ADVERTISEMENT

ಭಕ್ತರಿಗೆ ಮಜ್ಜಿಗೆ– ಪಾನಕ, ಅನ್ನಸಂತರ್ಪಣೆ

ಜಿಲ್ಲೆಯಾದ್ಯಂತ ರಾಮನವಮಿ ಸಂಭ್ರಮ; ವಿಶೇಷ ಪೂಜೆ– ಅಲಂಕಾರ, ದೇವರ ವೇಷದಲ್ಲಿ ಗಮನಸೆಳೆದ ಮಹಿಳೆಯರು

​ಪ್ರಜಾವಾಣಿ ವಾರ್ತೆ
Published 11 ಏಪ್ರಿಲ್ 2022, 5:37 IST
Last Updated 11 ಏಪ್ರಿಲ್ 2022, 5:37 IST
ಹಾಸನದ ಕೆ.ಆರ್‌ ಪುರಂ ಬಸಟ್ಟಿಕೊಪ್ಪಲ್‌ ನಾಲ್ಕು ರಾಟೆ ಬಾವಿ ವೃತ್ತದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಶ್ರೀರಾಮನಿಗೆ ವಿಶೇಷ ಪೂಜೆ ಸಲ್ಲಿಸಿ ಸಂಭ್ರಮಿಸಿದರು
ಹಾಸನದ ಕೆ.ಆರ್‌ ಪುರಂ ಬಸಟ್ಟಿಕೊಪ್ಪಲ್‌ ನಾಲ್ಕು ರಾಟೆ ಬಾವಿ ವೃತ್ತದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಶ್ರೀರಾಮನಿಗೆ ವಿಶೇಷ ಪೂಜೆ ಸಲ್ಲಿಸಿ ಸಂಭ್ರಮಿಸಿದರು   

ಹಾಸನ: ನಗರದ ವಿವಿಧೆಡೆ ಹಲವು ಸಂಘ, ಸಂಸ್ಥೆಗಳ ವತಿಯಿಂದ ರಾಮ ನವಮಿಯನ್ನು ಸಂಭ್ರಮದಿಂದ ಆಚರಣೆ ಮಾಡಲಾಯಿತು. ಭಕ್ತರಿಗೆ ಹಾಗೂ ಸಾರ್ವಜನಿಕರಿಗೆ ಪ್ರಸಾದ ರೂಪದಲ್ಲಿ ಅನ್ನಸಂತರ್ಪಣೆ, ಪಾನಕ ವಿತರಿಸಲಾಯಿತು.

ನಗರದ ಎನ್.ಆರ್. ವೃತ್ತ, ರೈಲ್ವೆ ನಿಲ್ದಾಣ ಎದುರಿನ ಆಂಜನೇಯ ದೇವಸ್ಥಾನ, ಪಾಂಡುರಂಗ ದೇವಸ್ಥಾನದ ಬಳಿಯ ರಾಮಮಂದಿರ, ಹೇಮಾವತಿ ಪ್ರತಿಮೆ ಬಳಿ, ಪಾರ್ಕ್‌ ರಸ್ತೆಯ ಸೀತಾರಾಮಾಂಜನೇಯ ದೇವಸ್ಥಾನ, ಬಸಟ್ಟಿಕೊಪ್ಪಲ್‌ ನಾಲ್ಕು ರಾಟೆಬಾವಿ ಬಳಿ ಸೇರಿದಂತೆ ಹಲವೆಡೆ ಭಕ್ತಿಪೂರ್ಣವಾಗಿ ರಾಮ ನವಮಿಯನ್ನು ವಿಜೃಂಭಣೆಯಿಂದ ಆಚರಿಸಲಾಯಿತು.

ನಗರದ ರೈಲ್ವೆ ನಿಲ್ದಾಣದ ಎದುರಿನ ಆಂಜನೇಯ ದೇವಸ್ಥಾನದಲ್ಲಿ 1,001 ಎಳನೀರಿನಿಂದ ಮಾರುತಿಗೆ ಅಭಿಷೇಕ ಮಾಡಲಾಯಿತು. ಭಕ್ತರಿಗೆಲ್ಲಾ ಎಳನೀರನ್ನು ಕೊಡಲಾಯಿತು. ಎನ್.ಆರ್. ವೃತ್ತದಲ್ಲಿ ವಿಶ್ವಹಿಂದೂ ಪರಿಷತ್ ಹಾಗೂ ಶ್ರೀರಾಮ ಬಳಗದಿಂದ ಹಮ್ಮಿಕೊಂಡಿದ್ದ ಶ್ರೀರಾಮನವಮಿಯಲ್ಲಿ ಶಾಸಕ ಪ್ರೀತಂ ಜೆ.ಗೌಡ ಪಾಲ್ಗೊಂಡು ಭಕ್ತರಿಗೆ ಪಾನಕ ನೀಡಿದರು. ಬಳಿಕ ಸಾವಿರಾರು ಜನರಿಗೆ ಮಜ್ಜಿಗೆ ಹಾಗೂ ಅನ್ನಸಂತರ್ಪಣೆ ನಡೆಯಿತು.

ADVERTISEMENT

ಪಾರ್ಕ್ ರಸ್ತೆಯಲ್ಲಿರುವ ಸೀತಾರಾಮಂಜನೇಯ ದೇವಸ್ಥಾನದಲ್ಲಿ ಶ್ರೀರಾಮನ ಪಟ್ಟಾಭಿಷೇಕ ಮಹೋತ್ಸವ ಜರುಗಿತು.

ಆರ್.ಸಿ. ರಸ್ತೆ, ಎನ್.ಸಿ.ಸಿ. ಕಚೇರಿ ಬಳಿ ಇರುವ ಕುರುಹಿನ ಶೆಟ್ಟಿ ಕಲ್ಯಾಣ ಮಂಟಪದಲ್ಲಿ ಕುರುಹಿನ ಶೆಟ್ಟಿ ಹಿತ ಸಂರಕ್ಷಣಾ ಸಮಿತಿಯಿಂದ ರಾಮನ ಪಟ್ಟಾಭಿಷೇಕದಲ್ಲಿ ಮಹಿಳಾ ವೇಷಧಾರಿಗಳು ಧರಿಸಿದ ದೇವತೆಗಳ ವೇಷವು ಮೆರುಗುನೀಡಿತು.

ಪತಂಜಲಿ ಯೋಗ ಪರಿವಾರದ ಶೇಷಪ್ಪ ಸುದ್ದಿಗಾರರೊಂದಿಗೆ ಮಾತನಾಡಿ, ‘ಶ್ರೀರಾಮ ಜನಿಸಿದ ದಿನವನ್ನು ರಾಮನವಮಿ ದಿನವನ್ನಾಗಿ ಎಲ್ಲೆಡೆ ಆಚರಣೆ ಮಾಡಲಾಗುತ್ತಿದ್ದು, ವಿಶೇಷವಾಗಿ ಮಹಿಳೆಯರಿಂದ ಸೀತಾರಾಮ ವೇಷ ಧರಿಸಿ ಪಟ್ಟಾಭಿಷೇಕವನ್ನು ಮಾಡಲಾಗಿದೆ. ಬೆಳಿಗ್ಗೆಯಿಂದ ವಿಶೇಷ ಪೂಜೆ ಸಲ್ಲಿಸಲಾಗಿದೆ’ ಎಂದರು.

‘2 ವರ್ಷ ಕೋವಿಡ್‌ನಿಂದ ಆಚರಣೆ ಸಾಧ್ಯವಾಗಿರಲಿಲ್ಲ. ಮಹಿಳೆಯರು ಧರಿಸಿರುವ ವೇಷ ನೋಡಿದರೇ ದೇವತೆಗಳೇ ಧರೆಗೆ ಇಳಿದು ಬಂದಂತೆ ಗೋಚರಿಸುತ್ತದೆ’ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಮೇಕಪ್ ಹನುಮಂತು, ಪತಂಜಲಿ ಯೋಗ ಪರಿವಾರದ ವೇದಾವತಿ ಹಾಗೂ ಕುರುಹಿನ ಶೆಟ್ಟಿ ಹಿತ ಸಂರಕ್ಷಣಾ ಸಮಿತಿಯ ಪದಾಧಿಕಾರಿಗಳು ಇದ್ದರು.

ವಿಶೇಷ ಪೂಜೆ

ಬಾಣಾವರ: ಇಲ್ಲಿಯ ಕೋಟೆ ಬಡಾವಣೆಯ ಆಂಜನೇಯ ಸ್ವಾಮಿ ದೇವಾಲಯದಲ್ಲಿ ಭಾನುವಾರ ರಾಮನವಮಿ ಪ್ರಯುಕ್ತ ವಿಶೇಷ ಪೂಜೆ ಹಾಗೂ ಪ್ರಸಾದ ವಿನಿಯೋಗ ನಡೆಯಿತು.

ಜಾತ್ರಾ ಮಹೋತ್ಸವಕ್ಕಾಗಿ ರಥವನ್ನು ಕುಟೀರದಿಂದ ಹೊರ ತರಲಾಯಿತು.

ಆಂಜನೇಯ ಸ್ವಾಮಿಗೆ ಅಭಿಷೇಕ, ಪೂಜೆ ಮಹಾಮಂಗಳಾರತಿ ನಡೆದವು. ಭಕ್ತರಿಗೆ ಪಾನಕ ವಿತರಿಸಲಾಯಿತು.

ರಾಮದೇವರ ಉತ್ಸವ

ನುಗ್ಗೇಹಳ್ಳಿ: ಇಲ್ಲಿನ ಪುರಾಣ ಪ್ರಸಿದ್ಧ ಕಲ್ಯಾಣಿ ಆಂಜನೇಯಸ್ವಾಮಿ ದೇವಾಲಯದಲ್ಲಿ ಶ್ರೀರಾಮ ನವಮಿ ಅಂಗವಾಗಿ ದೇವರಿಗೆ ವಿಶೇಷ ಪೂಜೆ ನಡೆಯಿತು.

ಗ್ರಾಮದ ಪ್ರಮುಖ ಬೀದಿಗಳಲ್ಲಿ ರಾಮದೇವರ ಉತ್ಸವ ನಡೆಯಿತು. ಹಾಗೂ ಲಕ್ಷ್ಮೀನರಸಿಂಹಸ್ವಾಮಿ ದೇವಾಲಯದಲ್ಲಿ ಶ್ರೀರಾಮ ದೇವರಿಗೆ ವಿಶೇಷ ಪೂಜೆ ಹಾಗೂ ಉತ್ಸವ ನಡೆಯಿತು. ಭಕ್ತರಿಗೆ ಪಾನಕ, ಮಜ್ಜಿಗೆ ವಿತರಿಸಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.