ADVERTISEMENT

ಸೆಸ್ಕ್‌ಗೆ ₹6.33 ಕೋಟಿ ವರ್ಗಾವಣೆ: ಶಾಸಕ ಬಾಲಕೃಷ್ಣ

​ಪ್ರಜಾವಾಣಿ ವಾರ್ತೆ
Published 20 ಫೆಬ್ರುವರಿ 2024, 15:19 IST
Last Updated 20 ಫೆಬ್ರುವರಿ 2024, 15:19 IST
ಸಿ.ಎನ್. ಬಾಲಕೃಷ್ಣ
ಸಿ.ಎನ್. ಬಾಲಕೃಷ್ಣ   

ಚನ್ನರಾಯಪಟ್ಟಣ: 17 ವರ್ಷಗಳಿಂದ ಶ್ರವಣಬೆಳಗೊಳ ಗ್ರಾಮಪಂಚಾಯಿತಿ ಬಾಕಿ ಉಳಿಸಿಕೊಂಡಿದ್ದ ನೀರಿನ ಕಂದಾಯ 6,33, 29,427 ಸೆಸ್ಕ್‌ಗೆ ಗ್ರಾಮೀಣ ಕುಡಿಯುವ ನೀರು ಸರಬರಾಜು ಮತ್ತು ನೈರ್ಮಲ್ಯ ಇಲಾಖೆ ಪಾವತಿಸಿದೆ ಎಂದು ಶಾಸಕ ಸಿ.ಎನ್. ಬಾಲಕೃಷ್ಣ ಹೇಳಿದರು.

ಹೇಮಾವತಿ ನದಿಯಿಂದ ಶ್ರವಣಬೆಳಗೊಳ ಗ್ರಾಮಪಂಚಾಯಿತಿ ವ್ಯಾಪ್ತಿಯ ಹಳ್ಳಿಗಳಿಗೆ ನೀರು ಒದಗಿಸಲಾಗುತ್ತಿದೆ. ಎರಡು ವರ್ಷದಿಂದ ಹಣ ಬಿಡುಗಡೆ ಮಾಡುವಂತೆ ಪ್ರಯತ್ನ ನಡೆಸಲಾಗಿತ್ತು. ಅಧಿಕಾರಿಗಳು ಪೂರಕವಾಗಿ ಸ್ಪಂದಿಸಿದ್ದಾರೆ. ಆರ್‌ಟಿಜಿಎಸ್ ಮೂಲಕ ಸೆಸ್ಕ್‌ಗೆ ಹಣ ವರ್ಗಾಯಿಸಲಾಗಿದೆ. ನೀರಿನ ನಿರ್ವಹಣೆ ಕಡೆಗೆ ಹೆಚ್ಚು ಗಮನ ಹರಿಸಬೇಕಿದೆ. ಸ್ವಚ್ಛತೆಗೆ ಒತ್ತು ನೀಡಬೇಕು ಎಂದು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

₹25ಲಕ್ಷ  ಸಾಲದು: ತಾಲ್ಲೂಕಿನಲ್ಲಿರುವ ಏತನೀರಾವರಿ ಯೋಜನೆಗಳಿಂದ ಸೆಸ್ಕ್‌ಗೆ ₹19 ಕೋಟಿ ವಿದ್ಯುತ್ ಬಿಲ್ ಪಾವತಿಯಾಗಬೇಕಿದೆ ಎಂದ ಅವರು, ಬರಗಾಲದಲ್ಲಿ ತಾಲ್ಲೂಕಿಗೆ ಕುಡಿಯುವ ನೀರು ಒದಗಿಸಲು ₹25ಲಕ್ಷ ನೀಡಲಾಗಿದೆ. ಈ ಹಣ ಸಾಕಾಗುವುದಿಲ್ಲ. ಪ್ರತಿ ವಿಧಾನಸಭಾ ಕ್ಷೇತ್ರಕ್ಕೆ ಕನಿಷ್ಠ ₹2 ಕೋಟಿ ಬಿಡುಗಡೆ ಮಾಡಬೇಕು. ಏಕೆಂದರೆ ಟ್ಯಾಂಕರ್ ಮೂಲಕ ನೀರು ಒದಗಿಸಲು ಬಾಡಿಗೆ ಹೆಚ್ಚಾಗಿದೆ. ತಾಲ್ಲೂಕಿನಲ್ಲಿ ಸದ್ಯ 7-8 ಹಳ್ಳಿಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಕಾಣಿಸಿಕೊಂಡಿದೆ. ಬೇಡಿಕೆಗನುಸಾರ ಅನುದಾನ ಬಿಡುಗಡೆ ಮಾಡುವುದು ಸೂಕ್ತ ಎಂದು ಹೇಳಿದರು.

ADVERTISEMENT

ಶ್ರವಣಬೆಳಗೊಳ ಗ್ರಾಮಪಂಚಾಯಿತಿ ಅಧ್ಯಕ್ಷೆ ಯಶೋದ, ಸೆಸ್ಕ್ ಕಾರ್ಯಪಾಲಕ ಎಂಜಿನಿಯರ್ ಆರ್. ಅಂಬಿಕಾ, ಗ್ರಾಮೀಣ ಕುಡಿಯುವ ನೀರು ಸರಬರಾಜು ಇಲಾಖೆಯ ಅಧಿಕಾರಿ ನಳಿನಾ ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.