ADVERTISEMENT

ಚಂಪಾಷಷ್ಠಿ: ವೈಭವದ ಮಹಾರಥೋತ್ಸವ

ದಕ್ಷಿಣ ಕಾಶಿ ರಾಮನಾಥಪುರದಲ್ಲಿ ರಥ ಎಳೆದು ಭಕ್ತಿ ಸಮರ್ಪಿಸಿದ ಸಹಸ್ರಾರು ಜನ

​ಪ್ರಜಾವಾಣಿ ವಾರ್ತೆ
Published 27 ನವೆಂಬರ್ 2025, 2:54 IST
Last Updated 27 ನವೆಂಬರ್ 2025, 2:54 IST
ರಾಮನಾಥಪುರದಲ್ಲಿ ಪ್ರಸನ್ನ ಸುಬ್ರಹ್ಮಣ್ಯ ಸ್ವಾಮಿ ಚಂಪಾ ಷಷ್ಠಿ ರಥೋತ್ಸವವು ಬುಧವಾರ ವಿಜೃಂಭಣೆಯಿಂದ ಜರುಗಿತು
ರಾಮನಾಥಪುರದಲ್ಲಿ ಪ್ರಸನ್ನ ಸುಬ್ರಹ್ಮಣ್ಯ ಸ್ವಾಮಿ ಚಂಪಾ ಷಷ್ಠಿ ರಥೋತ್ಸವವು ಬುಧವಾರ ವಿಜೃಂಭಣೆಯಿಂದ ಜರುಗಿತು    

ಕೊಣನೂರು: ರಾಮನಾಥಪುರದ ಪ್ರಸನ್ನ ಸುಬ್ರಹ್ಮಣ್ಯ ಸ್ವಾಮಿ ಚಂಪಾ ಷಷ್ಠಿ ಮಹಾರಥೋತ್ಸವ ಸಹಸ್ರಾರು ಭಕ್ತರ ಸಮ್ಮುಖದಲ್ಲಿ ಬುಧವಾರ ಸಂಭ್ರಮದಿಂದ ಜರುಗಿತು.

ಸುಬ್ರಮಣ್ಯಸ್ವಾಮಿ ದೇವಾಲಯದ ಪಾರುಪತ್ತೇಗಾರ್ ರಮೇಶ್‌ ಭಟ್ ನೇತೃತ್ವದಲ್ಲಿ ಸಂಪ್ರದಾಯದಂತೆ, ಆಕಾಶದಲ್ಲಿ ಗರುಡ ಪಕ್ಷಿ ಕಾಣಿಸಿಕೊಳ್ಳುತ್ತಿದ್ದಂತೆಯೇ, ನೆರೆದಿದ್ದ ಭಕ್ತರು ರಥವನ್ನು ಎಳೆದರು.

ರಥ ಬೀದಿಯಲ್ಲಿ ಚಲಿಸಿದ ತೇರು ಸೇತುವೆ ತನಕ ಸಾಗಿ ಮತ್ತೆ ಸ್ವಸ್ಥಾನಕ್ಕೆ ಬಂದು ತಲುಪಿತು. ರಥದ ಮುಂದೆ ಸಾಗಿದ ಕೀಲುಗೊಂಬೆ, ಕೀಲು ಕುದುರೆ, ಮದ್ದಳೆ, ನಾದಸ್ವರಗಳು. ಚೆಂಡೆ ವಾದ್ಯಗಳು ಭಕ್ತರ ಗಮನ ಸೆಳೆದವು. ದೇವಾಲಯದಲ್ಲಿ ಬೆಳಿಗ್ಗೆಯಿಂದಲೇ ನಡೆದ ವಿಶೇಷ ಪೂಜೆ, ವಿಧಿ ವಿಧಾನಗಳ ನಂತರ ದೇವರ ಉತ್ಸವ ಮೂರ್ತಿಯನ್ನು ರಥದಲ್ಲಿ ಪ್ರತಿಷ್ಠಾಪಿಸಿ, ರಥಕ್ಕೆ ಪೂಜೆ ಸಲ್ಲಿಸಿದ ನಂತರ ರಥೋತ್ಸವಕ್ಕೆ ಚಾಲನೆ ನೀಡಲಾಯಿತು.

ADVERTISEMENT

ಸಂಪ್ರದಾಯದಂತೆ ನವ ವಧು–ವರರು ರಥಕ್ಕೆ ಹಣ್ಣು ದವನ ಎಸೆದು, ಹರಕೆ ಮಾಡಿಕೊಂಡಿದ್ದ ಭಕ್ತರು ಮುಡಿ ನೀಡಿ, ನಾಗರಕಲ್ಲುಗಳಿಗೆ ಹಾಲೆರೆದು, ಕಜ್ಜಿ ತುರಿ, ನಾಗರಸೆಡೆ ಅರ್ಪಿಸಿ ಹರಕೆ ಸಲ್ಲಿಸಿದರು.

ರಾಜ್ಯ ವಿವಿಧೆಡೆಗಳಿಂದ ಬಂದಿದ್ದ ಭಕ್ತರು ಕಾವೇರಿ ಸ್ನಾನಘಟ್ಟದಲ್ಲಿ ಪುಣ್ಯಸ್ನಾನ ಮಾಡಿ, ಇಲ್ಲಿನ ಗೋಗರ್ಭ, ಗಾಯತ್ರಿ ಶಿಲೆಗಳಿಗೆ ಪೂಜೆ ಸಲ್ಲಿಸಿದರು. ದಕ್ಷಿಣಕಾಶಿ ಎಂದೇ ಪ್ರಸಿದ್ಧಿ ಪಡೆದಿರುವ ರಾಮನಾಥಪುರದಲ್ಲಿನ ಅಗಸ್ತೈಶ್ವರ, ಪಟ್ಟಾಭಿರಾಮ, ಲಕ್ಷ್ಮಿ ನರಸಿಂಹ, ರಾಘವೇಂದ್ರ ಮಠ, ಬಸವೇಶ್ವರ, ರಾಮೇಶ್ವರ, ಆಂಜನೇಯ ದೇವಾಲಯಗಳಿಗೆ ಭೇಟಿ ನೀಡಿ ಪೂಜೆ ಸಲ್ಲಿಸಿದರು.

ಅನೇಕ ವರ್ಷಗಳ ಸಂಪ್ರದಾಯದಂತೆ ಮನೆಯಿಂದ ಬುತ್ತಿ ತಂದಿದ್ದ ನೂರಾರು ಭಕ್ತರು ರಾಮೇಶ್ವರ ದೇವಾಲಯದ ಆವರಣದಲ್ಲಿ ಗುಂಪುಗುಂಪಾಗಿ ಬುತ್ತಿ ಸವಿದರು. ವಹ್ನಿಪುಷ್ಕರಣೆಯ ಮೀನುಗಳಿಗೆ ಕಡಲೆಕಾಯಿ, ಪುರಿ ಹಾಕಿ ಭಕ್ತಿ ಮೆರೆದರು.

ಮಾಜಿ ಶಾಸಕ ಎ.ಟಿ. ರಾಮಸ್ವಾಮಿ ಅಭಿಮಾನಿ ಬಳಗ ಸೇರಿದಂತೆ ವಿವಿಧ ಸಂಘ ಸಂಸ್ಥೆಗಳು ಸಾವಿರಾರು ಭಕ್ತರಿಗೆ ದಾಸೋಹ ವ್ಯವಸ್ಥೆ ಮಾಡಿದ್ದವು. ಶಾಸಕ ಎಚ್.ಡಿ.ರೇವಣ್ಣ, ವಿಧಾನ ಪರಿಷತ್ ಸದಸ್ಯ ಡಾ.ಸೂರಜ್ ರೇವಣ್ಣ, ಸಂಸದ ಶ್ರೇಯಸ್ ಪಟೇಲ್, ಶಾಸಕ ಎ.ಮಂಜು. ಮಾಜಿ ಶಾಸಕ ಎ.ಟಿ.ರಾಮಸ್ವಾಮಿ. ತಾಲ್ಲೂಕು ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ಶ್ರೀಧರ್ ಗೌಡ. ತಹಶೀಲ್ದಾರ್ ಸೌಮ್ಯ ಸೇರಿದಂತೆ ಹಲವಾರು ಗಣ್ಯರು ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.