ಚನ್ನರಾಯಪಟ್ಟಣ: ‘ಕೆಲ ಅಧಿಕಾರಿಗಳು ಸರಿಯಾಗಿ ಇಲಾಖೆಯ ಪ್ರಗತಿ ವಿವರ ನೀಡುತ್ತಿಲ್ಲ. ಮಾಹಿತಿ ನೀಡದಿದ್ದರೆ ಸಭೆ ನಡೆಸುವುದು ಬೇಡ’ ಎಂದು ಕೆಡಿಪಿ ನಾಮನಿರ್ದೇಶನ ಸದಸ್ಯರಾದ ಡಿ.ಜೆ. ಮಧುಸೂದನ್, ವೈ.ಎನ್. ಗುರುಪ್ರಸಾದ್ ಹೇಳಿದರು.
ತಾಲ್ಲೂಕು ಪಂಚಾಯಿತಿ ಕಚೇರಿಯಲ್ಲಿ ಬುಧವಾರ ಶಾಸಕ ಸಿ.ಎನ್. ಬಾಲಕೃಷ್ಣ ಅಧ್ಯಕ್ಷತೆಯಲ್ಲಿ ಏರ್ಪಡಿಸಿದ್ದ ಕೆಡಿಪಿ ಸಭೆಯಲ್ಲಿ ವಿಷಯ ಪ್ರಸ್ತಾಪಿಸಿದ ಸದಸ್ಯರು, ಹಲವು ಇಲಾಖೆಗಳ ಅಧಿಕಾರಿಗಳು ಪ್ರಗತಿ ವಿವರ ನೀಡಿಲ್ಲ ಎಂದರೆ ಭ್ರಷ್ಟಾಚಾರ ನಡದಿದೆ ಎಂದರ್ಥ. ನಿಗದಿತ ವೇಳೆಗೆ ವಿವರ ನೀಡಬೇಕು ಎಂದು ಹಿಂದಿನ ಸಭೆಯಲ್ಲಿ ಗಮನಕ್ಕೆ ತಂದರೂ ಮಾಹಿತಿ ನೀಡುತ್ತಿಲ್ಲ’ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಇದನ್ನು ಬೆಂಬಲಿಸಿದ ಸದಸ್ಯ ಬಿ.ಆರ್. ಯೋಗೀಶ್, ‘ಕಳೆದ ಕೆಡಿಪಿ ಸಭೆಯಲ್ಲಿ ಚರ್ಚಿಸಿದಂತೆ ಉಪವಿಭಾಗಾಧಿಕಾರಿಯನ್ನು ಈ ಸಭೆಗೆ ಕರೆಸಬೇಕಿತ್ತು. ಆದರೆ ಅವರನ್ನು ಕರೆಸದೆ ಅಧಿಕಾರಿಗಳು ಉದಾಸೀನ ಮಾಡುತ್ತಿದ್ದಾರೆ’ ಎಂದರು.
ಶಾಸಕ ಸಿ.ಎನ್. ಬಾಲಕೃಷ್ಣ ಮಾತನಾಡಿ, ‘ಕೆಲ ಅಧಿಕಾರಿಗಳು ಇಲಾಖೆಯ ಪ್ರಗತಿ ವಿವರ ತಂದಿದ್ದಾರೆ. ಸಭೆಯಲ್ಲಿ ಮಾಹಿತಿ ನೀಡುತ್ತಾರೆ. ತರದಿದ್ದರೂ ಇನ್ನೊಂದು ವಾರದಲ್ಲಿ ಮಾಹಿತಿ ಕೊಡಿಸಲಾಗುವುದು. ಉಪ ವಿಭಾಗಾಧಿಕಾರಿ ವರ್ಗವಾಗಿದ್ದಾರೆ. ಆದರೆ ಹಾಸನಾಂಬ ಜಾತ್ರೆ ಮುಗಿಯುವವರೆಗೆ ಹಾಸನದಲ್ಲಿ ಕರ್ತವ್ಯದಲ್ಲಿ ಮುಂದುವರಿಯುತ್ತಾರೆ. ನಾಮನಿರ್ದೇಶನ ಸದಸ್ಯರು ಕೇಳಿರುವ ಪ್ರಶ್ನೆ ಕುರಿತು ಇದೇ ತಿಂಗಳು 23ರಂದು ಹಾಸನದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಕೃಷ್ಣಬೈರೇಗೌಡ ಕೆಡಿಪಿ ಸಭೆ ಕರೆದಿದ್ದಾರೆ. ಅಲ್ಲಿನ ಸದಸ್ಯರ ಮೂಲಕ ವಿಷಯ ಚರ್ಚಿಸಲು ಅವಕಾಶ ಇದೆ’ ಎಂದರು.
‘ಅಧಿಕಾರಿಗಳು ಮಾಹಿತಿ ನೀಡದಿದ್ದರೆ ಸಭೆ ನಡೆಸುವುದು ಬೇಡ’ ಎಂದು ನಾಮನಿರ್ದೇಶನ ಸದಸ್ಯರು ಪಟ್ಟುಹಿಡಿದರು. ಆಗ ಶಾಸಕ ಮತ್ತು ಸದಸ್ಯರ ನಡುವೆ ವಾಗ್ವಾದ ನಡೆಯಿತು.
‘ನಾಮನಿರ್ದೇಶನ ಸದಸ್ಯರ ನಡೆ ಆರೋಗ್ಯಕರವಲ್ಲ. ಕೆಡಿಪಿ ಸದಸ್ಯರು ಸಭೆ ನಡೆಸಲು ಸಹಕಾರ ನೀಡಬೇಕು. ಅಧಿಕಾರಿಗಳಿಗೆ ಕಿರಿಕಿರಿ ಉಂಟುಮಾಡಬಾರದು. ನಿಮ್ಮ ಉಪಟಳದಿಂದ ಅಧಿಕಾರಿಗಳು ಕೆಲಸ ಮಾಡಬೇಕೋ, ಬೇಡವೋ. ಅಧಿಕಾರಿಗಳು ನೆಮ್ಮದಿಯಿಂದ ಕೆಲಸ ಮಾಡಲು ಅವಕಾಶ ನೀಡಬೇಕು. ಪ್ರಗತಿ ಕುಂಟಿತವಾದರೆ ಕೇಳಲು ಸರ್ಕಾರ ನಿಮ್ಮನ್ನು ನೇಮಿಸಿದೆ. ಲೋಪವಾಗಿದ್ದರೆ ಚರ್ಚಿಸಿ ಸರಿಪಡಿಸೋಣ’ ಎಂದು ಹೇಳಿದರು.
ನಾವು ಯಾವ ಅಧಿಕಾರಿಗಳಿಗೂ ಉಪಟಳ ನೀಡಿಲ್ಲ. ಅಧಿಕಾರಿಗಳ ಲೋಪದೋಷವನ್ನು ಸಭೆ ಗಮನಕ್ಕೆ ತರಲಾಗುತ್ತಿದೆ. ಜನರಿಗೆ ಒಳಿತಾಗಲಿ ಎಂಬ ಉದ್ದೇಶ ಇದೆ ಅಷ್ಟೇ ಎಂದು ನಾಮನಿರ್ದೇಶನ ಸದಸ್ಯ ಗುರುಪ್ರಸಾದ್ ಪ್ರತ್ಯುತ್ತರ ನೀಡಿದರು.
ಕೆಲ ನಾಮನಿರ್ದೇಶನ ಸದಸ್ಯರು ಸಭಾತ್ಯಾಗ ಮಾಡಲು ಮುಂದಾದಾಗ ಇತರೆ ಸದಸ್ಯರು ಅವರನ್ನು ಮನವೊಲಿಸಿದರು.
ನಾಮನಿರ್ದೇಶನ ಸದಸ್ಯ ಕೆ.ಟಿ. ಮಹೇಶ್ ಮಾತನಾಡಿದರು. ತಹಶೀಲ್ದಾರ್ ಜಿ.ಎಸ್. ಶಂಕರಪ್ಪ, ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಜಿ.ಆರ್. ಹರೀಶ್, ಡಿವೈಎಸ್‌ಪಿ ಕುಮಾರ್ ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.