ಹಾಸನ: ಬಿಜೆಪಿ–ಜೆಡಿಎಸ್ ಮೈತ್ರಿ ಏರ್ಪಟ್ಟ ಹಿನ್ನೆಲೆಯಲ್ಲಿ ಈ ಬಾರಿಯ ಕೇಂದ್ರದ ಮಧ್ಯಂತರ ಬಜೆಟ್‌ನಲ್ಲಿ ಜಿಲ್ಲೆಯ ಅಭಿವೃದ್ಧಿಗೆ ಒಂದಿಷ್ಟು ಅನುದಾನ ಸಿಗಬಹುದು ಎನ್ನುವ ನಿರೀಕ್ಷೆ ಬಹುತೇಕ ಹುಸಿಯಾಗಿದೆ. ಜಿಲ್ಲೆಯಲ್ಲಿ ಹೇಳಿಕೊಳ್ಳುವಂತಹ ಯಾವುದೇ ಯೋಜನೆಗಳನ್ನು ಘೋಷಿಸದೇ ಇರುವುದು ಜಿಲ್ಲೆಯ ಜನರಿಗೆ ನಿರಾಸೆ ಮೂಡಿಸಿದೆ.
ಬಜೆಟ್‌ನಲ್ಲಿ ಕಾಡಾನೆ ಸಮಸ್ಯೆ ನಿವಾರಣೆ, ಕಾಫಿ ಬೆಳೆಗಾರರ ಸಮಸ್ಯೆ ಪರಿಹಾರಕ್ಕೆ ಅವಕಾಶ ಸಿಗಬಹುದು ಎನ್ನುವ ನಿರೀಕ್ಷೆಯೂ ಈಡೇರಿಲ್ಲ. ಚುನಾವಣೆಯ ಹೊಸ್ತಿಲಲ್ಲಿ, ಜಿಲ್ಲೆಯ ಅಭಿವೃದ್ಧಿಗೆ ಸಿಗಬೇಕಿದ್ದ ಆದ್ಯತೆ ಸಿಕ್ಕಿಲ್ಲ ಎನ್ನುವ ನೋವು ಜನರದ್ದಾಗಿದೆ.
ಕಾಡು ವಿಸ್ತರಣೆ ಮಾಡುವ ಮೂಲಕ ನಾಡಿಗೆ ಬರುತ್ತಿರುವ ಕಾಡಾನೆಗಳಿಗೆ ಕಡಿವಾಣ ಹಾಕಬೇಕು ಎನ್ನುವ ಕೂಗು ಬಹಳ ವರ್ಷಗಳಿಂದ ಕೇಳಿ ಬರುತ್ತಲೇ ಇದೆ. ಆನೆ ಕಾರಿಡಾರ್‌ಗೆ ಕೇಂದ್ರದಿಂದ ಹಣಕಾಸಿನ ನೆರವನ್ನು ರಾಜ್ಯ ಸರ್ಕಾರ ಎದುರು ನೋಡುತ್ತಿದೆ. ಇಂತಹ ಸಂದರ್ಭದಲ್ಲಿ ಕೇಂದ್ರದಿಂದ ಈ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಬಹುದು ಎನ್ನುವ ನಿರೀಕ್ಷೆಯೂ ಹುಸಿಯಾಗಿದೆ.
ಇನ್ನೊಂದೆಡೆ ಕಾಫಿ ಬೆಳೆಗಾರರ ಬೇಡಿಕೆಗಳಿಗೂ ಸ್ಪಂದನೆ ದೊರೆತಿಲ್ಲ. ಕಾಫಿಯನ್ನು ಫಸಲ್ ಬಿಮಾ ಯೋಜನೆಯ ವ್ಯಾಪ್ತಿಗೆ ತರುವಂತೆ ಬೆಳೆಗಾರರು ಒತ್ತಾಯಿಸುತ್ತಲೇ ಬಂದಿದ್ದಾರೆ. ಉಚಿತ ವಿದ್ಯುತ್, ಕಾಫಿ ಬೆಳೆಗಾರರಿಗೆ ವಿಶೇಷ ಪ್ಯಾಕೇಜ್‌ಗಳನ್ನು ಘೋಷಿಸುವಂತೆ ಆಗ್ರಹಿಸುತ್ತಿದ್ದಾರೆ. ಅದಾವುದೂ ಪ್ರಸ್ತಾಪವಾಗಿಲ್ಲ ಎನ್ನುವ ಬೇಸರ ಕಾಫಿ ಬೆಳೆಗಾರರದ್ದಾಗಿದೆ.
ಪ್ರಸ್ತಾಪವಾಗದ ಐಐಟಿ: ಜಿಲ್ಲೆಯಲ್ಲಿ ಅಗತ್ಯ ಭೂಮಿ ಕಾಯ್ದಿರಿಸಿದ್ದರೂ, ಐಐಟಿ ಸ್ಥಾಪನೆಗೆ ಮುಹೂರ್ತ ಕೂಡಿ ಬರುತ್ತಿಲ್ಲ. ದೇವೇಗೌಡರ ನಿರಂತರ ಪ್ರಯತ್ನದ ನಡುವೆಯೂ ಐಐಟಿ ಸ್ಥಾಪನೆ ಇನ್ನೂ ಸಾಕಾರವಾಗಿಲ್ಲ. ಈಗಾಗಲೇ ಸಾವಿರ ಎಕರೆಗೂ ಹೆಚ್ಚು ಭೂಮಿಯನ್ನು ನಗರದ ಹೊರವಲಯದಲ್ಲಿ ಕಾಯ್ದಿರಿಸಲಾಗಿದೆ. ಆದರೆ, ಐಐಟಿ ಸ್ಥಾಪನೆಗೆ ಕೇಂದ್ರದಿಂದ ಹಸಿರು ನಿಶಾನೆ ಸಿಗುತ್ತಿಲ್ಲ. ಈ ಬಾರಿಯಾದರೂ, ಐಐಟಿ ಸ್ಥಾಪನೆ ಪ್ರಕ್ರಿಯೆಗೆ ಚಾಲನೆ ಸಿಗಬಹುದು ಎನ್ನುವ ಮಾತು ಸುಳ್ಳಾಗಿದೆ.
ಪ್ರವಾಸೋದ್ಯಮದ ಅಭಿವೃದ್ಧಿಗೆ ರಾಜ್ಯಗಳಿಗೆ ಕೇಂದ್ರದಿಂದ ಬಡ್ಡಿರಹಿತ ಸಾಲ ನೀಡುವುದಾಗಿ ಬಜೆಟ್‌ನಲ್ಲಿ ಘೋಷಿಸಲಾಗಿದೆ. ಇದರಿಂದ ಜಿಲ್ಲೆಯ ಪ್ರವಾಸೋದ್ಯಮ ಅಭಿವೃದ್ಧಿಗೆ ಯಾವ ರೀತಿಯಲ್ಲಿ ಅನುಕೂಲವಾಗಲಿದೆ ಎನ್ನುವ ಸ್ಪಷ್ಟತೆ ಮಾತ್ರ ಸಿಗುತ್ತಿಲ್ಲ ಎನ್ನುವುದು ಪ್ರವಾಸೋದ್ಯಮ ವಲಯದ ಉದ್ಯಮಿಗಳ ಮಾತು.
ಜೆಡಿಎಸ್‌ನ ತವರು ಜಿಲ್ಲೆಯಾಗಿರುವ ಹಾಸನಕ್ಕೆ ಈ ಬಾರಿಯ ಕೇಂದ್ರ ಬಜೆಟ್‌ನಲ್ಲಿ ಒಂದಿಷ್ಟು ಕೊಡುಗೆ ಸಿಗಬಹುದು ಎನ್ನುವ ಮಾತುಗಳು ಕೇಳಿ ಬರುತ್ತಿದ್ದವು. ದೇವೇಗೌಡರು, ಜೆಡಿಎಸ್ ನಿಯೋಗದೊಂದಿಗೆ ಪ್ರಧಾನಿ, ಕೇಂದ್ರ ಸಚಿವರನ್ನು ಈಚೆಗೆ ಭೇಟಿ ಮಾಡಿ, ವಿವಿಧ ಬೇಡಿಕೆಗಳ ಮನವಿಯನ್ನೂ ಸಲ್ಲಿಸಿದ್ದರು. ಅದಾಗ್ಯೂ ಯಾವುದೇ ಯೋಜನೆಗಳು ಜಿಲ್ಲೆಗೆ ಸಿಕ್ಕಿಲ್ಲ ಎನ್ನುವ ಮಾತುಗಳು ಕೇಳಿ ಬರುತ್ತಿವೆ.
Cut-off box - ಉತ್ತಮ ಬಜೆಟ್ ಆದಾಯ ತೆರಿಗೆ ವಿನಾಯಿತಿ ₹ 7 ಲಕ್ಷಕ್ಕೆ ಏರಿಸಿರುವುದು ಉತ್ತಮ ಬೆಳವಣಿಗೆ. ಕೋಟಿ ಮನೆಗಳಿಗೆ ಸೌರ ಛಾವಣಿ ಅಳವಡಿಕೆ ಉತ್ತಮ ಯೋಜನೆಯಾಗಿದ್ದು ಸೌರ ವಿದ್ಯುತ್ ಉದ್ಯಮ ಅವಲಂಬಿತ ಉದ್ದಿಮೆಗಳ ಬೆಳವಣಿಗೆಗೆ ಸಹಕಾರಿಯಾಗಲಿದೆ. ರೈತರನ್ನು ಹಸಿರು ಇಂಧನ ಎಲೆಕ್ಟ್ರಿಕ್ ವಾಹನಕ್ಕೆ ಉತ್ತೇಜನ ನೀಡಲಾಗಿದ್ದು ಉತ್ತಮ ಬಜೆಟ್ ಇದಾಗಿದೆ. ಎಚ್.ಎ. ಕಿರಣ್ ಸಣ್ಣ ಕೈಗಾರಿಕೆ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಜಿಲ್ಲೆ ರಾಜ್ಯ ಮರೆತ ಕೇಂದ್ರ ಕೇಂದ್ರದ ಬಜೆಟ್ ನಿರಾಶಾದಾಯಕ. ರಾಜ್ಯ ಹಾಗೂ ಜಿಲ್ಲೆಗೆ ಯಾವುದೇ ಕೊಡುಗೆ ನೀಡಲಾಗಿಲ್ಲ. ಕೃಷ್ಣಾ ಮೇಲ್ದಂಡೆ ಯೋಜನೆ ಹಾಸನ ವಿಮಾನ ನಿಲ್ದಾಣ ಆನೆ ಕಾರಿಡಾರ್ ಯೋಜನೆಗಳಿಗೆ ಅನುದಾನ ಬಿಡುಗಡೆ ಮಾಡದೇ ನಿರಾಸೆ ಮೂಡಿಸಲಾಗಿದೆ. ಐಐಟಿ ಸ್ಥಾಪನೆಗೆ 2007ರಲ್ಲಿಯೇ ಭೂಮಿಯನ್ನು ವಶಪಡಿಸಿಕೊಳ್ಳಲಾಗಿದ್ದು ರೈತರಿಗೂ ಅನ್ಯಾಯವಾಗಿದೆ. ಇತ್ತ ಐಐಟಿ ಸ್ಥಾಪನೆ ಕನಸಾಗಿಯೇ ಉಳಿದಿದೆ. ದೇವರಾಜೇಗೌಡ ಕಾಂಗ್ರೆಸ್ ಜಿಲ್ಲಾ ಘಟಕ ವಕ್ತಾರ ಕಾಫಿ ಬೆಳೆಗಾರರಿಗೆ ಆದ್ಯತೆ ಸಿಕ್ಕಿಲ್ಲ ಕಾಫಿ ಬೆಳೆಗಾರರಿಗೆ ಪೂರಕವಾಗಿಲ್ಲ. ಮುಂದಿನ ಪೂರ್ಣ ಪ್ರಮಾಣದ ಬಜೆಟ್‌ನಲ್ಲಿ ಅಗತ್ಯ ಅನುದಾನ ಹಾಗೂ ಯೋಜನೆ ಘೋಷಣೆ ಮಾಡಲಾಗುವುದು ಎಂದು ಕೇಂದ್ರ ಹಣಕಾಸು ಕಾರ್ಯದರ್ಶಿ ಭರವಸೆ ನೀಡಿದ್ದಾರೆ. ಫಸಲ್ ಬಿಮಾ ಯೋಜನೆ ವಿಸ್ತರಿಸಲಾಗಿದ್ದು ಉಳಿದ ಬೇಡಿಕೆ ಈಡೇರುವ ಭರವಸೆ ಇದೆ. ಪರಮೇಶ್ ಕಾಫಿ ಬೆಳೆಗಾರರ ಒಕ್ಕೂಟದ ಅಧ್ಯಕ್ಷ ಮಹಿಳೆಯರು ಯುವಕರ ಏಳ್ಗೆಗೆ ಆದ್ಯತೆ ಬಡತನ ನಿರ್ಮೂಲನೆ ರೈತರು ಮಹಿಳೆಯರು ಹಾಗೂ ಯುವಕರ ಏಳ್ಗೆಗೆ ಬಜೆಟ್‌ನಲ್ಲಿ ಆದ್ಯತೆ ನೀಡಿರುವುದು ಸ್ವಾಗತಾರ್ಹ. ಬಜೆಟ್‌ನಲ್ಲಿ ಹೇಳಿರುವುದು ಕಾರ್ಯರೂಪಕ್ಕೆ ಬರಬೇಕು. ಸೌಲಭ್ಯಗಳು ಸರಳವಾಗಿ ಅರ್ಹ ಫಲಾನುಭವಿಗಳಿಗೆ ತಲುಪಬೇಕು. ಎಂ.ಜಿ.ಮಲ್ಲೇಶ್ ರೈತ ಎಚ್.ಮಲ್ಲಾಪುರ ಚುನಾವಣೆ ಗಿಮಿಕ್ ರೈತರು ಮಧ್ಯಮ ವರ್ಗದವರು ಬಡವರ ವಿರೋಧಿ ಬಜೆಟ್ ಆಗಿದೆ. ಕರ್ನಾಟಕಕ್ಕೆ ಯಾವ ಹೊಸ ಯೋಜನೆಗಳನ್ನೂ ಘೋಷಣೆ ಮಾಡಿಲ್ಲ. ಪ್ರಧಾನಿ ನರೇಂದ್ರ ಮೋದಿ ರೈತರ ಪರವಾದ ಯಾವ ಕಾರ್ಯಕ್ರಮವನ್ನು ನೀಡಿಲ್ಲ ಇದೊಂದು ಲೋಕಸಭಾ ಚುನಾವಣೆಯ ಗಿಮಿಕ್ ಬಜೆಟ್ ಆಗಿದೆ. ಎಸ್.ಎಸ್. ರಾಮಚಂದ್ರು. ರಾಜ್ಯ ರೈತ ಸಂಘ ಚನ್ನರಾಯಪಟ್ಟಣ ತಾಲ್ಲೂಕು ಘಟಕದ ಅಧ್ಯಕ್ಷ ಶಿಕ್ಷಣ ಕ್ಷೇತ್ರ ನಿರ್ಲಕ್ಷ್ಯ ಬಜೆಟ್‌ನಲ್ಲಿ ಇರುವ ಆಡಂಬರದ ಮಾತುಗಳ ಹೊರತಾಗಿಯೂ ಒಟ್ಟಾರೆ ಶಿಕ್ಷಣಕ್ಕಾಗಿ ಮೀಸಲಿಡುವಿಕೆಯು ಬಜೆಟ್‌ನ ಕೇವಲ ಶೇ 3.29 ರಷ್ಟಿದೆ. ಪ್ರಸ್ತುತ ಸರ್ಕಾರದ ಎನ್‌ಇಪಿಗೇ ಶೇ 6 ಹಂಚಿಕೆಯನ್ನು ಶಿಫಾರಸು ಮಾಡುತ್ತದೆ. ಆದರೆ ಕೇಂದ್ರ ಬಜೆಟ್ ಎಲ್ಲ ಶಿಕ್ಷಣ ತಜ್ಞರ ಶಿಫಾರಸಿನ ಹತ್ತಿರ ಹೋಗುವುದಕ್ಕೂ ವಿಫಲವಾಗಿದೆ. ಶಿಕ್ಷಣ ಕ್ಷೇತ್ರದ ಬಿಕ್ಕಟ್ಟನ್ನು ಸಂಪೂರ್ಣ ನಿರ್ಲಕ್ಷಿಸಲಾಗಿದೆ. ಸಾರ್ವಜನಿಕ ಶಿಕ್ಷಣವನ್ನು ದುರ್ಬಲಗೊಳಿಸಲಾಗಿದೆ. ಚೈತ್ರಾ ಎಐಡಿಎಸ್‌ಒ ಜಿಲ್ಲಾ ಸಹ ಸಂಚಾಲಕಿ ದೂರದೃಷ್ಟಿಯ ಬಜೆಟ್ ಸಣ್ಣ ಕೈಗಾರಿಕೆಗಳು ಉತ್ತೇಜ ಸಿಕ್ಕರೆ ನಿರುದ್ಯೋಗ ನಿವಾರಣೆಯಾಗುತ್ತದೆ ಎಂಬ ದೂರದೃಷ್ಟಿ ಮಹಿಳಾ ಆರ್ಥಿಕ ಸಬಲೀಕರಣ ಸೌರ ವಿದ್ಯುತ್ ಮತ್ತು ವಿದ್ಯುತ್ ಚಾಲಿತ ವಾಹನಗಳಿಗೆ ಒತ್ತು ನೀಡಲಾಗಿದೆ. ಉಚಿತ ಯೋಜನೆಗಳನ್ನು ಅರ್ಹರಿಗೆ ಕೊಡದೇ ಎಲ್ಲರಿಗೂ ಕೊಟ್ಟರೆ ಆರ್ಥಿಕ ಮಟ್ಟ ಕುಸಿದು ಸರ್ಕಾರ ದಿವಾಳಿಯಾಗುತ್ತದೆ. ದೇಶದ ಅಭಿವೃದ್ಧಿ ಮುನ್ಸೂಚನೆ ಬಜೆಟ್ ಇದಾಗಿದೆ. ಎಸ್. ನಾರಾಯಣ್. ಲೆಕ್ಕ ಪರಿಶೋಧಕ ಆಲೂರು ಮಹಿಳಾ ಸಬಲೀಕರಣಕ್ಕೆ ಒತ್ತು ಅಂಗನವಾಡಿ ಹಾಗೂ ಆಶಾ ಕಾರ್ಯಕರ್ತರಿಗೆ ಆಯುಷ್ಮಾನ್ ಭಾರತ ಯೋಜನೆ ಕೋಟಿ ಮಹಿಳೆಯರು ಲಕ್ಷಾಧಿಪತಿ ದೀದಿ ಯೋಜನೆಗಳು ಮಹಿಳೆಯರ ಸಬಲೀಕರಣಕ್ಕೆ ಹೆಚ್ಚು ಪೂರಕವಾಗಿವೆ. ಒಂದು ಕೋಟಿ ಮನೆಗಳಿಗೆ ಸೌರ ವಿದ್ಯುತ್ ಸಂಪರ್ಕ ಎಲೆಕ್ಟ್ರಿಕ್ ವಾಹನ ಉತ್ಪಾದನೆ ಹೆಚ್ಚಳಕ್ಕೆ ಆಧ್ಯತೆ ನೀಡಿರುವುದು ಸ್ವಾಗತಾರ್ಹ. ಸಿಮೆಂಟ್ ಮಂಜು ಶಾಸಕ ಸಂಚಾರ ವ್ಯವಸ್ಥೆಗೆ ಆದ್ಯತೆ 40 ಸಾವಿರ ರೈಲ್ವೆ ಬೋಗಿಗಳನ್ನು ವಂದೇ ಭಾರತ್ ಬೋಗಿಗಳಾಗಿ ಪರಿವರ್ತನೆ ಮಾಡುವುದು ಮಹತ್ವದ ಯೋಜನೆ. ಸಂಚಾರ ವ್ಯವಸ್ಥೆಯಲ್ಲಿ ಒಂದು ದೊಡ್ಡ ಕ್ರಾಂತಿ ಆಗುತ್ತದೆ. ಮಹಾನಗರಗಳಲ್ಲಿ ಮೆಟ್ರೋ ರೈಲು ಮಾರ್ಗಗಳ ವಿಸ್ತರಣೆ ಕೂಡ ಪ್ರಯಾಣಿಕರ ಸುಗಮ ಸಂಚಾರಕ್ಕೆ ಅನುಕೂಲ ಆಗಲಿದೆ. ಕೆ.ಸತ್ಯನಾರಾಯಣ ಭಾರತೀಯ ಸಾಂಬಾರ್ ಮಂಡಳಿ ಉಪಾಧ್ಯಕ್ಷ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.