ADVERTISEMENT

‘ಪರಿಶಿಷ್ಟರನ್ನೇ ಗುರಿಯಾಗಿಸಿ ಕೇಸ್ ಸರಿಯಲ್ಲ’

ಹಬ್ಬನಘಟ್ಟ ಭೂ ಕಬಳಿಕೆ ಪ್ರಕರಣ: ಸಭೆಯಲ್ಲಿ ಅಧಿಕಾರಿಗಳ ವಿರುದ್ಧ ಶಾಸಕ ಶಿವಲಿಂಗೇಗೌಡ ಆಕ್ರೋಶ

​ಪ್ರಜಾವಾಣಿ ವಾರ್ತೆ
Published 20 ಅಕ್ಟೋಬರ್ 2020, 2:38 IST
Last Updated 20 ಅಕ್ಟೋಬರ್ 2020, 2:38 IST
ಅರಸೀಕೆರೆ ತಾಲ್ಲೂಕು ಪಂಚಾಯಿತಿ ಸಭಾಂಗಣದಲ್ಲಿ ನಡೆದ ಸಭೆಯಲ್ಲಿ ಕೇವಲ ಪರಿಶಿಷ್ಟ ಜಾತಿಯವರನ್ನೇ ಗುರಿಯಾಗಿಸಿ ಕೇಸು ದಾಖಲಿಸಿರುವುದನ್ನು ಪ್ರಶ್ನಿಸುತ್ತಿರುವ ದಲಿತ ಮುಖಂಡರು
ಅರಸೀಕೆರೆ ತಾಲ್ಲೂಕು ಪಂಚಾಯಿತಿ ಸಭಾಂಗಣದಲ್ಲಿ ನಡೆದ ಸಭೆಯಲ್ಲಿ ಕೇವಲ ಪರಿಶಿಷ್ಟ ಜಾತಿಯವರನ್ನೇ ಗುರಿಯಾಗಿಸಿ ಕೇಸು ದಾಖಲಿಸಿರುವುದನ್ನು ಪ್ರಶ್ನಿಸುತ್ತಿರುವ ದಲಿತ ಮುಖಂಡರು   

ಅರಸೀಕೆರೆ: ‘ತಾಲ್ಲೂಕಿನ ಹಬ್ಬನಘಟ್ಟ ಕಾವಲು ಅರಣ್ಯ ಪ್ರದೇಶದಲ್ಲಿ ಭೂ ಕಬಳಿಕೆ ಆರೋಪದ ಮೇಲೆ ಇತರೆ ಜನಾಂಗದವರನ್ನು ಹೊರತುಪಡಿಸಿ ಕೇವಲ ಪರಿಶಿಷ್ಟ ಜಾತಿಯ 27 ಜನರನ್ನೇ ಗುರಿಯಾಗಿಸಿ ಕೇಸು ದಾಖಲಿಸಿರುವುದು ದುರುದ್ದೇಶದಿಂದ ಕೂಡಿದೆ’ ಎಂದು ಶಾಸಕ ಕೆ.ಎಂ.ಶಿವಲಿಂಗೇಗೌಡ ಅಧಿಕಾರಿ ಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ನಗರದ ತಾಲ್ಲೂಕು ಪಂಚಾಯಿತಿ ಸಭಾಂಗಣದಲ್ಲಿ ಸಮಾಜ ಕಲ್ಯಾಣ ಇಲಾಖೆಯ ವತಿಯಿಂದ ಸೋಮವಾರ ಆಯೋಜಿಸಿದ್ದ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಹಿತರಕ್ಷಣಾ ಸಮಿತಿ ಸಭೆಯಲ್ಲಿ ಅವರು ಮಾತನಾಡಿದರು.

‘ಭೂ ಕಬಳಿಕೆ ಆರೋಪದ ಮೇಲೆ ಪಶುಸಂಗೋಪನಾ ಇಲಾಖೆಯವರು ಇತರೆ ಜನಾಂಗಕ್ಕೆ ಸೇರಿದ ಸುಮಾರು 83 ಜನರನ್ನು ಬಿಟ್ಟು ಕೇವಲ ಪರಿಶಿಷ್ಟ ಜಾತಿಯವರ ವಿರುದ್ಧ ಭೂ ಕಬಳಿಕೆ ನ್ಯಾಯಾಲಯದಲ್ಲಿ ಕೇಸು ದಾಖಲಿಸಿ ದೌರ್ಜನ್ಯ ಎಸಗುತ್ತಿದ್ದಾರೆ ಇದು ದಲಿತರನ್ನು ತುಳಿಯುವ ಹುನ್ನಾರ’ ಎಂದು ಪರಿಶಿಷ್ಟ ಜಾತಿಯ ಮುಖಂಡರಾದ ಎ.ಪಿ.ಚಂದ್ರಯ್ಯ ಹಾಗೂ ವೆಂಕಟೇಶ್, ಹಬ್ಬನಘಟ್ಟ ರುದ್ರಮುನಿ ಸೇರಿದಂತೆ ಇತರರು ಆರೋಪಿಸಿದರು.

ADVERTISEMENT

ಆಗ ಶಾಸಕರು ನ್ಯಾಯಾಲಯಕ್ಕೆ ಎಷ್ಟು ಜನರ ವಿರುದ್ಧ ಕೇಸು ದಾಖಲಿಸಿದ್ದೀರಿ? ದಾಖಲೆ ಕೊಡಿ, ಪರಿಶಿಷ್ಟ ಜಾತಿಯವರನ್ನೇ ಗುರಿಯಾಗಿಸಿ ಏಕೆ ಕೇಸು ದಾಖಲಿಸಿದ್ದೀರಾ? ಉಳಿದವರ ವಿರುದ್ಧ ಏಕೆ ಪ್ರಕರಣ ದಾಖಲಿಸಿಲ್ಲ? ಎಂದು ಪಶುಸಂಗೋಪನಾ ಇಲಾಖೆಯ ಅಧಿಕಾರಿಗಳನ್ನು ಪ್ರಶ್ನಿಸಿದರು.

‘ನಗರದ ಮೈಸೂರು ರಸ್ತೆಯಲ್ಲಿರುವ ಕೈಗಾರಿಕಾ ಪ್ರದೇಶದಲ್ಲಿ ನಿರ್ಮಾಣ ಹಂತದಲ್ಲಿರುವ ಛಲವಾದಿ ಸಮುದಾಯ ಭವನ ನಿರ್ಮಾಣಕ್ಕೆ ಖಾಸಗಿ ಶಾಲೆಯ ಮಾಲೀಕರೊಬ್ಬರು ಅಡ್ಡಿಪಡಿಸಿ, ಭವನ ನಿರ್ಮಾಣವಾಗದಂತೆ ನ್ಯಾಯಾಲಯದಿಂದ ತಡೆಯಾಜ್ಞೆ ತಂದಿದ್ದಾರೆ ಸಮಾಜ ಕಲ್ಯಾಣ ಇಲಾಖೆ ಹಾಗೂ ತಹಶೀಲ್ದಾರ್ ಅವರು ಕ್ರಮ ಕೈಗೊಳ್ಳದಿರುವುದು ನಮ್ಮ ಸಮಾಜದ ದೌರ್ಭಾಗ್ಯ’ ಎಂದು ತಾಲ್ಲೂಕು ಛಲವಾದಿ ಸಮಾಜದ ಅಧ್ಯಕ್ಷ ರಂಗಸ್ವಾಮಿ ಅಳಲು ತೋಡಿಕೊಂಡರು.

ಮುಖಂಡರಾದ ಎ.ಪಿ. ಚಂದ್ರಯ್ಯ ಹಾಗೂ ವೆಂಕಟೇಶ್, ಶಾಲಾ ಮಾಲೀಕರ ವಿರುದ್ಧ ದೌರ್ಜನ್ಯ ಕಾಯ್ದೆಯಡಿ ಪ್ರಕರಣ ದಾಖಲಿಸಬೇಕು, ಈ ನಿಟ್ಟಿನಲ್ಲಿ ತಹಶೀಲ್ದಾರ್ ಮೌನವಹಿಸಿರುವುದು ಏಕೆ ಎಂದು ಪ್ರಶ್ನಿಸಿದರು.

ಇದಕ್ಕೆ ಪ್ರತಿಕ್ರಿಯಿಸಿದ ಶಾಸಕ, ಭವನದ ಜಾಗ ಮತ್ತು ಹಣ ಸರ್ಕಾರಕ್ಕೆ ಸೇರಿದ್ದು, ಖಾಸಗಿ ಶಾಲಾ ಮುಖ್ಯಸ್ಥ ತಡೆಯಲು ಯಾವುದೇ ನೈತಿಕತೆ ಇಲ್ಲ. ಶಾಲೆ ಹೈಟೆನ್ಷನ್ ವಿದ್ಯುತ್ ತಂತಿ ಕೆಳಗಡೆ ನಡೆಯುತ್ತಿದೆ. ಈ ಶಾಲೆಯ ಮಕ್ಕಳ ಆರೋಗ್ಯದ ಬಗ್ಗೆ ಸೆಸ್ಕ್ ಹಾಗೂ ನಗರಸಭೆ ಅಧಿಕಾರಿಗಳು ಏನು ಮಾಡುತ್ತಿದ್ದಾರೆ? ಸಾರ್ವಜನಿಕ ಶಿಕ್ಷಣ ಇಲಾಖೆ ಹೇಗೆ ಅನುಮತಿ ನೀಡಿದೆ? ತಹಶೀಲ್ದಾರ್ ಅವರ ಜವಾಬ್ದಾರಿ ಏನು ಎಂದು ಪ್ರಶ್ನಿಸಿದರು. ಈ ಸಮಸ್ಯೆಯನ್ನು ಶೀಘ್ರವೇ ಬಗೆಹರಿಸಲು ಕ್ರಮ ಕೈಗೊಳ್ಳಬೇಕು ಎಂದು ಸೂಚಿಸಿದರು.

ತಹಶೀಲ್ದಾರ್ ಸಂತೋಷ್‌ ಕುಮಾರ್, ‘ಛಲವಾದಿ ಸಮುದಾಯ ಭವನ ನಿರ್ಮಾಣಕ್ಕೆ ಸಂಬಂಧಿಸಿದಂತೆ ಈ ಕೇಸಿನಲ್ಲಿ ಯಾವುದೇ ಸರ್ಕಾರಿ ಇಲಾಖೆ ಅಥವಾ ಅಧಿಕಾರಿಗಳನ್ನು ಪಾರ್ಟಿಯನ್ನಾಗಿಸಿಲ್ಲ, ಛಲವಾದಿ ಸಮಾಜದ ಮುಖಂಡರನ್ನು ಮಾತ್ರ ಪಾರ್ಟಿಯನ್ನಾಗಿಸಿದ್ದಾರೆ’ ಎಂದು ಉತ್ತರಿಸಿದರು.

ತಾಲ್ಲೂಕು ಪಂಚಾಯಿತಿ ಡಿ ಗ್ರೂಪ್ ನೌಕರ ಜಿ.ಎಸ್.ಕುಮಾರ್ ಹೃದಯಾಘಾತದಿಂದ ನಿಧನರಾದ ಹಿನ್ನೆಲೆಯಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಹಿತರಕ್ಷಣಾ ಸಮಿತಿ ಸಭೆಯನ್ನು ಮುಂದೂಡಲಾಯಿತು.

ಜಿಲ್ಲಾ ಪಂಚಾಯಿತಿ ಸದಸ್ಯರಾದ ಪಟೇಲ್ ಶಿವಪ್ಪ, ಮಾಡಾಳುಸ್ವಾಮಿ, ನಗರಸಭೆ ಪೌರಾಯುಕ್ತ ಕಾಂತರಾಜ್, ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕ ಗೋಪಾಲಪ್ಪ, ದಲಿತ ಮುಖಂಡರಾದ ಎ.ಪಿ.ಚಂದ್ರಯ್ಯ, ಚಿಕ್ಕಬಾಣಾವರ ವೆಂಕಟೇಶ್, ರುದ್ರಮುನಿ, ಜಯಕುಮಾರ್, ಈರಯ್ಯ , ಸುಭಾಷ್ ನಗರದ ವೆಂಕಟೇಶ್, ರಂಗಸ್ವಾಮಿ, ಮಂಜುಳಾಬಾಯಿ, ಲಂಬಾಣಿ ಸಮುದಾಯ ಹಾಗೂ ಬೋವಿ ಸಮುದಾಯದ ಮುಖಂಡರು, ಕಾಂಗ್ರೆಸ್ ತಾಲ್ಲೂಕು ಪರಿಶಿಷ್ಟ ಜಾತಿ ಘಟಕದ ಅಧ್ಯಕ್ಷ ರಂಗನಾಥ್
ಮಾಡಾಳು ಸೇರಿದಂತೆ ಇತರರು ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.