗಳನ್ನು ಅಳತೆ ಮಾಡಿ, ತೆರವುಗೊಳ್ಳಬೇಕಿರುವ ಭಾಗವನ್ನು ಗುರುತು ಹಾಕಿತ್ತು. ಆದರೆ, ಯಾರೊಬ್ಬರೂ ಅಕ್ರಮ ತೆರವು ಮಾಡದ ಹಿನ್ನೆಲೆಯಲ್ಲಿ ಪೊಲೀಸ್ ಬಿಗಿ ಭದ್ರತೆಯ ನಡುವೆ ಅಕ್ರಮ ಕಟ್ಟಡ ನೆಲಸಮ ಕಾರ್ಯವನ್ನು ನಗರಸಭೆ ಅಧಿಕಾರಿಗಳು ಆರಂಭಿಸಿದ್ದಾರೆ.

ADVERTISEMENT

ಕೆಲವು ಕಟ್ಟಡ ಮಾಲೀಕರು ಕೋರ್ಟ್‌ ಮೆಟ್ಟಿಲೇರಿದರೂ ಅಲ್ಲಿ ಯಶಸ್ಸು ದೊರಕಿರಲಿಲ್ಲ. ಸಚಿವ ಎಚ್.ಡಿ.ರೇವಣ್ಣ ಪುತ್ರರಿಗೆ ಸೇರಿದ ಮಳಿಗೆ ಸೇರಿದಂತೆ ಒಟ್ಟು 41 ಬಿಲ್ಡಿಂಗ್ ಗಳನ್ನು ನೆಲಸಮ ಮಾಡುವ ಕಾರ್ಯದಲ್ಲಿ ಅಧಿಕಾರಿಗಳು ನಿರತರಾಗಿದ್ದಾರೆ. ಮೊದಲ ದಿನ 15 ಕಟ್ಟಡಗಳನ್ನು ನೆಲಸಮ ಮಾಡಲಾಯಿತು. ಪೊಲೀಸ್‌ ಬಂದೋಬಸ್ತ್‌ನಲ್ಲಿ ಮೂರು ದಿನ ಕಾರ್ಯಾಚರಣೆ ನಡೆಯಲಿದೆ.

ಒಂದಿಬ್ಬರು ನ್ಯಾಯಾಲಯದಿಂದ ತಡೆಯಾಜ್ಞೆ ತರಲಾಗಿದೆ ಎಂದು ಆಕ್ಷೇಪ ಹೊರತು ಪಡಿಸಿದರೆ, ಬಹುತೇಕ ಮಂದಿ ತಮ್ಮ ವಸ್ತುಗಳನ್ನು ತಾವೇ ಬೇರೆ ಕಡೆ ದಾಸ್ತಾನು ಮಾಡುವ ಮೂಲಕ ತೆರವಿಗೆ ಸಹಕಾರ ನೀಡಿದರು.

ಅಂಗಡಿ, ಹೋಟೆಲ್, ಬೈಕ್ ಶೋರೂಂ, ಗ್ರ್ಯಾನೆಟ್‌ ಅಂಗಡಿ ಇತರೆ ವ್ಯಾಪಾರ ಮಳಿಗೆಗಳ ಮಾಲೀಕರು ಹಾಗೂ ಸಿಬ್ಬಂದಿ ತಮ್ಮ ಅಂಗಡಿ ಮುಂದಿನ ಗಾಜು, ನಾಮ ಫಲಕಗಳನ್ನು ತೆರವು ಮಾಡಿದರು.

‘ನಗರಕ್ಕೆ ಸಂಪರ್ಕ ಕಲ್ಪಿಸುವ ಬಿ.ಎಂ ರಸ್ತೆಯಲ್ಲಿ ಅಕ್ರಮ ಕಟ್ಟಡಗಳಿಂದ ಸಂಚಾರಕ್ಕೆ ತೀವ್ರ ತೊಂದರೆಯಾದ ಕಾರಣ ತೆರವು ಮಾಡುವಂತೆ ಹಿಂದೆಯೇ ನೋಟಿಸ್ ನೀಡಲಾಗಿತ್ತು. ಸುಮಾರು 41 ಮಂದಿ ರಸ್ತೆ ಅಂಚಿನಿಂದ 6 ಮೀಟರ್ ವ್ಯಾಪ್ತಿಯ ಸೆಟ್ ಬ್ಯಾಕ್ ಒತ್ತುವರಿ ಮಾಡಿ ಕಟ್ಟಡ ಕಟ್ಟಿದ್ದರು. ಇದರಿಂದ ವಾಹನ ಸಂಚಾರ, ನಾಗರೀಕರು ಮತ್ತು ಪಾರ್ಕಿಂಗ್ ಗೆ ತೊಂದರೆಯಾಗಿತ್ತು. ಒತ್ತುವರಿದಾರರಿಗೆ ನೋಟಿಸ್ ನೀಡಿ ಕಾಲಾವಕಾಶ ಸಹ ನೀಡಲಾಗಿತ್ತು. ಕಾನೂನು ಪ್ರಕಾರವೇ ತೆರವು ಕಾರ್ಯ ಆರಂಭಿಸಲಾಗಿದ್ದು, ಇದು ಹಂತ ಹಂತವಾಗಿ ಮುಂದುವರಿಯಲಿದೆ’ ಎಂದು ನಗರಸಭೆ ಆಯುಕ್ತ ಪರಮೇಶ್‌ ತಿಳಿಸಿದರು.

ಒತ್ತುವರಿದಾರರನ್ನು ಎತ್ತಂಗಡಿ ಮಾಡುವ ಕಾರ್ಯಕ್ಕೆ ಸಾರ್ವಜನಿಕ ವಲಯದಿಂದ ಪ್ರಶಂಸೆ ವ್ಯಕ್ತವಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.