ADVERTISEMENT

ಚನ್ನಪಟ್ಟಣ, ಹುಣಸಿನಕೆರೆಯಲ್ಲಿ ದೋಣಿ ವಿಹಾರ

ಹಣಸಿನಕೆರೆ ಹಬ್ಬದಲ್ಲಿ ಶಾಸಕ ಪ್ರೀತಂ ಜೆ.ಗೌಡ ಭರವಸೆ

​ಪ್ರಜಾವಾಣಿ ವಾರ್ತೆ
Published 10 ಜನವರಿ 2021, 13:27 IST
Last Updated 10 ಜನವರಿ 2021, 13:27 IST
ಹುಣಸಿನಕೆರೆ ಹಬ್ಬ ಅಂಗವಾಗಿ ಆಯೋಜಿಸಿದ್ದ ಚಿತ್ರಕಲಾ ಸ್ಪರ್ಧೆಯಲ್ಲಿ ವಿಜಯ ಶಾಲೆ ವಿದ್ಯಾರ್ಥಿ ವರ್ಷಿತ್‌ ಗೌಡ ಪ್ರಥಮ ಸ್ಥಾನ ಪಡೆದರು. 
ಹುಣಸಿನಕೆರೆ ಹಬ್ಬ ಅಂಗವಾಗಿ ಆಯೋಜಿಸಿದ್ದ ಚಿತ್ರಕಲಾ ಸ್ಪರ್ಧೆಯಲ್ಲಿ ವಿಜಯ ಶಾಲೆ ವಿದ್ಯಾರ್ಥಿ ವರ್ಷಿತ್‌ ಗೌಡ ಪ್ರಥಮ ಸ್ಥಾನ ಪಡೆದರು.    

ಹಾಸನ: ಚನ್ನಪಟ್ಟಣ ಕೆರೆ ಹಾಗೂ ಹುಣಸಿನಕೆರೆಯಲ್ಲಿ ದೋಣಿ ವಿಹಾರ ಆರಂಭಿಸುವ ಯೋಜನೆಗೆ ಸರ್ಕಾರಅನುಮತಿ ನೀಡಿದೆ ಎಂದು ಶಾಸಕ ಪ್ರೀತಂ ಗೌಡ ಹೇಳಿದರು.

ಹಸಿರು ಭೂಮಿ ಪ್ರತಿಷ್ಠಾನದ ಆಶ್ರಯದಲ್ಲಿ ಹುಣಸಿನಕೆರೆ ಸಂರಕ್ಷಣೆ ಹಾಗೂ ಅಭಿವೃದ್ಧಿ ಸಮಿತಿ ನಗರದ ಅಬ್ದುಲ್ ಕಲಾಂ ಪಾರ್ಕ್ ಆವರಣದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ‘ಹುಣಸಿನಕೆರೆ ಹಬ್ಬ’ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಹುಣಸಿನಕೆರೆಯಲ್ಲಿ ಸೈಕಲ್‌ ಟ್ರ‍್ಯಾಕ್‌ ನಿರ್ಮಿಸಲಾಗುವುದು. ದೋಣಿ ವಿಹಾರ ಹಾಗೂ ಸೈಕಲ್ ಟ್ರ್ಯಾಕ್‌ಗೆಟೆಂಡರ್‌ ಪ್ರಕ್ರಿಯೆ ಪೂರ್ಣಗೊಂಡಿದ್ದು, ಕಾಮಗಾರಿ ಶೀಘ್ರ ಆರಂಭವಾಗಲಿದೆ. ಐದು ವರ್ಷಗಳಿಂದ ವಿವಿಧ ಸಂಘ ಸಂಸ್ಥೆಗಳು ಹಾಗೂ ಸಾರ್ವಜನಿಕರ ಸಹಭಾಗಿತ್ವದಲ್ಲಿ ಹಸಿರು ಭೂಮಿ ಪ್ರತಿಷ್ಠಾನ ಹಲವು ಕೆರೆ, ಕಲ್ಯಾಣಿಗಳ ಪುನಶ್ಚೇತನ ಕಾರ್ಯದಲ್ಲಿ ತೊಡಗಿರುವು ಒಳ್ಳೆಯ ಬೆಳವಣಿಗೆ ಎಂದರು.

ADVERTISEMENT

ನಗರದ ಚನ್ನಪಟ್ಟಣ ಕೆರೆ ಅಭಿವೃದ್ಧಿಗೆ ₹144 ಕೋಟಿ ಅನುದಾನ ನೀಡಲಾಗಿತ್ತು. ಬದಲಾದ ರಾಜಕಾರಣಮತ್ತು ಆರ್ಥಿಕ ಪರಿಸ್ಥಿತಿಯಿಂದಾಗಿ ನಗರದ 6 ಕೆರೆಗಳು ಮತ್ತು 9 ಉದ್ಯಾನಗಳ ಅಭಿವೃದ್ಧಿಗೆ ಅನುದಾನ ಹಂಚಿಕೆ ಮಾಡಲಾಗಿದೆ. ಇದರಿಂದ ನಗರ ವ್ಯಾಪ್ತಿಯಲ್ಲಿ ಅಂತರ್ಜಲ ಮಟ್ಟ ಹೆಚ್ಚಾಗಿ ಕೊಳೆವೆ ಬಾವಿಗಳು ಮರುಜೀವ ಪಡೆಯುತ್ತವೆ ಎಂದರು ಹೇಳಿದರು.

ಹಾಸನ ನಗರದಲ್ಲಿ ತಾಪಮಾನ ಕಡಿಮೆ ಮಾಡುವ ಉದ್ದೇಶದಿಂದ ಗಂಧದ ಕೋಠಿ ಆವರಣದ 4 ಎಕರೆಪ್ರದೇಶದಲ್ಲಿ ₹3.5 ಕೋಟಿ ವೆಚ್ಚದಲ್ಲಿ ಉದ್ಯಾನ ನಿರ್ಮಾಣಕ್ಕೆ ಟೆಂಡರ್‌ ಪ್ರಕ್ರಿಯೆ ಮುಗಿದಿದ್ದು, ಉದ್ಯಾನ ನಿರ್ಮಾಣ ಕಾಮಗಾರಿ ಸದ್ಯದಲ್ಲೇ ಆರಂಭವಾಗಲಿದೆ ಎಂದರು.

ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಲಲಾಟ ಮೂರ್ತಿ, ರೈತ ನಾಯಕಿ ನಂದಿನಿ ಜಯರಾಂ, ಹಸಿರು ಭೂಮಿಪ್ರತಿಷ್ಠಾನದ ಅಧ್ಯಕ್ಷ ಪುಟ್ಟಯ್ಯ, ಹುಣಸಿನಕೆರೆ ಸಂರಕ್ಷಣೆ ಹಾಗೂ ಅಭಿವೃದ್ಧಿ ಸಮಿತಿ ಅಧ್ಯಕ್ಷ ಅಮ್ಜದ್‌ ಖಾನ್‌,ಡಾ. ಸಾವಿತ್ರಿ, ಸಾಮಾಜಿಕ ಕಾರ್ಯಕರ್ತೆ ಕಾಂಚನ ಮಾಲಾ, ಸೈಯದ್‌ ಅಕ್ಬರ್‌, ಸರ್ವೆ ಸೂಪರ್‌ವೈಸರ‍್ಗಿರೀಶ್‌ ಇದ್ದರು.

ಹುಣಸಿನಕೆರೆ ಹಬ್ಬದ ಪ್ರಯುಕ್ತ ವಿವಿಧ ಚಟುವಟಿಕೆ ಸ್ಪರ್ಧೆ ಆಯೋಜಿಸಲಾಗಿತ್ತು. ರಂಗೋಲಿ ಸ್ಪರ್ಧೆಯಲ್ಲಿ ಮಹಿಳೆಯರು, ಯುವತಿಯರು ಮತ್ತು ಮಕ್ಕಳು ಭಾಗವಹಿಸಿ ಬಣ್ಣಬಣ್ಣದ ರಂಗೋಲಿ ಬಿಡಿಸಿದರು. ಕಲಾವಿದ ಬಿ.ಎಸ್‌. ದೇಸಾಯಿ ನೇತೃತ್ವದಲ್ಲಿ ನಡೆದ ಚಿತ್ರಕಲಾ ಸ್ಪರ್ಧೆಯಲ್ಲಿ ಮಕ್ಕಳು ತಮಗಿಷ್ಟದ ಚಿತ್ರ ಬರೆದರು. ವಿಜೇತರಿಗೆ ಬಹುಮಾನ ವಿತರಿಸಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.